ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೋಕ ಉದ್ಧರಿಸಿದ ಸಿದ್ದಿಪುರುಷ ವಿಶ್ವಾರಾಧ್ಯರು’

ಅಬ್ಬೆತುಮಕೂರಿನಲ್ಲಿ ಅತಿರುದ್ರಯಾಗ, ವಿಶ್ವರಾಧ್ಯರ ತೊಟ್ಟಿಲೋತ್ಸವ
Last Updated 25 ಮಾರ್ಚ್ 2023, 5:49 IST
ಅಕ್ಷರ ಗಾತ್ರ

ಯಾದಗಿರಿ : ತಮ್ಮ ಸಾಧನೆಯಿಂದ ಸಿದ್ದಿಯ ಶಿಖರವನ್ನೇರಿದ ವಿಶ್ವಾರಾಧ್ಯರು ಲೋಕವನ್ನು ಉದ್ದರಿಸಿದ ಸಿದ್ದಿಪುರುಷರೆಂದು ಕಾಶಿ ವಾರಣಾಸಿ ಪೀಠದ ನೂತನ ಜಗದ್ಗುರು ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಅಬ್ಬೆತುಮಕೂರಿನ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವರಾಧ್ಯರ ತೊಟ್ಟಿಲೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಗಂವ್ಹಾರದ ಗರ್ಭಾಂಬುಧಿಯಲ್ಲಿ ಅವತರಿಸಿ ಬಾಲ್ಯದಲ್ಲಿಯೇ ಅನಂತ ಲೀಲಾ ವಿನೋದಗಳನ್ನು ತೋರಿಸಿದ ವಿಶ್ವಾರಾಧ್ಯರು ಕಾಶಿಯಲ್ಲಿ ವಿದ್ಯೆಯನ್ನು ಪಡೆದು ಪಾರಂಗತರಾಗಿ ಕಾಶಿ ಘನ ಪಂಡಿತರೆಂದು ಜನಜನಿತವಾದ ಮಹಿಮಾ ಪುರಷರು ಅವರಾಗಿದ್ದರೆಂದು ಬಣ್ಣಿಸಿದರು.

ತಾವು ಸಂಪಾದಿಸಿದ ಜ್ಞಾನಸುಧೆಯನ್ನು ನಾಡಿನ ಜನತೆಗೆ ಉಣಬಡಿಸಲು ಲೋಕಸಂಚಾರ ಕೈಗೊಳ್ಳುತ್ತಾರೆ. ಜಗದ ಜನರನ್ನು ಉದ್ದರಿಸುತ್ತಾ ನಾಡ ಸಂಚಾರ ಮಾಡಿದ ವಿಶ್ವಾರಾಧ್ಯರು ಜಗದೊಡೆಯ ಆಗಿದ್ದಾರೆ ಎಂದು
ಹೇಳಿದರು.

ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಮಠದ ಒಡೆಯರಾಗಿ ವಿಶ್ವಾರಾಧ್ಯರ ಪರಂಪರೆಯನ್ನು ಪುನರುತ್ಥಾನ ಮಾಡುವಲ್ಲಿ ಬದ್ದಕಂಕಣರಾಗಿ ಜನೋಪಯೋಗಿ ಮತ್ತು ಲೋಕಕಲ್ಯಾಣದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಶ್ರೀಮಠವನ್ನು ಉತ್ತರೋತ್ತರವಾಗಿ ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಜಗದ ಜನರ ಒಳಿತನ್ನು ಬಯಸಿ ಲೋಕಕಲ್ಯಾಣಕ್ಕಾಗಿ ಇದೀಗ ಅತಿರುದ್ರಯಾಗದಂತಹ ಬೃಹತ್ ಸಮಾರಂಭವನ್ನು ಹಮ್ಮಿಕೊಳ್ಳುವ ಮೂಲಕ ಜನತೆಯಲ್ಲಿ ಭಕ್ತಿ, ಸದಾಚಾರ, ಸಾತ್ವಿಕತೆಗಳನ್ನು ಮೂಡುವಂತೆ ಮಾಡಲು ಈ ಕಾರ್ಯಕ್ರಮ ಕಾರಣೀಭೂತವಾಗುತ್ತದೆ ಎಂದು ಹೇಳಿದರು.

ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಮಾತನಾಡಿ, ವಿಶ್ವಾರಾಧ್ಯರ ಕೃಪಾಶೀರ್ವಾದದ ಬೆಳಕಿನಲ್ಲಿ ಮಠವನ್ನು ಮುನ್ನಡೆಸಿಕೊಂಡು ಬಂದು ಇಷ್ಟೊಂದು ಪ್ರಮಾಣದ ಅಭಿವೃದ್ಧಿ ಮತ್ತು ಏಳ್ಗೆಗೆ ವಿಶ್ವಾರಾಧ್ಯರ ಕೃಪೆ ಹಾಗೂ ಶ್ರೀಮಠದ ಸಮಸ್ತ ಭಕ್ತರ ಸಹಕಾರವೇ ಕಾರಣವೆಂದು ಸ್ಮರಿಸಿದರು.

ಶ್ರೀಮಠದಲ್ಲಿ ವಿಶ್ವಾರಾಧ್ಯರ ಮೂರ್ತಿ ಪುನರ್‌ಬಿಂಬ ಪ್ರತಿಷ್ಠಾಪನಾ ಹಿನ್ನಲೆಯಲ್ಲಿ ಪ್ರತಿ ಹನ್ನೊಂದು ವರ್ಷಗಳಿಗೊಮ್ಮೆ ಶ್ರೀಮಠದಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ಈ ಬಾರಿ ಅತಿರುದ್ರಯಾಗ, 108 ಗೋಮಂಗಲ ಪೂಜೆ, ಅಷ್ಟಲಕ್ಷ್ಮೀ ಕುಬೇರ ಕುಂಕುಮ ಪೂಜೆ, 1008 ಉಮಾಮಹೇಶ್ವರಿ ಸಂತೃಪ್ತಿ ಸಮಾರಂಭ ಜೊತೆಗೆ ವಿಶ್ವಾರಾಧ್ಯರ ಭವ್ಯವಾದ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮ ಹೀಗೆ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳು ವಾರವಿಡಿ ಶ್ರೀಮಠದಲ್ಲಿ ಜರುಗಲಿದ್ದು, ಭಕ್ತರು ಆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಶ್ವಾರಾಧ್ಯರ ಕೃಪಗೆ ಪಾತ್ರರಾಗುವಂತೆ
ಹೇಳಿದರು.

ಇದಕ್ಕೂ ಮುನ್ನ 108 ಗೋವುಗಳಿಗೆ ಭೀಮಾನದಿಯಲ್ಲಿ ಗಂಗಾಸ್ನಾನ ಮಾಡಿಸಿ ಮಂಗಲವಾದ್ಯಗಳ ಮೂಲಕ ಭವ್ಯವಾದ ಮೆರವಣಿಗೆಯಲ್ಲಿ ಶ್ರೀಮಠಕ್ಕೆ ಕರೆತರಲಾಯಿತು.

ಅಲ್ಲಿ ನಿರ್ಮಿಸಲಾದ 108 ಮಂಟಪಗಳಲ್ಲಿ 108 ಗೋವುಗಳನ್ನು ನಿಲ್ಲಿಸಿ 108 ದಂಪತಿಯಿಂದ ವಿಶೇಷ ಗೋಮಂಗಲ ಪೂಜೆ ನೆರವೇರಿಸಲಾಯಿತು.

ನಂತರ ವಿಶ್ವಾರಾಧ್ಯರ ತೊಟ್ಟಿಲೋತ್ಸವ ಜರುಗಿತು. ತರುವಾಯ ಬಾಲಮುತೈದೆಯರಿಗೆ ಉಡಿತುಂಬುವ ಕಾರ್ಯವನ್ನು ನೆರವೇರಿಸಲಾಯಿತು. ಆಗಮಿಸಿದ ಎಲ್ಲ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ
ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT