ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು ಇಲ್ಲ; ವ್ಯಾಪಾರವೂ ಆಗಿಲ್ಲ

ಎಪಿಎಂಸಿ ಕುಗ್ಗಿದ ವ್ಯಾಪಾರ ವಹಿವಾಟು, ರೈತರಿಗೆ ಸೌಲಭ್ಯಗಳು ಮರೀಚಿಕೆ
Last Updated 10 ಮೇ 2021, 5:08 IST
ಅಕ್ಷರ ಗಾತ್ರ

ಯಾದಗಿರಿ: ಕೋವಿಡ್‌ ಕಾರಣದಿಂದ ಜಿಲ್ಲೆಯಲ್ಲಿ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎಪಿಎಂಸಿ) ಭಣಗುಡುತ್ತಿದ್ದು, ವ್ಯಾಪಾರಕ್ಕೆ ತೀವ್ರ ಹಿನ್ನಡೆಯಾಗಿದೆ.

ಯಾದಗಿರಿ, ಶಹಾಪುರ, ಸುರಪುರದಲ್ಲಿ ಮುಖ್ಯ ಮಾರುಕಟ್ಟೆಗಳಿದ್ದು, ಗುರುಮಠಕಲ್‌, ಸೈದಾಪುರ, ಹುಣಸಗಿ, ಕೆಂಭಾವಿಯಲ್ಲಿ ಉಪ ಮಾರುಕಟ್ಟೆಗಳಿವೆ.

ಜಿಲ್ಲೆಯ ಕೆಲ ಮಾರುಕಟ್ಟೆಗಳು ಮಾತ್ರ ಚಾಲ್ತಿಯಲ್ಲಿದ್ದು, ಉಳಿದವು ಬಹುತೇಕ ಬಂದ್‌ ಆಗಿವೆ. ಜಿಲ್ಲೆಯ ವಿವಿಧೆಡೆ ಈಗ ಭತ್ತದ ರಾಶಿ ಮಾತ್ರ ನಡೆಯುತ್ತಿದ್ದು, ಎಪಿಎಂಸಿಗೆ ಸರಕು ಬರುತ್ತಿಲ್ಲ. ಇದರಿಂದ ಹಲವು ವ್ಯಾಪಾರಿಗಳು ಅಂಗಡಿಗಳನ್ನು ಬಂದ್‌ ಮಾಡಿಕೊಂಡಿದ್ದಾರೆ.

ಬೆಳಿಗ್ಗೆ 10ರವರೆಗೆ ಮಾತ್ರ ವ್ಯಾಪಾರಕ್ಕೆ ಅನುಮತಿ ನೀಡಿದಾಗ ಹಲವಾರು ವ್ಯಾಪಾರಿಗಳು ಅಂಗಡಿಗಳನ್ನು ಬಂದ್‌ ಮಾಡಿದ್ದರು. ಮಧ್ಯಾಹ್ನ 12ರವರೆಗೆ ಅವಕಾಶ ನೀಡಿದ್ದರಿಂದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಸೋಮವಾರದಿಂದ ಮತ್ತೆ ಬೆಳಿಗ್ಗೆ 10ರವರೆಗೆ ವ್ಯಾಪಾರಕ್ಕೆ ಅವಕಾಶವಿದೆ. ಹೀಗಾಗಿ ಮತ್ತೆ ಯಾವ ರೀತಿ ಎಪಿಎಂಸಿ ವಹಿವಾಟು ಇರಲಿದೆ ಎನ್ನುವುದು ಪ್ರಶ್ನೆಯಾಗಿದೆ.

ಯಾದಗಿರಿಯಲ್ಲಿ ಚಾಲ್ತಿ:

ಯಾದಗಿರಿ ಎಪಿಎಂಸಿಗೆ ಸದ್ಯ ಶೇಂಗಾ ಮತ್ತು ತೊಗರಿ ಕಾಳು ಬರುತ್ತಿದೆ. ಎರಡು ಬೆಳೆಗಳ ರಾಶಿ ಮುಗಿದಿದೆ. ಇನ್ನೂ ಕೆಲ ದಿನಗಳು ಎಪಿಎಂಸಿ ಕಾರ್ಯಾಚರಣೆ ನಡೆಸಲಿದೆ. ಆನಂತರ ಯಾವುದೇ ಬೆಳೆ ಇಲ್ಲದಿರುವುದರಿಂದ ಬಹುತೇಕ ಅಂಗಡಿಗಳು ಮುಚ್ಚುವ ಸಾಧ್ಯತೆ ಇದೆ.

ಯಾದಗಿರಿ ಎಪಿಎಂಸಿಯಲ್ಲಿ ಬೆಳಿಗ್ಗೆ 6 ರಿಂದ 10.30ರವರೆಗೆ ಟೆಂಡರ್‌ ಆಗುತ್ತಿದೆ. ನಂತರ ವ್ಯಾಪಾರ ಆಗಿ ಮಧ್ಯಾಹ್ನ 12ಕ್ಕೆ ಬಂದ್‌ ಮಾಡಲಾಗುತ್ತಿದೆ.

ಬಾರದ ದಲ್ಲಾಳಿಗಳು:

ಎಪಿಎಂಸಿಯಲ್ಲಿ 200ಕ್ಕೂ ಹೆಚ್ಚು ಪರವಾನಗಿ ಪಡೆದ ವ್ಯಾಪಾರಿಗಳಿದ್ದಾರೆ. ಆದರೆ, 10 ರಿಂದ 15 ಮಂದಿ ಮಾತ್ರ ಅಂಗಡಿ ತೆಗೆಯುತ್ತಿದ್ದಾರೆ. ಇದರಿಂದ ಬಂದ ರೈತರು ಸ್ಪರ್ಧಾತ್ಮಕ ಬೆಲೆ ಇಲ್ಲದೆ ಕೇಳಿದ ಬೆಲೆಗೆ ನೀಡುವ ಪರಿಸ್ಥಿತಿ ಇದೆ.

ಯಾದಗಿರಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಶೇಂಗಾ ತೆಗೆದುಕೊಂಡು ಬರಲಾಗುತ್ತಿದೆ. ಬಂದ ರೈತರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಎಪಿಎಂಸಿ ಬಳಿ ಸಣ್ಣಪುಟ್ಟ ಹೋಟೆಲ್‌ಗಳಿದ್ದು, ಎಲ್ಲವೂ ಮುಚ್ಚಿವೆ. ಸರಕು ತರುವ ರೈತರು ಊಟ, ನೀರಿಗೆ ಪರದಾಡುವುದು ತಪ್ಪಿಲ್ಲ. ಎಪಿಎಂಸಿಯಲ್ಲಿ ನೀರಿನ ಸಮಸ್ಯೆಯಿದ್ದು, ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ರೈತರದ್ದಾಗಿದೆ.

ಮಾಸ್ಕ್‌ ಹಾಕಿಕೊಳ್ಳದ ರೈತರು:

ಕೊರೊನಾ ಕೇಕೆ ಹೆಚ್ಚಾಗುತ್ತಿದ್ದು, ಎಪಿಎಂಸಿಗೆ ಬರುವ ರೈತರು ಮಾಸ್ಕ್‌ ಧರಿಸುತ್ತಿಲ್ಲ. ಹಲವಾರು ರೈತರು ಹೇಳಿದಾಗ ಮಾತ್ರ ಮುಖಕ್ಕೆ ಟವೆಲ್‌ ಅಡ್ಡ ಹಿಡಿದುಕೊಳ್ಳುತ್ತಿದ್ದು, ಆ ನಂತರ ಮೈಮರೆಯುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

‘ಎಪಿಎಂಸಿಯಲ್ಲಿ ಒಬ್ಬ ಅಧಿಕಾರಿಯನ್ನು ನೇಮಿಸಲಾಗಿದೆ. ಅವರು ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಮಾಸ್ಕ್‌ ಧರಿಸುವುದರಿಂದ ಕೊರೊನಾ ತಡೆಯಬಹುದು ಎಂಬುದನ್ನು ರೈತರು ಅರಿತುಕೊಳ್ಳಬೇಕಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಸುಮಂಗಲಾ ಹೂಗಾರ ತಿಳಿಸಿದರು.

ಎಪಿಎಂಸಿ ಹೊರಗೆ ಕುರಿ ವ್ಯಾಪಾರ:

ನಗರದಲ್ಲಿ ಪ್ರತಿ ಮಂಗಳವಾರ ಕುರಿ, ಎತ್ತುಗಳ ಸಂತೆ ನಡೆಯುತ್ತದೆ. ಈಗ ಕೋವಿಡ್‌ ಕಾರಣದಿಂದ ಎಪಿಎಂಸಿ ಒಳಗಡೆ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಇದರಿಂದ ಬೀದಿ ಬದಿ ನಿಂತು ವ್ಯಾಪಾರ ನಡೆಸಲಾಗಿದೆ. ಹಲವಾರು ವ್ಯಾಪಾರಿಗಳು ಮಾಸ್ಕ್‌ ಇಲ್ಲದೆ, ಅಂತರವಿಲ್ಲದೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದರೆ, ಸುರಕ್ಷತಾ ಕ್ರಮ ಪಾಲನೆ ಆಗದಿರುವುದು ಮತ್ತು ಜಾಗೃತಿ ಕೊರತೆ ಇರುವುದು ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT