ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಕೊಟ್ಟು ಕಸಿದುಕೊಂಡ ‘ಭೀಮೆ’

ಪ್ರವಾಹ ಪೀಡಿತ ವಡಗೇರಾ ತಾಲ್ಲೂಕಿನ ಶಿವನೂರು ಗ್ರಾಮಸ್ಥರ ಅಳಲು
Last Updated 17 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಯಾದಗಿರಿ: ‘ಭೀಮಾ ನದಿ ದಡದಲ್ಲಿರುವ ನಾವು ಆ ನದಿ ನೀರಿನಿಂದಲೇ ಬದುಕು ಕಟ್ಟಿಕೊಂಡಿದ್ದೇವೆ. ಆದರೆ, ಅದೇ ಭೀಮಾ ನದಿ ನಮ್ಮನ್ನು ನಾಶ ಮಾಡಿದ್ದಾಳೆ’...

ಇದು ಪ್ರವಾಹ ಪೀಡಿತ ವಡಗೇರಾ ತಾಲ್ಲೂಕಿನ ಶಿವನೂರು ಗ್ರಾಮಸ್ಥರ ಮಾತಾಗಿದೆ.

ಕಳೆದ 4 ದಿನಗಳಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಶ್ರಯ ಪಡೆದಿರುವ ಗ್ರಾಮಸ್ಥರು ಪ್ರಜಾವಾಣಿಯೊಂದಿಗೆ ನೋವಿನಿಂದಲೇ ಮಾತಾಡಿದರು.

‘ಹೊಳಿ ದಂಡಿಗಿ ನಮ್ಮ ಊರಿದೆ. ಪ್ರತಿಬಾರಿಯೂ ಭೀಮಾ ನದಿ ಉಕ್ಕೇರಿದಾಗ ನಮ್ಮ ಮನೆ ಬಾಗಿಲ ಬಳಿ ನೀರು ಬರುತ್ತದೆ. ಇದರಿಂದ ನಾವು ಬೆಳೆದ ಬೆಳೆ, ಮನೆಗಳು ಜಲಾವೃತವಾಗುತ್ತವೆ. ಇದಕ್ಕೆ ಶಾಶ್ವತ ಪರಿಹಾರವೇ ಕಲ್ಪಿಸಿಲ್ಲ’ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

2019ರಲ್ಲಿಯೂ ಭೀಮಾ ನದಿ ಪ್ರವಾಹ ಬಂದಾಗ ಶಿವನೂರ ಗ್ರಾಮಸ್ಥರು ಗ್ರಾಮ ತೊರೆದಿದ್ದರು. ಈ ಬಾರಿಯೂ ಜನ–ಜಾನುವಾರು ಸಮೇತ ಬೆಂಡೆಬೆಂಬಳಿ ಗ್ರಾಮದಲ್ಲಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ ನೆಲೆಸಿದ್ದಾರೆ. ಪ್ರವಾಹ ಇಳಿಕೆಯಾದ ನಂತರ ಮತ್ತೆ ತೆರಳುತ್ತೇವೆ ಎಂದು ಗ್ರಾಮಸ್ಥರಾದ ಮಲ್ಲಿಕಾರ್ಜುನ ತಿಳಿಸುತ್ತಾರೆ.

‘ಅಧಿಕಾರಿಗಳು ಕೊಟ್ಟ ಭರವಸೆ ಹುಸಿಯಾಗಿದೆ. ಕಳೆದ ಬಾರಿಯೇ ಸ್ಥಳಾಂತರ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ, ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಇದು ಮತ್ತೆ ಪುನರಾವರ್ತನೆ ಆಗುತ್ತಿದೆ. ಇದಕ್ಕೆ ಯಾವಾಗ ಕಡಿವಾಳ ಬೀಳುತ್ತದೋ’ ಎಂದು ಗ್ರಾಮಸ್ಥೆ ಜಮುಲಮ್ಮ ಆಕ್ರೋಶ ಹೊರಹಾಕಿದರು.

ಊರ ಹೊರಗೆ ಜಾನುವಾರು: ಗ್ರಾಮದಲ್ಲಿ ಪ್ರವಾಹ ಬಂದ ತಕ್ಷಣ ಜನರು ಹೇಗೋ ಬೆಂಡೆಬೆಂಬಳಿಕಾಳಜಿ ಕೇಂದ್ರಕ್ಕೆ ಬಂದಿದ್ದಾರೆ. ಆದರೆ, ಜಾನುವಾರುಗಳನ್ನು ಸಾಗಿಸಲು ಸಾಧ್ಯವಾಗಿಲ್ಲ. ಹೀಗಾಗಿ ಗ್ರಾಮದ ಹೊರವಲಯದಲ್ಲಿ ಜಾನುವಾರುಗಳನ್ನು ಕಟ್ಟಿ ಹಾಕಿದ್ದಾರೆ. ಜಾನುವಾರುಗಳಿಗೆ ಸರಿಯಾದ ಮೇವು ಕೂಡ ಇಲ್ಲದಂತಾಗಿದೆ. ಪುರುಷರು ಆಗಾಗ ಜಾನುವಾರುಗಳ ಯೋಗಕ್ಷೇಮ ನೋಡಿಕೊಂಡು ಬಂದರೆ ಮಹಿಳೆಯರು, ಮಕ್ಕಳು ಕಾಳಜಿ ಕೇಂದ್ರಗಳಲ್ಲಿದ್ದಾರೆ.

ಸ್ಥಳಾಂತರಿಸುವರೆಗೆ ತೆರಳಲ್ಲ!: ಹಲವಾರು ಬಾರಿ ಮನವಿ ಮಾಡಿ ಸಾಕಾಗಿದೆ. ಹೀಗಾಗಿ ನಮ್ಮ ಗ್ರಾಮ ಸ್ಥಳಾಂತರವಾಗುವವರೆಗೆ ಇಲ್ಲಿಂದ ತೆರಳುವುದಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
***

ಶಿವನೂರ ಸ್ಥಳಾಂತರಕ್ಕೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಪ್ರವಾಹ ಇಳಿಕೆಯಾದ ನಂತರ ಸಾಧ್ಯತೆ ಕುರಿತು ಪರಿಶೀಲಿಸಲಾಗುವುದು

-ಡಾ.ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ

***

ಪ್ರವಾಹ ಬಂದಾಗ ಕಾಳಜಿ ಕೇಂದ್ರಕ್ಕೆ ಬರುವುದು, ಇಳಿಕೆಯಾದ ನಂತರ ಮತ್ತೆ ಗ್ರಾಮಕ್ಕೆ ತೆರಳುವುದು ಸಾಮಾನ್ಯ. ಶಾಶ್ವತ ಪರಿಹಾರ ಬೇಕು

- ಚನ್ನಾರೆಡ್ಡಿ ಪಾಟೀಲ ತುನ್ನೂರು, ವಿಧಾನ ಪರಿಷತ್‌ ಮಾಜಿ ಸದಸ್ಯ

***

ನಮ್ಮ ಸಮಸ್ಯೆ ಕೇಳುವವರಿಲ್ಲದಂತಾಗಿದೆ.ಪ್ರತಿ ಬಾರಿಯೂ ನದಿ ಪ್ರವಾಹದಿಂದ ಸಮಸ್ಯೆ ಎದುರಿಸುತ್ತಿದ್ದೇವೆ. ಅಧಿಕಾರಿಗಳು ಇತ್ತ ಗಮನಹರಿಸಲಿ
- ಬಸಮ್ಮ ಬಾಗ್ಲಿ, ಶಿವನೂರ ಗ್ರಾಮಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT