ವಡಗೇರಾ: ‘ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು, ಉನ್ನತ ಗುರಿ ಸಾಧನೆ ಮಾಡಬೇಕು’ ಎಂದು ಎಸ್‌ಡಿಎಂಸಿ ಅಧ್ಯಕ್ಷ ನಾಗಪ್ಪ ಬಸಂತಪುರ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂಗಳನ್ನು ವಿತರಿಸಿ ಅವರು ಮಾತನಾಡಿ, ‘ಪಾಲಕರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಅವರ ಭವಿಷ್ಯವನ್ನು ರೂಪಿಸಬೇಕು. ಮಕ್ಕಳನ್ನು ಶಾಲೆ ಬಿಡಿಸಿ, ಕೂಲಿ ಕೆಲಸಕ್ಕೆ ಕಳುಹಿಸಬಾರದು’ ಎಂದು ತಿಳಿಸಿದರು.
‘ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಮಯಪಾಲನೆ, ಏಕಾಗ್ರತೆಯನ್ನು ಅಳವಡಿಸಿಕೊಂಡು ಅಧ್ಯಯನ ಮಾಡಿದರೆ ಮಾತ್ರ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವುದರ ಜತೆಗೆ ಗುರಿ ಮುಟ್ಟಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಮುಖ್ಯಶಿಕ್ಷಕಿ ಶಾರದಾ ಮಾತನಾಡಿ, ‘ಈಗಾಗಲೇ ಸರ್ಕಾರ ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಶೂ ಭಾಗ್ಯ, ಪುಸ್ತಕ ಭಾಗ್ಯ, ಶಾಲಾ ಸಮವಸ್ತ್ರ ಭಾಗ್ಯ ಹಾಗೂ ಇನ್ನಿತರ ಭಾಗ್ಯಗಳ ಯೋಜನೆಯನ್ನು ಜಾರಿಗೆ ತಂದಿದೆ’ ಎಂದು ಹೇಳಿದರು.
‘ಪಾಲಕರು ಕಡ್ಡಾಯವಾಗಿ ವಾರದಲ್ಲಿ ಎರಡು ವೇಳೆ ಶಾಲೆಗೆ ಬಂದು ಮಕ್ಕಳ ಕಲಿಕೆಯ ಪ್ರಗತಿ ಪರಿಶೀಲಿಸಬೇಕು. ಆಗ ಮಾತ್ರ ಮಕ್ಕಳ ಕಲಿಕೆಯ ಬಗ್ಗೆ ಪಾಲಕರಿಗೆ ಮಾಹಿತಿ ಸಿಗುವುದರ ಜತೆಗೆ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಲು ಕಾರಣಗಳು ತಿಳಿಯುತ್ತವೆ. ಆಗ ಶಿಕ್ಷಕರಿಗೆ ಹಾಗೂ ಪಾಲಕರಿಗೆ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.