ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ನಗರ ಪೊಲೀಸ್ ಠಾಣೆ ಕೆಡವಲು ಟೆಂಡರ್‌!

ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾದ ಕಟ್ಟಡ, ಬ್ರಿಟಿಷರ್‌ ಕಾಲದಲ್ಲಿ ಕಲೆಕ್ಟರ್‌ ಕಚೇರಿ
Last Updated 5 ಅಕ್ಟೋಬರ್ 2021, 2:45 IST
ಅಕ್ಷರ ಗಾತ್ರ

ಯಾದಗಿರಿ: ನಗರ ಪೊಲೀಸ್‌ ಠಾಣೆಯನ್ನು ನೆಲಸಮಗೊಳಿಸಿ ಅದೇ ಸ್ಥಳದಲ್ಲಿ ₹2 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ಇತಿಹಾಸ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಕಟ್ಟಡ ಶಿಥಿಲಾವಸ್ಥೆಯನ್ನೇ ನೆಪ ಮಾಡಿಕೊಂಡಿರುವ ಪೊಲೀಸ್‌ ಇಲಾಖೆ ಅದನ್ನು ದುರಸ್ತಿ ಮಾಡುವ ಕೆಲಸ ಮಾಡದೇ ಕಟ್ಟಡವನ್ನೇ ನೆಲಸಮಗೊಳಿಸುವುದು ಎಷ್ಟು ಸರಿ ಎನ್ನುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

‘ನಗರ ಪೊಲೀಸ್ ಠಾಣೆಯ ಕಟ್ಟಡವನ್ನು ನೆಲಸಮಗೊಳಿಸಲು ಮತ್ತು ಅವುಗಳಲ್ಲಿನ ಸಾಮಗ್ರಿ ಕಬ್ಬಿಣ, ಕಟ್ಟಿಗೆ, ಕಲ್ಲುಗಳನ್ನು ವಿಲೇವಾರಿ ಮಾಡಲು ಅಕ್ಟೋಬರ್ 12 ರಂದು ಬೆಳಿಗ್ಗೆ 11 ಗಂಟೆಗೆ ಡಿಎಆರ್ ಕಚೇರಿಯ ಅವರಣದಲ್ಲಿ ಬಹಿರಂಗ ಹರಾಜು ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಅವರು ತಿಳಿಸಿದ್ದಾರೆ. ಇತಿಹಾಸ ಪ್ರಿಯರ ಕೆಂಗೆಣ್ಣಿಗೆ ಗುರಿಯಾಗಿದೆ.

ಆಸಕ್ತ ಹರಾಜುದಾರರು ಬಹಿರಂಗ ಹರಾಜಿನಲ್ಲಿ ಭಾಗವಹಿಸಲು ತಮ್ಮ ಸಂಪೂರ್ಣ ವಿಳಾಸವನ್ನು ಬರೆದಿರುವ ಚೀಟಿಯೊಂದಿಗೆ ಹರಾಜಿಗೆ ಒಂದು ಗಂಟೆ ಮುಂಚಿತವಾಗಿ ₹10 ಸಾವಿರ ಪಾವತಿಸಬೇಕು. ಹೆಚ್ಚಿನ ಮಾಹಿತಿ ಬೇಕಾದ್ದಲ್ಲಿ ಕಟ್ಟಡ ಶಾಖೆ, ಜಿಲ್ಲಾ ಪೊಲೀಸ್ ಕಚೇರಿಗೆ ಖುದ್ದಾಗಿ ಸಂಪರ್ಕಿಸಲು ತಿಳಿಸಿದ್ದಾರೆ.

‘ಬ್ರಿಟಿಷರ ಕಾಲದಲ್ಲಿ ಈಗಿನ ನಗರ ಪೊಲೀಸ್‌ ಠಾಣೆ ಕಲೆಕ್ಟರ್‌ ಆಫೀಸ್‌ ಆಗಿತ್ತು. ತೆರಿಗೆ ಸಂಗ್ರಹಿಸುವ ಕೆಲಸವನ್ನು ಆ ಅಧಿಕಾರಿ ಮಾಡುತ್ತಿದ್ದರು. ಇದರಿಂದ ಬ್ರಿಟಿಷರ ಶೈಲಿಯಲ್ಲಿ ಇದನ್ನು ರೂಪಿಸಲಾಗಿದೆ. ಇಂಥ ಕಟ್ಟಡವನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ. ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಇಂಥ ಐತಿಹಾಸಿಕ ಮಹತ್ವವುಳ ಕಟ್ಟಡವನ್ನು ನೆಲಸಮ ಮಾಡಲು ಬಿಡಬಾರದು. ಕಟ್ಟಡದಲ್ಲಿ ಉಪಯೋಗಿಸಿರುವ ಬರ್ಮಾ ಕಟ್ಟಿಗೆಗಳಿಗೆ ಲಕ್ಷಾಂತರ ರೂಪಾಯಿ ಬೆಳೆಬಾಳುವ ಕಟ್ಟಿಗೆಗಳಾಗಿವೆ. ಇವುಗಳನ್ನು ಸಂರಕ್ಷಿಸಬೇಕಾಗಿದೆ. ಅರಕ್ಷಕರೆ ತೆರವಿಗೆ ಮುಂದಾದರೆ ಹೇಗೆ’ ಎಂದು ಇತಿಹಾಸ ತಜ್ಞ ಭಾಸ್ಕರರಾವ್ ಮುಡಬೂಳ ಪ್ರಶ್ನಿಸುತ್ತಾರೆ.

‘ನಗರದಲ್ಲಿ ಸರ್ಕಾರಿ ಜಾಗ ಬೇಕಾದಷ್ಟು ಇದೆ. ಅದು ಬಿಟ್ಟು ಆ ಕಟ್ಟಡವನ್ನು ಕೆಡವಿ ಅದೇ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ನಮ್ಮ ವಿರೋಧವಿದೆ. ಅಧಿಕಾರಿಗಳು ಜಾಗ ಪರಿಶೀಲನೆ ಮಾಡಿ ಗುರುತಿಸಲಿ. ಅದು ಬಿಟ್ಟು ಐತಿಹಾಸಿಕ ತಾಣವಾದ ನಗರ ಠಾಣೆ ಕಟ್ಟಡವನ್ನು ನೆಲಸಮಗೊಳಿಸಿದರೆ ಹೇಗೆ. ಅಧಿಕಾರಿಗಳು ಇತ್ತ ಗಮನಹರಿಸಿ ಟೆಂಡರ್‌ ವಾಪಸ್‌ ಪಡೆಯಲಿ ಎನ್ನುತ್ತಾರೆ’ ಅವರು.

ನೆಲಸಮಗೊಳಿಸಬೇಡಿ:ಯಾದಗಿರಿ ನಗರ ಪೊಲೀಸ್ ಠಾಣೆ ಪಾರಂಪರಿಕ ಕಟ್ಟಡವಾಗಿದ್ದು, ಇದನ್ನು ನೆಲಸಮಗೊಳಿಸದೇ ಸರ್ಕಾರಿ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಬೇಕು ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿ ಎಸ್‌ಪಿಗೆ ಮನವಿ ಪತ್ರ ಸಲ್ಲಿಸಲಾಗಿದೆ.

ಈ ಕಟ್ಟಡವು ಹೈದರಾಬಾದ್‌ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಭಾಗವಹಿಸಿದ್ದ ಅನೇಕ ಸ್ವಾತಂತ್ರ್ಯ ಯೋಧರನ್ನು ಬಂಧಿಸಿಟ್ಟ ಸೆರೆಮನೆಯೂ ಆಗಿತ್ತು. ಇತಿಹಾಸ ಅರಿತು ಕಟ್ಟಡವನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

***

ಹೋರಾಟಗಾರರ ಬಂಧನವಿಟ್ಟ ಜಾಗ

ಹೈದರಾಬಾದ್‌ ಕರ್ನಾಟಕ ವಿಮೋಚನೆಗಾಗಿ ಸೆಣೆಸಾಡಿದ ಜಿಲ್ಲೆಯ ಹೋರಾಟಗಾರರನ್ನು ಇದೇ ನಗರ ಪೊಲೀಸ್‌ ಠಾಣೆಯಲ್ಲಿ ಬಂಧಿಸಿ ಇಡಲಾಗಿತ್ತು ಎನ್ನುವುದು ಇತಿಹಾಸ.

ಬ್ರೀಟಿಷರ ಕಾಲದಲ್ಲಿ ಜಿಲ್ಲಾಧಿಕಾರಿ ಕಚೇರಿ, ನಿಜಾಮರ ಕಾಲದಲ್ಲಿ ಜೈಲು ಆಗಿ ಪರಿರ್ತನೆಯಾಗಿತ್ತು. ಇಂಥ ಸ್ಥಳದಲ್ಲಿ ಇರುವ ಕಟ್ಟಡವನ್ನು ಉಳಿಸಿಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಹೋರಾಟಗಾರಗಾರರಾದ ಈಶ್ವರಲಾಲ್‌ ಭಟ್ಟಡ್‌, ಕೂಲೂರು ಮಲ್ಲಪ್ಪ, ವಿಶ್ವನಾಥರಡ್ಡಿಮುದ್ನಾಳ, ಜಗನ್ನಾಥ ರಾವ್‌ ಚಂಡ್ರಕಿ ಸೇರಿದಂತೆ ಹಲವಾರು ಹೋರಾಟಗಾರನ್ನು ಇದೇ ಸ್ಥಳದಲ್ಲಿ ಸೆರೆ ಹಿಡಿದು ಇಲ್ಲಿ ಇಡಲಾಗಿತ್ತು. ಅಲ್ಲದೇ ನಗರದ ಗಾಂಧಿ ವೃತ್ತದ ಹೃದಯ ಭಾಗದಲ್ಲಿ ಕಟ್ಟಡವಿದ್ದರಿಂದ ಇದನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕು ಎನ್ನುವುದು ಇತಿಹಾಸ ಪ್ರಿಯರ ಆಗ್ರಹವಾಗಿದೆ.

***

ಬ್ರಿಟಿಷ್‌ ಮತ್ತು ಹೈದರಬಾದ್‌ ನಿಜಾಮರ ಕಾಲದಲ್ಲಿ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾದ ಕಟ್ಟಡವನ್ನು ನೆಲಸಮಗೊಳಿಸಿದರೆ ಮುಂದಿನ ಪೀಳಿಗಗೆ ಇತಿಹಾಸವೇ ತಿಳಿಯುವುದಿಲ್ಲ

- ಭಾಸ್ಕರರಾವ್ ಮುಡಬೂಳ, ಇತಿಹಾಸ ತಜ್ಞ

***

ನಗರಸಭೆ ಪೌರಾಯುಕ್ತರಿಗೆ ಈಗಾಗಲೇ ಸರ್ಕಾರಿ ಜಾಗವನ್ನು ಗುರುತಿಸಲು ಸೂಚಿಸಲಾಗಿದೆ. ಸಿಕ್ಕರೆ ನಗರ ಠಾಣೆಯನ್ನು ಹಾಗೇಯೇ ಉಳಿಸಿಕೊಳ್ಳಲಾಗುವುದು

- ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

***

ನಗರ ಪೊಲೀಸ್‌ ಠಾಣೆ ಕಟ್ಟಡವನ್ನು ಯಾವುದೇ ಕಾರಣಕ್ಕೂ ನೆಲಸಮಗೊಳಬಾರದು. ಬೇರೆ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಲಿ. ಇಲ್ಲದಿದ್ದರೆ ಹೋರಾಟ ಅನಿವಾರ್ಯ

- ಮಲ್ಲಿಕಾರ್ಜುನ ಜಲ್ಲಪ್ಪನೋರ, ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT