ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಮಣ್ಣಿನ ಗಣಪನಿಗೆ ಕಾಡುತ್ತಿದೆ ಪಿಒಪಿ ವಿಘ್ನ

ಪಿಒಪಿ ಗಣೇಶ ತಯಾರಿಕೆ‌ ನಿಷೇಧ; ನೋಟಿಸ್‌ಗೆ ಸೀಮಿತ, ಕ್ರಮ ಕೈಕೊಳ್ಳದ ಅಧಿಕಾರಿಗಳು
Published 19 ಆಗಸ್ಟ್ 2024, 5:45 IST
Last Updated 19 ಆಗಸ್ಟ್ 2024, 5:45 IST
ಅಕ್ಷರ ಗಾತ್ರ

ಯಾದಗಿರಿ: ಗಣೇಶ ಚತುರ್ಥಿಯು ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆಗಳೂ ಜೋರಾಗುತ್ತಿವೆ. ಆದರೆ, ಮಣ್ಣಿನ ಗಣೇಶನಿಗೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ವಿಘ್ನವು ಕಾಡುತ್ತಿರುವುದು ವಿಪರ್ಯಾಸ.

ಸೆಪ್ಟೆಂಬರ್‌ 7ರಂದು ಗಣೇಶ ಚತುರ್ಥಿ ಇದ್ದು, ಯಾದಗಿರಿ, ಗುರುಮಠಕಲ್‌, ಶಹಾಪುರ, ಸುರಪುರ ಸೇರಿದಂತೆ ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಬಗೆಯ ಪಿಒಪಿ ಗಣೇಶ ಮೂರ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಯಾರಾಗುತ್ತಿವೆ. ಪಿಒಪಿ ವಿಗ್ರಹಗಳನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಫಲರಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಗಣೇಶ ಚತುರ್ಥಿ ಇನ್ನೆರಡು– ಮೂರು ದಿನಗಳು ಬಾಕಿ ಇರುವಾಗ ಸಭೆ ಕರೆಯುವ ಅಧಿಕಾರಿಗಳು ಪಿಒಪಿ ವಿಗ್ರಹ ಬಳಸದಂತೆ ‘ಕಟ್ಟುನಿಟ್ಟಿನ ಫಾರ್ಮಾನು’ ಹೊರಡಿಸಿ ಕೈತೊಳೆದುಕೊಂಡರೆ ಮತ್ತೆ ಮುಂದಿನ ವರ್ಷವೇ ಅವರಿಗೆ ‘ಕಟ್ಟುನಿಟ್ಟಿ’ನ ಮಾತು ಹೊರಡುವುದು ಎನ್ನುವುದು ಕೆಲ ಪರಿಸರ ಪ್ರೇಮಿಗಳ ವ್ಯಂಗ್ಯದ ನುಡಿ.

ಈಗಾಗಲೇ ದೊಡ್ಡ ಪೆಂಡಾಲುಗಳನ್ನು ಹಾಕಿಕೊಂಡು ರಾಜಾರೋಷವಾಗಿಯೇ ಪಿಒಪಿ ವಿಗ್ರಹಗಳ ತಯಾರಿ ನಡೆದಿದೆ. ಆದರೆ, ಅದು ಸಂಬಂಧಿತರಿಗೆ ಕಾಣಿಸಿಲ್ಲ. ಇದೊಂದು ಜಾಣ ಕುರುಡು. ಪಿಒಪಿ ತಯಾರಿಕೆ ನಡೆಸುವುದು ಎಲ್ಲಿ? ಯಾರು ತಯಾರಿಸುತ್ತಾರೆ ಎನ್ನುವ ಮಾಹಿತಿ ಗೊತ್ತಿದ್ದರೂ ಕ್ರಮವಹಿಸುವಲ್ಲಿ ಮೀನಮೇಷ ಎಣಿಸುವುದಕ್ಕೆ ಏನೆನ್ನಬೇಕೋ ತಿಳಿಯದು ಎಂದು ಸಾರ್ವಜನಿಕರು ಹೇಳುವ ಮಾತಾಗಿದೆ.

ಕೆಲ ಅಧಿಕಾರಿಗಳು ನಮಗಿನ್ನೂ ಮೇಲಿನಿಂದ ಯಾವುದೇ ನಿರ್ದೇಶನ ಬಂದಿಲ್ಲ ಎನ್ನುತ್ತಾರೆ. ಆದರೆ, ಪಿಒಪಿ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಹಸಿರು ಪೀಠ ಎಲ್ಲ ಬಗೆಯ ಪಿಒಪಿ ವಿಗ್ರಹಗಳ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ. ಇದು ವರ್ಷದ 365 ದಿನಕ್ಕೂ ಅನ್ವಯಿಸುತ್ತದೆ. ಮೇಲಿಂದ ಬರುವ ನಿರ್ದೇಶನಕ್ಕೆ ಕಾಯುವ ಜರೂರಿಲ್ಲ.

ಗುರುಮಠಕಲ್‌ ಪಟ್ಟಣದ ಕಾಕಲವಾರ ಕ್ರಾಸ್‌ನಿಂದ ಹಳೇ ತಹಶೀಲ್ದಾರ್ ಕಚೇರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಹೈದರಾಬಾದ್‌ ಹೆದ್ದಾರಿ ಪಕ್ಕದಲ್ಲೇ ಪಿಒಪಿ ವಿಗ್ರಹಗಳನ್ನು ದೊಡ್ಡ ಮಟ್ಟದಲ್ಲಿ ತಯಾರಿಸಲಾಗುತ್ತಿದೆ. ಪಿಒಪಿ ವಿಗ್ರಹ ತಯಾರಿಸುತ್ತಿರುವುದು ಎಲ್ಲರಿಗೂ ಗೊತ್ತು.

ಆದರೆ, ಅವರನ್ನಾರೂ ಪ್ರಶ್ನಿಸುವುದಿಲ್ಲ. ವಿಗ್ರಹಗಳ ಮಾರಾಟವೆಲ್ಲ ಪೂರ್ಣಗೊಂಡ ನಂತರವೇ ಅಧಿಕಾರಿಗಳು ಪರಿಶೀಲನೆ ಮಾಡಿ ಶಿಷ್ಟಾಚಾರದಂತೆ ನೋಟಿಸ್‌ ನೀಡುತ್ತಾರೆ. ಮುಂದೆ ಪಿಒಪಿ ತಯಾರಿಸದಂತೆ ತಾಕೀತು ಮಾಡುತ್ತಾರೆ. ಇದು ಕಳೆದ ವರ್ಷವೂ ನಡೆದಿತ್ತು. ಈ ವರ್ಷ ಮತ್ತೆ ತಯಾರಿಕೆ ಮಾಡುತ್ತಿದ್ದಾರೆ. ನೋಟಿಸ್‌ ನೀಡಿದ್ದರ ಲಾಭವೇನಾಯ್ತು? ಅಥವಾ ನೋಟಿಸ್‌ಗೆ ಬೆಲೆ ಏನು?.

ವಡಗೇರಾ ತಾಲ್ಲೂಕಿನ‌ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳನ್ನು ಬೇರೆಡೆಯಿಂದ ತಂದು ಪ್ರತಿಷ್ಠಾಪಿಸಲಾಗುತ್ತದೆ. ವಡಗೇರಾ ಪಟ್ಟಣದಲ್ಲಾಗಲಿ, ತಾಲ್ಲೂಕಿನ ವ್ಯಾಪ್ತಿಯಲ್ಲಾಗಲಿ ಪಿಒಪಿ ಗಣೇಶ ಮೂರ್ತಿಗಳನ್ನು ಯಾರು ತಯಾರಿಸುವುದಿಲ್ಲ. ನೆರೆಯ ತೆಲಂಗಾಣದ ನಾರಾಯಣಪೇಟ, ಯಾದಗಿರಿ ಇಲ್ಲವೇ ಸೊಲ್ಲಾಪುರದಿಂದ ಗಣೇಶ ಮೂರ್ತಿಗಳನ್ನು ತಂದು ಪ್ರತಿಷ್ಠಾಪಿಸಲಾಗುತ್ತದೆ.

‘ನಮ್ಮ ಭಾಗದಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸುವವರು ಯಾರೂ ಇಲ್ಲ. ನಾವು ಮೂರ್ತಿಗಳನ್ನು ಬೇರೆ ಕಡೆಯಿಂದ ತಂದು ಪ್ರತಿಷ್ಠಾಪಿಸುತ್ತೇವೆ’ ಎಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಮಿತಿಯ ಮುಖ್ಯಸ್ಥ ಶಿವಕುಮಾರ ಕೊಂಕಲ್ ಹೇಳುತ್ತಾರೆ.

ಪಿಒಪಿ ವಿಗ್ರಹಗಳ ತಯಾರಕರಿಗೆ ಕೆಲ ಸ್ಥಳೀಯ ಮುಖಂಡರ ಕೃಪಾಕಟಾಕ್ಷ ಇದ್ದೇ ಇರುತ್ತದೆ. ಅಧಿಕಾರಿಗಳು ನೋಟಿಸ್‌ ನೀಡಿದ ಬೆನ್ನಲ್ಲೇ ‘ಶಿಫಾರಸು’ ಆರಂಭ. ಪ್ರಭಾವ ಬೀರುವ ಅವರ ಕೌಶಲಕ್ಕೆ ಖಂಡಿತಾ ತಲೆಬಾಗಲೇಬೇಕು. ಪ್ರತಿ ವರ್ಷವೂ ಒಂದೇ ಸ್ಥಳದಲ್ಲಿ ವಿಗ್ರಹ ತಯಾರಿಸುತ್ತಿರುವುದನ್ನು ನೋಡಿದರೇ ಸಾಕು ಅವರ ಸಾಮರ್ಥ್ಯವನ್ನು ಅರಿಯಬಹುದು.

ಜಿಲ್ಲೆಯಲ್ಲಿ ಪರಿಸರ ಸ್ನೇಹಿ‌ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಜಾಗೃತಿ ಮೂಡಿಸಲಾಗುತ್ತಿದೆ. ಪಿಒಪಿ ತಯಾರಿಕೆ ಮಾಡುವವರಿಗೆ ಈಗಾಗಲೇ ನೋಟಿಸ್‌ ಜಾರಿ ಮಾಡಲಾಗಿದೆ.

-ಎಸ್‌.ರಮೇಶ ಪರಿಸರ ಅಧಿಕಾರಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ಪೊಲೀಸ್‌ ಇಲಾಖೆಯೊಂದಿಗೆ ಚರ್ಚಿಸಿ ಶೀಘ್ರವೇ ಸಭೆ ಆಯೋಜಿಸಲಾಗುವುದು. ಪಿಒಪಿ ವಿಗ್ರಹಗಳ ಬಳಕೆಯನ್ನು ತಡೆಯುವುದಕ್ಕೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ವಹಿಸಲಾಗುವುದು

-ನೀಲಪ್ರಭಾ ಬಬಲಾದ ಗುರುಮಠಕಲ್‌ ತಹಶೀಲ್ದಾರ್

ನಗರದ ಕೈಗಾರಿಕೆ ಪ್ರದೇಶದಲ್ಲಿ ಪಿಒಪಿ ಗಣೇಶ ಮೂರ್ತಿ ಸಿದ್ಧಪಡಿಸುತ್ತಿದ್ದ ಐದು ಕೇಂದ್ರಗಳಿಗೆ ಭೇಟಿ ನೀಡಿ ಸಾಚಾಗಳನ್ನು ವಶಪಡಿಸಿಕೊಂಡು ಬಂದಿದ್ದೇವೆ. ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಸ್ಥಾಪನೆಗೆ ಎಲ್ಲರೂ ಸಹಕಾರ ನೀಡಬೇಕು.

-ಹರೀಶ ಸಜ್ಜನಶೆಟ್ಟಿ ಪರಿಸರ ಎಂಜಿನಿಯರ್ ನಗರಸಭೆ ಶಹಾಪುರ

ಸುರಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಿಒಪಿ ಗಣಪ ಬಿಕರಿಯಾಗುತ್ತವೆ. ನೀರಿನಲ್ಲಿ ಮುಳುಗಿಸುವುದರಿಂದ ಜಲಮೂಲಗಳು ವಿಷಯುಕ್ತವಾಗುತ್ತವೆ. ಪರಿಸರ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು

- ಗೋಪಾಲ ಚಿನ್ನಾಕಾರ ಸಾಮಾಜಿಕ ಕಾರ್ಯಕರ್ತ

ಸಾರ್ವಜನಿಕರು ಪಿಒಪಿಯಿಂದ ತಯಾರಿಸಲಾದ ಯಾವುದೇ ವಸ್ತುಗಳನ್ನು ಕೊಂಡುಕೊಳ್ಳಬಾರದು. ಪರಿಸರಕ್ಕೆ ಮಾರಕವಾಗಿರುವ ಪಿಒಪಿ ನಮ್ಮ ಜೀವಕ್ಕೂ ಅಪಾಯಕಾರಿ

-ಶರಣಬಸವ ಚೆಟ್ಟಿ ಉಪನ್ಯಾಸಕ

‘ಅಧಿಕಾರಿಗಳನ್ನು ಅಮಾನತು ಮಾಡಿ’

‘ಪಿಒಪಿ ಬುನಾದಿ ಬಂದ್‌ ಮಾಡಬೇಕು. ಕಣ್ಣೇದುರಿಗೆ ನಡೆಯುತ್ತಿರುವ ಪರಿಸರ ಹಾನಿಯನ್ನು ಅಧಿಕಾರಿಗಳು ಕಂಡು ಕಾಣದಂತೆ ಇದ್ದಾರೆ. ಜಿಲ್ಲೆಯಲ್ಲಿ ಸರ್ಕಾರದ ಆದೇಶ ಪಾಲನೆ ಮಾಡುತ್ತಿಲ್ಲ. ಅಧಿಕಾರಿಗಳನ್ನು ಅಮಾನತು ಮಾಡಬೇಕು. ತನಿಖೆಗಾಗಿ ಮಾತ್ರ ಬರುವ ಅಧಿಕಾರಿಗಳು ನೋಟಿಸ್‌ಗೆ ಬೆಲೆ ಇತ್ತದಂತೆ ಮಾಡಿದ್ದಾರೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಂಜು ಅಳೆಗಾರ.

ಪಿಒಪಿ ಗಣೇಶ ಮೂರ್ತಿ ನಿಯಂತ್ರಣಕ್ಕೆ ಸರ್ಕಸ್

ಶಹಾಪುರ: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಹಾಗೂ ಇನ್ನಿತರ ವಸ್ತುಗಳಿಂದ ಸಿದ್ಧಪಡಿಸುವ ಗಣೇಶ ಮೂರ್ತಿಯನ್ನು ನಿಷೇಧಿಸುವಂತೆ ಪರಿಸರ ಇಲಾಖೆ ಹಾಗೂ ನಗರಸಭೆಯ ಸಹಯೋಗದಲ್ಲಿ ಸಾಕಷ್ಟು ಸರ್ಕಸ್ ನಡೆದಿದೆ. ಆದರೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಾರದೆ ಇರುವುದು ಅಧಿಕಾರಿಗಳಿಗೆ ಬೇಸರ ಉಂಟು ಮಾಡಿದೆ. ‘ನೆರೆ ರಾಜ್ಯದಿಂದ ಸಗಟು ವ್ಯಾಪಾರಸ್ಥರು ನೇರವಾಗಿ ಪಿಒಪಿಯ ಗಣೇಶ ಮೂರ್ತಿಯನ್ನು ತಂದು ಮಾರಾಟ ಮಾಡುತ್ತಾರೆ. ಇನ್ನೂ ಕೆಲವರು ನಗರ ವ್ಯಾಪ್ತಿಯಲ್ಲಿ ತಯಾರಿಕೆ ಮಾಡುತ್ತಿದ್ದಾರೆ. ನಿಯಂತ್ರಿಸಲು ಹೋದರೆ ನಮಗೆ ಉಲ್ಟಾ ದಮಕಿ ಹಾಕುತ್ತಾರೆ. ಮೊದಲು ನಾವು ಪರಿಸರ ಸ್ನೇಹಿ ಮಣ್ಣಿನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದರೆ ಅನುಕೂಲವಾಗುತ್ತದೆ ಎಂಬ ಮನೋಭಾವ ಜನತೆಯಲ್ಲಿ ಬರಬೇಕು’ ಎನ್ನುತ್ತಾರೆ ನಗರಸಭೆಯ ಅಧಿಕಾರಿಯೊಬ್ಬರು.

ಪರಿಸರ ಸ್ನೇಹಿ ಗಣೇಶ ಮೂರ್ತಿ ಜಾಗೃತಿ

ಸುರಪುರ: ಸ್ವದೇಶಿ ಜಾಗರಣ ಮಂಚ್‌ನ ಜಿಲ್ಲಾ ಸಮಿತಿ ಸಂಯೋಜಕರಾಗಿರುವ ಭೌತಶಾಸ್ತ್ರ ಉಪನ್ಯಾಸಕ ಶರಣಬಸವ ಚೆಟ್ಟಿ ಕಳೆದ 5 ವರ್ಷಗಳಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಶರಣಬಸವ ಅವರ ವೃತ್ತಿ ಗಣೇಶ ತಯಾರಿಕೆ ಅಲ್ಲ. ಪಿಒಪಿ ವಿಗ್ರಹಗಳಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಮನಗಂಡು ಎಲ್ಲೆಡೆ ಜಾಗೃತಿ ಮೂಡಿಸಿ ಕನಿಷ್ಠ ಲಾಭದ ದೃಷ್ಟಿಕೋನ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಬೆಳಗಾವಿ ಮತ್ತು ಕಲಬುರಗಿಗಳಿಂದ ಮೂರ್ತಿಗಳನ್ನು ತರಿಸುತ್ತಾರೆ. ಆಕಾರಕ್ಕೆ ಅನುಗುಣವಾಗಿ ₹50 ರಿಂದ ₹100 ಬೆಲೆಯ ಮೂರ್ತಿಗಳು ಲಭ್ಯವಿವೆ. ‘ಮೊದಲ ವರ್ಷ ಕೇವಲ 10 ರಿಂದ 15 ಮೂರ್ತಿಗಳು ಮಾರಾಟವಾಗಿದ್ದವು. ಕಳೆದ ವರ್ಷ 200 ಕ್ಕೂ ಹೆಚ್ಚು ಮೂರ್ತಿಗಳು ಮಾರಾಟವಾಗಿವೆ. ಇದು ಜನರಲ್ಲಿ ಮೂಡುತ್ತಿರುವ ಪರಿಸರ ಕಾಳಜಿಯ ದ್ಯೋತಕವಾಗಿದೆ’ ಎನ್ನುತ್ತಾರೆ ಅವರು. ‘ಪಿಒಪಿ ಮೂರ್ತಿಗಳಿಂದ ವಿಷಕಾರಿ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇದು ಪರಿಸರಕ್ಕೆ ಹಾನಿಕರ. ಮಣ್ಣಿನ ಗಣಪಗಳನ್ನು ನೀರಿನಲ್ಲಿ ಬಿಟ್ಟರೂ ಯಾವುದೇ ಹಾನಿ ಸಂಭವಿಸುವುದಿಲ್ಲ. ಮೂರ್ತಿ ತಯಾರಕರಿಗೂ ಉತ್ತೇಜನ ದೊರಕುತ್ತದೆ’ ಎನ್ನುತ್ತಾರೆ ಶರಣಬಸವ.

2017ರಲ್ಲೇ ನಿಷೇಧ

ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಮತ್ತು ಮೂರ್ತಿಗಳ ಆಕರ್ಷಣೆ ಹೆಚ್ಚಿಸಲೆಂದು ಬಳಸುವ ಬಣ್ಣಗಳಲ್ಲಿನ ರಾಸಾಯನಿಕಗಳು ಮತ್ತು ಸೀಸದ ಅಂಶ ಜಲಮೂಲಗಳು ಮತ್ತು ಮಣ್ಣಿನ ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಇದು ಜಲಚರಗಳ ಜೀವಕ್ಕೂ ಅಪಾಯ. ಈ ಕಾರಣದಿಂದ ಪಿಒಪಿ ಮೂರ್ತಿಗಳ ಬಳಕೆಯನ್ನು 2017ರಲ್ಲೇ ನಿಷೇಧಿಸಿದೆ. ಆದರೆ ನಿಯಮ ಪಾಲನೆ ಮಾತ್ರ ಆಗುತ್ತಿಲ್ಲ ಎಂದು ಪರಿಸರ ಪ್ರೇಮಿಗಳ ಆಕ್ರೋಶ.

ಪೂರಕ ಮಾಹಿತಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಎಂ.ಪಿ.ಚಪೆಟ್ಲಾ, ನಾಮದೇವ ವಾಟ್ಕರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT