ಗುರುವಾರ , ಆಗಸ್ಟ್ 18, 2022
25 °C
ತೋಟಗಾರಿಕೆ ಪ್ರಭಾರ ಉಪನಿರ್ದೇಶಕ ಸಂತೋಷ ಶೇಷುಲು ಸಲಹೆ

ಫೋನ್‌ ಇನ್‌ ಕಾರ್ಯಕ್ರಮ : ತೋಟಗಾರಿಕೆ ಬೆಳೆಗೆ ಮಾರುಕಟ್ಟೆ ಸೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ತೋಟಗಾರಿಕೆ ಪ್ರಭಾರ ಉಪನಿರ್ದೇಶಕ ಸಂತೋಷ ಶೇಷುಲು ಅವರೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಇಲಾಖೆಗೆ ಸಂಬಂಧಿಸಿದಂತೆ ಹಲವರು ಕರೆ ಮಾಡಿ ಮಾಹಿತಿ ಪಡೆದರು.

ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯ, ಸಸಿ ನೆಡಲು ಯಾವ ಕಾಲ ಸೂಕ್ತ?, ಯಾವ ತರಕಾರಿ ಬೆಳೆದರೆ ಹೆಚ್ಚು ಲಾಭ?, ರೋಗ ಕಾಡದಂತೆ ಬೆಳೆಸುವುದು ಹೇಗೆ? ಇತ್ಯಾದಿ ಪ್ರಶ್ನೆ ಕೇಳಿದರು. ಹೆಚ್ಚಾಗಿ ಯಾವ ತೋಟಗಾರಿಕೆ ಬೆಳೆ ಬೆಳೆಯಲು ಸೂಕ್ತ ಎಂದು ಪ್ರಶ್ನೆಗಳು ಕೇಳಿದರು.

*ಇಮ್ಮುಗೌಡ ಅಬ್ಬೆತುಮಕೂರು: ತೋಟಗಾರಿಕೆ ಬೆಳೆ ಬೆಳೆಯುವ ಆಸಕ್ತಿ ಇದ್ದು, ಯಾವ ಬೆಳೆ ಬೆಳೆಯಬಹುದು?

ತರಕಾರಿ, ಹಣ್ಣಿನ ಬೆಳೆ ಬೆಳೆಯಲು ಇಲಾಖೆಯಿಂದ ರಿಯಾಯ್ತಿ ಸಿಗುತ್ತದೆ. ಸಂಪೂರ್ಣ ಮಾಹಿತಿಗಾಗಿ ಕಚೇರಿಗೆ ಭೇಟಿ ನೀಡಿ.

*ಸೋಮರೆಡ್ಡಿ, ಖಾನಾಪುರ: ತೋಟಗಾರಿಕೆಯ ಸಸಿಗಳನ್ನು ನಾಟಿ ಮಾಡಲಾಗಿದ್ದು ಸಬ್ಸಿಡಿ ಹಣವೇ ಬಂದಿಲ್ಲ.

ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪಹಣಿ, ಆಧಾರ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ನಕಲಿ ಪ್ರತಿಕೊಟ್ಟು ಪರಿಶೀಲಿಸಿ. ಕೆಲವು ಕಡೆ ಅನುದಾನ ಬಾರದ್ದರಿಂದ ತಡವಾಗಿದೆ.

*ಮಹಾಲಿಂಗ ಅನಪುರ, ಗುಂಡಪ್ಪ ಹುಣಸಗಿ ತೋಟಗಾರಿಕೆಯಲ್ಲಿ ಯಾವ ಗಿಡ ಬೆಳೆಯಬಹುದು?

ಹೆಚ್ಚು ನೀರು ಇದ್ದರೆ ತಾಳೆ ಬೆಳೆಯಬಹುದು. ಇದರ ಜೊತೆಗೆ ನೇರಳೆ, ಪೇರಳೆಯನ್ನೂ ಬೆಳೆಯಬಹುದು.

*ಪರಶುರಾಮ, ಸುರಪುರ: ತೋಟಗಾರಿಕೆ ಬೆಳೆ ಬಗ್ಗೆ ಮಾಹಿತಿ ನೀಡಿ.
ಜಮೀನು ಯಾವ ರೀತಿ ಇದೆ ಎನ್ನುವುದು ಪರಿಶೀಲಿಸಿ ತೋಟಗಾರಿಕೆ ಬೆಳೆ ಬೆಳೆಯಬಹುದು. ನೀರಿನ ಲಭ್ಯತೆ ಮೇಲೆ ಬೆಳೆಗಳನ್ನು ನಾಟಿ ಮಾಡಬಹುದು.

*ರಾಘವೇಂದ್ರ ಭಕ್ರಿ, ಸುರಪುರ: ತೋಟಗಾರಿಕೆ ಬೆಳೆಗಳಿಗೆ ರೋಗ ಬಾರದಂತೆ ತಡೆಯುವುದು ಹೇಗೆ?

ಹೆಚ್ಚಿನ ಮಳೆಯಾದಾಗ ಏರುಮಡಿ ಮಾಡಿದರೆ ಸಮಸ್ಯೆಯಾಗುವುದಿಲ್ಲ. ಸೂಕ್ತ ಸಮಯದಲ್ಲಿ ಪೋಷಕಾಂಶಗಳನ್ನು ನೀಡಿದರೆ ರೋಗ ಬಾಧೆ ಕಾಡುವುದಿಲ್ಲ

*ರಮೇಶ, ಶರಣು, ಕಕ್ಕೇರಾ: 15 ವರ್ಷಗಳಿಂದ ಭತ್ತ ಬೆಳೆಯುತ್ತೇವೆ. ಈಗ ಯಾವ ತೋಟಗಾರಿಕೆ ಬೆಳೆಯಬೇಕು?

ಭತ್ತ ಬೆಳೆದಿದ್ದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿರುತ್ತದೆ. ಹೀಗಾಗಿ ಮೊದಲು ತರಕಾರಿ ಬೆಳೆಯಬೇಕು. ತಿಪ್ಪೆಗೊಬ್ಬರ ಹೆಚ್ಚು ಬಳಕೆ ಮಾಡಬೇಕು. ಸಣಬು, ಆಲಸಂದಿ, ಹೆಸರು ಬೆಳೆಯಬಹುದು. ಹಸಿರೆಲೆ ಗೊಬ್ಬರ ಹಾಕಿ ಮಣ್ಣಿನ ಫಲವತ್ತತೆ ಮರಳಿ ಬಂದ ನಂತರ ಹಣ್ಣು, ನೀರು ಹೆಚ್ಚಿದ್ದರೆ ತಾಳೆ ಬೆಳೆಯಬಹುದು

*ವೀರಸಂಗಪ್ಪ ಕಕ್ಕೇರಾ: ಹನಿನೀರಾವರಿ ಬಗ್ಗೆ ಮಾಹಿತಿ ನೀಡಿ.

ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ 90, ಸಾಮಾನ್ಯ ವರ್ಗದವರಿಗೆ ಶೇ 75ರಷ್ಟು ರಿಯಾಯಿತಿ ಇರುತ್ತದೆ. ಕಚೇರಿಯಲ್ಲಿ ಅರ್ಜಿ ಹಾಕಿದರೆ ಮಾಹಿತಿ ಸಿಗುತ್ತದೆ

*ಬಾಲಪ್ಪ ಎಂ ಕುಪ್ಪಿ, ಹುಣಸಗಿ: ಪೇರಳೆ ನಾಟಿ ಮಾಡಿ 20 ದಿನ ಆಗಿದೆ. ಗೊಬ್ಬರ ಯಾವಾಗ ಹಾಕಬೇಕು?

ನಾಟಿ ಮಾಡಿದ 45 ದಿನಗಳ ತನಕ ಯಾವುದೇ ಗೊಬ್ಬರ, ಔಷಧಿ ಸಿಂಪಡಿಸಬಾರದು.

*ನಿಂಗಣ್ಣ ಜಡಿ, ವಡಗೇರಾ: ವಡಗೇರಾ ತಾಲ್ಲೂಕಿನಲ್ಲಿ ತೋಟಗಾರಿಕೆ ಬೆಳೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ

ತೋಟಗಾರಿಕೆ ಬೆಳೆಗೆ ಬೆಳೆಗಾರರೇ ಮಾರುಕಟ್ಟೆ ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳಬೇಕು. ನಿಮ್ಮ ಬೆಳೆಯನ್ನು ಮೌಲ್ಯವರ್ಧನೆ ಮಾಡಬೇಕು. ಬೆಳೆಗಾರರ ಸಂಘವನ್ನು ರಚನೆ ಮಾಡಿಕೊಂಡು ಪ್ಯಾಕೇಜಿಂಗ್‌ ಮಾಡಿ ಬ್ರ್ಯಾಂಡ್‌ ಹೆಸರಿನಲ್ಲಿ ನಿಮ್ಮ ಬೆಳೆಯನ್ನು ಮಾರಾಟ ಮಾಡಬಹುದು.

