ಶಹಾಪುರ: ಪರಿಶಿಷ್ಟ ಜಾತಿಯ ಯುವಕ ಭೀಮರಾಯ ಅಲಾಯಿ ದೇವರ ಮುಂದೆ ಹೆಜ್ಜೆ ಹಾಕುವಾಗ ಆಕಸ್ಮಿಕವಾಗಿ ಕಬ್ಬಲಿಗ ಸಮುದಾಯದ ಭೀಮರಾಯ ಬಡಿಗೇರ ಅವರಿಗೆ ಕಾಲು ತಾಗಿದ್ದ ನೆಪವಾಗಿಸಿಕೊಂಡು ಪರಿಶಿಷ್ಟ ಜಾತಿಯ ಭೀಮರಾಯ ಮನೆಗೆ ತೆರಳಿ ಕೈಯಿಂದ, ಬಡಿಗೆ, ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಲಾಗಿದೆ.
ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ಮೊಹರಂ ಕೊನೆಯ ದಿನ ಆಚರಣೆ ವೇಳೆ(ಜುಲೈ 29) ಈ ಅವಘಡ ನಡೆದಿದೆ.
ಘಟನೆಯಲ್ಲಿ ಸಂಗಮ್ಮ ದೇವಪ್ಪ ಕಾಮಹನಳ್ಳಿ, ಭೀಮರಾಯ ಸೋಪಣ್ಣ ಕಾಮನಹಳ್ಳಿ, ಕಾಶಮ್ಮ ಭೀಮರಾಯ ಕಾಮನಹಳ್ಳಿ, ಮರೆಮ್ಮ ಶಿವರಾಯ ಹೊತಗಲ್, ಮರೆಮ್ಮ ನಿಂಗಪ್ಪ ಹೊತಗಲ್, ನಿಂಗಮ್ಮ ಸಾಬಣ್ಣ ಕಾಮನಹಳ್ಳಿ ಗಾಯಗೊಂಡಿದ್ದು, ಶಹಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧಿಸಿದಂತೆ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಶಹಾಪುರ ಠಾಣೆಯಲ್ಲಿ 12 ಜನರ ವಿರುದ್ಧ ಭಾನುವಾರ ದೂರು ದಾಖಲಾಗಿದೆ.
‘ಜಿಲ್ಲೆಯಲ್ಲಿ ದಲಿತರ ಮೇಲಿಂದ ಮೇಲೆ ಹಲ್ಲೆಗಳು ನಡೆಯುತ್ತಿವೆ. ಪೊಲೀಸ್ ಇಲಾಖೆಯಿಂದ ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ. ಹೀಗಾಗಿ ಇಂಥ ಘಟನೆಗಳು ಮರುಕಳಿಸುತ್ತಿವೆ. ಇಂಥ ಘಟನೆಗಳನ್ನು ಮರುಕಳಿಸದಂತೆ ತಡೆಗಟ್ಟುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಇನ್ನಾದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಶರಣರೆಡ್ಡಿ ಹತ್ತಿಗೂಡೂರ್ ಆಗ್ರಹಿಸಿದ್ದಾರೆ.