ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮೀಸಲು ಕ್ಷೇತ್ರಗಳಲ್ಲಿ ಟೆಂಪಲ್‌ ರನ್‌ ಜೋರು

ಮಠ, ದೇಗುಲ ದರ್ಶನ‍ ಪಡೆದ ರಾಯಚೂರು, ಕಲಬುರಗಿ ಲೋಕಸಭೆ ಅಭ್ಯರ್ಥಿಗಳು
Published 2 ಏಪ್ರಿಲ್ 2024, 4:48 IST
Last Updated 2 ಏಪ್ರಿಲ್ 2024, 4:48 IST
ಅಕ್ಷರ ಗಾತ್ರ

ಯಾದಗಿರಿ: ಎರಡು ಲೋಕಸಭೆ ಕ್ಷೇತ್ರಗಳಿಗೆ ಹಂಚಿಕೆಯಾಗಿರುವ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಎರಡು ಪಕ್ಷದ ಅಭ್ಯರ್ಥಿಗಳು ಜಿಲ್ಲೆಗೆ ಭೇಟಿ ನೀಡಿದ ಮೊದಲ ದಿನವೇ ಮಠ, ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.

ರಾಯಚೂರು ಲೋಕಸಭೆ ಕ್ಷೇತ್ರ ಪರಿಶಿಷ್ಟ ಪಂಗಡ, ಕಲಬುರಗಿ ಲೋಕಸಭೆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಮೀಸಲಾಗಿರುವ ಕ್ಷೇತ್ರಗಳಲ್ಲಿ ಟೆಂಪಲ್‌ ರನ್‌ ಜೋರಾಗಿದೆ. ಇತ್ತಿಚಿಗೆ ಜಿಲ್ಲೆಗೆ ಭೇಟಿ ನೀಡಿದ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ಆಯಾ ಕ್ಷೇತ್ರದ ಪ್ರಮುಖ ಮಠ, ದೇವಸ್ಥಾನಗಳಲ್ಲಿ ತಮ್ಮ ಹರಿಕೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

ಕಾಂಗ್ರೆಸ್‌ ಮತಬೇಟೆ: ರಾಯಚೂರು, ಕಲಬುರಗಿ ಲೋಕಸಭೆ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಣೆಯಾದ ಬಳಿಕ ಮೊದಲ ಬಾರಿಗೆ ಕ್ಷೇತ್ರಕ್ಕೆ ಹಾಗೂ ಯಾದಗಿರಿ ಜಿಲ್ಲೆಗೆ ಭೇಟಿ ನೀಡಿರುವ ಜಿ.ಕುಮಾರ ನಾಯಕ, ರಾಧಾಕೃಷ್ಣ ಅವರು ಕ್ಷೇತ್ರದ ಪ್ರಮುಖರನ್ನು ಸಂಪರ್ಕಿಸಿ ಚುನಾವಣೆಗೆ ಬೆಂಬಲ ಕೋರಿದ್ದಾರೆ. ಅಲ್ಲದೇ ಕಾರ್ಯಕರ್ತ ಸಭೆ ನಡೆಯುವ ಮೂಲಕ ಮೊದಲ ಹಂತದಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಅವರು ಯಾದಗಿರಿ ತಾಲ್ಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಲೋಕಸಭಾ ಚುನಾವಣೆ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಕಾರ್ಯಕರ್ತರ ಸಭೆಯ ನಂತರ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠಕ್ಕೆ ಭೇಟಿ ನೀಡಿ, ಪೀಠಾಪತಿ ಗಂಗಾಧರ ಶಿವಾಚಾರ್ಯರ ಆಶೀರ್ವಾದ ಪಡೆದಿದ್ದಾರೆ. ಕಲುಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸೂಗೂರಿನ ಭೋಜಲಿಂಗೇಶ್ವರ ಮಠಕ್ಕೆ ಭೇಟಿ ನೀಡಿ ಹಿರಗಪ್ಪ ತಾತನವರ ಹಾಗೂ ನಾಲವಾರದ ಕೋರಿಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಿ ತೋಟೆಂದ್ರ ಶಿವಾಚಾರ್ಯರ ಆಶೀರ್ವಾದ ಪಡೆದಿದ್ದಾರೆ. ಶಾಜಿ ಶಾಹ್ ದರ್ಗಾಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ರಾಧಾಕೃಷ್ಣ ದೊಡ್ಡಮನಿ ಕಲಬುರಗಿಯಿಂದ ನೇರವಾಗಿ ಸೇಡಂ ಮೂಲಕ ಮೋತಕಪಲ್ಲಿಯಲ್ಲಿರುವ ಬಲಭೀಮ ದೇವಸ್ಥಾನಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಜೊತೆಗೂಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ಗುರುಮಠಕಲ್‌ನ ಖಾಸಾ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಅಲ್ಲಿನ ಶ್ರೀಗಳಾದ ಗುರುಶಾಂತವೀರ ಮುರಘ ರಾಜೇಂದ್ರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.

ಬಿಜೆ‍ಪಿ ಅಭ್ಯರ್ಥಿಗಳಿಂದ ಭೇಟಿ: ರಾಯಚೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ಸುರಪುರ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ) ಸುರಪುರ ಮತಕ್ಷೇತ್ರದ ವಿವಿಧ ಮಠ, ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನಾರ್ಶೀವಾದ ಪಡೆದಿದ್ದಾರೆ.

ಹುಣಸಗಿ ತಾಲ್ಲೂಕಿನ ಅಗತೀರ್ಥ ಗ್ರಾಮದ ಹಾಲುಮತ ಗುರುಪೀಠದ ಸರೂರ ಮಠಕ್ಕೆ ರಾಯಚೂರು ಲೋಕಸಭಾ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಹಾಗೂ ಸುರಪುರ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ) ಭೇಟಿ ನೀಡಿ ರೇವಣಸಿದ್ಧೇಶ್ವರ ಶಾಂತಮಯ ಸ್ವಾಮೀಜಿ ಆಶೀರ್ವಾದ ಪಡೆದರು.

ಕಕ್ಕೇರಾ ಆರಾಧ್ಯ ದೇವ ಸೋಮನಾಥೇಶ್ವರ ದೇವಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ನಂತರ ದೇವಸ್ಥಾನಗಳ ಅರ್ಚಕ ನಂದಣ್ಣಪ್ಪ ಮುತ್ಯಾ ಅವರ ಆಶೀರ್ವಾದ ಪಡೆದರು.

ಪ್ರಚಾರ ಆರಂಭಿಸದ ಬಿಜೆಪಿ

ಜಿಲ್ಲೆಯ ನಾಲ್ಕು ಮತಕ್ಷೇತ್ರಗಳಲ್ಲಿ ಈಗಾಗಲೇ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ನೆಪದಲ್ಲಿ ಕಾಂಗ್ರೆಸ್‌ ಪ್ರಚಾರ ಕಾರ್ಯ ಆರಂಭಿಸಿದ್ದು ಬಿಜೆಪಿ ಇನ್ನೂ ಪ್ರಚಾರಕ್ಕೆ ಚಾಲನೆ ನೀಡಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಜಿ.ಕುಮಾರ ನಾಯಕ ಅವರು ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಒಳಪಡುವ ಯಾದಗಿರಿ ಸುರಪುರ ಶಹಾಪುರ ಮತಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಕಲಬುರಗಿ ಲೋಕಸಭೆ ವ್ಯಾಪ್ತಿಯ ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣ ಅವರು ಕಾರ್ಯಕರ್ತರ ಸಭೆ ನಡೆಸಿದ್ದಾರೆ. ರಾಯಚೂರು ಲೋಕಸಭೆ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಈಚೆಗೆ ಹುಣಸಗಿ ಮಂಡಲ ಪದಗ್ರಹಣ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ಇತ್ತ ಸುಳಿವು ಇಲ್ಲ. ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಬಿ.ವಿ.ನಾಯಕ ತಿಪ್ಪರಾಜು ಅವರು ಪ್ರತ್ಯೇಕ ಸಭೆಗಳನ್ನು ಮಾಡಿದ್ದು ಹಾಲಿ ಸಂಸದರೂ ಇನ್ನೂ ಪ್ರಚಾರ ಆರಂಭಿಸಲು ಇದು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT