ಶನಿವಾರ, ಸೆಪ್ಟೆಂಬರ್ 21, 2019
21 °C
ಹನುಮಾನ ದೇವಸ್ಥಾನದ ಪೂಜಾರಿಗೆ ಕುಡಿಯಲು ನೀರು ಕೊಡುತ್ತಿಲ್ಲ

ಗ್ರಾಮಸ್ಥರಿಂದ ಸಾಮಾಜಿಕ ಬಹಿಷ್ಕಾರ

Published:
Updated:
Prajavani

ಶಹಾಪುರ: ’ತಾಲ್ಲೂಕಿನ ಕರ್ಕಳ್ಳಿ ಗ್ರಾಮದಲ್ಲಿ ಹನುಮಾನ ದೇವಸ್ಥಾನದ ಪೂಜೆ ವಿಷಯದಲ್ಲಿ ವಿನಾಕಾರಣ ತೊಂದರೆ ನೀಡಿ ನನ್ನ ಕುಲದ ಜನ ಹಾಗೂ ಗ್ರಾಮಸ್ಥರು ಕೂಡಿಕೊಂಡು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಕುಟುಂಬಕ್ಕೆ ಭದ್ರತೆ ನೀಡಬೇಕು‘ ಎಂದು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಶರಣಪ್ಪ ಹೂಗಾರ ತಹಶೀಲ್ದಾರ್‌ ಸಂಗಮೇಶ ಜಿಡಗೆ ಅವರಿಗೆ ಮನವಿ ಸಲ್ಲಿಸಿದ್ದಾರೆ.

’ನನಗೆ 9 ಮಕ್ಕಳಿದ್ದು, 50 ವರ್ಷಗಳಿಂದ ಗ್ರಾಮದ ಹನುಮಾನ ದೇವಸ್ಥಾನದ ಪೂಜಾರಿಯಾಗಿದ್ದೇನೆ. ಪ್ರತಿ ದಿನ ಪೂಜೆ ಕೈಂಕರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. 25 ದಿನದ ಹಿಂದೆ ಪೂಜೆ ಮಾಡುತ್ತಿದ್ದಾಗ ನನ್ನ ಮೇಲೆ ಹಲ್ಲೆ ಮಾಡಿ ಕೈಯಲ್ಲಿದ್ದ ಆರತಿಯನ್ನು ಬೀಳಿಸಿ ದೇವರನ್ನು ಗ್ರಾಮಸ್ಥರು ತೆಗೆದುಕೊಂಡು ಹೋಗಿದ್ದಾರೆ‘ ಎಂದು ಶರಣಪ್ಪ ಸುದ್ದಿಗಾರರಿಗೆ ತಿಳಿಸಿದರು.

’ಇದನ್ನು ಪ್ರಶ್ನಿಸಿದ್ದಕ್ಕೆ ಗ್ರಾಮಸ್ಥರು ಸಭೆ ಸೇರಿ ಸಾಮಾಜಿಕವಾಗಿ ಬಹಿಷ್ಕಾರ ಹಾಕಿದ ನಿರ್ಣಯವನ್ನು ಗ್ರಾಮ ಸಹಾಯಕನ ಮೂಲಕ ಡಂಗೂರ ಸಾರಿದ್ದಾರೆ. ಒಂದು ವಾರದಿಂದ ನನ್ನ ಕುಟುಂಬದ ಸದಸ್ಯರಿಗೆ ಕುಡಿಯಲು ನೀರು ಕೊಡುತ್ತಿಲ್ಲ. ಕಿರಾಣಿ ಅಂಗಡಿಯಲ್ಲಿ ಆಹಾರ ಸಾಮಗ್ರಿಗಳನ್ನು ನೀಡುತ್ತಿಲ್ಲ. ಗ್ರಾಮದಿಂದ ನಗರಕ್ಕೆ ಬರಬೇಕಾದರೆ ಆಟೊ ಹಾಗೂ ಟಂಟಂ ನಲ್ಲಿ ಕೂಡಿಸಿಕೊಳ್ಳುತ್ತಿಲ್ಲ. ನಿಸರ್ಗದ ತುರ್ತುಕ್ರಿಯೆಗಳನ್ನು ಪೂರೈಸಿಕೊಳ್ಳಲು ಪರದಾಡುವಂತೆ ಆಗಿದೆ. ಗ್ರಾಮದಲ್ಲಿ ಒಳ ಪ್ರವೇಶ ಮಾಡುವಂತೆ ಇಲ್ಲ. ನೇರವಾಗಿ ಸರ್ಕಾರಿ ರಸ್ತೆಯ ಮೇಲೆ ಹೋಗಬೇಕು. ನಾವು ಐದು ಕಿ.ಮೀ ನಡೆದುಕೊಂಡು ಗೋಗಿ ಗ್ರಾಮಕ್ಕೆ ಬಂದು ಆಹಾರ ಸಾಮಗ್ರಿ ತೆಗೆದುಕೊಂಡು ಹೋಗುತ್ತಿದ್ದೇವೆ. ಇದರಿಂದ ನಮ್ಮ ಕುಟುಂಬಕ್ಕೆ ಮಾನಸಿಕವಾಗಿ ತುಂಬಾ ಹಿಂಸೆಯಾಗಿದೆ. ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಇಲ್ಲದೆ ಹೋದರೆ ನಮ್ಮ ಕುಟುಂಬದ ಸದಸ್ಯರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ‘ ಎಂಬ ಎಚ್ಚರಿಕೆಯನ್ನು ಶರಣಪ್ಪ ಹೂಗಾರ ಹಾಗೂ ಅವರ ಮಗ ನಾಗಪ್ಪ ನೀಡಿದ್ದಾರೆ.

ದೇವಸ್ಥಾನದ ಆಸ್ತಿ ಕಬಳಿಸಿದ್ದಾರೆ: ದೇವಸ್ಥಾನದ ಹೆಸರಿನಲ್ಲಿದ್ದ 6 ಎಕರೆ ಜಮೀನನ್ನು ಶರಣಪ್ಪ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದರೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಇಲ್ಲದ ಸಬೂಬು ಹೇಳುತ್ತಿದ್ದಾರೆ. ಗ್ರಾಮಸ್ಥರು ಯಾರೂ ಬಹಿಷ್ಕಾರ ಹಾಕಿಲ್ಲ. ದೇವಸ್ಥಾನದ ಆಸ್ತಿಯನ್ನು ಕಬಳಿಸಿದವರಿಗೆ ಶಿಕ್ಷೆಯಾಗಲಿ. ಜಿಲ್ಲಾಧಿಕಾರಿಯವರು ಮಧ್ಯ ಪ್ರವೇಶಿಸಿ ದೇವಸ್ಥಾನದ ಆಸ್ತಿ ಮರಳಿ ಪಡೆದುಕೊಳ್ಳಬೇಕು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Post Comments (+)