ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‌ಯಾದಗಿರಿ: ಹದಗೆಟ್ಟ ರಸ್ತೆಯ ನರಕ ‘ದರ್ಶನ’

ಜಿಲ್ಲೆಯಾದ್ಯಂತ ಮಳೆಗಾಲದಲ್ಲಿ ರಸ್ತೆ ಗುಂಡಿ ಬಿದ್ದು, ಸಂಚಾರಕ್ಕೆ ಸಮಸ್ಯೆ
Published 2 ಸೆಪ್ಟೆಂಬರ್ 2024, 5:21 IST
Last Updated 2 ಸೆಪ್ಟೆಂಬರ್ 2024, 5:21 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಗಾಲದಲ್ಲಿ ರಸ್ತೆಗಳು ಹದಗೆಟ್ಟಿದ್ದು, ವಾಹನ ಸವಾರರು, ಪ್ರಯಾಣಿಕರು ಪರದಾಡುತ್ತಿದ್ದಾರೆ. ಮೇ, ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ್ದರಿಂದ ಗ್ರಾಮೀಣ ಭಾಗದ ಹಲವು ರಸ್ತೆಗಳು ಜಲಾವೃತವಾಗಿ ಎರಡ್ಮೂರು ದಿನ ನೀರು ನಿಂತು ಹಾಳಾಗಿವೆ.

ಜಿಲ್ಲೆಯಲ್ಲಿ ರಾಷ್ಟ್ರೀಯ, ರಾಜ್ಯ, ಜಿಲ್ಲಾ ರಸ್ತೆಗಳು ಹಾದುಹೋಗಿದ್ದು, ಪ್ರಮುಖ ವೃತ್ತಗಳಲ್ಲಿ ಗುಂಡಿ ಬಿದ್ದು, ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ರಸ್ತೆಗಳಲ್ಲಿನ ಗುಂಡಿಗಳು, ಕೊಳಚೆಯಿಂದ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ. ನಗರದಿಂದ ಗ್ರಾಮಗಳಿಗೆ ತೆರಳಬೇಕಾದರೆ ನರಕ ದರ್ಶನದ ಅನುಭವ ಉಂಟಾಗುತ್ತಲಿದೆ. ಮಳೆಗಾಲ ಆಗಿದ್ದರಿಂದ ರಸ್ತೆಯ ಮಧ್ಯದಲ್ಲಿ ದೊಡ್ಡದಾದ ತಗ್ಗು ಬಿದ್ದಿವೆ. ಜೀವ ಕೈಯಲ್ಲಿ ಹಿಡಿದು ವಾಹನ ಸಂಚಾರ ಮಾಡುವಂತೆ ಆಗಿದೆ.

ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದು ಹಾಗೂ ರಸ್ತೆ ಅಗೆದು ಹಾಳು ಮಾಡಲಾಗಿದೆ. ಅಲ್ಲಲ್ಲಿ ಸಣ್ಣಪುಟ್ಟ ಗುಂಡಿ ಮಾಡಿರುವುದರಿಂದ ತಗ್ಗು ದಿಣ್ಣೆಗಳಿಂದ ಕೂಡಿದೆ. ಯಾದಗಿರಿ–ಶಹಾಪುರ ರಾಜ್ಯ ಹೆದ್ದಾರಿ ಹಾಳಾಗಿದ್ದು, ಯಾದಗಿರಿಯಿಂದ ಶಹಾ‍ಪುರದವರೆಗೆ ರಸ್ತೆ ಗುಂಡಿಗಳು ಬಿದ್ದಿವೆ. ನಗರದ ಹೊರ ವಲಯದ ಭೀಮಾ ನದಿ ಹೊಸ, ಹಳೆ ಸೇತುವೆ ರಸ್ತೆ ಹಾಳಾಗಿದ್ದು, ಸವಾರರ ಪರದಾಟ ಹೇಳತೀರದಾಗಿದೆ.

ನಗರದ ರಾಷ್ಟ್ರೀಯ ಹೆದ್ದಾರಿ ಎಲ್‌ಐಸಿ ಕಚೇರಿ ಬಳಿ ದೊಡ್ಡ ಗುಂಡಿ ಬಿದ್ದು, ಬ್ಯಾರಿಕೇಡ್‌ ಅಳವಡಿಸಲಾಗಿದೆ. ಡಾಂಬರ್ ಹಾಕಿದ ಒಂದೂವರೆ ತಿಂಗಳಲ್ಲಿ ಕಿತ್ತು ಬಂದಿದ್ದು, ತೇಪೆ ಹಚ್ಚುವ ಕೆಲಸ ನಡೆದಿತ್ತು. ಈಗ ಮಳೆಗಾಲವಾಗಿದ್ದರಿಂದ ರಸ್ತೆ ಮತ್ತಷ್ಟು ಹಾನಿಯಾಗಿ ರಾಷ್ಟ್ರೀಯ ಹೆದ್ದಾರಿಯೋ ಅಥವಾ ಗುಂಡಿ ಬಿದ್ದ ರಸ್ತೆಯೋ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಮಳೆ ಬಂದು ರಸ್ತೆ ಪೂರ್ತಿ ತಗ್ಗು ದಿನ್ನೆಗಳಿಂದ ಕೂಡಿದೆ. ಇದರಿಂದ ಬೈಕ್‌, ಆಟೊ ಚಾಲಕರು ಹರಸಾಹಸ ಪಟ್ಟು ವಾಹನ ಚಲಾಯಿಸಬೇಕಾಗಿದೆ. ರಸ್ತೆ ಇಕ್ಕಟ್ಟಾಗಿದ್ದರಿಂದ ವಾಹನ ಸಂಚಾರವೂ ದುಸ್ತರವಾಗಿದೆ. ಚೆನ್ನಾಗಿದ್ದ ಚರಂಡಿಯನ್ನು ತೆಗೆದು ಹೊಸ ಚರಂಡಿ ನಿರ್ಮಿಸಿ ಸಾರ್ವಜನಿಕರ ದುಡ್ಡು ಪೋಲು ಮಾಡಲಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.

ಹೊಸ ಬಸ್‌ ನಿಲ್ದಾಣ, ಗಂಜ್‌ ರಸ್ತೆ, ಚಿತ್ತಾಪುರ ರಸ್ತೆ, ಮಹಾತ್ಮಗಾಂಧಿ ವೃತ್ತ, ಸೇಡಂ ರಸ್ತೆ, ಹೊಸಳ್ಳಿ ಕ್ರಾಸ್‌, ರೈಲ್ವೆ ಸ್ಟೇಷನ್‌ ರಸ್ತೆ, ಎಲ್‌ಐಸಿ ಕಚೇರಿ ಮುಂಭಾಗ ಸೇರಿದಂತೆ ಇನ್ನಿತರ ಕಡೆ ಗುಂಡಿ ಬಿದ್ದಿದೆ. ಹೊಸ ಬಸ್‌ ನಿಲ್ದಾಣ ರಸ್ತೆ ವಿಭಜಕದಲ್ಲಿ ಮಳೆ ದೊಡ್ಡ ದೊಡ್ಡ ಜಲ್ಲಿ ಕಲ್ಲುಗಳು ಮೇಲೆದ್ದು, ನೀರು ನಿಂತಿವೆ. ಈಚೆಗೆ ಚಿತ್ತಾಪುರ ರಸ್ತೆ ವಿಭಜಕದಲ್ಲಿ ಡಾಂಬರ್ ರಸ್ತೆ ಅಗೆದಿದ್ದು, ಮಳೆಗೆ ಗುಂಡಿ ಬಿದ್ದಿವೆ.

ಅಲ್ಲದೇ ನಗರದ ವಿವಿಧ ಭಾಗಗಳಲ್ಲಿ ಡಾಂಬರ್ ಕಿತ್ತು, ಜಲ್ಲಿ ಕಲ್ಲುಗಳು ಮೇಲೆದ್ದು ಬಂದು ಎಷ್ಟೋ ತಿಂಗಳಾದರೂ ದುರಸ್ತಿಯಾಗಿಲ್ಲ. ತಾಯಿ ಮತ್ತು ಮಕ್ಕಳ ಜಿಲ್ಲಾಸ್ಪ‌ತ್ರೆಯ ಮುಂಭಾಗದ ರಸ್ತೆ ಸಂಪೂರ್ಣ ಹಾಳಾಗಿದೆ. ಇಲ್ಲಿಗೆ ಹಲವಾರು ರೋಗಿಗಳು ಬರುತ್ತಾರೆ. ಆದರೆ, ರಸ್ತೆ ಸಂಪೂರ್ಣ ಹಾಳಾಗಿರುವುದು ರೋಗಿಗಳು ತೆಗ್ಗುದಿನ್ನೆಗಳಲ್ಲಿ ಪ್ರಯಾಣಿಸುವಾಗ ಸಂಕಟ ಪಡುತ್ತಾರೆ.

‘ಜಿಲ್ಲೆಯಲ್ಲಿ ಕೆಲವು ರಸ್ತೆಗಳು ದುರಸ್ತಿಯಾಗಿ ವರ್ಷವೂ ಕಳೆದಿಲ್ಲ. ಆದರೆ, ರಸ್ತೆಯಲ್ಲಿ ಮತ್ತೆ ‘ಕೃಷಿ ಹೋಂಡಾಗಳು’ ತಲೆಯೆತ್ತಿವೆ. ಕಾಟಾಚಾರದ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕೂಡಲೇ ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಕನಿಷ್ಟ ಜಿಲ್ಲಾ ಮಟ್ದದ ಅಧಿಕಾರಿಗಳೊಮ್ಮೆ ರಸ್ತೆಯನ್ನು ಪರಿಶೀಲಿಸಿ ಕ್ರಮವಹಿಸಲಿ‘ ಎಂದು ಗಾಜರಕೋಟದ ಚನ್ನಬಸಪ್ಪ ಆಗ್ರಹಿಸಿದ್ದಾರೆ.

ಅಧಿಕಾರಿಗಳು ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಮಾಡದೇ ಕೈಕಟ್ಟಿ ಕುಳಿತಿದ್ದಾರೆ. ಇದರಿಂದ ವಾಹನ ಸವಾರರು ತೀವ್ರ ಸಂಕಷ್ಟ ಪಡುತ್ತಿದ್ದಾರೆ. ವಾಹನ ಸವಾರರು ಈ ತಗ್ಗು–ಹೊಂಡಗಳನ್ನು ತಪ್ಪಿಸಿ ಸಂಚರಿಸುವುದು ದೊಡ್ಡ ಸವಾಲಾಗಿದೆ.

ಲೋಕೋಪಯೋಗಿ ಇಲಾಖೆಯ ಯಾದಗಿರಿ ನಗರ ವ್ಯಾಪ್ತಿಯ 6.8 ಕಿಮೀ ರಸ್ತೆ ಇದ್ದು ₹ 9 ಲಕ್ಷ ನಿರ್ವಹಣೆಗಾಗಿ ಇಟ್ಟಿದ್ದು ಟೆಂಡರ್‌ ಹಂತದಲ್ಲಿದೆ

-ಅಭಿಮನ್ಯು ಎಇಇ ಲೋಕೋಪಯೋಗಿ ಇಲಾಖೆ

ಪ್ರವಾಹ ಮತ್ತು ಮಳೆಯಿಂದ ಹಾನಿಯಾದ ಸೇತುವೆ ಮತ್ತು ರಸ್ತೆ ದುರಸ್ತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮಂಜೂರಾದ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ

-ಎಸ್.ಜಿ.ಪಾಟೀಲ ಎಇಇ ಪಿಡಬ್ಲ್ಯೂಡಿ

ಸುರಪುರ ನಗರದಲ್ಲಿ ಮಳೆಯಿಂದ ಕೆಲ ರಸ್ತೆಗಳಲ್ಲಿ ಗುಂಡಿಗಳು ಬೀಳುತ್ತಿವೆ. ಶಾಶ್ವತ ದುರಸ್ತಿಗೆ ಸಭೆಯ ಅನುಮೋದನೆ ಪಡೆದು ಪ್ರಸ್ತಾವ ಸಲ್ಲಿಸಲಾಗುವುದು ಜೀವನ

- ಕಟ್ಟಿಮನಿ ನಗರಸಭೆ ಪೌರಾಯುಕ್ತ

ಯಾದಗಿರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಪ್ರಮುಖ ವೃತ್ತಗಳಲ್ಲಿ ಗಣ್ಯರ ಹೆಸರಿಟ್ಟಿದ್ದು ಅವರ ಹೆಸರಿಗಾದರೂ ಕೀರ್ತಿ ತರುವಂತೆ ಆ ವೃತ್ತದ ರಸ್ತೆಗಳು ಅಂದ ಚೆಂದವಾಗಿರಲಿ. ಈಗ ಎಲ್ಲವೂ ಹದಗೆಟ್ಟು ಹೋಗಿವೆ

- ಅಯ್ಯಣ್ಣ ಹುಂಡೇಕರ್‌ ಹಿರಿಯ ನಾಗರಿಕ

ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಒಂದೆರಡು ದಿನಗಳಲ್ಲಿ ಗುತ್ತಿಗೆದಾರರ ಜತೆ ರಸ್ತೆ ಕಾಮಗಾರಿ ಒಪ್ಪಂದವಾಗುತ್ತದೆ. ಅದಾದ ನಂತರ ವಡಗೇರಾ ಕ್ರಾಸ್‌ನಿಂದ ಚಾಮನಳ್ಳಿಯವರೆಗೆ ರಸ್ತೆ ಕಾಮಗಾರಿ ಆರಂಭವಾಗುತ್ತದೆ

-ಸುನೀಲ್ ಲೋಕೋಪಯೋಗಿ ಇಲಾಖೆ ಜೆಇ

ಗ್ರಾಮೀಣ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ರಸ್ತೆಯ ಮೇಲೆಲ್ಲಾ ದೊಡ್ಡ ದೊಡ್ಡ ಕಂದಕಗಳು ಬಿದ್ದಿವೆ. ಇದರಿಂದಾಗಿ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು

-ಶರಣು ಇಟಗಿ ಕರವೇ ಕ-ಕ ಸಂಚಾಲಕ

ಪಟ್ಟಣದಲ್ಲಿನ ರಸ್ತೆಗಳ ದುರಸ್ತಿ ಕೈಗೊಳ್ಳಿ

ಗುರುಮಠಕಲ್ ಪುರಸಭೆ ವ್ಯಾಪ್ತಿಯಲ್ಲಿ ನಡೆದ ಯುಜಿಡಿ ಕಾಮಗಾರಿ (ಒಳ ಚರಂಡಿ) ವೇಳೆ ರಸ್ತೆಯನ್ನು ಅಗಿದ ನಂತರ ಮತ್ತೆ ಸರಿಯಾಗಿ ರಸ್ತೆ ನಿರ್ಮಿಸದ ಕಾರಣ ಪಟ್ಟಣದಲ್ಲಿನ ರಸ್ತೆಗಳಲ್ಲಿ ಇನ್ನೂ ತಗ್ಗುಗಳು ಹಾಗೇ ಉಳಿದಿವೆ. ಈಗ ಮಳೆಗಾಲದ ಕಾರಣ ಇನ್ನೂ ಸಮಸ್ಯೆ ಹೆಚ್ಚಳವಾಗಿದೆ. ಗುರುಮಠಕಲ್ - ನಾರಾಯಣಪೇಟ್ ರಸ್ತೆಯಲ್ಲಿನ ನಗರೇಶ್ವರ ದೇವಸ್ಥಾನದಿಂದ ಸಣ್ಣಮಠದವರೆಗಿನ ತಿರುವುಗಳಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅದು ರಸ್ತೆಯೋ ಕೊಳಚೆ ಗುಂಡಿಯೋ ಎನ್ನುವಂತಾಗಿದ್ದು ಅಪಾಯಕ್ಕೆ ಕಾದಂತೆ ತೋರುತ್ತಿದೆ. ಶೀಘ್ರ ರಸ್ತೆಗಳ ದುರಸ್ತಿ ಕೈಗೊಳ್ಳುವಂತೆ ಪಟ್ಟಣದ ಮಲ್ಲಿಕಾರ್ಜುನ ಅವರು. ಚಿತ್ತಾಪುರ–ಪುಟಪಾಕ ರಸ್ತೆಯು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿ ಅರ್ಧ ದಶಕಕ್ಕೂ ಹೆಚ್ಚಾಯಿತು. ಆದರೆ ಮೇಲ್ದರ್ಜೆಗೇರಿದ ನಂತರ ಈ ರಸ್ತೆಯ ಸಂಚಾರವೇ ಸಾಕಪ್ಪ ಎನ್ನುವಂತಾಗಿದ್ದು ವಿಪರ್ಯಾಸ. ತಾಲ್ಲೂಕು ವ್ಯಾಪ್ತಿಯ ಗಾಜರಕೋಟ ಗ್ರಾಮದಿಂದ ಗುರುಮಠಕಲ್ ವರೆಗಿನ 11 ಕಿ.ಮೀ. ರಸ್ತೆಯಲ್ಲಿ ನೂರಕ್ಕೂ ಹೆಚ್ಚಿನ ಗುಂಡಿಗಳನ್ನು ನೋಡಬಹುದು ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಗಾಜರಕೋಟ ಚಪೆಟ್ಲಾ ಯದ್ಲಾಪುರ ಹಾಗೂ ಹಿಮಲಾಪುರ ಗ್ರಾಮಸ್ಥರು.

‘ತಗ್ಗು ಮುಚ್ಚಲು ಹಿಡಿ ಮಣ್ಣು ಹಾಕಿ’

ಶಹಾಪುರ ತಾಲ್ಲೂಕು ಹಾಗೂ ನಗರ ಪ್ರದೇಶ ಅಲ್ಲದೆ ರಾಜ್ಯ ಹೆದ್ದಾರಿ ಮೇಲಿನ ರಸ್ತೆಗಳು ಹದಗೆಟ್ಟು ಹೋಗಿವೆ. ತಗ್ಗು ಮುಚ್ಚಲು ಹಿಡಿ ಮಣ್ಣು ಹಾಕಿ ಪುಣ್ಯ ಕಟ್ಟಿಕೊಳ್ಳಿ ಎಂದು ಜನತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ‘ತಾಲ್ಲೂಕಿನ ಶಿರವಾಳ ರಸ್ತೆ ತುಂಬಾ ಕೆಟ್ಟು ಹೋಗಿದೆ. ಗ್ರಾಮಸ್ಥರು ಸಾಕಷ್ಟು ಪ್ರತಿಭಟನೆ ಮಾಡಿದ್ದರೂ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಇಲ್ಲದ ಸಬೂಬು ಹೇಳಿ ನಮಗೆ ಹೈರಾಣು ಮಾಡಿದ್ದಾರೆ. ಯಾರ ಮುಂದೆ ಹೇಳಬೇಕು ನಮ್ಮ ಗೋಳು ಎನ್ನುವಂತೆ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಕ್ಷಣ ಗಮನಹರಿಸಿ ರಸ್ತೆ ದುರಸ್ತಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಅಧಿಕಾರಿಗಳಿಗೆ ನೀಡಬೇಕು’ ಎಂದು ಜನತೆ ಮನವಿ ಮಾಡಿದ್ದಾರೆ.

ಹದಗೆಟ್ಟ ಹುಣಸಗಿ–ಕೆಂಭಾವಿ ರಸ್ತೆ

ಕಳೆದ 20 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿರುವ ಹುಣಸಗಿ–ಕೆಂಭಾವಿ ಮುಖ್ಯ ರಸ್ತೆಯು ಸಂಪೂರ್ಣ ಹದೆಗೆಟ್ಟಿದ್ದು ನಿತ್ಯ ನೂರಾರು ವಾಹನ ಸವಾರರು ಹರಸಾಹಸ ಪಡುಂತಾಗಿದೆ. ಕಳೆದ ಎರಡು ದಶಕಗಳ ಹಿಂದೆ ಸಾಕಷ್ಟು ಹೋರಾಟಗಳ ಫಲವಾಗಿ ಈ ರಸ್ತೆಯನ್ನು ಮಲ್ಲಾ–ನಾರಾಯಣಪುರ ವರೆಗೆ ನಿರ್ಮಿಸಲಾಗಿತ್ತು. ಆದರೆ ಸದ್ಯ ಹುಣಸಗಿಯಿಂದ ನಾರಾಯಣಪುರ ವರೆಗೆ ರಸ್ತೆ ಕಾಮಗಾಗಿ ನಡೆದಿದ್ದು ಈ ರಸ್ತೆ ದುರಸ್ತಿಗಾಗಿ ಕಾಯುವಂತಾಗಿದೆ ಎಂದು ಗುಂಡಲಗೇರಾ ಗ್ರಾಮದ ಶಾಂತಗೌಡ ಕವಿತಾಳ ಹೇಳಿದರು. 24 ಕಿ.ಮೀ ರಸ್ತೆಯಲ್ಲಿ ಬಹುತೇಕ ತಗ್ಗು ಗುಂಡಿಗಳು ತುಂಬಿಕೊಂಡಿದ್ದು ಅಲ್ಲಲ್ಲಿ ರಸ್ತೆ ಮಧ್ಯೆಯೇ ದೊಡ್ಡ ಕಂದಕಗಳು ನಿರ್ಮಾಣವಾಗಿವೆ. 24 ಕಿ.ಮೀ ಕ್ರಮಿಸಲು ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗಿದೆ. ರಾತ್ರಿ ಹೊತ್ತು ತಗ್ಗು ತಪ್ಪಿಸಲು ಹೋಗಿ ಬೈಕ್‌ ಸವಾರರು ಬಿದ್ದ ಘಟನೆಗಳು ನಡೆದಿವೆ. ‘ಹುಣಸಗಿ ತಾಲ್ಲೂಕಿನ ವಜ್ಜಲ ಗ್ರಾಮದಿಂದ ವಜ್ಜಲ ತಾಂಡಾ ಹಾಗೂ ಶ್ರೀನಿವಾಸಪುರ ಗ್ರಾಮಕ್ಕೆ ತೆರಳುವ ರಸ್ತೆ ನಿರ್ಮಾಣ ಹಾಗೂ ಡಾಂಬರೀಕರಣಕ್ಕಾಗಿ ಹಲವಾರಿ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆ ಬಂದರೆ ನಮ್ಮ ತಾಂಡಾದ ನಿವಾಸಿಗಳ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ‘ ಎಂದು ಡಾಕುನಾಯಕ ಹಾಗೂ ತಿರುಪತಿ ಅಸಮಾಧಾನ ವ್ಯಕ್ತಪಡಿಸಿದರು.

ಸುಗಮ ಸಂಚಾರಕ್ಕೆ ಕಂಟಕ

ವಡಗೇರಾ ತಾಲ್ಲೂಕಿನ ವ್ಯಾಪ್ತಿಯ ರಾಜ್ಯ ಜಿಲ್ಲಾ ತಾಲ್ಲೂಕು ಹಾಗೂ ಗ್ರಾಮೀಣ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಸುಗಮ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿವೆ. ವಡಗೇರಾದಿಂದ ತುಮಕೂರು ವಡಗೇರಾ ಕ್ರಾಸ್‌ನಿಂದ ನಾಯ್ಕಲ್ ಗಡ್ಡೆಸೂಗುರ ಗೇಟ್‌ನಿಂದ ಮಾಲಹಳ್ಳಿ ಗುರುಸಣಗಿಯಿಂದ ಮಾಲಹಳ್ಳಿ ಹಾಗೂ ಇನ್ನೂ ಅನೇಕ ಗ್ರಾಮಗಳ ಕೂಡು ರಸ್ತೆಗಳು ಜಿಲ್ಲಾ ಮುಖ್ಯ ರಸ್ತೆಗಳು ಹಾಳಾಗಿವೆ.ಇದರಿಂದಾಗಿ ಸಕಾಲದಲ್ಲಿ ರೋಗಿಗಳು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ಸ್ಥಳಗಳಿಗೆ ತಲುಪಲು ಆಗುತ್ತಿಲ್ಲ ಎಂದು ದೂರುತ್ತಾರೆ. ರಸ್ತೆಗಳ ದುರಸ್ತಿ ಬಗ್ಗೆ ಅನೇಕ ವೇಳೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮಳೆ ಪ್ರವಾಹದಿಂದ ₹ 4.35 ಕೋಟಿ ರಸ್ತೆ ಹಾನಿ

ನಾರಾಯಣಪುರ ಜಲಾಶಯದಿಂದ ನದಿಗೆ ನೀರು ಹರಿಸಿದಾಗ ಉಂಟಾದ ಪ್ರವಾಹ ಮತ್ತು ಮಳೆಯಿಂದ ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ವಿವಿಧೆಡೆ ಲೋಕೋಪಯೋಗಿ ಇಲಾಖೆಗೆ ಸೇರಿದ ₹ 4.35 ಕೋಟಿ ರಸ್ತೆ ಹಾನಿಯಾಗಿದೆ. ಬಂಡೋಳಿ–ಜೋಗುಂಡಭಾವಿ ರಸ್ತೆಯ ಮೂರು ಕಿರು ಸೇತುವೆಗಳು ಕೊಚ್ಚಿಹೋಗಿವೆ. ಹುಣಸಗಿ ತಾಲ್ಲೂಕಿನ ಏದಲಬಾವಿ ನಾರಾಯಣಪುರ ರಸ್ತೆ ಸುರಪುರ ನಗನೂರ ರಸ್ತೆಯ ಗೌಡಗೇರಾ ಬೋನಾಳ-ಹಾವಿನಾಳ ರಸ್ತೆ ಆಲ್ದಾಳ ರಸ್ತೆ ಹೆಮನೂರ ರಸ್ತೆ ಇತರೆಡೆ ರಸ್ತೆಗೆ ಹಾನಿಯಾಗಿದೆ. ಹಾವಿನಾಳ ಮತ್ತು ಹೆಮನೂರ ರಸ್ತೆಯ ದುರಸ್ತಿಗೆ ₹ 35 ಲಕ್ಷ ಮಂಜೂರಿಯಾಗಿದ್ದು ಟೆಂಡರ್ ಕರೆಯಲಾಗಿದೆ. ಸುರಪುರ ನಗರಸಭೆಯ ವ್ಯಾಪ್ತಿಯಲ್ಲಿ ಅಷ್ಟೇನೂ ಹಾನಿ ಸಂಭವಿಸಿಲ್ಲ. ನಿಷ್ಠಿ ಕಾಲೇಜು ಹತ್ತಿರ ಕುಂಬಾರಪೇಟೆ ಘಟ್ಟ ರಸ್ತೆ ವೆಂಕಟಾಪುರದ ಕುರುಬಗಲ್ಲಿಯ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ನಗರಸಭೆ ತಾತ್ಕಾಲಿಕ ದುರಸ್ತಿ ಮಾಡಿದೆ.

ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ, ನಾಮದೇವ ವಾಟ್ಕರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT