ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಮಿನಿ ಸಮರಕ್ಕೆ ‘ಮುಹೂರ್ತ’ ನಿಗದಿ

ಆ.31ರಂದು ಚುನಾವಣೆ, ಸೆ. 3ರಂದು ಮತ ಎಣಿಕೆ, ರಾಜಕೀಯ ಚಟುವಟಿಕೆ ಶುರು
Published : 20 ಆಗಸ್ಟ್ 2024, 4:49 IST
Last Updated : 20 ಆಗಸ್ಟ್ 2024, 4:49 IST
ಫಾಲೋ ಮಾಡಿ
Comments

ಯಾದಗಿರಿ: ನಗರಾಭಿವೃದ್ಧಿ ಇಲಾಖೆ ಜಿಲ್ಲೆಯ ಮೂರು ನಗರಸಭೆ, ಮೂರು ಪುರಸಭೆ ಮತ್ತು ಒಂದು ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ–ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಪ್ರಕಟಿಸಿದ ಬೆನ್ನಲ್ಲೇ ಚುನಾವಣೆ ದಿನಾಂಕ ನಿಗದಿ ಮಾಡಲಾಗಿದೆ.

ಇದೇ ಆಗಸ್ಟ್‌ 31ರಂದು ಚುನಾವಣೆ, ಸೆಪ್ಟೆಂಬರ್ 3ರಂದು ಮತ ಎಣಿಕೆ ನಡೆದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ.

ಜಿಲ್ಲೆಯಲ್ಲಿ ಯಾದಗಿರಿ, ಶಹಾಪುರ, ಸುರಪುರ ನಗರಸಭೆ, ಕಕ್ಕೇರಾ, ಕೆಂಭಾವಿ, ಗುರುಮಠಕಲ್‌ ಪುರಸಭೆ, ಹುಣಸಗಿ ಪಟ್ಟಣ ಪಂಚಾಯಿತಿ ಸ್ಥಾನಮಾನ ಹೊಂದಿವೆ. ಎರಡು ವರ್ಷಗಳ ಹಿಂದೆಯೇ ಕಕ್ಕೇರಾ, ಕೆಂಭಾವಿ ‍ಪುರಸಭೆಗೆ ಚುನಾವಣೆ ನಡೆದಿತ್ತು. ಹುಣಸಗಿ ಪಟ್ಟಣ ಪಂಚಾಯಿತಿಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಆದರೆ, ಮೀಸಲಾತಿ ಗೊಂದಲದಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನನೆಗುದಿಗೆ ಬಿದ್ದಿತ್ತು. ಈಗ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಮಹಿಳೆಯರಿಗೆ ಕುದುರಿದ ಲಕ್‌:

ಈ ಬಾರಿ ಮಹಿಳಾ ಸದಸ್ಯರಿಗೆ ಅದೃಷ್ಟ ಕೂಡಿ ಬಂದಿದೆ. ಮೀಸಲಾತಿಯಿಂದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಪ್ರತಿನಿಧಿಗಳು ಅಧ್ಯಕ್ಷ, ಉಪಾಧ್ಯಕ್ಷರಾಗಲಿದ್ದಾರೆ.

ಯಾದಗಿರಿ ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆ, ಶಹಾಪುರ ನಗರಸಭೆಗೆ ಹಿಂದುಳಿದ ವರ್ಗ ಮಹಿಳೆ, ಸುರಪುರ ನಗರಸಭೆಗೆ ಹಿಂದುಳಿದ ವರ್ಗ ಮಹಿಳೆ ಅಧ್ಯಕ್ಷ ಸ್ಥಾನ ಮೀಸಲಾಗಿದೆ.

ಕೆಂಭಾವಿ ಪುರಸಭೆಯಲ್ಲಿ ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿದೆ. ಗುರುಮಠಕಲ್‌‌ ಪುರಸಭೆಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಉಳಿದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಿಲ್ಲದ್ದರೂ ಸ್ಪರ್ಧಿಸುವ ಅವಕಾಶವಿದೆ.

ಯಾದಗಿರಿ ಜಿಲ್ಲೆಯ ಶಕ್ತಿ ಕೇಂದ್ರ ಮಹಿಳಾ ಅಧಿಕಾರಿಗಳು
ಯಾದಗಿರಿ ಜಿಲ್ಲೆಯ ಶಕ್ತಿ ಕೇಂದ್ರ ಮಹಿಳಾ ಅಧಿಕಾರಿಗಳು
ಮಹಿಳಾಧಿಪತಿಗಳ ಕಾರುಬಾರು
ಜಿಲ್ಲೆಯಲ್ಲಿ ಈಗಾಗಲೇ ಶಕ್ತಿ ಕೇಂದ್ರದಲ್ಲಿ ಮೂವರು ಮಹಿಳಾ ಅಧಿಕಾರಿಗಳು ಕಾರುಬಾರು ಮಾಡುತ್ತಿದ್ದಾರೆ. ಇದರ ಜತೆಗೆ ಈಗ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೆರವಿನಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಮಹಿಳೆಯರಿಗೆ ಲಭಿಸಿದ್ದು ಮಹಿಳಾ ಮಣಿಗಳ ಅಧಿಕಾರ ಚಲಾವಣೆ ನಡೆಯಲಿದೆ.
10ನೇ ಅವಧಿ ಚುನಾವಣೆ
ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ಈಗ ನಡೆಯಲಿರುವುದು 10ನೇ ಅವಧಿಯಾಗಿದೆ. ಜಿಲ್ಲೆಯ ನಗರಸಭೆ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗೆ 10 ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ  ನಡೆಯಲಿದೆ. ಚುನಾವಣಾ ಅಧಿಕಾರಿಗಳ ನೇಮಕ ಜಿಲ್ಲೆಯ ಮೂರು ನಗರಸಭೆ ಮೂರು ಪುರಸಭೆ ಒಂದು ಪಟ್ಟಣ ಪಂಚಾಯಿತಿಗೆ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ ಅವರು ಚುನಾವಣೆ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಯಾದಗಿರಿ ಶಹಾಪುರ ಸುರಪುರ ನಗರಸಭೆಗಳಿಗೆ ಉಪವಿಭಾಗಾಧಿಕಾರಿ ಚುನಾವಣೆ ಅಧಿಕಾರಿ. ಕಕ್ಕೇರಾ ಕೆಂಭಾವಿ ಪುರಸಭೆಗೆ ಸುರಪುರ ತಹಶೀಲ್ದಾರ್ ಗುರುಮಠಕಲ್ ಪುರಸಭೆಗೆ ಗುರುಮಠಕಲ್ ತಹಶೀಲ್ದಾರ್ ಹುಣಸಗಿ ಪಟ್ಟಣ ಪಂಚಾಯಿತಿಗೆ ಹುಣಸಗಿ ತಹಶೀಲ್ದಾರ್ ಅವರನ್ನು ಚುನಾವಣೆ ಅಧಿಕಾರಿಗಳಾನ್ನಾಗಿ ನೇಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT