ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೈದಾಪುರ: ಅಪಾಯ ಆಹ್ವಾನಿಸುವ ವಿದ್ಯುತ್ ಪರಿವರ್ತಕಗಳು

ಸೈದಾಪುರ: ಪರಿವರ್ತಕಗಳ ಸುತ್ತ ತಂತಿ ಬೇಲಿ ಅಳವಡಿಕೆಗೆ ಸಾರ್ವಜನಿಕರ ಆಗ್ರಹ
ಮಲ್ಲಿಕಾರ್ಜುನ ಬಿ.ಅರಿಕೇರಕರ್
Published 23 ಜನವರಿ 2024, 4:31 IST
Last Updated 23 ಜನವರಿ 2024, 4:31 IST
ಅಕ್ಷರ ಗಾತ್ರ

ಸೈದಾಪುರ: ಮನೆಗಳಲ್ಲಿ ಕತ್ತಲು ಕಳೆದು ಬೆಳಕು ಚೆಲ್ಲುವ ಪಟ್ಟಣದ ಕೆಲವು ವಿದ್ಯುತ್ ಪರಿವರ್ತಕಗಳಿಗೆ ಸುತ್ತ ತಂತಿ ಬೇಲಿ ಇಲ್ಲ. ಇವುಗಳು ಅಪಾಯ ಆಹ್ವಾನಿಸುತ್ತಿದ್ದರೂ ಸಂಬಂಧಿಸಿದ ಜೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಪಟ್ಟಣದ ಲಕ್ಷ್ಮಿ ನಗರ, ಪ್ರವಾಸಿ ಮಂದಿರದ ಹತ್ತಿರ, ಗ್ರಾಮ ಸೈದಾಪುರ ಮಾರ್ಗದಲ್ಲಿರುವ ಪೂಜಾರಿ ಟಿ.ಸಿ, ಗಂಜ್ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಹತ್ತಿರ, ಯೂನಿಯನ್ ಬ್ಯಾಂಕ್ ಹತ್ತಿರ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳಿಗೆ ತಂತಿ ಬೇಲಿ ಇಲ್ಲ.

‘ಲಕ್ಷ್ಮಿ ನಗರ ಸೇರಿದಂತೆ ಪಟ್ಟಣದ ವಿವಿಧೆಡೆ ಅಳವಡಿಸಿರುವ 63 ಕೆ.ವಿ ವಿದ್ಯುತ್ ಪರಿವರ್ತಕಗಳ ಸುತ್ತ ತಂತಿ ಬೇಲಿ ಅಳವಡಿಸಿಲ್ಲ. ಸುರಕ್ಷತಾ ಕ್ರಮಗಳನ್ನೂ ಅನುಸರಿಸಿಲ್ಲ. ಅಪಾಯದ ಎಚ್ಚರಿಕೆ ನೀಡುವ ಫಲಕ ತೂಗು ಹಾಕಿಲ್ಲ. ಪರಿವರ್ತಕದಿಂದ ವಿದ್ಯುತ್ ಪ್ರವಹಿಸುವ ತಂತಿಗಳು ಅತ್ಯಂತ ಕೆಳ ಮಟ್ಟದಲ್ಲಿವೆ. ಕೆಲವು ಕಡೆ ವಿದ್ಯುತ್ ಪರಿವರ್ತಕಗಳು ಬಾಗಿದ ವಿದ್ಯುತ್ ಕಂಬಗಳಲ್ಲಿ ನೇತಾಡುವಂತೆ ಕಂಡುಬಂದರೆ, ಇನ್ನೂ ಕೆಲವು ಕಡೆ ನೆಲಮಟ್ಟದಲ್ಲಿ ಇವೆ. ಇವು ಜನ, ಜಾನುವಾರುಗಳಿಗೆ ಅಷ್ಟೇ ಅಲ್ಲ ಸಾರ್ವಜನಿಕರಿಗೂ ಅಪಾಯ ತಂದೊಡ್ಡುವ ಸಾಧ್ಯೆತೆ ಹೆಚ್ಚಾಗಿದೆ’ ಎನ್ನುತ್ತಾರೆ ಗ್ರಾಮಸ್ಥ ಹಣಮಂತರಾಯ.

‘ಬೆಳಿಗ್ಗೆ, ಸಂಜೆ ಹಾಗೂ ರಜಾ ದಿನಗಳಲ್ಲಿ ಮಕ್ಕಳು ಇಲ್ಲಿ ಕ್ರಿಕೆಟ್ ಸೇರಿದಂತೆ ವಿವಿಧ ಆಟವಾಡುತ್ತಾರೆ. ಪರಿವರ್ತಕ ಅತ್ಯಂತ ಕೆಳ ಹಂತದಲ್ಲಿರುವುದರಿಂದ ಅಪ್ಪಿತಪ್ಪಿ ಕಂಬ ಮುಟ್ಟಿದರೂ ಪ್ರಾಣಾಪಾಯ ತಪ್ಪಿದ್ದಲ್ಲ. ಸಾರ್ವಜನಿಕರು ಮನೆಯಲ್ಲಿನ ಕಸವನ್ನು ತಂದು ವಿದ್ಯುತ್‌ ಪರಿವರ್ತಕಗಳ ಸಮೀಪದಲ್ಲಿ ಹಾಕುತ್ತಿದ್ದಾರೆ. ಎಚ್ಚರ ತಪ್ಪಿದರೆ ಅನಾಹುತ ಸಂಭವಿಸಬಹುದು’ ಎಂದು ನಾಗೇಶ ಆತಂಕ ವ್ಯಕ್ತಪಡಿಸುತ್ತಾರೆ.

‘ವಿದ್ಯುತ್ ಪರಿವರ್ತಕದ ಸುತ್ತ ನಿತ್ಯ ಕುರಿ, ಹಸು, ಮೇಕೆ, ಹಂದಿ, ನಾಯಿಗಳು ಅಲೆದಾಡುತ್ತಿರುತ್ತವೆ. ಪಾಲಕರ ನಿಗಾ ಇಲ್ಲದ ವೇಳೆ ಮಕ್ಕಳು ಆಟವಾಡುತ್ತ ವಿದ್ಯುತ್ ಸ್ಪರ್ಶಿಸಿದಲ್ಲಿ ಜೀವಹಾನಿಯಾಗುವ ಸಾಧ್ಯತೆ ಇದೆ. ಅಲ್ಲದೇ ಕೆಲ ವರ್ಷಗಳ ಹಿಂದೆ ಗ್ರಾಮ ಸೈದಾಪುರದ ಹತ್ತಿರದ ಹೊರವಲಯದಲ್ಲಿ ಮೇವು ತಿನ್ನಲು ಹೋಗಿ ಹಲವು ಹಸುಗಳು ವಿದ್ಯುತ್ ಸ್ಪರ್ಶದಿಂದ ಮರಣ ಹೊಂದಿದ್ದವು. ಆದ್ದರಿಂದ ಮಕ್ಕಳು ಓಡಾಡುವ ಪ್ರದೇಶವನ್ನು ಸೂಕ್ಷ್ಮವಲಯ ಎಂದು ಗುರುತಿಸಿ ಜೆಸ್ಕಾಂ ಅಧಿಕಾರಿಗಳು ಬೇಲಿ ಅಳವಡಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸಾಮಾಜಿಕ ಹೋರಾಟಗಾರ ಶಿವಕುಮಾರ ಮುನಗಾಲ ಆಗ್ರಹಿಸಿದರು.

ಕೈಗೆಟಕುವ ಅಂತರದಲ್ಲೇ ವಿದ್ಯುತ್ ಪರಿವರ್ತಕ ಇದೆ. ಸುತ್ತ ತಡೆಗೋಡೆ ಅಥವಾ ತಂತಿಬೇಲಿ ಕೂಡ ಇಲ್ಲ. ಇಲ್ಲಿ ಮಕ್ಕಳು ಯಾವಾಗಲೂ ಆಟವಾಡುತ್ತಿರುತ್ತಾರೆ.

–ವಿಜಯಲಕ್ಷ್ಮೀ. ಸೈದಾಪುರ ಲಕ್ಷ್ಮೀ ನಗರ ನಿವಾಸಿ

ಅಪಾಯ ಸಂಭವಿಸುವ ಮುನ್ನ ಜೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯುತ್ ಪರಿವರ್ತಕಗಳ ಸುತ್ತಲು ತಂತಿಬೇಲಿ ಅಪಾಯದ ಸೂಚನೆ ನೀಡುವ ಫಲಕಗಳನ್ನು ಹಾಕಬೇಕು.

–ಯಲ್ಲಪ್ಪ ನಾಯಕ ಲಕ್ಷ್ಮೀ ನಗರ ನಿವಾಸಿ

ಅಪಾಯ ತಂದೊಡ್ಡುವ ಪರಿವರ್ತಕಗಳ ಸುತ್ತಲು ತಂತಿಬೇಲಿ ಹಾಗೂ ಸೂಚನಾ ಫಲಕಲಗಳ ಅಳವಡಿಕೆಗೆ ಈಗಾಗಲೇ ನಮ್ಮ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಬಜೆಟ್ ಇಲ್ಲದ ಕಾರಣಕ್ಕಾಗಿ ಕಾಮಗಾರಿ ಆರಂಭಿಸಿಲ್ಲ.

–ಮಲ್ಲಪ್ಪ ಜೆಸ್ಕಾಂ ಶಾಖಾಧಿಕಾರಿ ಸೈದಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT