ಮಂಗಳವಾರ, ನವೆಂಬರ್ 24, 2020
26 °C

ಪರಿಶಿಷ್ಟರ ಸಮಸ್ಯೆ ನಿವಾರಣೆಗೆ ಬದ್ಧ: ಡಿವೈಎಸ್‍ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಪರಿಶಿಷ್ಟರ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಲಾಗಿದೆ. ಅಸ್ಪಶ್ಯತೆ ನಿವಾರಿಸಲು ಪೊಲೀಸ್ ಇಲಾಖೆ ಬದ್ಧವಾಗಿದೆ. ಪ್ರತಿ ದೂರುಗಳನ್ನು ತಪ್ಪಿಸಲು ಯತ್ನಿಸಲಾಗುವುದು. ಆದರೆ ಅನಿವಾರ್ಯ ಪರಿಸ್ಥಿತಿಗಳಲ್ಲಿ ಪ್ರತಿದೂರು ದಾಖಸಿಕೊಳ್ಳಬೇಕಿದೆ’ ಎಂದು ಡಿವೈಎಸ್‍ಪಿ ವೆಂಕಟೇಶ್ ಉಗಿಬಂಡಿ ತಿಳಿಸಿದರು.

ಗರುಡಾದ್ರಿ ಕಲಾಮಂದಿರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ದಲಿತ ದಿನಾಚರಣೆ ಹಾಗೂ ಕುಂದುಕೊರತೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಗರದ ಬುದ್ಧವಿಹಾರದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ತಡೆಯಲು ಸೂಚಿಸಲಾಗುವುದು. ಪರಿಶಿಷ್ಟ ಜಾತಿ ಬಡಾವಣೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

‘ಹಳ್ಳಿಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಮೊರಾರ್ಜಿ ವಸತಿ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಜಾಗೃತಿ ಮೂಡಿಸಬೇಕು. ಪ್ರತಿಭಟನೆ ಮಾಡುವ ಮುನ್ನಾ ತಹಶೀಲ್ದಾರರ ಅನುಮತಿ ಪಡೆಯಬೇಕು. ಅದು ಪಡೆದಲ್ಲಿ ರಕ್ಷಣೆ ಒದಗಿಸಲಾಗುತ್ತದೆ. ಒತ್ತಾಯ ಪೂರ್ವಕವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವಂತಿಲ್ಲ. ರಸ್ತೆ ತಡೆ ಮಾಡುವ ಹಾಗಿಲ್ಲ’ ಎಂದು ತಿಳಿಸಿದರು.

ಸುರಪುರ ಮತ್ತು ಶಹಾಪುರ ತಾಲ್ಲೂಕಿನ ದಲಿತ ಮುಖಂಡರು ಮಾತನಾಡಿ, ‘ಎರಡು ತಾಲ್ಲೂಕುಗಳಲ್ಲಿ ಅಸ್ಪಶ್ಯತೆ ಸಂಪೂರ್ಣವಾಗಿ ನಿಂತಿಲ್ಲ. ಈಗಲೂ ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಪರಿಶಿಷ್ಟ ಜಾತಿ ಓಣಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಠಾಣೆಗೆ ಬಂದರೂ ಪ್ರಕರಣ ತೆಗೆದುಕೊಳ್ಳುತ್ತಿಲ್ಲ. ಅನ್ಯಾಯಕ್ಕೆ ಒಳಗಾದವರ ಪರ ನಿಲ್ಲುತ್ತಿಲ್ಲ. ಒತ್ತಾಯ ಮಾಡಿದರೆ ನಿಮ್ಮ ಮೇಲೆಯೇ ಕೇಸ್ ದಾಖಲಿಸಲಾಗುತ್ತಿದೆ ಎಂಬುದಾಗಿ ಪೊಲೀಸರು ದಬ್ಬಾಳಿಕೆ ನಡೆಸುತ್ತಾರೆ’ ಆಕ್ರೋಶ ವ್ಯಕ್ತಪಡಿಸಿದರು.

‘ಕೆಂಭಾವಿ ಠಾಣಾ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯವರ ಮೇಲೆಯೇ ಹೆಚ್ಚು ಪ್ರಕರಣ ದಾಖಲಾಗಿವೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿಯವರನ್ನು ಕೇವಲವಾಗಿ ನಡೆಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ಸುರಪುರ ಪೊಲೀಸ್ ಇನ್‍ಸ್ಪೆಕ್ಟರ್ ಎಸ್.ಎಂ. ಪಾಟೀಲ್, ಶಹಾಪುರ ಇನ್‍ಸ್ಪೆಕ್ಟರ್ ಶ್ರೀನಿವಾಸ ಅಲ್ಲಾಪುರ, ಹುಣಸಗಿ ಇನ್‍ಸ್ಪೆಕ್ಟರ್ ದೌಲತ್ ಕುರಿ, ಸಮಾಜ ಕಲ್ಯಾಣ ಅಧಿಕಾರಿ ಸತ್ಯನಾರಾಯಣ ದರಬಾರಿ, ಸುರಪುರ ಉಪವಿಭಾಗದ ಎಲ್ಲ ಪಿಎಸ್‍ಐಗಳು ಹಾಗೂ ಪೊಲೀಸ್ ಸಿಬ್ಬಂದಿ, ಮುಖಂಡರಾದ ಮಾಳಪ್ಪ ಕಿರದಳ್ಳಿ, ಭೀಮಾಶಂಕರ ಬಿಲ್ಲವ್, ನಿಂಗಣ್ಣ ಗೋನಾಲ, ವೆಂಕೋಬ ದೊರೆ, ದುರ್ಗಪ್ಪ, ವೆಂಕಟೇಶ ಬೇಟೆಗಾರ, ರಾಹುಲ್ ಹುಲಿಮನಿ, ನಾಗಣ್ಣ ಕಲ್ಲದೇವನಹಳ್ಳಿ, ರಮೇಶ ದೊರೆ, ಬಸವರಾಜ, ದೇವೇಂದ್ರಪ್ಪ ಕೆಂಭಾವಿ, ಅಶೋಕ, ಮರಿಯಪ್ಪ ಜಾಲಿಬೆಂಚಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.