ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ ಮತಕ್ಷೇತ್ರ : ಎಸ್‌ಟಿ ‘ಮೀಸಲು’ ಕ್ಷೇತ್ರದಲ್ಲಿ ‘ನಾಯಕ’ರ ಬಿಗಿ ಪಟ್ಟು!

ಸುರಪುರ: ರಾಜೂಗೌಡ, ವೆಂಕಟಪ್ಪನಾಯಕ ಕಾಯಂ ಎದುರಾಳಿಗಳು
Last Updated 9 ಫೆಬ್ರುವರಿ 2023, 20:00 IST
ಅಕ್ಷರ ಗಾತ್ರ

ಯಾದಗಿರಿ/ ಸುರಪುರ: ಸುರಪುರ ವಿಧಾನಸಭಾ ಕ್ಷೇತ್ರ (ಎಸ್.ಟಿ. ಮೀಸಲು) ರಾಜ್ಯದಲ್ಲಿ ಸದಾ ಗಮನ ಸೆಳೆಯುತ್ತಿರುವ ಅತಿ ಸೂಕ್ಷ್ಮ ಕ್ಷೇತ್ರಗಳಲ್ಲಿ ಒಂದು.

ಕಳೆದ ಎರಡು ದಶಕಗಳಿಂದ ರಾಜಾ ವೆಂಕಟಪ್ಪನಾಯಕ ಮತ್ತು ರಾಜೂಗೌಡ ಅವರೇ ಕಾಯಂ ಎದುರಾಳಿಗಳು. ಕ್ಷೇತ್ರ ಸುರಪುರ ತಾಲ್ಲೂಕಿನ ಕೆಂಭಾವಿ ಹೋಬಳಿ (ಶಹಾಪುರ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದೆ) ಹೊರತು ಪಡಿಸಿ ಸುರಪುರ ಮತ್ತು ಹುಣಸಗಿ ತಾಲ್ಲೂಕು ವಿಸ್ತಾರ ವ್ಯಾಪ್ತಿ ಹೊಂದಿದೆ. ಸುರಪುರದಿಂದ ನಾರಾಯಣಪುರ ಕಡೆಯ ಕೊನೆಯ ಹಳ್ಳಿಗಳು 80 ಕಿ.ಮೀ ದೂರದಲ್ಲಿವೆ. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಪ್ರಾಮುಖ್ಯತೆ ಹೆಚ್ಚು. ಕಾಂಗ್ರೆಸ್‌, ಬಿಜೆ‍ಪಿ ಪ‍ಕ್ಷಗಳು ಸಾಂಪ್ರದಾಯಿಕ ಎದುರಾಳಿಗಳು.

ನೂತನ ಹುಣಸಗಿ ತಾಲ್ಲೂಕಿನಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಹಲವು ಇಲಾಖೆಗಳ ಕಚೇರಿಗಳು ಇಲ್ಲ. ಕಾಲುವೆ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂಬ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಗುಳೆ ಸಮಸ್ಯೆ ನಿಂತಿಲ್ಲ. ನಿರುದ್ಯೋಗ ಸಮಸ್ಯೆ ನೀಗಿಸಲು ಕಾರ್ಖಾನೆ ಸ್ಥಾಪನೆ, ಉದ್ಯೋಗ ಸೃಷ್ಟಿಸುವಂತಹ ಕೆಲಸಗಳು ಆಗಬೇಕಿದೆ.

ಇಬ್ಬರು ನಾಯಕರೂ ಕಳೆದ ಒಂದು ವರ್ಷದಿಂದ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇಬ್ಬರೂ ತಮ್ಮ ಜನ್ಮದಿನಗಳಂದು ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಅನ್ನ ಸಂತರ್ಪಣೆ, ವಸ್ತ್ರದಾನ ನಡೆಸಿ ವ್ಯಾಪಕ ಪ್ರಚಾರ ನಡೆಸಿದ್ದರು. ಕ್ರಿಕೆಟ್, ಕಬ್ಬಡ್ಡಿ ಇತರ ಕ್ರೀಡೆಗಳನ್ನು ಆಯೋಜಿಸಿ ಮತದಾರರ ಗಮನ ಸೆಳೆಯುವ ಕಾರ್ಯ ನಡೆಸಿದ್ದಾರೆ.

ಮತದಾರರ ಜೊತೆಗೆ ನಿರಂತರ ಸಂಪರ್ಕ, ಹಳ್ಳಿಗಳಿಗೆ ಭೇಟಿ, ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಮತದಾರರಿಗೆ ಹಲವಾರು ಭರವಸೆಗಳನ್ನು ನೀಡುತ್ತಿದ್ದಾರೆ. ಪಕ್ಷದ ಸೇರ್ಪಡೆ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸುತ್ತಿದ್ದಾರೆ. ತಮ್ಮ ಪಕ್ಷದ ರಾಷ್ಟ್ರ, ರಾಜ್ಯ ನಾಯಕರ ದೊಡ್ಡ ದೊಡ್ಡ ಸಮಾರಂಭಗಳನ್ನು ಆಯೋಜಿಸಿ ಅತಿ ಹೆಚ್ಚು ಜನರನ್ನು ಸೇರಿಸುತ್ತಿದ್ದಾರೆ.

ಬಿಜೆಪಿಯಿಂದ ರಾಜೂಗೌಡ, ಕಾಂಗ್ರೆಸ್‌ನಿಂದ ರಾಜಾ ವೆಂಕಟಪ್ಪನಾಯಕ ಸ್ಪರ್ಧಿಸುವುದು ನಿಶ್ಚಿತ. 2023ರ ಚುನಾವಣೆಗೆ ವೇದಿಕೆಯನ್ನು ಇಬ್ಬರು ಭರ್ಜರಿಯಾಗಿಯೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ರಾಜಕೀಯ ಜಿದ್ದಾಜಿದ್ದಿ:

ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಕಾಂಗ್ರೆಸ್‌ನಿಂದ ಕಳೆದ ಬಾರಿ ಸೋತಿರುವ ರಾಜಾ ವೆಂಕಟಪ್ಪನಾಯಕ ಈ ಬಾರಿ ಗೆಲ್ಲಲೇ ಬೇಕು ಎಂದು ಹಠ ತೊಟ್ಟಿದ್ದಾರೆ. ಕಕ್ಕೇರಾ ಪುರಸಭೆಯನ್ನು ಬಿಜೆಪಿಯಿಂದ ಕಸಿದುಕೊಂಡು ಕಾಂಗ್ರೆಸ್‌ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಶಾಸಕ ರಾಜೂಗೌಡ ಅವರು ಈಚೆಗೆ ಕೋಡೆಕಲ್‌ಗೆ ಪ್ರಧಾನಿಯವರನ್ನು ಕರೆಸಿ ಒಂದು ಹಂತದ ಪ್ರಚಾರ ಮುಗಿಸಿದ್ದಾರೆ ಎಂದು ಕ್ಷೇತ್ರದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

ಫೆ.10ರಂದು ಸುರಪುರ ತಾಲ್ಲೂಕಿನ ದೇವತ್ಕಲ್‌ ಗ್ರಾಮದಲ್ಲಿ ಕಾಂಗ್ರೆಸ್‌ನ ಪ್ರಜಾಧ್ವನಿ ಬಸ್‌ ಯಾತ್ರೆ ಹಮ್ಮಿಕೊಂಡಿದ್ದು, ಬಿಜೆಪಿ, ಕಾಂಗ್ರೆಸ್‌ ಪಕ್ಷದವರು ಹಠಕ್ಕೆ ಬಿದ್ದಂತೆ ಒಂದೇ ಗ್ರಾಮದಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಕಳೆದ ವರ್ಷ ಬಿಜೆಪಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

2018 ರಲ್ಲಿ 9 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಜೆಪಿಯ ರಾಜೂಗೌಡ 1,04,426 ಮತಗಳನ್ನು ಪಡೆದು ಕಾಂಗ್ರೆಸ್‌ನ ರಾಜಾ ವೆಂಕಟಪ್ಪನಾಯಕ ಅವರನ್ನು 22,568 ಮತಗಳಿಂದ ಪರಾಭವಗೊಳಿಸಿದ್ದರು. ಈ ಬಾರಿ ಜೆಡಿಎಸ್, ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ, ಆಮ್ ಆದ್ಮಿ ಪಕ್ಷಗಳ ಅಭ್ಯರ್ಥಿಗಳು ಕಣಕ್ಕಿಳಿಯುವ ಸಾಧ್ಯತೆ ಇದೆ.

***

ವಾಲ್ಮೀಕಿ, ಕುರುಬ ಮತದಾರರೇ ಹೆಚ್ಚು

ವಾಲ್ಮೀಕಿ ಮತ್ತು ಕುರುಬ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ, ಪರಿಶಿಷ್ಟ ಜಾತಿ ಮತ್ತು ಮುಸ್ಲಿಂ ಮತದಾರರು ನಿರ್ಣಾಯಕರು. ಸಾಕ್ಷರತಾ ಪ್ರಮಾಣ ಶೇ 54 ರಷ್ಟು ಇದ್ದು, ಮತದಾರರು ಪ್ರಜ್ಞಾವಂತರಾಗಿದ್ದಾರೆ. ಮತದಾನ ಪ್ರಮಾಣ ಹೆಚ್ಚಿಸಲು ಸರ್ಕಾರ ಸೇರಿದಂತೆ ರಾಜಕೀಯ ಪಕ್ಷಗಳೂ ಕೆಲಸ ಮಾಡುತ್ತಿವೆ.

****

ಕಾರ್ಯಕರ್ತರು ತಟಸ್ಥ ಇಲ್ಲ

ಈ ಮತಕ್ಷೇತ್ರದಲ್ಲಿ ಕಾರ್ಯಕರ್ತರು ಯಾವುದಾದರೊಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಅಥವಾ ಕಾಂಗ್ರೆಸ್‌ನಲ್ಲಿ ಬಹುತೇಕ ಕಾರ್ಯಕರ್ತರಿದ್ದಾರೆ. ಉಳಿದ ಪ್ರಾದೇಶಿಕ ಪಕ್ಷಗಳಲ್ಲೂ ತೊಡಗಿಸಿಕೊಂಡಿದ್ದಾರೆ. ತಟಸ್ಥವಾಗಿ ಕಾರ್ಯಕರ್ತರು ಉಳಿದಿಲ್ಲ. ಇದರಿಂದ ಮನೆಗಳಲ್ಲಿ ಆಯಾ ಪಕ್ಷದ ಬಾವುಟ, ಮುಖಂಡರ ಭಾವಚಿತ್ರ ಇರುವುದು ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT