ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ | ನಾಟಿ ಬೆನ್ನಲ್ಲೇ ಒಣಗುತ್ತಿರುವ ಭತ್ತದ ಸಸಿ

ಭೀಮಶೇನರಾವ್ ಕುಲಕರ್ಣಿ
Published 18 ಜನವರಿ 2024, 5:10 IST
Last Updated 18 ಜನವರಿ 2024, 5:10 IST
ಅಕ್ಷರ ಗಾತ್ರ

ಹುಣಸಗಿ: ತಾಲ್ಲೂಕಿನ ವಜ್ಜಲ, ಚನ್ನೂರು, ಕಲ್ಲದೇವನಹಳ್ಳಿ, ಗುಳಬಾಳ ಸೇರಿದಂತೆ ಇತರ ಗ್ರಾಮಗಳಲ್ಲಿ ಹಳ್ಳದ ನೀರನ್ನು ಬಳಸಿಕೊಂಡು ಅಲ್ಲಲ್ಲಿ ಭತ್ತ ನಾಟಿ ಮಾಡಲಾಗಿದೆ. ಆದರೆ ನಾಟಿ ಮಾಡಿದ ಭತ್ತದ ಸಸಿಗಳು ನಾಟಿ ನಂತರ ಬೇರು ಬಿಡದೇ ಒಣಗುತ್ತಿದ್ದು, ರೈತರನ್ನು ಆತಂಕಕ್ಕೀಡು ಮಾಡಿದೆ.

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರಿಗೆ ನೀರು ಲಭ್ಯವಾಗಿಲ್ಲ. ಇದರಿಂದಾಗಿ ಶೇ 80ರಷ್ಟು ಪ್ರದೇಶದಲ್ಲಿ ಭತ್ತ ನಾಟಿ ಮಾಡಿಲ್ಲ. ಆದರೆ ಹಳ್ಳ, ಕೊಳವೆಬಾವಿ ಸೇರಿದಂತೆ ಇತರ ಜಲಮೂಲಗಳ ಸೌಲಭ್ಯ ಇರುವ ಕೆಲ ರೈತರು ಅಲ್ಲಲ್ಲಿ ಭತ್ತ ನಾಟಿ ಮಾಡಿದ್ದಾರೆ.

ನವೆಂಬರ್ ತಿಂಗಳಲ್ಲಿಯೇ ಈ ಕುರಿತು ತಯಾರಿ ಮಾಡಿಕೊಂಡು ಭತ್ತದ ಸಸಿಯನ್ನು ಹಾಕಿಕೊಂಡಿದ್ದರು. ಅದರಂತೆ ಸಸಿ ಸುಮಾರು ಒಂದು ತಿಂಗಳು ಹಾಗೂ ಅದಕ್ಕೂ ಹೆಚ್ಚಿನ ದಿನಗಳು ಬೆಳೆದಿವೆ. ಹೊಲವನ್ನು ಎರಡು ಬಾರಿ ಟಿಲ್ಲರ್ ಹೊಡೆದು ಹದಗೊಳಿಸಿ, ಪಟ್ಲರ್ ಹೊಡೆದು ನಾಟಿ ಮಾಡಿದ್ದಾರೆ. ಒಂದು ಎಕರೆ ಪ್ರದೇಶಕ್ಕೆ ಸುಮಾರು ₹15 ಸಾವಿರದಿಂದ ₹20 ಸಾವಿರ ಖರ್ಚು ಮಾಡಿ ನಾಟಿ ಮಾಡಿದ್ದಾರೆ. ಭತ್ತ ಹುಲುಸಾಗಿ ಬೆಳೆಯುಂತಾಗಲು ಕೆಲ ರೈತರು ಗೊಬ್ಬರ ಕೂಡ ಹಾಕಿದ್ದಾರೆ. ಆದರೆ ನಾಟಿ ಮಾಡಿದ ಸಸಿ ಮೇಲೇಳದೇ ಕಮರಿ ಹೋಗುತ್ತಿವೆ ಎಂದು ವಜ್ಜಲ ಗ್ರಾಮದ ರೈತ ಸಿದ್ದು ಅಬ್ಯಾಳ, ಬಸವರಾಜ ಮೇಟಿ ಹೇಳಿದರು.

ಸುಮಾರು ನಾಲ್ಕು ಎಕರೆ ಹೊಲದಲ್ಲಿ ಭತ್ತ ನಾಟಿ ಮಾಡಿ ಒಂದು ಬಾರಿ ಗೊಬ್ಬರ ಕೂಡ ಹಾಕಲಾಗಿದೆ. ಆದರೆ ಭತ್ತದ ಸಸಿಗಳು ಕಮರಿ ಹೋಗಿದ್ದರಿಂದಾಗಿ ಮತ್ತೆ ಪಟ್ಲರ್ ಹೊಡೆದು ಇನ್ನೊಮ್ಮೆ ಬೇರೆ ಸಸಿಗಳನ್ನು ತಂದು ನಾಟಿ ಮಾಡಲಾಗಿದೆ ಎಂದು ಮೋಹನ ಕುಲಕರ್ಣಿ ಹಾಗೂ ಶಂಕ್ರಪ್ಪ ಕ್ವಾಟಿ ತಿಳಿಸಿದರು.

ಹವಾಮಾನ ವೈಪರೀತ್ಯದಿಂದಾಗಿ ಪತಂಗ ಮಾದರಿಯಲ್ಲಿಯೇ ಹುಳು ಬರುತ್ತಿದ್ದು, ಆ ಕೀಟಗಳು ಭತ್ತದ ಸಸಿಗೆ ಸೋಂಕಿದಲ್ಲಿ ಬೇರುಗಳೇ ಒಣಗುತ್ತಿವೆ ಎಂದು ಪ್ರಗತಿಪರ ರೈತ ನಿಂಗನಗೌಡ ಮಲ್ಲನಗೌಡ ಬಸನಗೌಡ್ರ ಹೇಳುತ್ತಿದ್ದು, ಈ ರೋಗ ನಮ್ಮ ಪ್ರದೇಶದಲ್ಲಿ ಹಿಂಗಾರು ಬೆಳೆಗೆ ಕಾಣಿಸಿಕೊಂಡಿದೆ ಎಂದು ಹೇಳಿದರು.

ನಮ್ಮ ಗ್ರಾಮದಲ್ಲಿಯೂ ಈ ಬಾಧೆ ಕಾಣಿಸಿಕೊಂಡಿದ್ದು, ತಡವಾಗಿ ನಾಟಿ ಮಾಡಿದ ಬೆಳೆಗಳಿಗೆ ಈ ಬಾಧೆ ಕಂಡುಬಂದಿಲ್ಲ. ಆದರೆ ಡಿಸೆಂಬರ್ ಕೊನೆ ವಾರದ ಹಾಗೂ ಜನವರಿ ಮೊದಲ ವಾರದಲ್ಲಿ ನಾಟಿ ಮಾಡಿದ ಬೆಳೆಗೆ ಈ ಕೀಟ ಬಾಧೆ ಇದೆ ಎಂದು ಕಲ್ಲದೇವನಹಳ್ಳಿ ಗ್ರಾಮದ ರೈತರಾದ ನಂದನಗೌಡ ಮೇಟಿ, ಅಶೋಕ ನಡಗೇರಿ ತಿಳಿಸಿದರು.

20 ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ ಭತ್ತಕ್ಕೆ ಕಳೆದ ಮೂರು ದಿನಗಳಿಂದ ಈ ರೋಗ ಕಂಡು ಬಂದಿದ್ದು, ಸುಳಿ ಒಣಗುತ್ತಿದ್ದರಿಂದಾಗಿ ಭತ್ತದ ಬೇರು ಹಾನಿಯಾಗುತ್ತಿದೆ ಎಂದು ಗುಳಬಾಳ ಗ್ರಾಮದ ಬಾಪುಗೌಡ ಚಟ್ಟರಕಿ ಹಾಗೂ ಸೋಮಣ್ಣ ಮೇಟಿ ಆತಂಕ ವ್ಯಕ್ತಪಡಿಸಿದರು.

ಭತ್ತಕ್ಕೆ ಕಾಣಿಸಿಕೊಂಡಿರುವ ಕೀಟ ಬಾಧೆಯ ಕುರಿತು ಯಾವುದೇ ರೈತರು ಮಾಹಿತಿ ನೀಡಿಲ್ಲ. ಗುರವಾರವೇ ಹಳ್ಳಿಗಳಿಗೆ ಭೇಟಿ ನೀಡಿ ಸೂಕ್ತ ಮಾಹಿತಿ ಪಡೆದುಕೊಳ್ಳಲಾಗುವುದು.
ಸಿದ್ಧಾರ್ಥ ಪಾಟೀಲ, ಕೃಷಿ ಅಧಿಕಾರಿ ಹುಣಸಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT