ಯಾದಗಿರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯೊಂದು ರೈತರಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ. ರೈತರಿಗೆ ವರ್ಷಕ್ಕೆ ₹ 6 ಸಾವಿರ ನೀಡುವ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಸಾಲದ ಕಂತುಗಳಿಗೆ ಜಮೆಯಾಗುತ್ತಿದೆ. ಇದರಿಂದ ರೈತರಿಗೆ ನಿಧಿಯ ಹಣ ತಲುಪುತ್ತಿಲ್ಲ.
ಜಿಲ್ಲೆಯ ವಿವಿಧ ತಾಲ್ಲೂಕುಗಳ ರೈತರು ಬ್ಯಾಂಕ್‌ಗೆ ತೆರಳಿ ತಮ್ಮ ಖಾತೆ ಪರಿಶೀಲಿಸಿದರೆ ಅದು ಸಾಲಕ್ಕೆ ಜಮೆಯಾಗಿರುವುದು ಕಂಡು ಬಂದಿದೆ. ಇದರಿಂದ ಹಣ ಖಾತೆಗೆ ಬಂದರೂ ಕೈಗೆ ಬರದ ಸ್ಥಿತಿ ಇದೆ.
ಏನಿದು ಪಿಎಂ ಕಿಸಾನ್ ನಿಧಿ: ಪಿಎಂ ಕಿಸಾನ್ ಸಾಮ್ಮಾನ್ ನಿಧಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು 2019ರ ಫೆಬ್ರುವರಿ 24 ರಂದು ಪ್ರಾರಂಭಿಸಿತು.ದೇಶದ ರೈತರ ಕಷ್ಟವನ್ನು ಕಡಿಮೆ ಮಾಡಲು, ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ₹2 ಸಾವಿರ ರೂಪಾಯಿಗಳನ್ನು ಕೇಂದ್ರ ಸರ್ಕಾರ ರೈತರ ಖಾತೆಗೆ ವರ್ಗಾಯಿಸುವ ಯೋಜನೆ ಇದಾಗಿದೆ.
ಈ ಯೋಜನೆಯಡಿ ಸರ್ಕಾರ ಪ್ರತಿ ವರ್ಷ ರೈತರೊಬ್ಬರಿಗೆ ₹6 ಸಾವಿರ ಹಣ ಬ್ಯಾಂಕ್ ಖಾತೆಗಳಲ್ಲಿ ಜಮಾ ಆಗುತ್ತದೆ. ಈ ಮೊತ್ತವನ್ನು ಮೂರು ಸಮಾನ ಕಂತುಗಳಲ್ಲಿ ರೈತರ ಖಾತೆಗೆ ಸೇರಿಸಲಾಗುತ್ತದೆ. ನಾಲ್ಕು ತಿಂಗಳಿಗೆ ₹2,000ರಂತೆ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.ಆದರೆ, ಜಿಲ್ಲೆಯ ರೈತರಿಗೆ ಹಣ ತಲುಪಿದರೂ ಬಳಕೆ ಮಾಡಿಕೊಳ್ಳಲು ಖಾತೆಯಲ್ಲಿರುವ ಹಣ ಸಾಲಕ್ಕೆ ಜಮೆಯಾಗುತ್ತಿದೆ.
‘ನಾನು ಟ್ರ್ಯಾಕ್ಟರ್ ಮತ್ತು ಬೆಳೆ ಸಾಲ ಹೊಂದಿದ್ದೇನೆ. ಹಣ ಜಮೆಯಾದರೂ ನಮಗೆ ತೆಗೆದುಕೊಳ್ಳಲು ಆಗುತ್ತಿಲ್ಲ. ಈ ಸಾಲಗಳಿಗೆ ಪಿಎಂ ಕಿಸಾನ್ ನಿಧಿ ಹಣ ಜಮೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ನಮಗೆ ಯಾವುದೇ ಪ್ರಯೋಜನವಾಗುತ್ತಿಲ್ಲ’ ಎನ್ನುತ್ತಾರೆ ರೈತ ನಾಗರೆಡ್ಡಿಚಿನ್ನಾಕರ.
‘ನೀರಾವರಿ ಸಾಲ ₹3.90 ಲಕ್ಷ ತೆಗೆದುಕೊಂಡಿದ್ದೇನೆ. ಜೊತೆಗೆ ಬೆಳೆ ಸಾಲವೂ ಇದೆ. ಕೃಷಿಯಲ್ಲಿ ನಷ್ಟ ಉಂಟಾಗಿದ್ದರಿಂದ ಸಾಲ ಕಟ್ಟಲು ಆಗಿಲ್ಲ. ಅಸಲು, ಬಡ್ಡಿ ಸೇರಿ ₹5 ಲಕ್ಷ ಆಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಮುಂದೆ ಬೆಳೆ ಚೆನ್ನಾಗಿ ಬಂದರೆ ಕಟ್ಟಬೇಕು. ಆದರೆ, ರೈತರಿಗಾಗಿ ನೀಡಿರುವ ಹಣ ಸಾಲಕ್ಕೆ ಜಮೆ ಆಗುತ್ತಿದೆ.ಈ ಯೋಜನೆಯ ಉದ್ದೇಶವೇ ಹಾಳಾಗಿದೆ. ಇದಕ್ಕೆ ಸೂಕ್ತ ಪರಿಹಾರದ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ರೈತಹಣಮಂತ ಸಾಬಣ್ಣ ನಾಗರಬಂಡಿ.
‘ಜಿಲ್ಲೆಯ ಹಲವಾರು ರೈತರಿಗೆ ಈ ರೀತಿ ಆಗಿದೆ. ಸರ್ಕಾರ ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಯೋಜನೆ ರೈತರಿಗೆ ಉಪಯೋಗವಾಗುತ್ತಿಲ್ಲ. ಕಳೆದ ಬಾರಿ ಪ್ರವಾಹ ಬಂದು ಜಮೀನು ಹಾಳಾಗಿದ್ದರಿಂದ ರೈತರು ತತ್ತರಿಸಿದ್ದಾರೆ. ಈಗಲೂ ಹಣವಿಲ್ಲದೆ ಸಣ್ಣಪುಟ್ಟ ಖರ್ಚಿಗೂ ರೈತರು ಪರದಾಡಬೇಕಿದೆ’ ಎನ್ನುತ್ತಾರೆ ನವ ಕರ್ನಾಟಕ ರಾಜ್ಯ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಚನ್ನಾರೆಡ್ಡಿಗೌಡ ಗುರುಸುಣಗಿ.
‘ಬ್ಯಾಂಕ್‌ನವರು ಸಾಲಕ್ಕೆ ಜಮಾ ಮಾಡಿಕೊಳ್ಳಲ್ಲ. ಆದರೂ ಒಂದು ವೇಳೆ ಆ ರೀತಿ ಕಂಡು ಬಂದರೆ ನಮಗೆ ದೂರು ಸಲ್ಲಿಸಬಹುದು’ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಂಚಾಳ ಮಾಹಿತಿ ನೀಡುತ್ತಾರೆ.
***
ಕಿಸಾನ್ ಸಮ್ಮಾನ್ ಯೋಜನೆ ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳಲು ಮಾಡಿಲ್ಲ. ಆದರೆ, ಬ್ಯಾಂಕ್ ಅಧಿಕಾರಿಗಳು ಜಮಾ ಮಾಡಿಕೊಳ್ಳುತ್ತಿದ್ದಾರೆ
-ಹಣಮಂತ ಸಾಬಣ್ಣ ನಾಗರಬಂಡಿ, ರೈತ
***
ರೈತರು ಕೋವಿಡ್, ಅತಿವೃಷ್ಟಿ, ಅನಾವೃಷ್ಟಿಯಿಂದ ಬಳಲುತ್ತಿದ್ದು, ಹಣವನ್ನು ಸಾಲಕ್ಕೆ ಜಮಾಮಾಡಿಕೊಳ್ಳುವುದು ರೈತರಿಗೆ ಮಾಡಿದ ದ್ರೋಹವಾಗಿದೆ
-ಚನ್ನಾರೆಡ್ಡಿ ಗುರುಸುಣಗಿ, ರೈತ ಮುಖಂಡ
***
ಪಿಎಂ ಕಿಸಾನ್ ನಿಧಿ ಸಮ್ಮಾನ್ ಯೋಜನೆಯಡಿ ಜಿಲ್ಲೆಯಲ್ಲಿ ಮೊದಲ ಕಂತಿನಲ್ಲಿ 1.11 ಲಕ್ಷ ರೈತರಿಗೆ ಹಣ ಜಮೆಯಾಗಿದೆ
-ದೇವಿಕಾ ಆರ್, ಜಂಟಿ ಕೃಷಿ ನಿರ್ದೇಶಕಿ
***
ಈಗಾಗಲೇ ಬ್ಯಾಂಕರ್‌ಗಳ ಸಭೆ ನಡೆಸಲಾಗಿದೆ. ಪಿಎಂ ಕಿಸಾನ್ ನಿಧಿ ಸಮ್ಮಾನ್ ಹಣವನ್ನು ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಎಂದು ಸೂಚಿಸಿದ್ದೇನೆ
-ಭೀಮರಾವ್ ಪಂಚಾಳ, ಲೀಡ್ ಬ್ಯಾಂಕ್ ವ್ಯವಸ್ಥಾಪಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.