ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಗಿರಿಜಿಲ್ಲೆಗೇನು?

Published 1 ಫೆಬ್ರುವರಿ 2024, 5:44 IST
Last Updated 1 ಫೆಬ್ರುವರಿ 2024, 5:44 IST
ಅಕ್ಷರ ಗಾತ್ರ

ಯಾದಗಿರಿ: ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಜಿಲ್ಲೆಯಾದ ಯಾದಗಿರಿ ಜಿಲ್ಲೆಗೆ ಈ ಬಾರಿಯಾದರೂ ಗಮನಾರ್ಹ ಯೋಜನೆ ಸಿಗಲಿದೆಯಾ ಎನ್ನುವ ನಿರೀಕ್ಷೆ ಜಿಲ್ಲೆಯ ಜನರದ್ದಾಗಿದೆ.

ಫೆಬ್ರುವರಿ 1ರಂದು ಕೇಂದ್ರ ಬಜೆಟ್‌ ಮಂಡನೆಯಾಗಲಿದ್ದು, ಜಿಲ್ಲೆಗೇನು ಸಿಗಲಿದೆ ಎನ್ನುವುದು ಕುತೂಹಲ ಮೂಡಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ಕೇಂದ್ರ ಬಜೆಟ್ ಜನರಿಗೆ ಹೊರೆಯಾಗದಂತೆ ಬಜೆಟ್ ಮಂಡನೆ ನಿರೀಕ್ಷೆ ಇದೆ.

ಈ ಹಿಂದೆ ಘೋಷಿಸಿದ ಬೆರಳೆಣಿಕೆ ಯೋಜನೆಗಳು ಜಾರಿಯಾಗಿಲ್ಲ. ಅಲ್ಲದೇ ಸರ್ಕಾರವೇ ಘೋಷಿಸಿ ಹಿಂಪಡೆದ ಉದಾಹರಣೆಗಳು ಇವೆ. ಹೀಗಾಗಿ ಈ ಬಾರಿ ಬಜೆಟ್‌ನಲ್ಲಿ ಏನು ಸಿಗುವುದು ಎನ್ನುವ ನಿರೀಕ್ಷೆಯಲ್ಲಿ ಜನ ಕಾಲ ಕಳೆಯುವಂತೆ ಆಗಿದೆ.

ಮಹಾತ್ವಕಾಂಕ್ಷಿ ಜಿಲ್ಲೆಗೆ ನೇರವಾಗಿ ಅನುದಾನ ಬರದಿದ್ದರೂ ವಿವಿಧ ಯೋಜನೆಗಳನ್ನು ರೂಪಿಸಿದರೆ ಬರಲಿದೆ. ಅಲ್ಲದೇ ಈಗ ಜಿಲ್ಲೆಯ ಜೊತೆಗೆ ಮಹಾತ್ವಕಾಂಕ್ಷಿ ತಾಲ್ಲೂಕಾಗಿ ವಡಗೇರಾ ತಾಲ್ಲೂಕು ಆಯ್ಕೆಯಾಗಿದ್ದು, ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಬರಬೇಕಿದೆ. ಬಿಜೆಪಿ ಸರ್ಕಾರದ ಕಳೆದ 9 ವರ್ಷಗಳಲ್ಲಿ ಜಿಲ್ಲೆಗೆ ಪ್ರತ್ಯೇಕ ಅನುದಾನ ಅಥವಾ ಯೋಜನೆ ಘೋಷಣೆಯಾಗಿಲ್ಲ.

ಕೈಗಾರಿಕಾ ಪ್ರದೇಶ ಅಭಿವೃದ್ಧಿ: ಜಿಲ್ಲೆಯ ಕಡೇಚೂರು ಬಾಡಿಯಾಳದಲ್ಲಿ ಸಾಕಷ್ಟು ಜಮೀನು ಕೈಗಾರಿಕೆಗಳಿಗೆ ಮೀಸಲಿಟ್ಟಿದ್ದು, ಅಲ್ಲಿ ಕೈಗಾರಿಕಾ ಕಾರ್ಖಾನೆಗಳನ್ನು ಸ್ಥಾಪನೆ ಮಾಡಬೇಕು ಎನ್ನುವುದು ಬಹುದಿನದ ಆಸೆಯಾಗಿದೆ. ಫಾರ್ಮಾ ಸ್ಥಾಪನೆ ಮಾಡುತ್ತೇವೆ ಎಂದು ಭರವಸೆಗಳು ಇನ್ನೂ ಈಡೇರಿಲ್ಲ. ಇದರಿಂದ ಜಿಲ್ಲೆಯ ಜನತೆ ಭ್ರಮನಿರಸಗೊಂಡಿದ್ದಾರೆ.

ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಒಳಪಡುವ ನೀರಾವರಿ ಪ್ರದೇಶಕ್ಕೆ ಒಳಪಟ್ಟಿರುವ ಈ ಜಿಲ್ಲೆಯಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಕೈಗಾರಿಕಾ ಕ್ಷೇತ್ರದಲ್ಲಿ ಬಹಳಷ್ಟು ಹಿಂದುಳಿದ ಜಿಲ್ಲೆಯಾಗಿದೆ.

ಜಿಲ್ಲೆಗೆ ಸಂಬಂಧಿಸಿದಂತೆ ಚತುಷ್ಪಥ ರಸ್ತೆ ವೈದ್ಯಕೀಯ ಕಾಲೇಜು ಜಲಧಾರೆ ಯೋಜನೆಗಳನ್ನು ನೀಡಲಾಗಿದೆ. ಈ ಬಾರಿ ಮಂಡನೆಯಾಗುವ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಘೋಷಿಸುವ ನಿರೀಕ್ಷೆ ಇದೆ.
ರಾಜಾ ಅಮರೇಶ್ವರ ನಾಯಕ ರಾಯಚೂರು ಸಂಸದ
ಕಲ್ಯಾಣ ಕರ್ನಾಟಕದಲ್ಲಿ 371 (ಜೆ) ಜಾರಿಯಲ್ಲಿದ್ದು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಆದಾಯ ತೆರಿಗೆ ಸ್ಲ್ಯಾಬ್‌ ₹2 ಲಕ್ಷ ಹೆಚ್ಚುವರಿ ಮಾಡಬೇಕು. ಇದರಿಂದ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ.
ದಿನೇಶಕುಮಾರ ಜೈನ್‌ ಜಿಲ್ಲಾ‌ ವಾಣಿಜ್ಯ ಮತ್ತು ಕೈಗಾರಿಕಾ ಜಿಲ್ಲಾಧ್ಯಕ್ಷ
‘ರೈಲು ನಿಲುಗಡೆಯಾಗಲಿ’
ಗುಂತಕಲ್ ವ್ಯಾಪ್ತಿಯ ಯಾದಗಿರಿ ರೈಲು ನಿಲ್ದಾಣದಿಂದ ಗುಂತಕಲ್ ಬಿಟ್ಟರೆ ಎರಡನೇ ಸ್ಥಾನದಲ್ಲಿ ಹೆಚ್ಚು ಆದಾಯ ಕೊಡುವ ನಿಲ್ದಾಣವಾಗಿದೆ. ಆದರೂ ಅಭಿವೃದ್ಧಿ ಸೇರಿದಂತೆ ಮೂಲಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯಿಸಲಾಗಿದೆ. ಜಿಲ್ಲಾ ಕೇಂದ್ರವಾದರೂ ಕೆಲವು ರೈಲುಗಳು ಯಾದಗಿರಿಯಲ್ಲಿ ನಿಲುಗಡೆಯಾಗುತ್ತಿಲ್ಲ. ಇದರಿಂದ ಪ್ರಯಾಣಿಕರು ಕೆಲವು ರೈಲುಗಳಲ್ಲಿ ಪ್ರಯಾಣಿಸುವಂತಾಗಿದೆ. ‘ಜಿಲ್ಲೆಯಲ್ಲಿ ಕೃಷ್ಣಾ ಭೀಮಾ ನದಿಗಳು ಹರಿಯುತ್ತಿದ್ದರೂ ಗುಳೆ ಹೋಗುವುದು ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಹೊಸ ಮತ್ತು ಹಳೆ ತಾಲ್ಲೂಕುಗಳು 6 ಇದ್ದು ಇಂದಿಗೂ ಹಳೆ ತಾಲ್ಲೂಕುಗಳಿಗೆ ಅಲೆದಾಟ ತಪ್ಪಿಲ್ಲ. ಹೊಸ ಕಚೇರಿಗಳು ಆರಂಭವಾಗಿಲ್ಲ. ಗುಳೆ ತೆರಳುವವರು ಸರಿಯಾದ ರೈಲು ಇಲ್ಲದೇ ನಿಂತುಕೊಂಡೆ ಪ‍್ರಯಾಣ ಮಾಡುತ್ತಿದ್ದಾರೆ. ಕಲುಬುರಗಿಯಿಂದ ಗುಂತಕಲ್‌ ವರೆಗೆ ಡೆಮೊ ರೈಲು ಆರಂಭಿಸಬೇಕು. ಎಕ್ಸ್‌ಪ್ರೆಸ್‌ ರೈಲುಗಳನ್ನು ನಿಲುಗಡೆ ಮಾಡಲು ಕ್ರಮ ವಹಿಸಬೇಕು ಎನ್ನುತ್ತಾರೆ ಹಿರಿಯ ವಕೀಲ ಭಾಸ್ಕರರಾವ ಮುಡಬೂಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT