ಸುರಪುರ: ಇಲ್ಲಿಯ ಐತಿಹಾಸಿಕ ಪ್ರಸಿದ್ಧ ವೇಣುಗೋಪಾಲಸ್ವಾಮಿ ‘ಹಾಲೋಕಳಿ’ ಜಾತ್ರೆ ಬುಧವಾರ ಸಡಗರ ಸಂಭ್ರಮದೊಂದಿಗೆ ಜರುಗಿತು. ಸಂಜೆ ನಡೆದ ದೇವರ ಸ್ತಂಭಾರೋಹಣಕ್ಕೆ ಸಾವಿರಾರು ಜನರು ಸಾಕ್ಷಿಯಾದರು.
ಮಂಗಳವಾರ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯೊಂದಿಗೆ ಜಾತ್ರಾ ಕಾರ್ಯಕ್ರಮಗಳು ಆರಂಭಗೊಂಡವು. ವೇಣುಗೋಪಾಲಸ್ವಾಮಿಗೆ ವಿಶೇಷ ಅಲಂಕಾರ, ವಿಶೇಷಪೂಜೆ, ಉಯ್ಯಾಲ ಸೇವೆ ನಡೆದವು. ಬುಧವಾರ ಜಾತ್ರೆಯ ಮುಖ್ಯ ಅಕರ್ಷಣೆ ದೇವರ ಸ್ತಂಭಾರೋಹಣ ಸಂಭ್ರಮದಿಂದ ನಡೆಯಿತು.
ಅರಮನೆಯಲ್ಲಿ ಸಂಸ್ಥಾನಿಕರ ಅಪ್ಪಣೆ ಪಡೆದು ಬಾಜಾ, ಭಜಂತ್ರಿಯೊಂದಿಗೆ ವತನದಾರರು ದೇವಸ್ಥಾನಕ್ಕೆ ಆಗಮಿಸಿದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಾಣ್ಯ ಚಿಮ್ಮುವ ಮೂಲಕ ಸ್ತಂಭಾರೋಹಣಕ್ಕೆ ಚಾಲನೆ ನೀಡಿದರು.
ದೇವಸ್ಥಾನದ ಕೆಳಗಿನ ಮೈದಾನದಲ್ಲಿ 50 ಅಡಿ ಉದ್ದದ 5 ಕಂಬಗಳನ್ನು ನೆಡುಹಾಕಲಾಗಿತ್ತು. ಅವುಗಳಿಗೆ ಜಾರುವ ಪದಾರ್ಥಗಳನ್ನು ಲೇಪಿಸಿ ನುಣ್ಣಗೆ ಮಾಡಲಾಗಿತ್ತು. ನಿರ್ದಿಷ್ಟ ಪಡಿಸಿದ ಗ್ರಾಮಗಳ ಜನರು ಕಂಬ ಹತ್ತಿದರು.
ಕಂಬದ ತುದಿಯಲ್ಲಿ ಕುಳಿತಿದ್ದ ವ್ಯಕ್ತಿ ಮತ್ತು ಕೆಳಗಡೆಯಿಂದ ಆರೋಹಿಗಳ ಮೇಲೆ ನೀರನ್ನು ಚಿಮ್ಮಿಸಲಾಗುತ್ತಿತ್ತು. ಇನ್ನೇನು ಕಂಬ ಹರಿದರು ಎನ್ನುವಾಗಲೇ ಜಾರಿ ಕೆಳಗೆ ಬೀಳುತ್ತಿದ್ದರು. ಈ ದೃಶ್ಯ ನೋಡುಗರಿಗೆ ಮನರಂಜನೆ ನೀಡಿತು. ಕೊನೆಗೆ ಒಬ್ಬರ ಸಹಾಯದಿಂದ ಮತ್ತೊಬ್ಬರು ಕಂಬ ಹತ್ತಿದರು. ಕಂಬದ ತುದಿಗೆ ಕಟ್ಟಿದ್ದ ಹಣ್ಣಿನ ಹೋಳುಗಳನ್ನು ಹರಿದರು. ನೆರೆದ ಜನರು ಹುರಿದುಂಬಿಸಿ, ಹೋ..ಎಂದು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ವತನದಾರರಾದ ಗಣೇಶ ಜಾಹಾಗೀರದಾರ, ಸುನೀಲ ಸರಪಟ್ಟಶೆಟ್ಟಿ, ಉಸ್ತಾದ ವಜಾಹತ್ ಹುಸೇನ್, ವೀರೇಶ ದೇಶಮುಖ, ಮುಬೀನ ದಖನಿ, ಸೈಯದ್ ಅಹ್ಮದ್ ಪಾಲ್ಕಿ ಸಾಹೇಬ, ಅಜೀಮ ಬೆಳ್ಳಿಬೆತ್ತ ಇತರರು ಭಾಗವಹಿಸಿದ್ದರು.
ಸ್ತಂಭಾರೋಹಣ ವೀಕ್ಷಿಸಿದ ಭಕ್ತರು ದೇವರ ದರ್ಶನ ಪಡೆದರು. ಜಾತ್ರೆಯಲ್ಲಿ ತಿರುಗಾಡಿ ಮಕ್ಕಳಿಗೆ ಜೋಕಾಲಿಗಳಲ್ಲಿ ಕುಳ್ಳಿರಿಸಿದರು. ಬೆಂಡು ಬತ್ತಾಸು, ಮಿಠಾಯಿ ಖರೀದಿಸಿದರು. ಮಹಿಳೆಯರು ಬಳೆ ಹಾಕಿಸಿಕೊಂಡರು.
ಸಂಜೆ ಗರುಡವಾಹನದಲ್ಲಿ ಉತ್ಸವ ಮೂರ್ತಿಯನ್ನಿಟ್ಟು ಭವ್ಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ದೇವಸ್ಥಾನದಿಂದ ಜೋಳಮಾರುವ ಹನುಮಾನ ದೇವಸ್ಥಾನಕ್ಕ ತೆರಳಿ ಪುನಃ ದೇವಸ್ಥಾನಕ್ಕೆ ತರಲಾಯಿತು. 52 ಮೆಟ್ಟಿಲುಗಳನ್ನು ಏರುವ ದೃಶ್ಯ ಕಣ್ಣಿಗೆ ಹಬ್ಬ ಉಂಟು ಮಾಡಿತು.
ಗುರುವಾರ ಬೆಳಿಗ್ಗೆ 11 ಗಂಟೆಗೆ ದೇವಸ್ಥಾನದ ಮೈದಾನದಲ್ಲಿ ಕುಸ್ತಿ ಪಂದ್ಯಗಳು, ಸಂಜೆ ರಮಣಪ್ಪನಾಯಕನ ಕಟ್ಟೆ ಹತ್ತಿರ ರಣಗಂಭಾರೋಹಣ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.