*ಅಮರೇಶಗೌಡ ಕುರಕುಂದ: 2 ಏಕರೆಯಲ್ಲಿ ಮಾವಿನ ಬೆಳೆ ಬೆಳೆಯಲಾಗಿದೆ. ಸಬ್ಸಿಡಿ ಪಡೆಯುವುದು ಹೇಗೆ?

ನಿಮ್ಮ ಜಮೀನಿನ ಪಹಣಿ, ಆಧಾರ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌, ಬೆಳೆ ದೃಢಿಕರಣ, ನೀರು ಬಳಕೆದಾರರ ಪ್ರಮಾಣ ಪತ್ರ ಸಲ್ಲಿಸಿದರೆ ರಿಯಾಯಿತಿ ಸಿಗಲಿದೆ.

*ಆಕಾಶ, ನಾರಾಯಣಪುರ: ಮಾವಿನ ತೋಟ ಮಾಡಬೇಕೆಂದಿದ್ದೇನೆ. ಯಾವುದು ನಾಟಿ ಮಾಡಿದರೆ ಬೇಗ ಫಸಲು ಸಿಗುತ್ತದೆ?

ನೀವು ಜವಾರಿ ತಳಿ ಬಳಸಿದರೆ ಬೆಳೆ ಸಿಗಲು 10 ವರ್ಷ ಕಾಯಬೇಕಾಗಬಹುದು. ಕಸಿ ಮಾಡಿದ ತಳಿಗಳಾದರೆ 4 ವರ್ಷಗಳಲ್ಲಿ ಫಸಲು ಸಿಗುತ್ತದೆ. ಬೆನ್‌ಶಾನ್, ಮಲ್ಲಿಕಾ, ಕೇಸರ್, ದಶೇರಿ, ತೋತಾಪುರಿ ತಳಿ ಬೆಳೆದರೆ ಲಾಭವಾಗಲಿದೆ.

*ಉದಯಕುಮಾರ, ಕೊಂಕಲ್: ಎನ್‌ಎಚ್‌ಎಂ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಈವರೆಗೂ ಪ್ರೋತ್ಸಾಹಧನ ಸಿಕ್ಕಿಲ್ಲ ಏನು

ಮೊದಲ ಕಂತಿನ ಹಣ ಬಿಡುಗಡೆಯಾದಾಗ ಹಂಚಿಕೆ ಮಾಡಲಾಗಿತ್ತು. ಈಗ 2ನೇ ಕಂತಿನ ಅನುದಾನ ಸಿಗುತ್ತಲೇ ಉಳಿದವರಿಗೂ ವಿತರಿಸಲಾಗುತ್ತದೆ. ಉಳಿದಂತೆ ಮಳೆಗೆ ತಕ್ಕಂತೆ ಯೋಜನಗಳನ್ನು ಕೈಗೆತ್ತಿಕೊಳ್ಳುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಿ.

*ಲಕ್ಷ್ಮೀಕಾಂತ, ನಾರಾಯಣಪುರ: ಬಾಳೆ ತೋಟ ಮಾಡಬೇಕು ಎಂದುಕೊಂಡಿದ್ದೇವೆ. ಅದಕ್ಕೆ ಪೂರಕ ಮಾಹಿತಿ ನೀಡಿ.

ಅಂಗಾಂಶ ಕೃಷಿ ಬಾಳೆ ನಾಟಿ ಮಾಡಿದರೆ ಉತ್ತಮ ಲಾಭ ಸಿಗಲಿದೆ. ಸಸಿ ನಾಟಿ ಮಾಡುವಾಗ ಸಾಲಿನ ನಡುವೆ 5 ಅಥವಾ 6 ಅಡಿ ಮತ್ತು ಸಸಿಗಳ ನಡುವೆ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಅಗಸ್ಟ್ ತಿಂಗಳವರೆಗೂ ನಾಟಿ ಮಾಡಲು ಅವಕಾಶವಿದೆ.

*ಮಲ್ಲಪ್ಪ, ಬಬಲಾದ: ಅಣಬೆ ಕೃಷಿ (ಮಷ್ರೂಮ್‌) ಮಾಡಲು ತರಬೇತಿ ಪಡೆದಿದ್ದೇನೆ. ನನಗೆ ಇಲಾಖೆಯಿಂದ ಪೂರಕ ಮಾಹಿತಿ ಮತ್ತು ಸಹಕಾರ ಬೇಕು.

ಆಸಕ್ತರು ಅರ್ಜಿ ಸಲ್ಲಿಸಿದರೆ ತರಬೇತಿ ನೀಡಲಾಗುತ್ತದೆ. ನೀವು ಈಗಾಗಲೇ ತರಬೇತಿ ಪಡೆದಿದ್ದೀರಿ. ಆದ್ದರಿಂದ ನೀವು ನಮ್ಮ ಕಚೇರಿಗೆ ಬನ್ನಿ, ಮಾಹಿತಿ ಮತ್ತು ಸಹಾಯ ನಿಮಗೆ ನೀಡಲಾಗುತ್ತದೆ.

*ದೇವರಾಜ, ಬಳಿಚಕ್ರ: ಹೊಲದ ಬದು ಮತ್ತು ಮನೆಯ ಆವರಣದಲ್ಲಿ ತೋಟಗಾರಿಕಾ ಕೃಷಿ ಮಾಡುವ ಆಸಕ್ತಿಯಿದೆ. ಸಸಿ ಎಲ್ಲಿಂದ ಪಡೆದುಕೊಳ್ಳಲಿ ಮತ್ತು ಯಾವ ದಾಖಲೆಗಳು ಬೇಕು?

ಹತ್ತಿಕುಣಿ ಜಲಾಶಯದ ಹತ್ತಿರ ನಮ್ಮ ಇಲಾಖೆಯ ನರ್ಸರಿ ಇದೆ. ಅಲ್ಲಿ ಗುಣಮಟ್ಟದ ಉತ್ತಮ ತಳಿಯ ಕಸಿ ಮಾಡಿದ ಸಸಿಗಳನ್ನು ಕನಿಷ್ಠ ಬೆಲೆಯಲ್ಲಿ ನೀಡಲಾಗುತ್ತದೆ. ಪಹಣಿ ತಂದರೆ ಸಾಕು. ತೆಂಗು ₹75, ಮಾವು ₹36, ನಿಂಬೆ ಮತ್ತು ಕರಿಬೇವು ₹ 12 ದರದಲ್ಲಿ ನೀಡಲಾಗುತ್ತದೆ

*ರಾಜಶೇಖರ, ಜೋಳದಡಗಿ: ಸುಗಂಧರಾಜ, ಮೈಸೂರು ಮಲ್ಲಿಗೆ ತೋಟ ಬೆಳೆಸುವ ಮನಸ್ಸಿದೆ. ಎಲ್ಲಿ ಸಿಗುತ್ತದೆ ಮತ್ತು ನಿಮ್ಮ ಇಲಾಖೆಯಿಂದ ಯಾವ ಅನುಕೂಲಗಳಿವೆ?

ನಮ್ಮಲ್ಲಿ ಸಬ್ಸಿಡಿ ಸಿಗುತ್ತದೆ. ಹೊಸಪೇಟೆ ಅಥವಾ ಬೆಂಗಳೂರಿನಿಂದ ಉತ್ತಮ ತಳಿಯ ದುಂಡುಮಲ್ಲಿಗೆ ಸಸಿ, ಸುಗಂಧರಾಜ ಗಡ್ಡೆಯನ್ನು ತರಬಹುದು. ಕಚೇರಿಗೆ ಒಮ್ಮೆ ಭೇಟಿ ನೀಡಿ ಇನ್ನೂ ಬೇರೆಲ್ಲಾ ಮಾಹಿತಿ ಸಿಗಲಿದೆ.

****

ಫೋನ್‌ ಇನ್‌ ಕಾರ್ಯಕ್ರಮ

ಫೋನ್‌ ಇನ್‌ ನಿರ್ವಹಣೆ: ಬಿ.ಜಿ.ಪ್ರವೀಣಕುಮಾರ, ರಾಜಕುಮಾರ ನಳ್ಳಿಕರ, ಎಂ.ಪಿ.ಚಪೆಟ್ಲಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು