ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games 2023: ಪದಕ ಬೇಟೆ ಮುಂದುವರಿಸಿದ ಶೂಟರ್‌ಗಳು

Published 29 ಸೆಪ್ಟೆಂಬರ್ 2023, 6:02 IST
Last Updated 29 ಸೆಪ್ಟೆಂಬರ್ 2023, 6:02 IST
ಅಕ್ಷರ ಗಾತ್ರ

ಹಾಂಗ್‌ಝೌ: ಭಾರತದ ಯುವ ಶೂಟರ್‌ಗಳು ಏಷ್ಯನ್‌ ಕ್ರೀಡಾಕೂಟದಲ್ಲಿ ಮಿಂಚಿನ ಪ್ರದರ್ಶನ ಮುಂದುವರಿಸಿದ್ದು, ಶುಕ್ರವಾರ ಎರಡು ಚಿನ್ನ ಹಾಗೂ ಮೂರು ಬೆಳ್ಳಿ ಪದಕಗಳಿಗೆ ಗುರಿಯಿಟ್ಟರು.

ಹಾಂಗ್‌ಝೌ ಶೂಟಿಂಗ್‌ ರೇಂಜ್‌ನಲ್ಲಿ ಕಳೆದ ಆರು ದಿನಗಳಲ್ಲಿ ಭಾರತ ಒಟ್ಟು 18 ಪದಕಗಳನ್ನು ಬಗಲಿಗೆ ಹಾಕಿಕೊಂಡಿದೆ. ಏಷ್ಯನ್‌ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ ಶೂಟರ್‌ಗಳ ಅತ್ಯುತ್ತಮ ಪ್ರದರ್ಶನ ಇದಾಗಿದೆ. 2006ರ ದೋಹಾ ಕೂಟದಲ್ಲಿ 16 ಪದಕಗಳನ್ನು ಜಯಿಸಿದ್ದು ಇದುವರೆಗಿನ ಶ್ರೇಷ್ಠ ಸಾಧನೆ ಎನಿಸಿಕೊಂಡಿತ್ತು.

ಶುಕ್ರವಾರ ನಡೆದ ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದ ಸ್ಪರ್ಧೆಯು ಭಾರತದ ಶೂಟರ್‌ಗಳ ಪಾರಮ್ಯಕ್ಕೆ ವೇದಿಯೊದಗಿಸಿತು. ಪಲಕ್‌ ಗುಲಿಯಾ ಮತ್ತು ಇಶಾ ಸಿಂಗ್‌ ಅವರು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿಯ ಪದಕ ಕೊರಳಿಗೇರಿಸಿಕೊಂಡರು.

ಮೊದಲ ಎರಡು ಸ್ಥಾನಗಳಿಗೆ ಭಾರತದ ಇಬ್ಬರು ಸ್ಪರ್ಧಿಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿತು. 17 ವರ್ಷದ ಪಲಕ್‌ ಅಂತಿಮವಾಗಿ 242.1 ಪಾಯಿಂಟ್ಸ್‌ಗಳೊಂದಿಗೆ ಚಿನ್ನ ತಮ್ಮದಾಗಿಸಿಕೊಂಡರು. ಇಶಾ ಸಿಂಗ್‌ 239.7 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಪಾಕಿಸ್ತಾನದ ಕಿಷ್ಮಾಲಾ ತಲಾತ್‌ ಕಂಚು ಗೆದ್ದುಕೊಂಡರು. ಹಾಂಗ್‌ಝೌ ಕೂಟದಲ್ಲಿ ಪಾಕ್‌ಗೆ ದೊರೆತ ಮೊದಲ ಪದಕ ಇದು.

ಫೈನಲ್‌ನಲ್ಲಿ ಮೊದಲ ಅವಕಾಶದಲ್ಲಿ ಕೇವಲ 9.1 ಪಾಯಿಂಟ್ಸ್ ಕಲೆಹಾಕಿದ್ದ ಪಲಕ್‌, ಆ ಬಳಿಕ ಲಯ ಕಂಡುಕೊಂಡು ನಿಖರ ಗುರಿ ಹಿಡಿಯುವಲ್ಲಿ ಯಶ ಕಂಡರು.

‘ಮೊದಲ ಶಾಟ್‌ನಲ್ಲಿ 9.1 ಪಾಯಿಂಟ್ಸ್‌ ದೊರೆತಾಗ ಅಲ್ಪ ನರ್ವಸ್‌ ಆಗಿದ್ದೆ. ಆದರೆ ಇನ್ನೂ 23 ಅವಕಾಶಗಳು ಇದ್ದು, ಎದೆಗುಂದುವ ಅಗತ್ಯವಿಲ್ಲ ನನ್ನಲ್ಲೇ ಹೇಳಿಕೊಂಡು ಆತ್ಮವಿಶ್ವಾಸ ಮರಳಿ ಪಡೆದೆ’ ಎಂದು ಪಲಕ್ ಪ್ರತಿಕ್ರಿಯಿಸಿದರು. ಅಂತರರಾಷ್ಟ್ರೀಯ ಸ್ಪರ್ಧೆಯ ಸೀನಿಯರ್‌ ವಿಭಾಗದಲ್ಲಿ ಅವರಿಗೆ ದೊರೆತ ಮೊದಲ ಪದಕ ಇದು.

ಶೂಟಿಂಗ್‌ನಲ್ಲಿ ಭಾರತಕ್ಕೆ ಎರಡನೇ ಚಿನ್ನ, ಪುರುಷರ 50 ಮೀ. ರೈಫಲ್‌ ತ್ರಿ ಪೊಸಿಷನ್‌ ಸ್ಪರ್ಧೆಯಲ್ಲಿ ಲಭಿಸಿತು. ಐಶ್ವರಿ ಪ್ರತಾಪ್‌ ಸಿಂಗ್‌ (591 ಪಾಯಿಂಟ್ಸ್), ಸ್ವಪ್ನಿಲ್‌ ಕುಸಾಲೆ (591) ಮತ್ತು ಅಖಿಲ್‌ ಶೊರಾಣ್ (587) ಅವರನ್ನೊಳಗೊಂಡ ತಂಡ 1,769 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನಿಯಾಯಿತು.

ಆತಿಥೇಯ ಚೀನಾ (1,763) ಎರಡನೇ ಸ್ಥಾನಕ್ಕೆ ಜಾರಿದರೆ, ದಕ್ಷಿಣ ಕೊರಿಯಾ (1,748) ಶೂಟರ್‌ಗಳು ಕಂಚಿನ ಪದಕ ಗೆದ್ದುಕೊಂಡರು. ಭಾರತ ತಂಡವು ಚಿನ್ನ ಗೆಲ್ಲುವ ಹಾದಿಯಲ್ಲಿ ಎಂಟು ಪಾಯಿಂಟ್ಸ್‌ಗಳ ಭಾರಿ ಅಂತರದಿಂದ ವಿಶ್ವ ದಾಖಲೆಯನ್ನೂ ತನ್ನದಾಗಿಸಿಕೊಂಡಿತು.

ವೈಯಕ್ತಿಕ ವಿಭಾಗದಲ್ಲಿ ಕೈತಪ್ಪಿದ ಚಿನ್ನ: ಐಶ್ವರಿ ಮತ್ತು ಸ್ವಪ್ನಿಲ್‌ ಅವರು 50 ಮೀ. ರೈಫಲ್‌ ತ್ರಿ ಪೊಸಿಷನ್‌ ಸ್ಪರ್ಧೆಯ ವೈಯಕ್ತಿಕ ವಿಭಾಗದ ಅರ್ಹತಾ ಸುತ್ತಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದು ಫೈನಲ್‌ ಪ್ರವೇಶಿಸಿದರೂ, ಚಿನ್ನ ಗೆಲ್ಲುವ ಅವಕಾಶ ಕಳೆದುಕೊಂಡರು.

22 ವರ್ಷದ ಐಶ್ವರಿ 459.7 ಪಾಯಿಂಟ್ಸ್‌ಗಳೊಂದಿಗೆ ಬೆಳ್ಳಿ ಪದಕ ಜಯಿಸಿದರೆ, ಚೀನಾದ ಡು ಲಿನ್‌ಶು (460.6) ಅವರು ಏಷ್ಯನ್‌ ಗೇಮ್ಸ್‌ ದಾಖಲೆಯೊಂದಿಗೆ ಚಿನ್ನಕ್ಕೆ ಗುರಿಯಿಟ್ಟರೆ, ಕಂಚಿನ ಪದಕ ಚೀನಾದವರೇ ಆದ ತಾಯಿನ್ ಜಿಯಾಮಿಂಗ್ (448.3) ಅವರ ಪಾಲಾಯಿತು.

ಫೈನಲ್‌ ಸುತ್ತಿನ ಅರ್ಧಹಾದಿಯವರೆಗೆ ಮುನ್ನಡೆಯಲ್ಲಿದ್ದ ಸ್ವಪ್ನಿಲ್ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡರು. ಒಂದು ಶಾಟ್‌ನಲ್ಲಿ ಅವರಿಗೆ ಕೇವಲ 7.6 ಪಾಯಿಂಟ್ಸ್‌ ಲಭಿಸಿದ್ದು, ಪದಕ ಕನಸಿಗೆ ಅಡ್ಡಿಯಾಗಿ ಪರಿಣಮಿಸಿತು. ಕೊನೆಯ ಎರಡು ಅವಕಾಶಗಳಲ್ಲಿ 10.5 ಮತ್ತು 10.1 ಪಾಯಿಂಟ್ಸ್‌ ಕಲೆಹಾಕಿದರಾದರೂ, ಅದು ಕಂಚಿನದೆಡೆಗೆ ಕೊಂಡೊಯ್ಯಲು ಸಾಕಾಗಲಿಲ್ಲ.

ಮೋದಿ ಅಭಿನಂದನೆ: ಏಷ್ಯನ್‌ ಕ್ರೀಡಾಕೂಟದಲ್ಲಿ ಪುರುಷರ 50 ಮೀ. 3 ಪೊಸಿಷನ್ಸ್ ವಿಭಾಗದಲ್ಲಿ ಚಿನ್ನ ಗೆದ್ದ ಐಶ್ವರಿ ಪ್ರತಾಪ್ ಸಿಂಗ್ ತೋಮರ್, ಸ್ವಪ್ನಿಲ್‌ ಕುಸಾಲೆ ಹಾಗೂ ಅಖಿಲ್‌ ಶೆರಾನ್‌ ಅವರಿದ್ದ ತಂಡವನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.

ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ತಂಡವನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.

ಕುಟುಂಬಸ್ಥರ ಸಂಭ್ರಮ: ಹರಿಯಾಣದ ಜಜ್ಜರ್‌ನಲ್ಲಿ ಪಲಕ್ ಗುಲಿಯಾ ಅವರ ಕುಟುಂಬ ಮತ್ತು ಸಂಬಂಧಿಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಕನ್ನಡತಿ ದಿವ್ಯಾಗೆ ಬೆಳ್ಳಿ

ಮಹಿಳೆಯರ 10 ಮೀ. ಏರ್ ಪಿಸ್ತೂಲ್‌ ವಿಭಾಗದಲ್ಲಿ ಭಾರತ ತಂಡ ಬೆಳ್ಳಿ ಗೆದ್ದುಕೊಂಡಿತು. ಇಶಾ ಸಿಂಗ್‌ (579 ಪಾಯಿಂಟ್ಸ್) ಪಲಕ್ ಗುಲಿಯಾ (577) ಮತ್ತು ಕನ್ನಡತಿ ದಿವ್ಯಾ ಟಿ.ಎಸ್‌ (575) ಅವರನ್ನೊಳಗೊಂಡ ತಂಡ 1731 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನ ಗಳಿಸಿತು.

ಚೀನಾದ ಶೂಟರ್‌ಗಳು 1 736 ಪಾಯಿಂಟ್ಸ್‌ ಕಲೆಹಾಕಿ ಏಷ್ಯನ್‌ ದಾಖಲೆಯೊಂದಿಗೆ ಚಿನ್ನ ಗೆದ್ದರೆ ಮೂರನೇ ಸ್ಥಾನ ಚೀನಾ ತೈಪೆ (1723) ತಂಡದ ಪಾಲಾಯಿತು. ಬೆಂಗಳೂರಿನ ದಿವ್ಯಾ ಅವರು ಅಜರ್‌ಬೈಜಾನ್‌ನಲ್ಲಿ ಮೇ ತಿಂಗಳಲ್ಲಿ ನಡೆದಿದ್ದ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT