ಗುರುವಾರ , ನವೆಂಬರ್ 26, 2020
21 °C
ಕೆಬಿಜೆಎನ್‌ಎಲ್‌ ಅಧಿಕಾರಿಗಳ ಕಾರ್ಯ ವೈಖರಿಗೆ ಗ್ರಾಮಗಳ ಜನ ಆಕ್ರೋಶ

ಯಾದಗಿರಿ: ಗುರುಸುಣಗಿ ಬ್ಯಾರೇಜ್‌ ಹಿನ್ನೀರಿನಲ್ಲಿ ಬೆಳೆ ಜಲಾವೃತ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಗುರುಸುಣಗಿ ಬ್ರಿಜ್‌ ಕಂ ಬ್ಯಾರೇಜ್‌ಗೆ ಅಳವಡಿಸಿದ್ದ ಗೇಟ್‌ಗಳನ್ನು ಎತ್ತದ ಪರಿಣಾಮ ನಮ್ಮ ಸಾವಿರಾರು ಎಕರೆ ಬೆಳೆ ಜಲಾವೃತವಾಗಿದೆ. ಇದಕ್ಕೆ ಯಾರು ಹೊಣೆ’...

ಇದು ವಡಗೇರಾ ತಾಲ್ಲೂಕಿನ ನಾಯ್ಕಲ್, ತಂಗಡಿಗಿ, ಬಲಕಲ್, ಚಟ್ನಳ್ಳಿ, ನಾಲ್ವಡಗಿ ಗ್ರಾಮಸ್ಥರ ಆಕ್ರೋಶವಾಗಿದೆ.

ಭೀಮಾನದಿಯಿಂದ ಪ್ರವಾಹ ಉಂಟಾದಾಗ ಎಚ್ಚೆತ್ತುಕೊಳ್ಳದ ಕೆಬಿಜೆಎನ್‌ಎಲ್ ಅಧಿಕಾರಿಗಳು, ಹಿನ್ನೀರಿನಿಂದ ಜಮೀನು ಮುಳುಗಡೆಯಾದ ನಂತರ ಗೇಟ್‌ಗಳನ್ನು ಓಪನ್‌ ಮಾಡಿದ್ದಾರೆ. ಇದರಿಂದ ಏನು ಪ್ರಯೋಜನ ಎನ್ನುವುದು ಈ ಭಾಗದ ರೈತರ ಪ್ರಶ್ನೆಯಾಗಿದೆ.

‘ಹಿನ್ನೀರಿನಿಂದಲೇ ಬೇಸಿಗೆ ಬೆಳೆ ತೆಗೆಯುತ್ತೇವೆ. ಅದೇ ಬ್ಯಾರೇಜ್‌ ನೀರು ನಮಗೆ ಈಗ ಶಾಪವಾಗಿ ಪರಿಣಮಿಸಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನೀರಿನಲ್ಲಿ ಮುಳುಗಡೆಯಾಗಿದೆ. ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ಈಗ ನೋಡಿದರೆ ಮತ್ತಷ್ಟು ಸಾಲದ ಹೊರೆ ಹೊತ್ತುಕೊಳ್ಳಬೇಕು’ ಎನ್ನುತ್ತಾರೆ ಗ್ರಾಮಸ್ಥ ಬಸವರಾಜ ವಿಶ್ವಕರ್ಮ ನಾಯ್ಕಲ್‌.

‘ನಾಯ್ಕಲ್, ತಂಗಡಿಗಿ, ಬಲಕಲ್, ಚಟ್ನಳ್ಳಿ, ನಾಲ್ವಡಗಿ ಭಾಗದಲ್ಲಿ ಹಿನ್ನೀರಿನಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಈಗ ಮತ್ತಷ್ಟು ನೀರು ಹರಿಸುವ ಬಗ್ಗೆ ಅಧಿಕಾರಿಗಳು ತಿಳಿಸುತ್ತಿದ್ದಾರೆ. ಇದರಿಂದ ಇದ್ದ ಬೆಳೆ ನಮ್ಮ ಕೈಗೆ ಸಿಗುವುದಿಲ್ಲ. ಮುಂದೇನು ಮಾಡಬೇಕು ಎಂದು ತಿಳಿಯುತ್ತಿಲ್ಲ’ ಎನ್ನುತ್ತಾರೆ ಅವರು.

‘24 ಹೈಡ್ರಾಲಿಕ್‌ ಗೇಟ್‌ಗಳಲ್ಲಿ 17 ಗೇಟ್‌ಗಳನ್ನು‌ 16 ಮೀಟರ್‌ ಮೇಲೆತ್ತಲಾಗಿದೆ. 7 ಗೇಟ್‌ಗಳಲ್ಲಿ ಇನ್ನೂ ಕಾಮಗಾರಿ ನಡೆಯುತ್ತಿದೆ. ಏಕಾಏಕಿ ಪ್ರವಾಹ ಬಂದಿದ್ದರಿಂದ ಗೇಟ್‌ಗಳನ್ನು‌ ಎತ್ತಲು ಆಗಿಲ್ಲ. ಕೊರೊನಾ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ವಿಜಯಪುರದಿಂದ ಕಾರ್ಮಿಕರು ಬಂದಿದ್ದರು. ಈಗ ಕಾಮಗಾರಿ ನಡೆಯುತ್ತಿಲ್ಲ. ಗೇಟ್‌ಗಳನ್ನು ಎತ್ತುವ ಕೆಲಸ ನಡೆಯುತ್ತಿದೆ’ ಎನ್ನುತ್ತಾರೆ ಕೆಬಿಜೆಎನ್‌ಎಲ್‌ ಸಹಾಯಕ ಎಂಜಿನಿಯರ್ ಉಮರ್‌ ಅಲಿ ಅವರು.

‘ಬ್ರಿಟಿಷರ ಕಾಲದಲ್ಲಿ ಇಂಥ ಪ್ರವಾಹ ಬಂದಿತ್ತು ಎಂದು ಹೇಳಲಾಗುತ್ತಿದೆ. ಮಂಗಳವಾರದಿಂದ ಪ್ರವಾಹ ಇಳಿಮುಖವಾಗುವ ಸೂಚನೆ ಇದೆ’ ಎನ್ನುತ್ತಾರೆ ಅವರು.

ನಾಯ್ಕಲ್‌–ಚಟ್ನಳ್ಳಿ ರಸ್ತೆ ಬಂದ್‌: ನಾಯ್ಕಲ್‌ ಗ್ರಾಮದಿಂದ ಚಟ್ನಳ್ಳಿಗೆ ತೆರಳುವ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಶವಸಂಸ್ಕಾರಕ್ಕೆ ತೆರಳಿ ಸಂಕಷ್ಟಕ್ಕೆ ಸಿಲುಕಿದ್ದ ಗ್ರಾಮಸ್ಥರನ್ನು ಸೇನಾ ಪಡೆಯಿಂದ ಭಾನುವಾರ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ನಾಯ್ಕಲ್‌ನಿಂದ 5 ಕಿ.ಮೀ ದೂರವಿರುವ ಗ್ರಾಮಕ್ಕೆ ಸುತ್ತುವರಿದು 20 ಕಿ.ಮೀ ದೂರ ಕ್ರಮಿಸಬೇಕಾಗಿದೆ.

ಸಚಿವರ ವಿರುದ್ಧ ಆಕ್ರೋಶ: ಪ್ರವಾಹ ಪೀಡಿತ ಪ್ರದೇಶಗಳಿಗೆ ಭಾನುವಾರ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಅವರ ವಿರುದ್ಧ ನಾಯ್ಕಲ್‌ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಹಿನ್ನೀರಿನಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವ ಗ್ರಾಮವನ್ನು ಬಿಟ್ಟು ಬೇರೆ ಕಡೆ ತೆರಳಿ ನಮ್ಮ ಗ್ರಾಮಕ್ಕೆ ಬಾರದೆ ಬೀದರ್‌ಗೆ ತೆರಳಿದ್ದಾರೆ. ನಮ್ಮ ಜಿಲ್ಲೆ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ಗ್ರಾಮಕ್ಕೆ ಬಂದು ನಮ್ಮ ಸಮಸ್ಯೆ ಬಗೆಹರಿಸಿಲ್ಲ. ಹೀಗಾಗಿ ನಮ್ಮ ನೋವನ್ನು ಸಚಿವರ ಮುಂದೆ ಹೇಳಿಕೊಳ್ಳಬೇಕು ಎಂದು ದಾರಿಕಾದರೂ ಅವರು ಬಂದಿಲ್ಲ. ಇದರಿಂದ ನಮಗೆ ತುಂಬಾ ನಿರಾಶೆಯಾಗಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೈನೋದ್ದೀನ್ ಮಿರ್ಚಿ.

ಊಟಕ್ಕೆ ಮಾತ್ರ ಕಾಳಜಿ ಕೇಂದ್ರ!

ನಾಯ್ಕಲ್‌ ಗ್ರಾಮದ ಪ್ರೌಢಶಾಲೆಯಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರ ತೆಗೆಯಲಾಗಿದೆ. ಆದರೆ, ನೀರಿನಲ್ಲಿ ಮನೆಗಳು ಮುಳುಗಿರುವವರು ಊಟಕ್ಕಾಗಿ ಬಂದು ಮತ್ತೆ ಸಂಬಂಧಿಕರ ಮನೆಗಳಿಗೆ ಸೇರುತ್ತಿದ್ದಾರೆ.

ಗ್ರಾಮದಲ್ಲಿ 10 ಸಾವಿರ ಜನಸಂಖ್ಯೆ ಇದ್ದು, 150ರಿಂದ 200 ಮನೆಗಳಿಗೆ ಪ್ರವಾಹ ನೀರು ಹೊಕ್ಕಿವೆ. ಇವರೆಲ್ಲರೂ ತಾತ್ಕಾಲಿಕವಾಗಿ ಸಂಬಂಧಿಕರ ಮನೆಯನ್ನು ಆಶ್ರಯಿಸಿದ್ದಾರೆ.

ಇನ್ನೂ ಕಾಳಜಿ ಕೇಂದ್ರದಲ್ಲಿ ಯಾವುದೇ ಸೌಲಭ್ಯಗಳು ಇಲ್ಲ. ನೀರು, ಊಟ ಬಿಟ್ಟರೆ ಹಾಸಿಗೆ, ಶೌಚಾಲಯವಿಲ್ಲ. ಇದರಿಂದ ಇಲ್ಲಿ ತಂಗಲು ಗ್ರಾಮಸ್ಥರು ನಿರಾಕರಿಸುತ್ತಿದ್ದಾರೆ ಎಂದು ಸಂತ್ರಸ್ತರೊಬ್ಬರು ಹೇಳಿದರು.

ಉರ್ದು ಶಾಲೆಯಲ್ಲಿ ಸಿಲಿಂಡರ್‌ ದಾಸ್ತಾನು!

ಗ್ರಾಮದ ಭಾರತ್‌ ಗ್ಯಾಸ್‌ ಸಿಲಿಂಡರ್‌ ಉಗ್ರಾಣ ನೀರಿನಿಂದ ಆವೃತವಾಗಿದ್ದು, ತುಂಬಿದ ಸಿಲಿಂಡರ್‌ಗಳನ್ನು ಉರ್ದು ಶಾಲೆಯ ಕೋಣೆಯಲ್ಲಿ ದಾಸ್ತಾನು ಮಾಡಲಾಗಿದೆ.

ಶಾಲೆಯ ಮೊದಲನೇಯ ಅಂತಸ್ತಿನಲ್ಲಿ ಕೆಲ ಪ್ರವಾಹ ಸಂತ್ರಸ್ತರು ತಾತ್ಕಾಲಿಕವಾಗಿ ನೆಲೆ ಕಂಡಿದ್ದಾರೆ. ಅಲ್ಲಿಯೇ ಅಡುಗೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇದರ ಕೆಳಗಡೆಯೇ 80 ಸಿಲಿಂಡರ್‌ಗಳನ್ನು ದಾಸ್ತಾನು ಮಾಡಲಾಗಿದೆ.

ಈ ಬಗ್ಗೆ ಮಾಲೀಕ ಪ್ರತಿಕ್ರಿಯಿಸಿ, ಸಿಲಿಂಡರ್‌ ದಾಸ್ತಾನು ಮಾಡುವ ಬಗ್ಗೆ ಶಾಲಾ ಮುಖ್ಯೋಪಾಧ್ಯಯರನ್ನು ಕೇಳಿ ಇಟ್ಟಿದ್ದೇವೆ. ಎರಡು ದಿನದ ನಂತರ ತೆರವುಗೊಳಿಸುತ್ತೇವೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು