ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್‌: ಬಿಜೆಪಿಯಲ್ಲಿ ಬೇಗುದಿಯ ಬಿಸಿ– ದಳಪತಿಗಳ ನಡೆ ನಿಗೂಢ

Published 5 ಏಪ್ರಿಲ್ 2024, 6:25 IST
Last Updated 5 ಏಪ್ರಿಲ್ 2024, 6:25 IST
ಅಕ್ಷರ ಗಾತ್ರ

ಗುರುಮಠಕಲ್‌: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ ಚುನಾವಣಾ ತಂತ್ರಗಳನ್ನು ಹೆಣೆಯುತ್ತಿದ್ದರೆ, ಇತ್ತ ಒಳ ಬೇಗುದಿಯ ಬಿಸಿಗೆ ಕಮಲ ಮುದುಡದಂತೆ ಕಾಯ್ದುಕೊಳ್ಳಬೇಕಿರುವುದು ಬಿಜೆಪಿಗೆ ಸವಾಲಾಗಿದೆ. ಕ್ಷೇತ್ರದಲ್ಲಿ ಅಧಿಕಾರದಲ್ಲಿರುವ ‘ದಳಪತಿ’ಗಳ ನಡೆ ಏನು? ಎಂಬುದು ಇನ್ನೂ ನಿಗೂಢವಾಗಿದೆ.

ಚುನಾವಣಾ ಕಣದಲ್ಲಿನ ಬಿಜೆಪಿ ಅಭ್ಯರ್ಥಿಗೆ ಪಕ್ಷದ ಒಳ ಬೇಗುದಿಯ ಬಿಸಿಯನ್ನು ಅರಗಿಸಿಕೊಳ್ಳುವ ಮತ್ತು ಅದನ್ನು ತಿಳಿಗೊಳಿಸಬೇಕಾದ ಸಂದಿಗ್ಧ ಸ್ಥಿತಿ. ಆದರೆ, ಕಾಂಗ್ರೆಸಿಗರು ಚುನಾವಣಾ ತಂತ್ರದಲ್ಲಿ ಒಂದು ಹೆಜ್ಜೆ ಮುಂದಿದ್ದು, ಈಗಾಗಲೇ ತಾಲ್ಲೂಕು ವ್ಯಾಪ್ತಿಯ ಪಂಚಾಯಿತಿಗಳ ಕೇಂದ್ರ ಸ್ಥಾನಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ.

ಗೆಲುವಿಗೆ ಕಾಂಗ್ರೆಸ್ ಪಣ: ಪಂಚ ಗ್ಯಾರಂಟಿಗಳು, ರಾಧಾಕೃಷ್ಣ ದೊಡ್ಡಮನಿ ಅವರಿಗಿರುವ ಸ್ಥಳೀಯ ಮುಖಂಡರೊಂದಿಗಿನ ಸಂಬಂಧ, ಮಲ್ಲಿಕಾರ್ಜುನ ಖರ್ಗೆ ಅವರು ಗುರುಮಠಕಲ್ ಶಾಸಕರಾಗಿದ್ದ ವೇಳೆ ರಾಧಾಕೃಷ್ಣ ಜನರೊಂದಿಗೆ ಸತತ ಸಂಪರ್ಕದಲ್ಲಿರುವುದು ಕಾಂಗ್ರೆಸ್ ವಲಯದಲ್ಲಿ ಚುನಾವಣೆಯನ್ನು ಎದುರಿಸಲು ಪ್ರಬಲ ಶಕ್ತಿಯಾಗಿವೆ. ಸಚಿವರಾದ ಶರಣಬಸಪ್ಪ ದರ್ಶನಾಪುರ, ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ ಪಾಟೀಲ ಸೇಡಂ ಅವರು ಮತದಾರರಿಗೆ ರಾಜ್ಯ ಸರ್ಕಾರದ ಯೋಜನೆಗಳ ಕುರಿತ ಮಾಹಿತಿ ತಲುಪಿಸುವ ಮೂಲಕ ಹೆಚ್ಚು ಮತ ಗಳಿಕೆಯ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಹುರಿದುಂಬಿಸಿದ್ದಾರೆ.

ಮಾಜಿ ಸಚಿವ ಬಾಬುರಾವ ಚಿಂಚನಸೂರ ಅವರನ್ನು ಸತತ ಪ್ರಚಾರ ಕಾರ್ಯಕ್ಕೆ ಬಳಸುವ ಮೂಲಕ ಅವರ ವರ್ಣರಂಜಿತ ವ್ಯಕ್ತಿತ್ವದ ಪ್ರಭಾವವನ್ನು ಮತವಾಗಿ ಪರಿವರ್ತಿಸುವ ತಂತ್ರ ಕಾಂಗ್ರೆಸ್ ನಡೆಸಿದೆ. ಇರುವ ಎಲ್ಲಾ ಸಾಧ್ಯತೆಗಳನ್ನು ಬಳಸಿ ರಾಧಾಕೃಷ್ಣ ದೊಡ್ಡಮನಿ ಗೆಲುವಿಗೆ ಕಾಂಗ್ರೆಸ್ ತಂತ್ರ ನಡೆಸುತ್ತಿದೆ.

ಅಸಮಾಧಾನ, ಒಳ ಬೇಗುದಿಯಲ್ಲಿ ಬಿಜೆಪಿ: ಬಿಜೆಪಿಗರಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಡಾ.ಉಮೇಶ ಜಾಧವ ಅವರ ಕುರಿತು ಸಜ್ಜನಿಕೆ ಮತ್ತು ಸರಳ ವ್ಯಕ್ತಿತ್ವದವರೆಂಬ ಮಾತುಗಳಿದ್ದರೂ ಸಹ, ಕಳೆದ ಚುನಾವಣೆ ನಂತರ ಮತ್ತೆ ಕ್ಷೇತ್ರಕ್ಕೆ ಬಂದಿಲ್ಲ. ಕಾರ್ಯಕರ್ತರ ಸ್ಥಿತಿಯನ್ನೂ ಕೇಳಿಲ್ಲ ಎನ್ನುವ ಅಸಮಾಧಾನ ಮಾತ್ರ ಇದ್ದೆಯಿದೆ.

‘ಕೇಂದ್ರ ಸರ್ಕಾರದ ಸಾಧನೆಗಳು, ಜನಪರ ಕಾರ್ಯಗಳು ಜನರನ್ನು ತಲುಪಿವೆ. ಡಾ.ಜಾಧವ ಅವರನ್ನಷ್ಟೇ ನೋಡುವುದರ ಬದಲಿಗೆ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ಕೆಲಸ ಮಾಡುತ್ತೇವೆ. ಅಸಮಾಧಾನ ಇದ್ದದ್ದೆ. ಆದರೆ, ಮೋದಿಗಾಗಿ ಕೆಲಸ ಮಾಡುವುದು ನಮಗೆ ಅನಿವಾರ್ಯ’ ಎನ್ನುವುದು ಕಾರ್ಯಕರ್ತರ ಅಂಬೋಣ.

ಅಭ್ಯರ್ಥಿಯಾದ ನಂತರ ಮೊದಲ ಸಲ ಬುಧವಾರ (ಏ.3) ರಂದು ಪಟ್ಟಣಕ್ಕೆ ಆಗಮಿಸಿದ್ದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರಿಗೆ ಕಾರ್ಯಕರ್ತರ ಅಸಮಾಧಾನ, ಕ್ಷೇತ್ರದ ಮುಖಂಡರ ನಡುವಿನ ಒಳ ಬೇಗುದಿಯ ಬಿಸಿ ತಟ್ಟಿದೆ. ಅದನ್ನು ತಣ್ಣಗಾಗಿಸಿ, ಅಂತರ ಕಾಯ್ದುಕೊಂಡ ಮಿತ್ರ ಪಕ್ಷ ಜೆಡಿಎಸ್ ಸೆಳೆಯುವ ಸವಾಲು ಎದುರಾಗಿದೆ.

‘ದಳಪತಿ’ಗಳ ನಡೆ ನಿಗೂಢ: ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿಯಿಂದಾಗಿ ಕಲಬುರಗಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆದರೆ, ಬಿಜೆಪಿಗರು ಮೈತ್ರಿಧರ್ಮ ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿರುವ ಶಾಸಕ ಶರಣಗೌಡ ಕಂದಕೂರ ನಡೆಯನ್ನೂ ನಿಗೂಢವಾಗೇ ಇದೆ.

ಮಿತ್ರಪಕ್ಷ ಬಿಜೆಪಿಯೊಂದಿಗೆ ಅಂತರ ಕಾಯ್ದುಕೊಂಡು, ಸ್ವತಂತ್ರ ಅಭ್ಯರ್ಥಿಯನ್ನು ಕಣಕಿಳಿಸಲು ಕಂದಕೂರ ತಯಾರಿ ನಡೆಸಿದ ಕುರಿತು ಕ್ಷೇತ್ರದಲ್ಲಿ ಮಾತುಗಳು ಕೇಳಿಬರುತ್ತಿವೆ. ಆದರೆ, ತಮ್ಮ ನಡೆಯ ಕುರಿತು ಸ್ಪಷ್ಟತೆ ಬಿಟ್ಟುಕೊಟ್ಟಿಲ್ಲ. ಭಾನುವಾರ (ಏ.7)ರ ನಂತರ ಜೆಡಿಎಸ್ ನಿಲುವೇನುಂಬುದು ತಿಳಿಯುವ ಸಾಧ್ಯತೆಗಳಿವೆ.

-ಶರಣು ಆವಂಟಿ ಜಿಲ್ಲಾ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ
-ಶರಣು ಆವಂಟಿ ಜಿಲ್ಲಾ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ
ದೇವೇಂದ್ರನಾಥ ನಾದ್
ದೇವೇಂದ್ರನಾಥ ನಾದ್

ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಶತಸಿದ್ಧ. ಖರ್ಗೆಯವರ ವರ್ಚಸ್ಸು ನಮ್ಮ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ಈ ಭಾಗದ ಜನರೊಂದಿಗೆ ಹೊಂದಿರುವ ಸಂಪರ್ಕ ಮತ್ತು ಕಾರ್ಯಕರ್ತರ ಕಾರ್ಯದಿಂದ ಗೆಲ್ಲಲಿದ್ದೇವೆ

- ಕೃಷ್ಣ ಚಪೆಟ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ

ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ನಾಯಕರು ನೀಡುವ ನಿರ್ದೇಶನದಂತೆ ಸದ್ಯ ನಾವು ತಟಸ್ಥರಿದ್ದು ಶಾಸಕ ಶರಣಗೌಡ ಕಂದಕೂರ ಅವರ ಮಾರ್ಗದರ್ಶನ ಮತ್ತು ಅವರ ನಿಲುವಿನಂತೆ ಕೆಲಸ ಮಾಡಲು ಸಿದ್ದರಿದ್ದೇವೆ

-ಶರಣು ಆವಂಟಿ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ

ಪಕ್ಷದ ಕಾರ್ಯಕರ್ತರಲ್ಲಿನ ಅಸಮಾಧಾನ ಮತ್ತು ಒಳ ಬೇಗುದಿ ತಣಿಯಲಿದೆ. ಜತೆಗೆ ನಮ್ಮ ವರಿಷ್ಠರು ಮಿತ್ರಪಕ್ಷ ಜೆಡಿಎಸ್‌ನ ಸ್ಥಳೀಯ ನಾಯಕರನ್ನೂ ಮನವೊಲಿಸಲಿದ್ದಾರೆ. ಗುರುಮಠಕಲ್ ಕ್ಷೇತ್ರದಿಂದ ಬಿಜೆಪಿಗೆ ಹೆಚ್ಚು ಮತ ನೀಡುವ ಭರವಸೆಯಿದೆ

-ದೇವೀಂದ್ರನಾಥ ನಾದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT