ಬಿ.ಜಿ.ಪ್ರವೀಣಕುಮಾರ
ಯಾದಗಿರಿ: ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿರುವ ಕೆರೆ, ನದಿಗಳು ಬತ್ತುತ್ತಿವೆ. ಬ್ರಿಜ್ ಕಂ ಬ್ಯಾರೇಜ್‌ಗಳಲ್ಲೂ ನೀರಿನ ಸಂಗ್ರಹವಿಲ್ಲದೇ ಮುಂದಿನ ದಿನಗಳಲ್ಲಿ ಬರಗಾಲ ಪರಿಸ್ಥಿತಿ ಉಂಟಾಗಲಿದೆಯೇ ಎನ್ನುವ ಆತಂಕ ಉಂಟಾಗಿದೆ.
ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣಾ, ಭೀಮಾ ನದಿಗಳಲ್ಲಿ ನೀರಿಲ್ಲದೆ ಕಲ್ಲುಗಳು ಮೇಲೆದ್ದಿವೆ. ಅಲ್ಲಲ್ಲಿ ಗುಂಡಿಗಳಲ್ಲಿ ನಿಂತಿರುವ ನೀರೇ ಜಾನುವಾರುಗಳಿಗೆ ಆಸರೆಯಾಗಿವೆ. ಕಳೆದ 2019ರಲ್ಲೂ ಜಲಮೂಲಗಳಲ್ಲಿ ನೀರಿಲ್ಲದಂತ ಪರಿಸ್ಥಿತಿ ಉಂಟಾಗಿತ್ತು. ಐದು ವರ್ಷದ ನಂತರ ಮತ್ತೆ ಮಳೆ ಕೊರತೆಯಾಗಿದೆ.
ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲೂ ನೀರಿನ ಸಂಗ್ರಹ ಕಡಿಮೆಯಾಗಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 71 ಕೆರೆಗಳಿದ್ದು, ಅರ್ಧದಷ್ಟು ಕೆರೆಗಳಲ್ಲಿ ನೀರಿನ ಕೊರತೆ ಇದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 268 ಕೆರೆಗಳಿವೆ. ಈಗ ಇವುಗಳನ್ನು ಆಯಾ ಗ್ರಾಮ ಪಂಚಾಯಿತಿಗಳ ನಿರ್ವಹಣೆಗೆ ಒಪ್ಪಿಸಲಾಗಿದೆ.
71 ಕೆರೆಗಳ ಅಚ್ಚುಕಟ್ಟು ಪ್ರದೇಶ 6,386 ಹೆಕ್ಟೇರ್ ಇದೆ. ಯಾದಗಿರಿ, ವಡಗೇರಾ, ಶಹಾಪುರ, ಹುಣಸಗಿ ತಾಲ್ಲೂಕಿನ ತಲಾ ಒಂದು ಕೆರೆ ನೀರಿಲ್ಲದೇ ಒಣಗಿವೆ. ಶೇ 1ರಿಂದ 30 ತುಂಬಿದ ಕೆರೆಗಳ ಸಂಖ್ಯೆ 59, ಶೇ 31ರಿಂದ 50ರಷ್ಟು ಕೆರೆ ಭರ್ತಿಯಾದ ಕೆರೆಗಳು 7, ಶೇ 51ರಿಂದ 99 ಶಹಾಪುರ ತಾಲ್ಲೂಕಿನ ಒಂದು ಕೆರೆ ಮಾತ್ರ ಇದೆ. ಉಳಿದಂತೆ ಯಾವ ಕೆರೆಯೂ ಪೂರ್ಣ ಪ‍್ರಮಾಣದಲ್ಲಿ ಭರ್ತಿಯಾಗಿಲ್ಲ.
40 ಹೆಕ್ಟೇರ್‌ಗಿಂತ ಕೆರೆಯ ಪ್ರದೇಶ ಜಾಸ್ತಿ ಇದ್ದರೆ ಸಣ್ಣ ನೀರಾವರಿ ಇಲಾಖೆಗೆ ಒಳಪಡುತ್ತದೆ. 40 ಹೆಕ್ಟೇರ್ ಪ್ರದೇಶಕ್ಕಿಂತ ಕೆರೆ ಸಣ್ಣದಾಗಿದ್ದರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ.
ನಗರ ಹೊರ ಬ್ರಿಜ್ ಕಂ ಬ್ಯಾರೇಜ್‌ನಲ್ಲಿಯೂ ನೀರು ಸಂಗ್ರಹ ಕಡಿಮೆಯಾಗಿದೆ. ಸನ್ನತಿ ಬ್ಯಾರೇಜ್‌ನಿಂದ ಯಾದಗಿರಿ–ಗುರುಸಣಗಿ ಬ್ರಿಜ್ ಕಂ ಬ್ಯಾರೇಜ್‌ಗೆ ಎರಡು ದಿನಗಳ ಹಿಂದೆ 1,400 ಕ್ಯುಸೆಕ್ ನೀರು ಹರಿಸಲಾಗಿದ್ದು, ಇದರಿಂದ ಯಾದಗಿರಿ ನಗರ, ಗುರುಮಠಕಲ್ ಪಟ್ಟಣ ಸೇರಿದಂತೆ ನೂರಾರು ಹಳ್ಳಿಗಳು ಅಲ್ಲದೇ ಭೀಮಾ ನದಿಯ ಇಕ್ಕೆಲಗಳಲ್ಲಿರುವ ಹಳ್ಳಿಗಳಿಗೆ ಜನ ಜಾನುವಾರುಗಳಿಗೆ ಕುಡಿವ ನೀರು ಸಮಸ್ಯೆ ನಿವಾರಣೆಯಾಗಿದೆ.
ಮಳೆ ಪ್ರಮಾಣ ಕುಂಠಿತ: ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ವಾಡಿಕೆ ಮಳೆ 99 ಮಿಲಿ ಮೀಟರ್ (ಎಂಎಂ) ಇತ್ತು. ಆದರೆ, 61 ಎಂಎಂ ಮಳೆಯಾಗಿ ಶೇ 38ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ಜುಲೈ 1ರಿಂದ 9 ರವರೆಗೆ 34 ಎಂಎಂ ಮಳೆಯಾಗಬೇಕಿತ್ತು. 26 ಎಂಎಂ ಮಳೆಯಾಗಿದೆ. ಜೂನ್ 1ರಿಂದ ಜುಲೈ 9ರ ವರೆಗೆ 125 ಎಂಎಂ ಮಳೆಯಾಗಬೇಕಿತ್ತು. ಆದರೆ, 95 ಎಂಎಂ ಮಾತ್ರ ಮಳೆಯಾಗಿದೆ. ಇದರಿಂದ ಜಲಮೂಲಗಳು ಬತ್ತುತ್ತಿವೆ.
ಶೇ 25ರಷ್ಟು ಬಿತ್ತನೆ: ಜಿಲ್ಲೆಯಲ್ಲಿ 4,01,638 ಹೆಕ್ಟೇರ್ ಬಿತ್ತನೆ ಕ್ಷೇತ್ರದ ಗುರಿ ಇದ್ದು, ಇದರಲ್ಲಿ 1,02,446 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶೇಕಡಾವಾರು 25.51 ಬಿತ್ತನೆಯಾಗಿದೆ.
ಶಹಾಪುರ ತಾಲ್ಲೂಕಿನ 73,267, ವಡಗೇರಾ ತಾಲ್ಲೂಕಿನ 54,556, ಸುರಪುರ ತಾಲ್ಲೂಕಿನ 91,861, ಹುಣಸಗಿ ತಾಲ್ಲೂಕಿನ 63,507, ಯಾದಗಿರಿ ತಾಲ್ಲೂಕಿನ 69,172, ಗುರುಮಠಕಲ್ ತಾಲ್ಲೂಕಿನಲ್ಲಿ 49,275 ಬಿತ್ತನೆ ಗುರಿ ಇತ್ತು.
ಕ್ರಮವಾಗಿ ಶಹಾಪುರ 25,646, ವಡಗೇರಾ 20,293, ಸುರಪುರ 8,630, ಹುಣಸಗಿ 6,627, ಯಾದಗಿರಿ 21,055, ಗುರುಮಠಕಲ್ 20,195 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಶಹಾಪುರ ಶೇ 35, ವಡಗೇರಾ ಶೇ 37.20, ಸುರಪುರ ಶೇ 9.39, ಹುಣಸಗಿ ಶೇ 10.44, ಯಾದಗಿರಿ ಶೇ 30.44, ಗುರುಮಠಕಲ್ ಶೇ 40.98ರಷ್ಟು ಬಿತ್ತನೆಯಾಗಿದೆ.
ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಎಂ.ಪಿ.ಚಪೆಟ್ಲಾಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ 4 ಲಕ್ಷ ಬಿತ್ತನೆ ಗುರಿ ಇದ್ದರೆ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ನೀರಾವರಿ ಪ‍್ರದೇಶದಲ್ಲಿ ಮಾತ್ರ ಹೆಚ್ಚಿನ ಬಿತ್ತನೆಯಾಗಿದೆ ಆಬಿದ್ ಎಸ್.ಎಸ್. ಜಂಟಿ ಕೃಷಿ ನಿರ್ದೇಶಕ
ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ 4 ಲಕ್ಷ ಬಿತ್ತನೆ ಗುರಿ ಇದ್ದರೆ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ನೀರಾವರಿ ಪ‍್ರದೇಶದಲ್ಲಿ ಮಾತ್ರ ಹೆಚ್ಚಿನ ಬಿತ್ತನೆಯಾಗಿದೆ.ಆಬಿದ್ ಎಸ್.ಎಸ್. ಜಂಟಿ ಕೃಷಿ ನಿರ್ದೇಶಕ
ಭೀಮಾ ನದಿ ಪಾತ್ರದ ರೈತರನ್ನು ಕರೆದು ಜಿಲ್ಲಾಡಳಿತ ಸಭೆ ಮಾಡಿಲ್ಲ. ಕೂಡಲೇ ರೈತರ ಸಭೆ ಕರೆದು ಭತ್ತ ನಾಟಿ ಕುರಿತು ಅವರ ಮನವೊಲಿಸಬೇಕು. ಲಘು ಬೆಳೆಗಳನ್ನು ಬೆಳೆಯುವಂತೆ ತಿಳಿವಳಿಕೆ ಮೂಡಿಸಬೇಕು. ದಿಢೀರನೆ ಬರ ಆವರಿಸಿದರೆ ಸಮಸ್ಯೆ ನಿಭಾಯಿಸಲು ಸಾಧ್ಯವಾಗಲಿದೆ.ಉಮೇಶ ಕೆ. ಮುದ್ನಾಳ ಸಾಮಾಜಿಕ ಹೋರಾಟಗಾರ
ನಾರಾಯಣಪುರ ಅಣೆಕಟ್ಟೆಯಲ್ಲಿ ನೀರಿಲ್ಲ. ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಜಾನುವಾರುಗಳಿಗೂ ನೀರಿಲ್ಲ. ಕಾರಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ.ಹಣಮಂತ್ರಾಯ ಮಡಿವಾಳ ತಾಲ್ಲೂಕು ಘಟಕದ ಅಧ್ಯಕ್ಷ ರೈತ ಸಂಘ
ಮುಂಗಾರು ಸಂಪೂರ್ಣ ವಿಫಲವಾಗಿದೆ. ಅಲ್ಲಲ್ಲಿ ಮಳೆ ಬಿದ್ದರೂ ಭೂಮಿಗೆ ತೇವಾಂಶವಿಲ್ಲ. ಸರ್ಕಾರ ಮೋಡ ಬಿತ್ತನೆ ನಿರ್ಧಾರ ಮಾಡಬೇಕು. ರೈತರಿಗೆ ಪರಿಹಾರ ನೀಡಬೇಕು.ಮೇಲಪ್ಪ ಗುಳಿಗಿ ಬಿಜೆಪಿ ಸುರಪುರ ಮಂಡಲ ಅಧ್ಯಕ್ಷ
ಜಿ.ಪಂ ಕೆರೆಗಳ ಮಾಹಿತಿ ತಾಲ್ಲೂಕು; ಕೆರೆಗಳ ಸಂಖ್ಯೆ ಯಾದಗಿರಿ; 177 ಶಹಾಪುರ; 60 ಸುರಪುರ; 31 ಒಟ್ಟು; 268 –––––ಸಣ್ಣ ನೀರಾವರಿ ಇಲಾಖೆ ಮಾಹಿತಿ ತಾಲ್ಲೂಕು; ಕೆರೆಗಳ ಸಂಖ್ಯೆ ಯಾದಗಿರಿ; 31 ಗುರುಮಠಕಲ್;25 ವಡಗೇರಾ;3 ಶಹಾಪುರ; 6 ಸುರಪುರ; 4 ಹುಣಸಗಿ;2 ಒಟ್ಟು; 71
ಮುಗ್ಗರಿಸಿದ ಕೆರೆಗೆ ನೀರು ತುಂಬಿಸುವ ಯೋಜನೆ ಶಹಾಪುರ:
ನಗರದ ಹೃದಯ ಭಾಗದಲ್ಲಿರುವ ನಾಗರ ಕೆರೆ ಹಾಗೂ ಮಾವಿನ ಕೆರೆಗೆ ನೀರು ತುಂಬಿಸುವ ಸಲುವಾಗಿ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ₹4 ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ಮಿಸಲು ಉದ್ಧೇಶಿಸಲಾಗಿದ್ದು. ಟೆಂಡರ್ ಪ್ರಕ್ರಿಯೆ ನಡೆದು ಹಲವು ತಿಂಗಳು ಮುಗಿದರೂ ತಾಂತ್ರಿಕ ಕಾರಣದಿಂದ ಯೋಜನೆ ಅನುಷ್ಠಾನಗೊಳ್ಳುವಲ್ಲಿ ಮುಗ್ಗರಿಸಿದೆ. ತಾಲ್ಲೂಕಿನ ಇನ್ನಿತರ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಬೇಕಾಗಿದೆ. ‘ತಾಲ್ಲೂಕಿನ ನಡಿಹಾಳ ಕೆರೆ ನಗನೂರ ಕೆರೆ ಗುಂಡಾಪುರ ಮುಡಬೂಳ ಕೆರೆ ಸೇರಿದಂತೆ ಹಲವು ಕೆರೆಗೆ ಮರು ಜೀವ ನೀಡಿದ್ದಾರೆ. ನೀರು ಸಂಗ್ರಹದಿಂದ ಅಲ್ಲಿನ ಪ್ರದೇಶದಲ್ಲಿ ಯಾವುದೇ ತೊಂದರೆ ಉಂಟಾಗಿಲ್ಲ. ಅದರಲ್ಲಿ ನಡಿಹಾಳ ಕೆರೆಗೆ ನೀರು ತುಂಬಿಸಿದ್ದರಿಂದ ಕೊಳವೆಬಾಯಿಯಲ್ಲಿ ನೀರು ಬತ್ತಿಲ್ಲ. ಇದರಿಂದ ತರಕಾರಿ ಬೆಳೆ ಬೆಳೆಯುವುದು ವರದಾನವಾಗಿದೆ’ ಎನ್ನುತ್ತಾರೆ ನಡಿಹಾಳ ಗ್ರಾಮದ ರಾಜು ಚವಾಣ್. ‘ನಾಗರ ಹಾಗೂ ಮಾವಿನ ಕೆರೆ ಜನತೆಗೆ ಜೀವಸೆಲೆಯಾಗಿದೆ. ಕೆರೆಯಲ್ಲಿ ನೀರು ಸಂಗ್ರಹದಿಂದ ಅಂತರ್ಜಮಟ್ಟ ಹೆಚ್ಚಳವಾಗಿ ಕೊಳವೆಬಾವಿಯಲ್ಲಿ ನೀರು ಜಿನುಗುತ್ತದೆ. ಕೆರೆ ನೀರು ಖಾಲಿಯಾದರೆ ನೀರಿನ ಸಮಸ್ಯೆ ಉಂಟಾಗುತ್ತದೆ. ಕೆರೆಯಲ್ಲಿ ನೀರು ಸಂಗ್ರಹ ಮಾಡುವುದು ಸರ್ಕಾರದ ಮೊದಲ ಆದ್ಯತೆಯಾಗಲಿ’ ಎನ್ನುತ್ತಾರೆ ಸಂತೋಷ ಸತ್ಯಂಪೇಟೆ. ಕೆಲವರು ಈಗಾಗಲೇ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಸಾರ್ವಜನಿಕ ಆಸ್ತಿ ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ. ಕೆರೆಯ ವಿಸ್ತೀರ್ಣ ಹಾಗೂ ಸಮಗ್ರವಾಗಿ ಸರ್ವೆ ಮಾಡಿ ಗಡಿ ಗುರುತಿನ ನಾಮಫಲಕ ಅಳವಡಿಸಬೇಕು ಎನ್ನುತ್ತಾರೆ ನಗರದ ಜನತೆ. ‘ನಗರದ ಹಳೆ ಬಸ್ ನಿಲ್ದಾಣದ ಹಿಂದುಗಡೆ ಹಳ್ಳವನ್ನು ಒತ್ತುವರಿ ಮಾಡಿ ಮಳಿಗೆ ನಿರ್ಮಿಸಿದ್ದಾರೆ. ಮಳೆಗಾಲ ಆರಂಭವಾಗಿದೆ. ಒತ್ತುವರಿ ತೆರವುಗೊಳಿಸಿ ಹಳ್ಳವನ್ನು ಸ್ವಚ್ಛಗೊಳಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಹಳ್ಳ ಹಾಗೂ ಕೆರೆ ಒತ್ತುವರಿ ಮಾಡಿದ್ದಾರೆ. ತೆರವು ಕಾರ್ಯಕ್ಕೆ ಸರ್ಕಾರ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ದಾಖಲೆಯಲ್ಲಿ ಮಾತ್ರ ಕೆರೆಗಳ ಸಂಖ್ಯೆಯಿದೆ. ವಾಸ್ತವವಾಗಿ ಕೆರೆಯನ್ನು ಕೆಲ ಪ್ರಭಾವಿ ವ್ಯಕ್ತಿಗಳು ನುಂಗಿದ್ದಾರೆ’ ಎನ್ನುತ್ತಾರೆ ನಗರದ ನಿವಾಸಿ ಉಮೇಶ ಮುಡಬೂಳ.
ಬರಿದಾದ ಹಳ್ಳ ಕೊಳ್ಳಗಳು ಸುರಪುರ:
ತಾಲ್ಲೂಕಿನಲ್ಲಿ ನೂರಕ್ಕೂ ಹೆಚ್ಚು ಹಳ್ಳಗಳಿವೆ. ಕೆರೆಗಳೂ ಸಾಕಷ್ಟಿವೆ. ಆದರೆ ಮಳೆ ಅಭಾವದಿಂದ ನೀರು ಇಲ್ಲ. ತಾಲ್ಲೂಕಿನ ಅತಿ ದೊಡ್ಡ ದೇವಪುರ ಹಳ್ಳದ ಒಡಿಲು ಬರಿದಾಗಿದೆ. ನಾರಾಯಣಪುರ ಆಣೆಕಟ್ಟೆ ಕಟ್ಟುವ ಮುಂಚೆ ಈ ಎಲ್ಲ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದವು. ಆಣೆಕಟ್ಟೆಯಲ್ಲಿ ನೀರಿನ ಸಂಗ್ರವಾಗುತ್ತಿದಂತೆ ಹಳ್ಳಗಳಿಗೆ ನೀರಿನ ಹರಿವು ಕಡಿಮೆಯಾಯಿತು. ಈಗ ಹಳ್ಳಗಳು ಕಾಲುವೆಗೆ ಅಥವಾ ನದಿಗೆ ನೀರು ಹರಿಸುವುದನ್ನು ಕಾಯುವಂತಾಗಿದೆ. ಕಾಲುವೆಗೆ ನೀರು ಹರಿಸಿದಾಗ ಹಳ್ಳಗಳು ತುಂಬುತ್ತವೆ. ಶೇ 30 ರಷ್ಟು ರೈತರು ಹಳ್ಳಗಳಿಂದ ಪೈಪ್‌ಲೈನ್ ಮಾಡಿಕೊಂಡಿದ್ದಾರೆ. ಹಳ್ಳದಲ್ಲಿ ನೀರು ಇದ್ದರಷ್ಟೆ ಅವರ ಹೊಲಗಳಿಗೆ ನೀರಿನ ಲಭ್ಯತೆ ಇರುತ್ತದೆ. ಜಾನುವಾರಗಳ ಪಾಡಂತು ದೇವರೇ ಬಲ್ಲ. ಬಹುತೇಕ ಜಾನುವಾರುಗಳು ಹಳ್ಳದ ನೀರನ್ನೇ ಕುಡಿಯುತ್ತಿದ್ದವು. ಈಗ ನೀರಿನ ಬರ ಉಂಟಾಗಿದ್ದು ಜಾನುವಾರುಗಳು ಪರಿತಪಿಸುವಂತಾಗಿದೆ.
ಮಳೆಗೆ ಜಲಮೂಲಗಳಿಗೆ ಕಳೆ ಗುರುಮಠಕಲ್:
ತಾಲ್ಲೂಕು ವ್ಯಾಪ್ತಿಯಲ್ಲಿ ಮುಂಗಾರು ಅವಧಿಯ ಮಳೆಯ ಕೊರತೆಯಿಂದ ಕೆರೆ ಬಾವಿ ಹಾಗೂ ಕುಂಟೆಗಳಲ್ಲಿ ನೀರು ಇಳಿದಿತ್ತು. ಇದರಿಂದ ಜಾನುವಾರುಗಳಿಗೆ ನೀರಿನ ಅಭಾವ ಕಾಡಿತ್ತು. ಆದರೆ ಕಳೆದ ಬುಧವಾರ (ಜು.4) ರಾತ್ರಿ ವೇಳೆಯಿಂದ ಸುರಿಯುತ್ತಿರುವ ಮಳೆಗೆ ಜಲ ಮೂಲಗಳಲ್ಲಿ ಜೀವಕಳೆ ಬಂದಿದೆ. ಕಳೆದೆರಡು ವರ್ಷಗಳು ಉತ್ತಮ ಮಳೆಯಾದ ಹಿನ್ನಲೆ ಕೆರೆಗಳಲ್ಲಿ ನೀರು ಇಳುಮುಖವಾಗಿದ್ದರೂ ಪೂರ್ಣ ಬತ್ತಿರಲಿಲ್ಲ. ಆದ್ದರಿಂದ ಈವರೆಗೂ ನೀರಿನ ಅಭಾವ ಅಷ್ಟೊಂದು ಕಾಡಿರಲಿಲ್ಲ. ಆದರೆ ಇನ್ನೂ ಹದಿನೈದು ದಿನ ಮಳೆಯಾಗದಿದ್ದರೆ ಎಲ್ಲೆಡೆಯೂ ನೀರಿಗಾಗಿ ಪರದಾಡಬೇಕಿತ್ತು ಎಂದು ಕುರಿಗಾಹಿ ಶರಣಪ್ಪ ಅಭಿಪ್ರಾಯಪಟ್ಟರು. ಜು.4 ರ ರಾತ್ರಿ ವೇಳೆ ಉತ್ತಮ ಮಳೆಯಾಗಿದ್ದರಿಂದ ಅಲ್ಲಲ್ಲಿ ತೊಗರಿ ಬಿತ್ತನೆ ಕಾರ್ಯ ಚುರುಕುಗೊಳ್ಳುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.