ಶನಿವಾರ, ಜೂನ್ 25, 2022
26 °C
ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಹಾಸ್ಟೆಲ್‌ ಕಾರ್ಮಿಕರ ಪ್ರತಿಭಟನೆ

ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಹಾಸ್ಟೆಲ್‌ ಕಾರ್ಮಿಕರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಬಾಕಿ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿ ಎಐಯುಟಿಯುಸಿ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಹಾಸ್ಟೆಲ್ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್ ಕಾರ್ಮಿಕರ ಹಲವು ತಿಂಗಳ ಬಾಕಿ ವೇತನ ಕೂಡಲೇ ಪಾವತಿಸುವಂತೆ ಎಐಯುಟಿಯುಸಿಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

ಸಂಘದ ಜಿಲ್ಲಾ ಮುಖಂಡ ರಾಮಲಿಂಗಪ್ಪ ಬಿ.ಎನ್. ಮಾತನಾಡಿ, ‘ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರಾಗಿ ಕನಿಷ್ಠ ವೇತನ ಆಧಾರದ ಮೇಲೆ 17-20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಅವರ ಬದುಕು ಶೋಚನೀಯವಾಗಿದೆ’ ಎಂದರು.

‘ಬಾಕಿ ವೇತನ ಬಿಡುಗಡೆ ಹಾಗೂ ಇಪಿಎಫ್ ಮತ್ತು ಇಎಸ್‍ಐ ಸೌಲಭ್ಯಕ್ಕಾಗಿ ಆಗ್ರಹಿಸಿ ಈ ಹಿಂದೆ 6 ದಿನಗಳ ಕಾಲ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಅಹೋರಾತ್ರಿ ಧರಣಿ ಮಾಡಲಾಗಿತ್ತು. ಆ ವೇಳೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾಕಿ ವೇತನದಲ್ಲಿ ಕಾಲೇಜ್ ಹಾಸ್ಟೆಲ್ ಕಾರ್ಮಿಕರಿಗೆ 2 ತಿಂಗಳ ಮತ್ತು ಹೈಸ್ಕೂಲ್ ಹಾಸ್ಟೆಲ್ ಕಾರ್ಮಿಕರಿಗೆ 1 ತಿಂಗಳ ವೇತನ ಮಾತ್ರ ಪಾವತಿಸಿ ಉಳಿದ ವೇತನವನ್ನು ಒಂದು ವಾರದೊಳಗೆ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು‘ ಎಂದು ಭರವಸೆ ನೀಡಿದ್ದರು.

ಆದರೆ, ಭರವಸೆ ನೀಡಿ 4 ತಿಂಗಳು ಕಳೆದರೂ ಈವರೆಗೂ ಕಾರ್ಮಿಕರಿಗೆ ಒಂದೇ ಒಂದು ಪೈಸೆ ಹಣ ವರ್ಗಾವಣೆ ಮಾಡಿಲ್ಲ. ಸಮಾಜ ಕಲ್ಯಾಣ ಇಲಾಖೆ ಕಳೆದ ವರ್ಷದ ಲಾಕ್‌ಡೌನ್ ನಿಂದ ಎರಡನೇ ವರ್ಷದ ಲಾಕ್‌ಡೌನ್ ವರೆಗೂ 2 ವರ್ಷಗಳಲ್ಲಿ ಕೇವಲ 2 ಮತ್ತು 1 ತಿಂಗಳ ವೇತನ ಮಾತ್ರ ಕಾರ್ಮಿಕರಿಗೆ ನೀಡಿರುವ ಸರ್ಕಾರ ಹಾಗೂ ಜಿಲ್ಲಾಡಳಿತದ ಕ್ರಮ ಅಮಾನವೀಯವಾಗಿದೆ’ ಎಂದು ಆರೋಪಿಸಿದರು.

‘ಬಿಸಿಎಂ ಇಲಾಖೆಯು 2020 ರ ನವೆಂಬರ್‌ನಲ್ಲಿ ಒಂದು ತಿಂಗಳು ಕಾರ್ಮಿಕರಿಂದ ಕೆಲಸ ತೆಗೆದುಕೊಂಡು ನಂತರ ಅವರನ್ನು ಕೆಲಸದಿಂದ ಬಿಡುಗಡೆ ಮಾಡಿತ್ತು. ಆದರೆ, ನವೆಂಬರ್ -2020 ರ ತಿಂಗಳ ಈವರೆಗೂ ಪಾವತಿ ಮಾಡಿಲ್ಲ. ಮಾರ್ಚ್ -2021 ರ ತಿಂಗಳ ವೇತನ ತಡೆ ಹಿಡಿಯಲಾಗಿದೆ’ ಎಂದು ಆಪಾದಿಸಿದರು.

ಸಂಘದ ಪದಾಧಿಕಾರಿಗಳಾದ ತಾಜುದ್ದೀನ್, ಶ್ರೀಕಾಂತ, ಭಾಗಪ್ಪ, ಮರಳಮ್ಮ, ಅಂಬಮ್ಮ, ಮರೆಮ್ಮ, ಶ್ರೀದೇವಿ, ಲಕ್ಷ್ಮೀ, ದೊ.ಲಕ್ಷ್ಮೀ, ರೇಣುಕಾ, ನಾಗಮ್ಮ, ನಿರ್ಮಲಾ ಇದ್ದರು.

***

ಕೊರೊನಾ ವಿರುದ್ಧ ಹೋರಾಡಲು ಎಲ್ಲರೂ ಪೌಷ್ಟಿಕ ಆಹಾರ ಸೇವಿಸಲು ಸರ್ಕಾರ ಸಲಹೆ ನೀಡುತ್ತಿದೆ. ಆದರೆ, ಹಲವಾರು ತಿಂಗಳು ಕಾಲ ಹಾಸ್ಟೆಲ್‌ ಕಾರ್ಮಿಕರಿಗೆ ವೇತನವೇ ನೀಡದಿದ್ದರೆ ಹೇಗೆ?
-ರಾಮಲಿಂಗಪ್ಪ ಬಿ.ಎನ್., ಎಐಯುಟಿಯುಸಿ ಜಿಲ್ಲಾ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು