ಯಾದಗಿರಿ: ನಗರಸಭೆಯಲ್ಲಿ ಕೆಲ ತಿಂಗಳಿಂದ ಸದ್ದು ಮಾಡಿದ್ದ ಅಕ್ರಮ ಖಾತಾ ನಕಲು, ಸರ್ಕಾರಿ ಆಸ್ತಿ ಪರಭಾರೆಗೆ ಸಂಬಂಧಿಸಿದ ಜಿಲ್ಲಾಡಳಿತ ಸಂಬಂಧಿಸಿದವರ ವಿರುದ್ಧ ಅಮಾನತು ಶಿಕ್ಷೆ ಕೈಗೊಂಡಿದೆ.
ನಗರಸಭೆಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿಯನ್ನು ಪರಭಾರೆ ಮಾಡಿದ ಆರೋಪದ ಮೇಲೆ ನಗರಸಭೆಯ ಮೂವರು ಸಿಬ್ಬಂದಿಯನ್ನು ಸೇವೆಯಿಂದ ಅಮಾನತು, ಹೊರಗುತ್ತಿಗೆ ಕಂಪ್ಯೂಟರ್ ಆಪರೇಟರ್‌ನನ್ನು ಸೇವೆಯಿಂದ ತೆಗೆದು ಹಾಕಲಾಗಿದೆ.
ಏನಾಗಿತ್ತು:
ಯಾದಗಿರಿ ನಗರದ ಸರ್ವೆ ನಂ. 391/1.2ರಲ್ಲಿ ಸರ್ಕಾರಿ ಆಸ್ತಿಯಾಗಿದ್ದು ,ನಗರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ಆದರೆ, ನಗರಸಭೆ ಸಿಬ್ಬಂದಿ ಕಾನೂನು ಬಾಹಿರವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಾಗದ ಮೇಲೆ ಖಾತಾ ಹಾಗೂ ಮುಟೇಷನ್ ಮಾಡಿಕೊಟ್ಟು ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಹಿಂದಿನ ಪೌರಾಯುಕ್ತರಾಗಿದ್ದ ಸಂಗಮೇಶ ಉಪಾಸೆ ಸರ್ಕಾರಕ್ಕೆ ದೂರು ನೀಡಿದ್ದರು. ಅದರಂತೆ ಜಿಲ್ಲಾಡಳಿತ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತಂಡ ರಚನೆ ಮಾಡಿ ತನಿಖೆ ಮಾಡಲಾಗಿತ್ತು. ಉಪವಿಭಾಗಾಧಿಕಾರಿ ನೀಡಿದ ವರದಿಯನ್ನು ಆಧರಿಸಿ ನಗರಸಭೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಖೊಟ್ಟಿ ದಾಖಲೆ ಸೃಷ್ಟಿ:
ಸರ್ಕಾರಿ ಆಸ್ತಿಯನ್ನು ನಗರಸಭೆಯ ಸಿಬ್ಬಂದಿ ಕಾನೂನು ಬಾಹಿರವಾಗಿ 5 ಖಾತಾ ನಕಲು ಪಿಐಡಿ ಸೃಷ್ಟಿಸಿ ಹಾಗೂ ಇನ್ನೊಂದು ಖಾತಾ ನಕಲು 3 ಜನರ ಹೆಸರಿನಲ್ಲಿ ಮನೆ ನಂ. 5-1-409/280 ಪಿಐಡಿ ಸೃಷ್ಟಿಸಿ ಸೋನಿ ಗೌತಮ ಎಂಬ ಖಾಸಗಿ ವ್ಯಕ್ತಿಗೆ 2022ರ ಮೇ 24ರಂದು ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗಿತ್ತು.
ಮನೆ ಸಂಖ್ಯೆ 5-1-408/23 ಎ., 5-1-408/24 ಎ, 5-1-408/25 ಎ, 5-1-408/26 ಎ, 5-1-409/27ಎ ಮತ್ತು 5-1–408/28ಎ ರ ಆನ್ ಲೈನ್ ಖಾತಾ ಫಾರಂ-3 ನೀಡಿದ ಕಡತ ದಾಖಲೆಗಳನ್ನು ಪರಿಶೀಲಸಿದಾಗ ನಗರಸಭೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಅಧಿಕಾರಿ, ಸಿಬ್ಬಂದಿ ಬೈ ನಂಬರ್ ನೀಡಿ ಖೊಟ್ಟಿ ಸಹಿಯ ಕರ ನಿರ್ಧರಣಾ ಆದೇಶದ ಮೇಲೆ ಮತ್ತು ಕೈ ಬರಹದ ಖಾತಾ ನಕಲುಗಳ ಆಧಾರದ ಮೇಲೆ ಈ ಆಸ್ತಿಗಳಿಗೆ ಆನ್ ಲೈನ್ ಖಾತಾ/ನಮೂನೆ-3 ವಿತರಿಸಿರುವುದು ತನಿಖೆಯಿಂದ ಕಂಡು ಬಂದಿದೆ.
ಕಾರಣ ಏನು:
ನಗರಸಭೆ ಸಿಬ್ಬಂದಿ ನಿಯಮಬಾಹಿರವಾಗಿ ಖಾತಾ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿ ತಮಗೆ ವಹಿಸಲಾದ ಕರ್ತವ್ಯಗಳನ್ನು ನಿಯಮನುಸಾರವಾಗಿ ಪಾಲಿಸದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿ ಸರ್ಕಾರಿ ನೌಕರರಿಗೆ ಸಲ್ಲದ ರೀತಿಯಲ್ಲಿ ವರ್ತಿಸಿ ಸರ್ಕಾರಿ ಕೆಲಸವನ್ನು ನಿರ್ವಹಿಸುವಲ್ಲಿ ನಿರೀಕ್ಷ್ಯತನ ತೋರಿದ್ದರಿಂದ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಅವರ ವಿರುದ್ಧ ವಿವರಿಸಲಾದ ಆರೋಪಗಳ ಕರೆದು ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸುವುದು ಸೂಕ್ತವೆಂದು ತಿಳಿದು ಬಂದಿದ್ದರಿಂದ ಅಮಾನತು ಮಾಡಿ ಆದೇಶಿಸಲಾಗಿದೆ.
ನಗರಸಭೆಯಲ್ಲಿ ಅಕ್ರಮ ತಿಳಿದು ಬಂದ ನಂತರ ಮೊದಲುಗೊಂಡು ಹಲವಾರು ವರದಿಗಳನ್ನು ‘ಪ್ರಜಾವಾಣಿ’ ವರದಿ ಮಾಡಿತ್ತು. ಈ ಮೂಲಕ ಜಿಲ್ಲಾಡಳಿತ, ಅಧಿಕಾರಿ, ಸಿಬ್ಬಂದಿಯನ್ನು ವರದಿಯ ಮೂಲಕ ಎಚ್ಚರಿಸಿ ತನಿಖಾ ತಂಡ ರಚಿಸುವಂತೆ ಮಾಡಲಾಗಿತ್ತು. ಈಗ ತನಿಖಾ ತಂಡದ ಆಧಾರದ ಮೇಲೆ ಸಿಬ್ಬಂದ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
Quote - ಯಾದಗಿರಿ ನಗರಸಭೆಯಲ್ಲಿ ಅಕ್ರಮ ಖಾತಾ ನಕಲುಗೆ ಸಂಬಂಧಿಸಿ ನಮ್ಮ ವ್ಯಾಪ್ತಿಯ ಅಧಿಕಾರ ಬಳಸಿ ಮೂವರನ್ನು ಸೇವೆಯಿಂದ ಅಮಾನತು ಹೊರಗುತ್ತಿಗೆ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಮೂಲ ಲೋಕೋಪಯೋಗಿ ಇಲಾಖೆಯ ಹಿಂದಿನ ಪೌರಾಯುಕ್ತರ ವಿರುದ್ಧ ಚೀಪ್ ಎಂಜಿನಿಯರ್‌ಗೆ ಪತ್ರ ಬರೆಯಲಾಗಿದೆ. ಇಲ್ಲಿಂದ ವರ್ಗಾವಣೆಯಾದ ಅಧಿಕಾರಿ ಸಿಬ್ಬಂದಿ ವಿರುದ್ಧವೂ ಪೌರಾಡಳಿತ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಸರ್ಕಾರಿ ಆಸ್ತಿಯನ್ನು ಮರಳಿ ಪಡೆಯಲು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಡಾ.ಸುಶೀಲಾ ಬಿ ಯಾದಗಿರಿ ಜಿಲ್ಲಾಧಿಕಾರಿ
ಯಾರು ಅಮಾನತು ಆಗಿರುವುದು? ಯಾದಗಿರಿ ನಗರಸಭೆ ಹಿಂದಿನ ದ್ವಿತೀಯ ದರ್ಜೆ ಸಹಾಯಕಿ ಶಿವಲೀಲಾ ಕರ ವಸೂಲಿಗಾರ ಚನ್ನಪ್ಪ ಹಿಂದಿನ ವಿಷಯ ನಿರ್ವಾಹಕ ಹಣಮಂತ ಅಶನಾಳ ಹೊರಗುತ್ತಿಗೆ ಕಂಪ್ಯೂಟರ್ ಆಪರೇಟರ್ ಕೃಷ್ಣಪ್ಪ ಅಮಾನತು ಆಗಿದ್ದಾರೆ. ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶಿಸಿದ್ದರೆ ಹೊರಗುತ್ತಿಗೆ ನೌಕರನನ್ನು ಸೇವೆಯಿಂದ ತೆಗೆದು ಹಾಕಲಾಗಿದೆ. ಹಿಂದಿನ ದ್ವಿತೀಯ ದರ್ಜೆ ಸಹಾಯಕಿ ಶಿವಲೀಲಾ ಅವರನ್ನು ಕೆಂಭಾವಿ ಪುರಸಭೆಗೆ ಕರ ವಸೂಲಿಗಾರ ಚನ್ನಪ್ಪ ಅವರನ್ನು ಕಕ್ಕೇರಾ ಪುರಸಭೆಗೆ ಹಿಂದಿನ ವಿಷಯ ನಿರ್ವಾಹಕ ಹಣಮಂತ ಅಶನಾಳ ಅವರನ್ನು ಅಮಾನತುಗೊಳಿಸಿ ಶಹಾಪುರ ನಗರಸಭೆಗೆ ಲೀನ್ ವರ್ಗಾವಣೆಗೊಳಿಸಲಾಗಿದೆ.
6 ಜನರ ವಿರುದ್ಧ ಕ್ರಮಕ್ಕೆ ಶಿಫಾರಸು
ಇದರ ಜೊತೆಗೆ 1310 ಅಕ್ರಮ ಖಾತಾ ನಕಲುಗೆ ಸಂಬಂಧಿಸಿದಂತೆ ಯಾದಗಿರಿ ನಗರಸಭೆ ಹಿಂದಿನ ಪೌರಾಯುಕ್ತರು ಸಿಬ್ಬಂದಿ ವಿರುದ್ಧ ಆಯಾ ಇಲಾಖೆ ಮುಖ್ಯಸ್ಥರಿಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಡಾ.ಸುಶೀಲಾ ಅವರು ಶಿಫಾರಸು ಮಾಡಿದ್ದಾರೆ. ಮೂವರು ಪೌರಾಯುಕ್ತರು ಎಫ್‌ಡಿಎ ಕಂದಾಯ ನಿರೀಕ್ಷಕರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ಈ ಮೂಲಕ ಆ ಅಧಿಕಾರಿಗಳಲ್ಲಿ ಶಿಫಾರಸು ನಡುಕ ಹುಟ್ಟಿಸಿದೆ.
ವರದಿ ಒಪ್ಪದ ಜಿಲ್ಲಾಡಳಿತ! ಅಕ್ರಮ ಖಾತಾ ನಕಲುಗೆ ಸಂಬಂಧಿಸಿದಂತೆ ಶಹಾಪುರ ಸುರಪುರ ನಗರಸಭೆ ಅಧಿಕಾರಿಗಳು ನೀಡಿರುವ ವರದಿಯನ್ನು ಜಿಲ್ಲಾಡಳಿತ ಒಪ್ಪಿಲ್ಲ. ಬದಲಾಗಿ ಕ್ರಮಕ್ಕೆ ಶಿಫಾರಸು ಮಾಡಿರುವುದು ಅಧಿಕಾರಿಗಳನ್ನು ಪೇಚಿಗೆ ಸಿಲುವಂತೆ ಮಾಡಿದೆ. ಸರ್ಕಾರಿ ಆಸ್ತಿಯನ್ನು ಖಾತಾ ಮಾಡಲು ಮಾತ್ರ ಅವಕಾಶವಿದ್ದು ಖಾಸಗಿಯವರಿಗೆ ಶುಲ್ಕ ಭರಿಸಿಕೊಂಡು ನೀಡಬೇಕು. ಆದರೆ ಅಧಿಕಾರಿಗಳು ತಪ್ಪು ಮಾಡಿಲ್ಲ ಎನ್ನುವ ರೀತಿಯಲ್ಲಿ ತನಿಖಾ ತಂಡ ವರದಿ ನೀಡಿತ್ತು ಎಂದು ಬಲ್ಲ ಮೂಲಗಳು ತಿಳಿಸಿವೆ. ಹೀಗಾಗಿ ವರದಿಯನ್ನು ಒಪ್ಪದೇ ಅಧಿಕಾರಿ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ ಶಿಸ್ತು ಕ್ರಮ ಕ್ರಮಕ್ಕೆ ಆಯಾ ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.