ಗುರುವಾರ , ಮೇ 26, 2022
25 °C
ಕೃಷಿ ಉತ್ಪನ್ನ ಮಾರುಕಟ್ಟೆಗೆ ಶೇಂಗಾ, ತೊಗರಿ ಆವಕ, ಖರೀದಿ ಕೇಂದ್ರ ಆರಂಭಿಸಲು ರೈತರ ಒತ್ತಾಯ

ನಮ್ಮ ಜನ ನಮ್ಮ ಧ್ವನಿ: ಹಿಂಗಾರು ಹಂಗಾಮಿನ ಬೆಳೆಗಿಲ್ಲ ಸೂಕ್ತ ದರ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಶೇಂಗಾ, ಕಡಲೆ, ಬಿಳಿಜೋಳ, ತೊಗರಿ, ಸಜ್ಜೆ ಬಿತ್ತನೆ ಮಾಡಲಾಗಿದೆ. ಈಗ ಶೇಂಗಾ, ತೊಗರಿ ರಾಶಿಯಾಗಿದ್ದು, ಸೂಕ್ತ ಬೆಲೆ ಇಲ್ಲದೇ ರೈತರು ಪರದಾಡುತ್ತಿದ್ದಾರೆ.

ಯಾದಗಿರಿ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಶೇಂಗಾ, ತೊಗರಿ ಆವಕ ಬಂದಿದ್ದು, ಸಿಕ್ಕ ದರಕ್ಕೆ ರೈತರು ಮಾರುತ್ತಿದ್ದಾರೆ. ಯಾದಗಿರಿ, ಗುರುಮಠಕಲ್‌ ತಾಲ್ಲೂಕಿನಲ್ಲಿ ಶೇಂಗಾ ಹೆಚ್ಚು ಬಿತ್ತನೆ ಮಾಡಲಾಗಿದೆ. ಎಪಿಎಂಸಿಗೆ ರೈತರು ಟ್ರ್ಯಾಕ್ಟರ್‌, ಟಂಟಂ ಆಟೊಗಳಲ್ಲಿ ಶೇಂಗಾ ಬೀಜಗಳನ್ನು ತರುತ್ತಿದ್ದಾರೆ.

ಖರೀದಿ ಕೇಂದ್ರ ಆರಂಭಿಸಿ:

ಇನ್ನೂ 15 ರಿಂದ 20 ದಿನಗಳಲ್ಲಿ ಶೇಂಗಾ, ಕಡಲೆ ಎಲ್ಲ ಕಡೆ ರಾಶಿಯಾಗಲಿದೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

‘ಶೇಂಗಾ ಮಾರುಕಟ್ಟೆಗೆ ಬಂದಿದ್ದು, ಕ್ವಿಂಟಲ್‌ಗೆ ಕನಿಷ್ಠ ₹4,859, ಗರಿಷ್ಠ ₹7,282 ಮತ್ತು ಸರಾಸರಿ ₹6,558 ದರ ಇದೆ. ಇದರಿಂದ ರೈತರಿಗೆ ಲಾಭ ಸಿಗುತ್ತಿಲ್ಲ. ಖರೀದಿ ಕೇಂದ್ರಗಳನ್ನು ಆರಂಭಿಸಿ ಬೆಂಬಲ ಬೆಲೆ ದರದಲ್ಲಿ ಖರೀದಿಸಬೇಕು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೆಲ ರೈತರು ಸಾಲ ತೀರಿಸಿಕೊಳ್ಳಲು ಕಡಿಮೆ ಬೆಲೆಗೆ ಮಾರುವಂತಹ ಪರಿಸ್ಥಿತಿ ಬಂದಿದೆ’  ಎಂದು ರೈತ ಮಲ್ಲಯ್ಯ ಪೂಜಾರಿ ತಿಳಿಸಿದರು.

ಶೇಕಡವಾರು ಪ್ರಮಾಣ:

ಹಿಂಗಾರು ಹಂಗಾಮಿನಲ್ಲಿ ಸುರಪುರ ತಾಲ್ಲೂಕಿನಲ್ಲಿ ಕಡಿಮೆ ಬಿತ್ತನೆಯಾಗಿದೆ. ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚು ಬಿತ್ತನೆಯಾಗಿದೆ.

ಶಹಾಪುರ ತಾಲ್ಲೂಕಿನಲ್ಲಿ 24,935 ಹೆಕ್ಟೇರ್‌ ಪ್ರದೇಶದ ಗುರಿ ಪೈಕಿ, ಶೇ 93.42 ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಸುರಪುರ ತಾಲ್ಲೂಕಿನಲ್ಲಿ 18,285.17 ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ ಶೇ 67.58 ಬಿತ್ತನೆಯಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ 55,540 ಹೆಕ್ಟೇರ್‌ ಪ್ರದೇಶದಲ್ಲಿ ಗುರಿಯಲ್ಲಿ ಶೇ 79.77 ಬಿತ್ತನೆಯಾಗಿದೆ.

ಸುರಪುರ ತಾಲ್ಲೂಕಿನಲ್ಲಿ ಹಿಂಗಾರು ಜೋಳ ನೀರಾವರಿ ಕ್ಷೇತ್ರದಲ್ಲಿ 27 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಸಜ್ಜೆ ನೀರಾವರಿ 13 ಹೆಕ್ಟೇರ್‌, 74 ಹೆಕ್ಟೆರ್‌ ಖುಷ್ಕಿ ಜಮೀನನಲ್ಲಿ ಬಿತ್ತನೆಯಾಗಿದೆ. ಗೋಧಿ ನೀರಾವರಿ ಪ್ರದೇಶದಲ್ಲಿ 10 ಹೆಕ್ಟೇರ್‌, ಖುಷ್ಕಿ 15 ಹೆಕ್ಟೇರ್‌ ಜಮೀನನಲ್ಲಿ ಬಿತ್ತನೆಯಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ 7 ಹೆಕ್ಟೇರ್‌ ಖುಷ್ಕಿ ಜಮೀನಿನಲ್ಲಿ ಬೆಳೆಯಲಾಗಿದೆ.

ಶೇಂಗಾ ಬೆಳೆ ವಿವರ:

ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ 13,275 ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಸುರಪುರ ತಾಲ್ಲೂಕಿನಲ್ಲಿ 4,205 ಹೆಕ್ಟೇರ್‌, ಯಾದಗಿರಿ ತಾಲ್ಲೂಕಿನಲ್ಲಿ 28,660 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಕಡಲೆ 9,301, ಕಬ್ಬು (ಹೊಸ) 145 ಹೆಕ್ಟೇರ್‌ ಬಿತ್ತನೆಯಾಗಿದೆ. 

ಶೇ 96.34 ಹಿಂಗಾರು ಬೆಳೆ ಬಿತ್ತನೆ:

ವಡಗೇರಾ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಹತ್ತಿ ಬೆಳೆ ಕಿತ್ತಿ ಸಜ್ಜೆ, ಕಡಲೆ, ಶೇಂಗಾ ಬೆಳೆದಿದ್ದಾರೆ.

ಹಿಂಗಾರು ಹಂಗಾಮಿನಲ್ಲಿ ಭತ್ತ 9,170 ಹೆಕ್ಟೇರ್‌, ಶೇಂಗಾ 8,730, ಜೋಳ 6,400, ಕಡಲೆ 150, ಸಜ್ಜೆ 200 ಹೆಕ್ಟೇರ್ ಒಟ್ಟು 24,300 ಹೆಕ್ಟೇರ್‌ನಲ್ಲಿ ಹಿಂಗಾರು ಬೆಳೆ ಶೇ 96.34 ರಷ್ಟು ಬಿತ್ತನೆ ಮಾಡಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿ ಜಗದೀಶ ಗಾಯಕವಾಡ ಮಾಹಿತಿ ನೀಡಿದ್ದಾರೆ.

‘ಶೇಂಗಾ ಬೀಜ ಖರೀದಿ ಮಾಡುವಾಗ ಕ್ವಿಂಟಲ್‌ಗೆ ₹10 ಸಾವಿರ ಕೊಟ್ಟು ಖರೀದಿ ಮಾಡಿದ್ದೇವೆ. ಆದರೆ, ಈಗ ₹6–7 ಸಾವಿರಕ್ಕೆ ಶೇಂಗಾ ಖರೀದಿ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಲಾಭವಿಲ್ಲದಂತಾಗಿದೆ. ಒಂದು ಕ್ವಿಂಟಲ್‌ ₹10 ಸಾವಿರಕ್ಕೆ ಖರೀದಿ ಮಾಡಬೇಕು’ ಎಂದು ರೈತರು ಆಗ್ರಹಿಸುತ್ತಾರೆ.

****

ಹಿಂಗಾರು ಹಂಗಾಮಿನ ಬೆಳೆ ವಿವರ (ಹೆಕ್ಟೇರ್‌ಗಳಲ್ಲಿ)

ತಾಲ್ಲೂಕು;ಕ್ಷೇತ್ರ

ಶಹಾಪುರ;23,295

ಸುರಪುರ;12,358

ಯಾದಗಿರಿ;44,307

ನೀರಾವರಿ;ಖುಷ್ಕಿ;ಒಟ್ಟು

17,714;62,246;79,960

ಆಧಾರ: ಕೃಷಿ ಇಲಾಖೆ
*****
ಸುರಪುರ: ಶೇಂಗಾಕ್ಕೆ ಬಂಪರ್ ದರ

ಸುರಪುರ: ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿಗೆ ಹೆಚ್ಚಾಗಿ ಶೇಂಗಾ, ಕಡಲೆ, ಜೋಳ ಬೆಳೆಯಲಾಗುತ್ತಿದೆ. ಅತಿವೃಷ್ಟಿಯಿಂದ ಕಂಗಾಲಾಗಿದ್ದ ರೈತನಿಗೆ ಹಿಂಗಾರು ಬೆಳೆ ಕೈಹಿಡಿಯುವ ಲಕ್ಷಣಗಳಿವೆ.

ಈಗಾಗಲೇ ಅಲ್ಲಲ್ಲಿ ಶೇಂಗಾ ರಾಶಿ ನಡೆಯುತ್ತಿದೆ. ಕಡಲೆ ಮತ್ತು ಜೋಳದ ರಾಶಿ ಫೆಬ್ರುವರಿ ಒಳಗೆ ಮಾಡುತ್ತಾರೆ. ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಭತ್ತ ಮತ್ತು ತೊಗರಿಯನ್ನು ಬೇಸಿಗೆ ಬೆಳೆ ಎಂದು ಪರಿಗಣಿಸಲಾಗಿದೆ.

ಈ ಬಾರಿ 11,231 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಶೇ 90ರಷ್ಟು ಬಿತ್ತನೆ ಆಗಿದೆ. ಮಳೆಯಿಂದ ಹಾನಿ ಇತರ ಕಾರಣಗಳಿಗಾಗಿ ಶೇ 10 ರಷ್ಟು ಕ್ಷೇತ್ರದಲ್ಲಿ ಬಿತ್ತನೆ ಮಾಡಿಲ್ಲ.

ಶೇಂಗಾ 5,500 ಹೆಕ್ಟೇರ್, ಕಡಲೆ 1,904 ಹೆಕ್ಟೇರ್, ಜೋಳ 2,741 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಶೇಂಗಾ ಮಾರುಕಟ್ಟೆಗೆ ಬರುತ್ತಿದೆ. ಸದ್ಯ ಶೇಂಗಾದ ಬೆಲೆ ಕ್ವಿಂಟಲ್‌ಗೆ ₹ 5 ಸಾವಿರದಿಂದ 7 ಸಾವಿರದವರೆಗೆ ಇದೆ. ಇದು ಉತ್ತಮ ಬೆಲೆಯಾಗಿದ್ದು, ರೈತನಿಗೆ ಸಂತಸ ತಂದಿದೆ. ಸಂಪೂರ್ಣ ರಾಶಿಯಾಗುವವರೆಗೆ ಇದೆ ಬೆಲೆ ಇದ್ದರೆ ಒಳ್ಳೆಯದು ಎಂಬುದು ರೈತರ ನಿರೀಕ್ಷೆ.
***
ಶೇಂಗಾ ಬೆಳೆ ಮೇಲೆ ರೈತರ ನಿರೀಕ್ಷೆ

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ತಾಲ್ಲೂಕಿನ ರೈತರು ವಾಣಿಜ್ಯ ಬೆಳೆಯಾದ ಹತ್ತಿಯನ್ನು ಕೀಳಿದ ನಂತರ ಹಿಂಗಾರು ಹಂಗಾಮಿನ ಬೆಳೆಯಾಗಿ ಶೇಂಗಾ ಬಿತ್ತನೆ ಮಾಡಿದ್ದಾರೆ. ಈಗ ಎರಡು ತಿಂಗಳ ಬೆಳೆಯಿದೆ. ನಿರೀಕ್ಷೆಯಂತೆ ಎಲ್ಲವೂ ಆದರೆ, ಬಂಪರ್‌ ಇಳುವರಿ ಬರುವ ಆಶಾಭಾವನೆಯನ್ನು ಶೇಂಗಾ ಬೆಳೆಗಾರರು ಹೊಂದಿದ್ದಾರೆ.

ತಾಲ್ಲೂಕಿನಲ್ಲಿ 15,700 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. 4,495 ಹೆಕ್ಟೇರ್ ಭೂಮಿಯಲ್ಲಿ ಬಿಳಿಜೋಳ ಬಿತ್ತನೆ ಮಾಡಿದ್ದಾರೆ. ಕಡಲೆ ಬೆಳೆ 3,487 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಪ್ರಸಕ್ತ ಸಾಲಿನಲ್ಲಿ ಭರಪೂರ ಮಳೆಯಾಗಿದ್ದರಿಂದ ಬೆಳೆಗೆ ತೇವಾಂಶದ ಕೊರತೆ ಕಾಣಿಸಲಿಲ್ಲ. ಚಳಿಯು ಉತ್ತಮವಾಗಿದ್ದರಿಂದ ಬೆಳೆ ಚೆನ್ನಾಗಿದೆ. ಇನ್ನು ಒಂದು ತಿಂಗಳಲ್ಲಿ ಜೋಳ ಕಟಾವಿಗೆ ಬರುತ್ತದೆ. ಉತ್ತಮ ಇಳುವರಿ ಬರುತ್ತದೆ ಎನ್ನುತ್ತಾರೆ ರೈತ ಹಣಮಂತರಾಯ.

ಗೋಧಿ ಬೆಳೆಯನ್ನು ಬಿತ್ತನೆ ಮಾಡಿಲ್ಲ. ಕುಸುಬೆಯನ್ನು ಕೇವಲ 22 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

‘ಶೇಂಗಾ, ಜೋಳ ಹೀಗೆ ವಿವಿಧ ಬೆಳೆ ಮಾರುಕಟ್ಟೆಗೆ ಬಂದ ಮೇಲೆ ಧಾರಣೆ ನಿರ್ಧಾರವಾಗುತ್ತದೆ. ಸದ್ಯಕ್ಕೆ ಏನು ಹೇಳಲು ಆಗುವುದಿಲ್ಲ’ ಎನ್ನುತ್ತಾರೆ ಎಪಿಎಂಸಿ ಅಧಿಕಾರಿ ಒಬ್ಬರು.

***

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ 98,760.2 ಹೆಕ್ಟೇರ್‌ ಬಿತ್ತನೆ ಗುರಿ ಇದ್ದು, 79,960 ಹೆಕ್ಟೇರ್‌ ಬಿತ್ತನೆಯಾಗದೆ. ಈ ಬಾರಿ ಉತ್ತಮ ಫಸಲು ಬರುವ ನಿರೀಕ್ಷೆ ಇದೆ
ಎಸ್‌.ಎಸ್‌.ಅಭೀದ್‌, ಜಂಟಿ ಕೃಷಿ ನಿರ್ದೇಶಕ

***

ಯಾದಗಿರಿ ಎಪಿಎಂಸಿಗೆ ಸದ್ಯ ಶೇಂಗಾ, ತೊಗರಿ ಆವಕ ಬರುತ್ತಿದ್ದು, ತೊಗರಿಗೆ ಕನಿಷ್ಠ ₹6,687 ದರವಿದೆ
ಪ್ರಕಾಶ ಅಯ್ಯಾಳಕರ, ಯಾದಗಿರಿ ಎಪಿಎಂಸಿ ಕಾರ್ಯದರ್ಶಿ

***

ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು. ಸ್ವಾಮಿನಾಥನ್ ವರದಿಯಂತೆ ದರ ನಿಗದಿ ಮಾಡಬೇಕು. ತೊಗರಿಗೆ ₹10 ಸಾವಿರ ಬೆಲೆ ನಿಗದಿಪಡಿಸಬೇಕು
ಮಲ್ಲಿಕಾರ್ಜುನ ಸತ್ಯಂಪೇಟೆ, ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ

***

ಈಗ ವಾರಬಂದಿ ಪ್ರಕಾರ ಕಾಲುವೆಗೆ ನೀರು ಹರಿಸುತ್ತಿದ್ದು, ಲಘು ನೀರಾವರಿ ಬೆಳೆಗಳಾದ ಶೇಂಗಾ, ಕಡಲೆ, ಜೋಳಕ್ಕೆ ಉತ್ತಮವಾಗಿದೆ. ಉತ್ತಮ ಫಸಲು ನಿರೀಕ್ಷೆ ಮಾಡಬಹುದು
ಡಾ.ಭೀಮರಾಯ ಹವಲ್ದಾರ್, ಕೃಷಿ ಅಧಿಕಾರಿ ಸುರಪುರ

***

ರೈತನ ಶೋಷಣೆ ಯಾವಾಗಲೂ ಇದೆ. ಬೇರೆ ಕ್ಷೇತ್ರಗಳಲ್ಲಿ ಉತ್ಪಾದಕರು ಬೆಲೆ ನಿಗದಿ ಪಡಿಸಿದರೆ, ಕೃಷಿ ಉತ್ಪನ್ನಗಳಿಗೆ ರೈತ ಬೆಲೆ ನಿಗದಿ ಪಡಿಸುವಂತಿಲ್ಲ. ಇದು ವಿಪರ್ಯಾಸ
ಸಾಹೇಬಗೌಡ ದೇವಿಕೇರಿ, ರೈತ ಸುರಪುರ

***

ಹಿಂಗಾರು ಹಂಗಾಮಿನ ಬೆಳೆ ಉತ್ತಮವಾಗಿವೆ. ತೇವಾಂಶದ ಕೊರತೆ ಕಾಣಿಸಿಕೊಂಡಿಲ್ಲ. ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ
ಸುನಿಲಕುಮಾರ, ಎ.ಡಿ. ಶಹಾಪುರ

***

ಪೂರಕ ಮಾಹಿತಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ದೇವೀಂದ್ರಪ್ಪ ಕ್ಯಾತನಾಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು