ಶುಕ್ರವಾರ, ಮಾರ್ಚ್ 24, 2023
22 °C
ಚಿಕ್ಕ ಮಕ್ಕಳ ಮೇಲೆ ಪೋಷಕರ ಪ್ರಭಾವ, ಲಾಕ್‌ಡೌನ್‌ ಅನುಕೂಲ

ಯಾದಗಿರಿ | ಚಿಣ್ಣರಿಂದಲೂ ‘ರಂಜಾನ್‌’ ಉಪವಾಸ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮುಸ್ಲಿಂ ಪವಿತ್ರ ಮಾಸ ಏಪ್ರಿಲ್‌ 25ರಿಂದ ಆರಂಭವಾಗಿದ್ದು, ಈ ಬಾರಿ ಚಿಕ್ಕಚಿಕ್ಕ ಮಕ್ಕಳು ಕೂಡ ‘ರಂಜಾನ್‌’ ಉಪವಾಸ ವ್ರತದಲ್ಲಿ ತೊಡಗಿಸಿಕೊಂಡಿದ್ದಾರೆ.

ಕೊರೊನಾ ಸೋಂಕು ಹರಡುವ ದೃಷ್ಟಿಯಿಂದ ಮಕ್ಕಳಿಗೆ ಬೇಗ ಶಾಲೆಗಳಿಗೆ ಸರ್ಕಾರ ರಜೆ ನೀಡಿತು. ಜತೆಗೆ ಕೇಂದ್ರ ಸರ್ಕಾರದಿಂದಲೂ ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆ ಆಯಿತು. ಇದರಿಂದ ಮಕ್ಕಳು ಮನೆಯಲ್ಲಿ ಬಂಧಿಯಾಗಿದ್ದರು. ಈ ವೇಳೆ ರಂಜಾನ್‌ ಮಾಸ ಬಂದಿದ್ದರಿಂದ ಮಕ್ಕಳು ಉಪವಾಸದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುತ್ತಾರೆ ಮುಸ್ಲಿಂ ಮುಖಂಡರು.

6 ರಿಂದ 12 ವರ್ಷದೊಳಗಿನ ಮಕ್ಕಳು ಮನೆಯವರನ್ನು ನೋಡಿ ಉಪವಾಸ ವ್ರತಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಸಹರಿ (ಬೆಳಿಗ್ಗೆ) ಆರಂಭವಾಗುವ ವೇಳೆ ಎಬ್ಬಿಸದಿದ್ದರೆ ರಚ್ಚೆ ಹಿಡಿಯುತ್ತವೆ ಎನ್ನುತ್ತಾರೆ ಪೋಷಕರು.

‘ಮನೆಗಳಲ್ಲಿ ಇರುವುದರಿಂದ ಕುರಾನ್‌ ಪಠಣೆ ಮತ್ತು ನಮಾಜ್‌ಗೆ ಹೆಚ್ಚಿನ ಅವಕಾಶ ಲಭಿಸಿದೆ. ಇಂಥ ಸಂದರ್ಭ ನಮ್ಮ ತಾತ ಮುತ್ತಾತರ ಕಾಲದಲ್ಲೂ ಬಂದಿಲ್ಲ. ಹೀಗಾಗಿ ಇದನ್ನು ಸದ್ಬಳಕೆ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಮುಸ್ಲಿಂ ಮುಖಂಡ ಸೈಯದ್‌ ಸಾಜಿದ್‌.

ಮನೆಗಳಲ್ಲಿಯೇ ಇಫ್ತಾರ್‌: ಮೊದಲೆಲ್ಲ ಇಫ್ತಾರ್‌ ವೇಳೆ ಬೇರೆ ಬೇರೆ ಸಮುದಾಯವರು ಕೂಡ ಮುಸ್ಲಿಮರಿಗೆ ಇಫ್ತಾರ್‌ ಕೂಟ ಏರ್ಪಡಿಸುತ್ತಿದ್ದರು. ಆದರೆ, ಈ ಬಾರಿ ಮನೆಗಳಲ್ಲಿ ಇಫ್ತಾರ್‌ ಕೂಟ ಮನೆಯಲ್ಲಿ ಆಚರಿಸುವಂತಾಗಿದೆ. ಆಗ ಪುರುಷರು ಮಸೀದಿಗೆ ತೆರಳಿ ಉಪವಾಸ ಬಿಡುತ್ತಿದ್ದರು. ಆದರೆ, ಈಗ ಮನೆ ಮಂದಿಯೆಲ್ಲ ಒಂದೆಡೆ ಕುಳಿತು ರೋಜ ಬಿಡುವುದು ಖುಷಿ ತಂದಿದೆ ಎನ್ನುತ್ತಾರೆ ಮುಸ್ಲಿಂ ಮುಖಂಡರು.

ರಂಜಾನ್‌ ಮಾಸದಲ್ಲಿ ಸೌದಿ ಖಜೂರರಕ್ಕೆ ಬೇಡಿಕೆ ಹೆಚ್ಚಿದೆ. ಅದರ ಜತೆಗೆ ಕಲ್ಲಂಗಡಿ, ಖರಬೂಜ, ಬಾಳೆಹಣ್ಣು, ಸಪೋಟ, ಸೇಬು, ದ್ರಾಕ್ಷಿ, ಜಾಮ ಹಣ್ಣು, ಮಾವು ಸೇರಿದಂತೆ ಇನ್ನಿತರ ಫಲಾಹಾರ ಸೇವನೆ ಮಾಡುವ ಮೂಲಕ ಉಪವಾಸ ವ್ರತ ಕೊನೆಗೊಳಿಸಲಾಗುತ್ತಿದೆ. 

ಈದ್‌–ಖರೀದಿ ಬೇಡ: ಕೊರೊನಾ ಸಂಕಷ್ಟದಿಂದ ಹಲವಾರು ಜನರಿಗೆ ಊಟ ಇಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿ ಈ ಬಾರಿಯ ಈದ್‌ ಹಬ್ಬದ ಖರೀದಿ ಬೇಡ ಎನ್ನುವ ಸಂದೇಶಗಳುಳ್ಳ ವಾಟ್ಸ್‌ ಆ್ಯಪ್‌ ಸಂದೇಶಗಳು ಗ್ರೂಪ್‌ಗಳಲ್ಲಿ ಓಡಾಡುತ್ತಿವೆ. ಸರ್ಕಾರದ ಮಾರ್ಗ ಸೂಚಿಯಂತೆ ಅಂತರ ಪಾಲಿಸಲು ಖರೀದಿ ಬೇಡ ಎನ್ನುವ ಅಭಿಯಾನ ಶುರುವಾಗಿದೆ. ಈಗಾಗಲೇ ಹಲವಾರು ಮುಖಂಡರು ರಂಜಾನ್‌ ಹಬ್ಬದ ಜಕಾತ್‌ ದಾನ ಮಾಡುವ ಮೂಲಕ ಬಡಜನರಿಗೆ ಆಸರೆಯಾಗಿದ್ದಾರೆ. 

***

ಬಟ್ಟೆ ಖರೀದಿಸುವ ಉತ್ಸಾಹ ಇಲ್ಲ. ಮಸೀದಿಗೆ ತೆರಳಿ ನಮಾಜ್‌ ಮಾಡಲಾಗುತ್ತಿಲ್ಲ. ಇದರಿಂದ ಸರಳವಾಗಿ ಹಬ್ಬ ಆಚರಿಸಲು ತೀರ್ಮಾನಿಸಲಾಗಿದೆ.
-ಮೊಹಮ್ಮದ್ ಇಮ್ತಿಯಾಜುದ್ದೀನ್ ಸಿದ್ದಿಕಿ, ಸದ್ರೆ ಕ್ವಾಜಿ ಯಾದಗಿರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು