ನಾರಾಯಣಪುರ: ಅಪಘಾತದಲ್ಲಿ ಈಚೆಗೆ ನಿಧನರಾದ ಇಲ್ಲಿನ ಮಾರನಾಳ ಕ್ರಾಸ್ ನಿವಾಸಿ ಮಾನಪ್ಪ ಅವರ ಪತ್ನಿ ಶಿವಬಾಯಿ ಅವರಿಗೆ ಸ್ಥಳೀಯ ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಅಶೋಕಕುಮಾರ ಅವರು ಶನಿವಾರ ಪಿಎಂಎಸ್‌ಬಿವೈ ವಿಮೆಯ ₹2 ಲಕ್ಷ ಮೊತ್ತದ ಚೆಕ್ ವಿತರಿಸಿದರು.
ಈ ವೇಳೆ ವ್ಯವಸ್ಥಾಪಕ ಅಶೋಕಕುಮಾರ ಮಾತನಾಡಿ, ಬ್ಯಾಂಕ್ ಗ್ರಾಹಕರು ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಅಡಿ ವಾರ್ಷಿಕ ₹ 436 ವಿಮೆ ಮೊತ್ತ ಪಾವತಿಸಿದರೆ, ಪಾವತಿಸಿದ ವರ್ಷದ ಅವಧಿಯೊಳಗೆ ಅಕಾಲಿಕ ನಿಧನರಾದರೆ ಮೃತರ ವಾರಸುದಾರರಿಗೆ ₹ 2 ಲಕ್ಷ ಮೊತ್ತದ ವಿಮಾ ಪರಿಹಾರ ದೊರೆಯಲಿದೆ. ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ವಾರ್ಷಿಕ ₹20 ಪಾವತಿಸಿ, ಗ್ರಾಹಕರಿಗೆ ₹ 2 ಲಕ್ಷ ಮೊತ್ತದ ಅಪಘಾತ ವಿಮೆ ದೊರೆಯಲಿದೆ. ಎರಡು ಮಹತ್ವದ ವಿಮಾ ಯೋಜನೆಗಳು ಕಡಿಮೆ ಪ್ರಿಮಿಯಮ್ ಮೊತ್ತದ್ದಾಗಿದ್ದು, ಗ್ರಾಹಕರು ಎರಡು ವಿಮಾ ಯೋಜನೆಗಳ ಬಗ್ಗೆ ಶಾಖೆಯ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದು ವಿಮೆ ಪಡೆಯಬಹುದಾಗಿದೆ ಎಂದು ಹೇಳಿದರು.