ಬುಧವಾರ, ಜೂನ್ 29, 2022
24 °C
ಯಾದಗಿರಿಯಲ್ಲಿ ರೈಲ್ವೆ ತಡೆಗೆ ಯತ್ನ, ಸರ್ಕಾರದ ವಿರುದ್ಧ ಆಕ್ರೋಶ

ಯಾದಗಿರಿ ಜಿಲ್ಲೆಯಾದ್ಯಂತ ಮೀಸಲಾತಿ ಹೆಚ್ಚಳಕ್ಕಾಗಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಹೆಚ್ಚಳಕ್ಕಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಗೆ ಶೇ 15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ 3ರಿಂದ 7.5ಕ್ಕೆ ಮೀಸಲಾತಿ ಹೆಚ್ಚಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ತಹಶೀಲ್ದಾರ್ ಕಚೇರಿ ಮೂಲಕ ರೈಲ್ವೆ ನಿಲ್ದಾಣಕ್ಕೆ ಮೆರವಣಿಗೆ ಮೂಲಕ ಆಗಮಿಸಿದ ಕ್ರಿಯಾ ಸಮಿತಿ ಪದಾಧಿಕಾರಿಗಳು, ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ನೂರಾರು ಜಾತಿಗಳಿದ್ದು, ಮೀಸಲಾತಿ ಕೊರತೆಯಿಂದ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಂಚಿತರಾಗಿದ್ದಾರೆ. ಮೀಸಲಾತಿ ಹೆಚ್ಚಿಸಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೆ ವಾಲ್ಮೀಕಿ ಸಮಾಜದ ಪ್ರಸನ್ನಾನಂದಪುರಿ ಸ್ವಾಮೀಜಿ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ಮಾಡುತ್ತಿದ್ದು, ಸರ್ಕಾರ ಸ್ಪಂದನೆ ಮಾಡದೆ ಸಂವಿಧಾನಕ್ಕಾಗಿ ಹಕ್ಕನ್ನು ವಂಚಿಸಿತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ 70 ಲಕ್ಷದಷ್ಟು ಇದ್ದು, ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಕೇವಲ ಶೇ 3ರಷ್ಟಿದೆ. ಪರಿಶಿಷ್ಟ ಪಂಗಡದಲ್ಲಿ 51 ಜಾತಿಗಳನ್ನು ಸೇರಿಸಲಾಗಿದೆ. ಪರಿಶಿಷ್ಟ ಜಾತಿಯ ಜನಸಂಖ್ಯೆ 1.10 ಕೋಟಿ ಇದ್ದು, ಮೀಸಲಾತಿ ಪ್ರಮಾಣ ಶೇಕಡ 15ರಷ್ಟು ಮಾತ್ರ ಇದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ 101 ಜಾತಿಗಳನ್ನು ಸೇರಿಸಲಾಗಿದೆ. ಕಳೆದ ಆರು ದಶಕಗಳಿಂದ ನೀಡಿದ ಮೀಸಲಾತಿಯನ್ನು ಮುಂದುವರೆದಿರುವುದು ಪರಿಶಿಷ್ಟರಿಗೆ ಮಾಡಿದ ಘೋರ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ಜನಸಂಖ್ಯೆ ಅನುಗುಣವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಕಳೆದ 35 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಾ ಬರುತ್ತಿದ್ದರೂ ನಮ್ಮನ್ನಾಳುವ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗೆ ಅವರ ಬೇಡಿಕೆಗಳನ್ನು ಈಡೇರಿಸಲು ಮೀನಾಮೇಷ ಎಣಿಸುತ್ತಿದೆ. ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 7.5 ರಷ್ಟು ಪ್ರತಿಶತ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ಎಸ್‌ಸಿ, ಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ 2013 ಕಾಲಂ 7 ಡಿ ಎನ್ನು ರದ್ದುಗೊಳಿಸಬೇಕು. ರಾಜ್ಯದಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆಯುತ್ತಿರುವ ಹಾಗೂ ವಿತರಿಸುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರವೀಂದ್ರನಾಥ್ ಅವರ ರಾಜೀನಾಮೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಸ್ವೀಕರಿಸಿದರು.

ಈ ವೇಳೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಜಿಲ್ಲಾ ಅಧ್ಯಕ್ಷ ಮಾರೆಪ್ಪ ನಾಯಕ ಮಗ್ದಂಪುರ, ಭೀಮರಾಯ ಠಾಣಗುಂದಿ, ಹನುಮಂತ ಎಂ ಬಂದಳ್ಳಿ, ಕೆ.ಬಂಗಾರಪ್ಪ, ಯಂಕಪ್ಪ ರಾಥೋಡ, ವೀರಪ್ಪ ಪ್ಯಾಟಿ, ಸುದರ್ಶನ ನಾಯಕ, ಚಂದ್ರಕಾಂತ್ ಹತ್ತಿಕುಣಿ, ಹನುಮಂತ ಖಾನಳ್ಳಿ, ಲಕ್ಷ್ಮಣ ರಾಥೋಡ್ ಸೇರಿದಂತೆ ಸಮುದಾಯದ ಮುಖಂಡರು ಭಾಗವಹಿಸಿದ್ದರು.

***
ಪ್ರತಿಭಟನಾಕಾರರನ್ನು ತಡೆದ ಪೊಲೀಸರು
ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮುಖಂಡರು ರೈಲ್ವೆ ಸ್ಟೇಷನ್ ತೆರಳಿ ರೈಲ್ವೆ ತಡೆಗೆ ಉದ್ದೇಶಿಸಿದ್ದರು. ಆದರೆ, ಪೊಲೀಸ್ ಅಧಿಕಾರಿಗಳು ಮುಖಂಡರನ್ನು ತಡೆದು ಕೇವಲ ಪ್ರತಿಭಟನೆಗೆ ಸೀಮಿತಗೊಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು