ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ಸಮಸ್ಯೆಗೆ ‘ಪೈಪ್ ಕಾಂಪೋಸ್ಟ್’

ನಗರಸಭೆ ಅಧಿಕಾರಿಗಳಿಂದ ಪ್ರಯೋಗ
Last Updated 1 ಸೆಪ್ಟೆಂಬರ್ 2019, 5:06 IST
ಅಕ್ಷರ ಗಾತ್ರ

ಯಾದಗಿರಿ: ನಗರದಲ್ಲಿ ಸಂಗ್ರಹವಾಗುವಕಸದ ಸಮಸ್ಯೆಗೆ ಮುಕ್ತಿ ನೀಡಲು ನಗರಸಭೆ ವಿನೂತನ ಪ್ರಯೋಗಕ್ಕೆ ಕೈ ಹಾಕಿದೆ.

ನಗರದಲ್ಲಿ ಎಲ್ಲೆಂದರಲ್ಲಿ ಕಸ ಕಂಡುಬರುತ್ತಿದೆ. ಇದನ್ನು ವಿಲೇವಾರಿ ಮಾಡಲು ನಗರಸಭೆ ತೀವ್ರ ಪ್ರಯತ್ನಿದ್ದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಹೀಗಾಗಿ ‘ಪೈಪ್ ಕಾಂಪೋಸ್ಟ್’ ಎನ್ನುವ ಪ್ರಯೋಗಕ್ಕೆ ಮುಂದಾಗಿದೆ.

ಏನಿದು ಪೈಪ್ ಕಾಂಪೋಸ್ಟ್?

ಆರು ಅಡಿ ಉದ್ದದ ಪೈಪ್‌ನಲ್ಲಿ ದಿನ ನಿತ್ಯದ ಅಡುಗೆ ತ್ಯಾಜ್ಯವನ್ನು ಸುರಿದು ಅದರಿಂದ ಬರುವ ಉತ್ಪನ್ನವೇ ಪೈಪ್ ಕಾಂಪೋಸ್ಟ್. ಇದಕ್ಕೆ ಹೆಚ್ಚೆನೂ ಖರ್ಚು ಇಲ್ಲ. ಅಲ್ಲದೆ ನಿರ್ವಹಣೆಯೂ ಸುಲಭ. ಆದ್ದರಿಂದ ಇದನ್ನು ಅಳವಡಿಸಿಕೊಳ್ಳಲು ಹಲವರು ಮುಂದೆಬಂದಿದ್ದಾರೆ.

ಏನೇನು ಬೇಕು:

ಪೈಪ್ ಕಾಂಪೋಸ್ಟ್ ತಯಾರಿಕೆಗೆ ಒಂದು ಕೆ.ಜಿ ಬೆಲ್ಲ, ಸಗಣಿ ನೀರು, ಆರಡಿ ಉದ್ದದ ಪೈಪ್, ಎರಡು ಅಡಿ ಜಾಗ ಸಾಕು. ಇಷ್ಟು ಪ್ರಮಾಣದ ವಸ್ತುಗಳಿಂದಲೇ ಮನೆ ಬಳಿಯೇ ಕೈತೋಟಕ್ಕೆ ಬೇಕಾಗುವ ಗೊಬ್ಬರ ಉತ್ಪಾದಿಸಬಹುದಾಗಿದೆ.

ಮೊದಲಿಗೆ ಒಂದು ಅಡಿ ಗುಂಡಿ ತೆಗೆದು ಆರಡಿ ಪೈಪ್ ಅನ್ನು ಒಂದು ಅಡಿ ಗುಂಡಿ ಒಳಗೆ ಹಾಕಿ ಭದ್ರಪಡಿಸಬೇಕು. ನಂತರ ಅದಕ್ಕೆ ಒಂದು ಕೆ.ಜಿ ಬೆಲ್ಲ, ಸಗಣಿ ನೀರು ಹಾಕಿದರೆ ಮುಗಿಯಿತು. ಅರ್ಧ ಕೆಲಸ ಮುಗಿದಂತೆ.

ಪ್ಲಾಸ್ಟಿಕ್ ಹೊರತುಪಡಿಸಿ ಭೂಮಿಯಲ್ಲಿ ಕರಗುವ ಎಲ್ಲ ಉತ್ಪನ್ನ, ಅಡುಗೆ ತ್ಯಾಜ್ಯ, ಹಣ್ಣಿನ ಸಿಪ್ಪೆ ಸೇರಿದಂತೆ ಹಸಿ ತ್ಯಾಜ್ಯವನ್ನು ಇದರಲ್ಲಿ ಹಾಕಬಹುದು. ವಾರಕ್ಕೆ ಒಂದು ಬಾರಿ ಒಂದು ಬೊಗಸೆ ಮಣ್ಣು, ಒಂದು ತಂಬಿಗೆ ನೀರು ಹಾಕಿ ಮುಚ್ಚಳ ಮುಚ್ಚಿದರೆ ಸಾಕು ಗೊಬ್ಬರ ತನ್ನಷ್ಟಕ್ಕೆ ತಾನೇ ಉತ್ಪತ್ತಿ ಆಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಇದರಿಂದ ಉತ್ಕೃಷ್ಟ ಗೊಬ್ಬರ ಸಿಗುತ್ತದೆ‌.

ನಗರಸಭೆ ಕಸ ಸಂಗ್ರಹ ವಾಹನಕ್ಕೆ ಕಾಯುವುದು ಇದರಿಂದ ತಪ್ಪುತ್ತದೆ ಹಾಗೂ ಉತ್ತಮವಾದ ಗೊಬ್ಬರ ಮನೆ ಬಳಿಯೆ ತಯಾರು ಆಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ತಪ್ಪುತ್ತದೆ. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಪ್ರಯೋಗ ಮಾಡಲಾಗಿದೆ. ಉತ್ತಮ ಫಲಿತಾಂಶ ಬಂದಿದ್ದರಿಂದ ಇಲ್ಲಿಯೂ ಇದನ್ನು ಅಳವಡಿಸಲು ನಗರಸಭೆ ಅಧಿಕಾರಿಗಳು ಮುಂದಾಗಿದ್ದಾರೆ.

ಅದರ ಬಳಿಯೇ ಮತ್ತೊಂದು ಆ ರೀತಿಯಲ್ಲೆಯೇ ಪೈಪ್ ಕಾಂಪೋಸ್ಟ್ ಅಳವಡಿಸಿಕೊಳ್ಳುವ ಮೂಲಕ 3 ತಿಂಗಳಿಗೊಮ್ಮೆ ಒಂದು ತುಂಬಿದ ನಂತರ ಮತ್ತೊಂದರಲ್ಲಿ ತ್ಯಾಜ್ಯ ಹಾಕಬಹುದಾಗಿದೆ.

ಎಲ್ಲಿಲ್ಲಿ ಅಳವಡಿಕೆ

ನಗರದಲ್ಲಿ ಪ್ರಾಯೋಗಿಕವಾಗಿ ನಾಲ್ಕು ಕಡೆ ಈ ವಿಧಾನ ಪರಿಚಯಿಸಲು ನಗರಸಭೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಕೋರ್ಟ್ ಆವರಣ, ಕೋರ್ಟ್ ವಸತಿ ಗೃಹ, ಎರಡು ಕಡೆ ಸಾರ್ವಜನಿಕ ಪ್ರದೇಶದಲ್ಲಿ ಅಳವಡಿಸಲು ಮುಂದಾಗಿದ್ದಾರೆ.

‘ಪೈಪ್‌ ಕಾಂಪೋಸ್ಟ್‌ನಿಂದ ಉತ್ಪತ್ತಿಯಾಗುವ ಗೊಬ್ಬರ ಉತ್ಕೃಷ್ಟವಾಗಿದ್ದು, ಇದು ಕೈತೋಟ ಮತ್ತು ರಸ್ತೆ ಬದಿಯಲ್ಲಿ ಬೆಳೆಯುವ ಮರಗಳಿಗೆ ಉತ್ತಮ ಗೊಬ್ಬರವಾಗಿದೆ’ ಎಂದು ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ಸುರೇಶ ಶೆಟ್ಟಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT