ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಪಡುಕೋಟೆಗೆ ಮರು ಜೀವ

Last Updated 20 ಜೂನ್ 2020, 16:35 IST
ಅಕ್ಷರ ಗಾತ್ರ

ಸುರಪುರ: ಮೂರು ಶತಮಾನಗಳ ಕಾಲ ಸುಭಿಕ್ಷ ರಾಜ್ಯಭಾರ ಮಾಡಿದ ಗೋಸಲ ವಂಶಸ್ಥರಿಂದ ಸುರಪುರ ಪ್ರಸಿದ್ಧಿ ಪಡೆದಿದೆ.

ಇಲ್ಲಿನ ಅರಸರು ಪ್ರಜೆಗಳ ರಕ್ಷಣೆಗೋಸ್ಕರ ಕೋಟೆ, ಕೊತ್ತಲಗಳನ್ನು ಕಟ್ಟಿಸಿದ್ದರು. ನಾಗರಿಕತೆ ಬೆಳೆದಂತೆ ಈಗ ಅವುಗಳಲ್ಲಿ ಅನೇಕ ನೆಲಸಮಗೊಂಡಿವೆ. ಕುಂಬಾರಪೇಟೆಯ ಕೋಟೆ, ಝಂಡಾದಕೇರಿಯ ಕೋಟೆ, ಪಾಳದಕೇರಿ ಕೋಟೆ, ವಾಗಣಗೇರಿ ಕೋಟೆ, ಪಡುಕೋಟೆ ಹೀಗೆ ಹಲವು ಜೀವಂತವಾಗಿವೆ.

ಪಡುಕೋಟೆ: ಪಡುಕೋಟೆ ಸುರಪುರದಿಂದ 10 ಕಿ.ಮೀ ಅಂತರದಲ್ಲಿದೆ. ವಾಗಣಗೇರಿಯಿಂದ ಅನತಿ ದೂರದಲ್ಲಿದೆ. ನೋಡಲು ಅತ್ಯಂತ ಸುಂದರವಾಗಿದೆ. ಗಟ್ಟಿಮುಟ್ಟಾಗಿದ್ದು ಆಕರ್ಷಕವಾಗಿದೆ. 25 ಅಡಿ ಎತ್ತರ, 50 ಅಡಿ ಉದ್ದ ಇದೆ. ಶತ್ರುಗಳು ಒಳಗೆ ನುಸುಳದಂತೆ ಸುಭದ್ರವಾಗಿ ಕಟ್ಟಲಾಗಿದೆ. ಈಗ ಹೆಬ್ಬಾಗಿಲು ಇಲ್ಲ. ಕೋಟೆಗೆ ಬಳಸಿದ ಗಾರೆ ಶಿಥಿಲಗೊಳ್ಳುತ್ತಿದೆ. ಹೀಗಾಗಿ ಕೋಟೆ ರಕ್ಷಣೆಗಾಗಿ ತಾನೇ ಕೂಗುವಂತೆ ಅಗಿತ್ತು.

ಇತಿಹಾಸ: ‘ಪಡುಕೋಟೆಯನ್ನು ಅಂದಾಜು 16ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ವಾಗಣಗೇರಿ ಕೋಟೆಯೂ ಸರಿ ಸುಮಾರು ಇದೇ ಸಮಯದಲ್ಲಿ ನಿರ್ಮಾಣಗೊಂಡಿದೆ. ಮೊದಲು ಈ ಭಾಗ ಮೊಗಲರ ಆಳ್ವಿಕೆಗೆ ಒಳಪಟ್ಟಿತ್ತು’ ಎಂದು ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಮುಖ್ಯಸ್ಥ ಭಾಸ್ಕರರಾವ ಮುಡಬೂಳ ತಿಳಿಸುತ್ತಾರೆ.

‘ಶೂರರಾಗಿದ್ದ ಸುರಪುರ ಅರಸರು ಮೊಗಲರಿಂದ ಈ ಕೋಟೆಗಳನ್ನು ವಶಪಡಿಸಿಕೊಂಡರು. ಔರಂಗಜೇಬ ಇದೇ ವಾಗಣಗೇರಿ ಯುದ್ಧದಲ್ಲಿ ಸೋತು ಸುಣ್ಣವಾಗಿದ್ದ. ಅಂತೆಯೇ ದಕ್ಷಿಣದ ಎಲ್ಲ ದೇವಸ್ಥಾನಗಳನ್ನು ಉಳಿಸಿದ ಕೀರ್ತಿ ಸುರಪುರದ ಅರಸರಿಗೆ ಸಲ್ಲುತ್ತದೆ’ ಎನ್ನುತ್ತಾರೆ ಭಾಸ್ಕರರಾವ.

‘ಶಿವಾಜಿಯ ನಂತರ ಆತನ ಮಗ ಸಂಭಾಜಿಯನ್ನು ಸೋಲಿಸಿದ ಮೊಗಲರ ಅಟ್ಟಹಾಸ ಮೇರೆ ಮೀರುತ್ತದೆ. ಧೀರ ಸೇನಾನಿಗಳಾಗಿದ್ದ ಮರಾಠರನ್ನು ಮೊಗಲರು ಕೊಲೆ ಮಾಡುತ್ತಾರೆ. ಆಗ ಕೆಲ ಮರಾಠರಿಗೆ ಸುರಪುರ ದೊರೆ ಆಶ್ರಯ ನೀಡುತ್ತಾನೆ. ಅವರಿಗೆ ಉಂಬಳಿ ನೀಡುತ್ತಾನೆ’ ಎಂದು ವಿವರಿಸುತ್ತಾರೆ.

‘ಈಗಲೂ ಕೆಲ ಮರಾಠರು ತಾಲ್ಲೂಕಿನ ಪಡುಕೋಟೆ, ವಾಗಣಗೇರಿ ಮತ್ತು ಹಾವಿನಾಳನದಲ್ಲಿ ನೆಲೆಸಿದ್ದಾರೆ. ರಾಜನ ಋಣ ತೀರಿಸಲು ಅನೇಕ ಯುದ್ಧಗಳಲ್ಲಿ ಪ್ರಾಣವನ್ನು ಪಣವಾಗಿಟ್ಟು ಹೋರಾಡಿ ರಾಜನಿಗೆ ಜಯ ದೊರಕಿಸಿದ್ದಾರೆ’ ಎನ್ನುತ್ತಾರೆ ಭಾಸ್ಕರರಾವ.

ಕೋಟೆಗೆ ಮರು ಜೀವ: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಪ್ರಧಾನ ಸಂಚಾಲಕ ಬಸವರಾಜ ಪಡುಕೋಟೆ ಇದೇ ಪಡುಕೋಟೆಯವರು. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆಗಾಗ ಹುಟ್ಟಿದೂರಿಗೆ ಬಂದು ಹೋಗುತ್ತಾರೆ. ಶಿಥಿಲಗೊಂಡ ಪಡುಕೋಟೆಯನ್ನು ರಕ್ಷಿಸಬೇಕೆಂಬ ಅವರ ಹಂಬಲ ಇಂದು ನಿನ್ನೆಯದಲ್ಲ. ಈ ಬಗ್ಗೆ ಅವರು ಸುರಪುರ ಸಂಸ್ಥಾನಿಕ ರಾಜಾ ಕೃಷ್ಣಪ್ಪನಾಯಕ ಅವರೊಂದಿಗೆ ಚರ್ಚಿಸಿ ಕೋಟೆಯನ್ನು ದುರಸ್ತಿ ಮಾಡಲು ಪರವಾನಗಿ ಪಡೆದುಕೊಂಡರು.

ಲಾಕ್‍ಡೌನ್ ಕಾರಣ ಕಳೆದ 3 ತಿಂಗಳಿಂದ ಬಸವರಾಜ ಗ್ರಾಮದಲ್ಲೇ ನೆಲೆಸಿದ್ದಾರೆ. ಈ ಸಮಯವನ್ನು ಸಮರ್ಥವಾಗಿ ಉಪಯೋಗಿಸಿಕೊಂಡಿರುವ ಅವರು ಪಡುಕೋಟೆ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಸ್ವಂತ ಖರ್ಚಿನಲ್ಲಿ ಕೆಲಸ ಮಾಡಿಸುತ್ತಿದ್ದಾರೆ. ಗ್ರಾಮಸ್ಥರು ಕಾಮಗಾರಿಯಲ್ಲಿ ಕೈಜೋಡಿಸುವ ಮೂಲಕ ನೆರವು ನೀಡುತ್ತಿದ್ದಾರೆ. ಈ ಮೂಲಕ ಶಿಥಿಲಗೊಂಡಿದ್ದ ಪಡುಕೋಟೆಗೆ ಮರುಜೀವ ಬಂದಿದೆ. ಭವ್ಯ ಇತಿಹಾಸ ಸಾರುವ ಈ ಕೋಟೆಯನ್ನು ಮುಂದಿನ ಪೀಳಿಗೆಗೆ ಉಳಿಸಿದ ಕೀರ್ತಿಗೆ ಬಸವರಾಜ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT