ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್ ಹುಡುಗರ ಉಪ್ಪಿಟ್ಟಿನಲ್ಲಿ ಹಾವಿನ ಮರಿ ಪ್ರತ್ಯಕ್ಷ! ಐವರು ಅಸ್ವಸ್ಥ

Last Updated 18 ನವೆಂಬರ್ 2021, 8:24 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಅಬ್ಬೆತುಮಕೂರು ಮಠದ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ನಿಲಯದಲ್ಲಿ ಗುರುವಾರ ಬೆಳಿಗ್ಗೆ ತಯಾರಿಸಿದ ಉಪ್ಪಿಟ್ಟಿನಲ್ಲಿ ಹಾವಿನ ಮರಿ ಪತ್ತೆಯಾಗಿದ್ದು, ಉಪಾಹಾರ ಸೇವಿಸಿದ ಐವರು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.

ರಾಹುಲ್, ಮಲ್ಲಪ್ಪ, ವಿಶ್ವಕರ್ಣ, ಬಸವರಾಜ, ಯುವರಾಜ ವಿದ್ಯಾರ್ಥಿಗಳು ತಲೆ ಸುತ್ತು, ವಾಂತಿಯಿಂದ ಅಸ್ವಸ್ಥರಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

50 ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಪಾಸಣೆ:ಉಪಾಹಾರ ಸೇವಿಸಿದ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಆರೋಗ್ಯವನ್ನು ತಪಾಸಣೆ ಮಾಡಲಾಗಿದೆ. ಇದರಲ್ಲಿ ಐವರು ವಿದ್ಯಾರ್ಥಿಗಳು ಮಾತ್ರ ತಲೆ ಸುತ್ತು, ವಾಂತಿಯಿಂದ ಅಸ್ವಸ್ಥರಾಗಿದ್ದಾರೆ. ಉಳಿದವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ಮಾಹಿತಿ ನೀಡಿದರು.

ಶಾಸಕರ ಭೇಟಿ:ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ವಿಷಯ ತಿಳಿಯುತ್ತಲೇ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ನಂತರ ವೈದ್ಯರಿಂದ ಮಾಹಿತಿ ಪಡೆದ ಅವರು, ಸದ್ಯಕ್ಕೆ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿಲ್ಲ.‌ ಬಹುಶಃ ಉಪ್ಪಿಟ್ಟು ನಲ್ಲಿ ಪತ್ತೆಯಾಗಿರುವ ಹಾವಿನ ಮರಿ ಸತ್ತದ್ದಾಗಿದೆ.‌ ಉಪಾಹಾರ ತಯಾರಿಸುವ ವೇಳೆ ಸ್ವಚ್ಛತೆ ಕಾಪಾಡ ಕಾರಣ ಇದು ಸಂಭವಿಸಿರುವ ಸಾಧ್ಯತೆ ಇದೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

'ಮುಂದೆಯೂ ವಸತಿ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಪರಿಶೀಲನೆ ಮಾಡಲಾಗುವುದು. ಈಗಾಗಲೇ ಹಲವು ವಸತಿನಿಲಯಗಳಿಗೆ ಭೇಟಿ ನೀಡಲಾಗಿದೆ' ಎಂದರು.

ಇದಕ್ಕೂ ಮೊದಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.

'ಉಪಾಹಾರ ಸೇವಿಸುವ ವೇಳೆ ಒಬ್ಬ ವಿದ್ಯಾರ್ಥಿ ತಟ್ಟೆಯಲ್ಲಿ ಹಾವಿನ ಮರಿ ಪತ್ತೆಯಾಗಿದೆ. ಇದನ್ನು ಸೇವಿಸಿದ ನಂತರ ತಲೆ ಸುತ್ತು ಬಂದಿದೆ.‌ ನಂತರ ಎಲ್ಲರಿಗೂ ಹೇಳಿದ ನಂತರ ಉಪಾಹಾರ ಬಿಟ್ಟು ಆಸ್ಪತ್ರೆಗೆ ಬಂದಿದ್ದಾರೆ' ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಜೀವಕುಮಾರ ರಾಯಚೂರಕರ್ ಮಾತನಾಡಿ, 'ಉಪಾಹಾರ ಸೇವಿಸಿದ ವಿದ್ಯಾರ್ಥಿಗಳ ಆರೋಗ್ಯ ಮೇಲೆ ನಿಗಾ ಇರಿಸಲಾಗಿದೆ. ಯಾರಿಗೂ ಜೀವಕ್ಕೆ ಅಪಾಯವಿಲ್ಲ. ಮಕ್ಕಳ ನಿಗಾ ಘಟಕದಲ್ಲಿ ಆರೈಕೆ ಮಾಡಲಾಗುತ್ತಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT