ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ನಿರ್ವಹಣೆ: ನಗರಸಭೆ ಸನ್ನದ್ಧ

ರಾಜಕಾಲುವೆಗಳ ಸ್ವಚ್ಛತೆ, ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್‌, ವಾಹನಗಳಲ್ಲಿ ಜಾಗೃತಿ ಮೂಡಿವರೇ?
Last Updated 22 ಮೇ 2022, 16:22 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮೂರು ನಗರಸಭೆಗಳಿದ್ದು, ಮಳೆ ನೀರು ನಿರ್ವಹಣೆಗೆ ಸನ್ನದ್ದವಾಗಿವೆ. ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯಲು ಸಿದ್ಧತೆ ಕೈಗೊಳ್ಳಲಾಗಿದೆ.

ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕುಗಳಲ್ಲಿ ನಗರಸಭೆಯಿದ್ದು, ಗುರುಮಠಕಲ್‌, ಕೆಂಭಾವಿ, ಕಕ್ಕೇರಾಗಳಲ್ಲಿ ಪುರಸಭೆ ಇದೆ. ಹುಣಸಗಿಯಲ್ಲಿ ಪಟ್ಟಣ ಪಂಚಾಯಿತಿ ಇದೆ. ವಡಗೇರಾ ಗ್ರಾಮ ಪಂಚಾಯಿತಿ ಸ್ಥಾನ ಹೊಂದಿದೆ.

ನಗರ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗುತ್ತಿದ್ದು, ಅಂಥವುಗಳನ್ನು ನಗರಸಭೆಯಿಂದ ಗುರುತಿಸಿ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಾಗುತ್ತಿದೆ.

ಯಾದಗಿರಿ ನಗರದಲ್ಲಿ ರೈಲು ನಿಲ್ದಾಣ ರಸ್ತೆಯಲ್ಲಿ ಅಲ್ಪ ಮಳೆ ಬಂದರೂ ಮೊಳಕಾಲ ಉದ್ದದವರೆಗೆ ನೀರು ರಸ್ತೆ ಮೇಲೆ ಹರಿಯುತ್ತವೆ. ಇಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇರದ ಕಾರಣ ಹಲವಾರು ವರ್ಷಗಳಿಂದ ಅಲ್ಲಿನ ವ್ಯಾಪಾರಿಗಳು, ರೈಲ್ವೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಆದರೆ, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂದು ಜನರು ಹೇಳುತ್ತಾರೆ.

ಅಂಬೇಡ್ಕರ್‌ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಪ್ರತಿ ವರ್ಷ ಅವಾಂತರ ಸೃಷ್ಟಿಯಾಗುತ್ತಿದೆ. ಸಣ್ಣಕೆರೆ (ಲುಂಬಿನಿ ವನ) ತುಂಬಿದರೆ ಅಂಬೇಡ್ಕರ್‌ ನಗರ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಇದರ ಜೊತೆಗೆ ಲಕ್ಷ್ಮಿ ನಗರ ನಿವಾಸಿಗಳು ಈ ಕೆರೆ ನೀರಿನಿಂದ ಆವೃತ್ತವಾಗಿ ತೊಂದರೆ
ಅನುಭವಿಸುತ್ತಿದ್ದಾರೆ.

ಮುಸ್ಲಿಂಪುರ, ಮದನಪುರ ಗಲ್ಲಿ, ಬೋವಿವಾಡ, ದುಖಾನ್‌ ವಾಡಿ, ಗೋಗಿ ಮೊಹಲ್ಲಾ ಸೇರಿದಂತೆ ಚರಂಡಿ ನೀರು ಮಳೆಗಾಲದಲ್ಲಿ ರಸ್ತೆಯಲ್ಲೆಲ್ಲ ಹರಿಯುವುದು ಸಾಮಾನ್ಯವಾಗಿದೆ.

ನಗರದ ಹೃದಯ ಭಾಗ ಗಾಂಧಿ ವೃತ್ತದ ಸಮೀಪ ತಗ್ಗುಪ್ರದೇಶವಿದ್ದು, ಮಳೆಯಾದರೆ ರಸ್ತೆ ಮೇಲೆಲ್ಲ ನೀರು ಸಂಗ್ರಹವಾಗುತ್ತಿದೆ. ಜೋರು ಮಳೆಯಾದರೆ ಚರಂಡಿ ನೀರು ರಸ್ತೆ ಮೇಲೆ ನೀರು ನಿಂತುಕೊಳ್ಳುತ್ತದೆ. ಚರಂಡಿ ಮಣ್ಣು ರಸ್ತೆ ಮೇಲೆ ನಿಲ್ಲುವುದು ಸಾಮಾನ್ಯವಾಗಿದೆ.
ನಗರ ಪೊಲೀಸ್‌ ಠಾಣೆಯಿಂದ ವೀರಶೈವ ಕಲ್ಯಾಣ ಮಂಟಪಕ್ಕೆ ತೆರಳುವ ರಸ್ತೆಯಲ್ಲಿ ಸೂಕ್ತ ಚರಂಡಿಯಿರದ ಕಾರಣ ನೀರು ನಿಲ್ಲುತ್ತದೆ. ಸಾಮಾನ್ಯವಾಗಿದೆ.

ಸುಭಾಷ ವೃತ್ತದ ಚಿತ್ತಾಪುರ ರಸ್ತೆಯ ನಗರಸಭೆ ಮಳಿಗೆಯಲ್ಲಿ ಮಳೆ ನೀರು ನುಗ್ಗಿ ಪ್ರತಿವರ್ಷ ಆವಾಂತರವಾಗುತ್ತಿದೆ. ಚರಂಡಿಗಳನ್ನು ಸಮರ್ಪಕವಾಗಿ ಸ್ವಚ್ಛತೆ ಮಾಡದ ಕಾರಣ ಇಲ್ಲಿ ಪ್ರತಿವರ್ಷ ಸಮಸ್ಯೆ
ಕೊನೆಗಾಣುತ್ತಿಲ್ಲ.

ರಾಜಕಾಲುವೆಗಳಲ್ಲಿ ಕಸದ ರಾಶಿ: ನಗರ ಪ್ರದೇಶದ ರಾಜಕಾಲುವೆಗಳಲ್ಲಿ ಕಸದ ರಾಶಿ ತುಂಬಿದ್ದು, ಇದರಿಂದಲೇ ಚರಂಡಿ ತುಂಬಿ ರಸ್ತೆ ಮೇಲೆ ನೀರು ಹರಿಯುವುದು
ಸಾಮಾನ್ಯವಾಗಿದೆ. ಇನ್ನೂ ಕೆಲವು ಕಡೆ ರಾಜಕಾಲುವೆ ಅತಿಕ್ರಮಣ ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿದೆ. ಒತ್ತುವರಿ ತಡೆಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳದ ಕಾರಣ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ.

***

ಸುರಪುರ: ನಗರಸಭೆ ಸಿದ್ಧತೆ
ಸುರಪುರ: ನಗರ ಗುಡ್ಡಗಾಡು ಪ್ರದೇಶವಾಗಿದ್ದು, ಸಮತಟ್ಟಾಗಿಲ್ಲ. ಬಹುತೇಕ ಕಡೆ ತಗ್ಗು ಪ್ರದೇಶಗಳಿದ್ದು, ಅಲ್ಲಿ ಮನೆಗಳಿವೆ. ಮಳೆ ನೀರು ರಭಸವಾಗಿ ಇಳಿಜಾರಿನಲ್ಲಿ ಹರಿಯುವುದರಿಂದ ರಸ್ತೆ ಕೊರೆತ ಸಾಮಾನ್ಯ. ಹೀಗಾಗಿ ಮಳೆ ನೀರು ನಿರ್ವಹಣೆ ನಗರಸಭೆಗೆ ಸವಾಲಿನದ್ದಾಗಿದೆ. ಆದರೂ ನಗರಸಭೆ ಮಳೆಯ ನೀರು ನಿರ್ವಹಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ನೈರ್ಮಲ್ಯ ಅಧಿಕಾರಿ ನೇತೃತ್ವದ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ಈ ತಂಡ ದಿನದ 24 ಗಂಟೆ ಸದಾ ಸನ್ನದ್ಧವಾಗಿರುತ್ತದೆ.

ಮಳೆಯ ನೀರು ಮನೆಗಳಿಗೆ, ತಗ್ಗು ಪ್ರದೇಶಗಳಿಗೆ ನುಗ್ಗಿದರೆ, ಕಾಲುವೆ, ಚರಂಡಿ ತುಂಬಿ ರಸ್ತೆ ಬ್ಲಾಕ್ ಅದರೆ ತಕ್ಷಣ ಈ ತಂಡ ಅಲ್ಲಿಗೆ ಭೇಟಿ ನೀಡಿ ಸರಿಪಡಿಸುತ್ತಿದೆ. ಕಾಲುವೆ, ಚರಂಡಿ ಹೂಳು ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುತ್ತದೆ. ರಸ್ತೆ ಕೊರೆತದಿಂದ ಬಿದ್ದ ತಗ್ಗುಗಳನ್ನು ಮರಂನಿಂದ ತುಂಬಿ ತಾತ್ಕಾಲಿಕ ದುರಸ್ತಿ ಮಾಡಲಾಗುತ್ತಿದೆ.

ನಗರದ ಝಂಡಾದಕೇರಾ ಅಗಸಿಯಿಂದ ಧೂಳಪೇಟ ಮಾರ್ಗವಾಗಿ ಸತ್ಯಂಪೇಟೆವರೆಗೆ 4 ಕಿ.ಮೀ ರಾಜಕಾಲುವೆ ಇದೆ. ನಗರದ ಇಡೀ ನೀರು ಈ ಕಾಲುವೆಗೆ ಬಂದು ಸೇರುತ್ತದೆ. ಮುಂದೆ ಈ ನೀರು ಲಕ್ಷ್ಮೀಪುರ ಹಳ್ಳಕ್ಕೆ ಜೋಡಣೆಯಾಗುತ್ತದೆ. ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಕಾಮಗಾರಿ ನಿರ್ವಹಿಸಲಾಗಿದೆ.
ಶಹಾಪುರ: ಎಚ್ಚೆತ್ತುಕೊಳ್ಳದ ನಗರಸಭೆ

ಶಹಾಪುರ: ನಗರದಲ್ಲಿ ರಾಜಕಾಲುವೆ ಮೇಲೆ ಅನಧಿಕೃತವಾಗಿ ಮಳಿಗೆ ಇಲ್ಲವೆ
ಡಬ್ಬವನ್ನು ನಿರ್ಮಿಸಿ ಕೆಲ ಸ್ಥಳೀಯ ರಾಜಕೀಯ ಮುಖಂಡರು ಬಾಡಿಗೆ ಹಣವನ್ನು ಪಡೆದುಕೊಳ್ಳುವುದು ಹಲವು ವರ್ಷದಿಂದ ಸಾಗಿದೆ.

ಮಳೆ ಬಂದಾಗ ಚರಂಡಿ ನೀರು ಉಕ್ಕಿ ಹರಿತ್ತವೆ. ಚರಂಡಿಯಲ್ಲಿ ಬಿದ್ದಿರುವ ತ್ಯಾಜ್ಯ ವಸ್ತುಗಳನ್ನು ಹೊರ ತೆಗೆಯಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಚರಂಡಿ
ಸ್ವಚ್ಛಗೊಳಿಸಲು ಜಾಗವೇ ಇಲ್ಲ. ಅನಧಿಕೃತವಾಗಿ ಸ್ಥಾಪಿಸಿದ ಮಳಿಗೆಯನ್ನು ತೆರವುಗೊಳಿಸಲು ಮುಂದಾದರೆ ಸಾಕು ಫೋನ್‌ ಕರೆ ಮಾಡಿ ಸ್ಥಗಿತಗೊಳಿಸುತ್ತಾರೆ. ಅದರ ಸಂಕಷ್ಟವನ್ನು ನಗರದ ಜನತೆ ಅನುಭವಿಸುವಂತಾಗಿದೆ ಎನ್ನುತ್ತಾರೆ ನಗರದ ನಿವಾಸಿ ಉಮೇಶ.

ಅಲ್ಲದೆ ನಗರದ ಹಳೆ ಬಸ್ ನಿಲ್ದಾಣದ ಹಿಂದುಗಡೆ ಸೇತುವೆ ಕಾಮಗಾರಿ ಕುಂಟುತ್ತಾ ಸಾಗಿದೆ. ನಗರದಲ್ಲಿ ತುಸು ಮಳೆಯಾದರೆ ಸಾಕು ರಸ್ತೆ ಸಂಪರ್ಕ ಸ್ಥಗಿತವಾಗುತ್ತದೆ. ಅಲ್ಲದೆ ಹಳ್ಳದ ಮಧ್ಯದಲ್ಲಿ ಐದು ವರ್ಷದ ಹಿಂದೆ ಪ್ರಭಾವಿ ವ್ಯಕ್ತಿ ಒಬ್ಬರು ಕಟ್ಟಡ ನಿರ್ಮಿಸಲು ಅಡಿಪಾಯ ಹಾಕಿದ್ದರು. ಆಗ ಸ್ಥಳೀಯ ಜನತೆ ವಿರೋಧದಿಂದ ಕಾಮಗಾರಿ ಸ್ಥಗಿತಗೊಂಡಿತು. ಆದರೆ ಹಾಕಿದ ಅಡಿಪಾಯವನ್ನು ತೆರವುಗೊಳಿಸಲಿಲ್ಲ. ಇದರಿಂದ ಹಳ್ಳದ ನೀರು ಸರಾಗವಾಗಿ ಸಾಗುವುದಿಲ್ಲ. ಜನರಿಗೆ ತುಂಬಾ ತೊಂದರೆಯಾಗಿದೆ.

ತುಸು ಹೆಚ್ಚು ಮಳೆಯಾದರೆ ಅಲ್ಲಿನ ಸುತ್ತಮುತ್ತಲಿನ ಬಡಾವಣೆಯ ಮನೆಗಳಿಗೆ ನೀರು ನುಗ್ಗುತ್ತವೆ. ಅಲ್ಲದೆ ಹಳ್ಳದ ಅಕ್ಕಪಕ್ಕದ ಜಾಗವನ್ನು ಒತ್ತುವರಿ ಮಾಡಿ ಮಳಿಗೆ ನಿರ್ಮಿಸಿದ್ದಾರೆ. ಮಳೆಗಾಲ ಬಂದಾಗ ಹಳ್ಳದ ಸರ್ವೇ ನಡೆಸಿ ಗಡಿಗುರುತು ಹಾಕಿ ಎಂದು ಪ್ರತಿ ವರ್ಷ
ಶಾಸಕ ಶರಣಬಸಪ್ಪ ದರ್ಶನಾಪುರ ಪ್ರಗತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸುತ್ತಾರೆ. ತಾಂತ್ರಿಕ ನೆಪ ಹೇಳಿ ಅಧಿಕಾರಿಗಳು ಜಾರಿಕೊಳ್ಳುತ್ತಾರೆ. ಈಗ ಮತ್ತೆ ಮಳೆಗಾಲ ಶುರುವಾಗಿದ್ದು ಸಮಸ್ಯೆ ಕಾಡಲಿದೆ ಎನ್ನುವುದು ಸ್ಥಳೀಯ ಜನತೆ ಬೇಸರ ವ್ಯಕ್ತಪಡಿಸಿದ್ದಾರೆ.
***
ಮಳೆಗಾಲಕ್ಕೆ ನಗರಸಭೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ರಾಜಕಾಲುವೆಗಳನ್ನು ಸ್ವಚ್ಛತೆ ಮಾಡಿಸಲಾಗುತ್ತಿದೆ. ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಛತೆ ಕಾಪಾಡಲು ಸಿದ್ಧತೆ ಮಾಡಲಾಗಿದೆ

–ಶರಣಪ್ಪ, ನಗರಸಭೆ ಪೌರಾಯುಕ್ತ, ಯಾದಗಿರಿ

ಮಳೆ ಬಂದಾಗ ಮಾತ್ರ ಸ್ವಚ್ಛತೆ ಆಗುತ್ತದೆ. ಸ್ವಚ್ಛತೆ ಬಗ್ಗೆ ಅನೇಕ ಬಾರಿ‌ ನಗರಸಭೆ ಅಧಿಕಾರಗಳ‌ ಗಮನಕ್ಕೆ ತಂದರೂ ಪ್ರಯೋಜನೆ ಆಗಿ

–ವಿಶ್ವನಾಥ ಕರ್ಲಿ, ಗೋಗಿ ಮೊಹಲ್ಲಾ ವಾರ್ಡ್ ನಿವಾಸಿ

ನಗರದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಈಚೆಗೆ ಮಳೆಯಿಂದ ಕೆಂಭಾವಿ ಮತ್ತು ಕುಂಬಾರಪೇಟ ರಸ್ತೆ ಬ್ಲಾಕ್ ಆಗಿದ್ದವು. ಹೀಗಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು

–ನಂದಕುಮಾರ ಬಾಂಬೇಕರ, ವಕೀಲ ಸುರಪುರ

ಮಳೆಯಿಂದ ನಗರದ ನಾಗರಿಕರಿಗೆ, ರಸ್ತೆ ಸಂಚಾರಕ್ಕೆ ತೊಂದರೆಯಾಗದ ಹಾಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಮಸ್ಯೆಗಳಿದ್ದಲ್ಲಿ ಸಹಾಯವಾಣಿ 89517 99912 ಸಂಪರ್ಕಿಸಬಹುದು

–ಜೀವನ ಕಟ್ಟಿಮನಿ, ಪೌರಾಯುಕ್ತ ನಗರಸಭೆ ಸುರಪುರ
***
ಸ್ಥಳೀಯ ಸಂಸ್ಥೆಗಳು ಏನು ಮಾಡಬೇಕು?

l ರಾಜಕಾಲುವೆಗಳ ಸ್ವಚ್ಛತೆ

lಮಳೆಗಾಲದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಒತ್ತು

l ಆಗಾಗ ಫಾಂಗಿಂಗ್‌ ಮಾಡಬೇಕು

l ನಿಂತ ನೀರು, ಚರಂಡಿಗಳಿಗೆ ರಾಸಾಯನಿಕ ಸಿಂಪರಣೆ

l ಸಾಂಕ್ರಾಮಿಕ ರೋಗ ಹರಡದಂತೆ ಮುನ್ನಚ್ಚರಿಕೆ ಕ್ರಮ

l ಸಾರ್ವಜನಿಕರಿಗೆ ಸ್ವಚ್ಛತೆ ಅರಿವು ಕಾರ್ಯಕ್ರಮ

l ರಾಜಕಾಲುವೆ ಹತ್ತಿರ ಮಕ್ಕಳು ಓಡಾಡದಂತೆ ಸುರಕ್ಷತೆ

***

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT