ಸೋಮವಾರ, ಜನವರಿ 17, 2022
20 °C

ಯಾದಗಿರಿ | ವಚನಗಳ ಸರದಾರ: ‘ಫಕೀರ’ ನಬಿಲಾಲ

ಅಶೋಕ ಸಾಲವಾಡಗಿ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಅಷ್ಟೇನೂ ಎತ್ತರವಲ್ಲದ ಕೃಷ ಶರೀರ. ಉದ್ದನೆಯ ಬಿಳಿ ದಾಡಿ, ದೊಡ್ಡ ಕನ್ನಡಕ, ಹೆಗಲ ಮೇಲೆ ಹಸಿರು ಶಾಲು, ತಲೆಯ ಮೇಲೆ ಹಸಿರು ಟೋಪಿ, ಸಾದಾ ದಿರಿಸು.

ಇವು ವಚನಗಳಲ್ಲಿ ಅನನ್ಯ ಕೃಷಿ ಮಾಡಿರುವ ಕವಿ ನಬಿಲಾಲ (ನಬಿಷಾ) ಬದ್ರುದ್ದೀನ್ ಮಕಾನದಾರ ಅವರ ವ್ಯಕ್ತಿತ್ವದ ಮೇಲ್ನೋಟದ ಚಿತ್ರ. ಇವೇ ತನ್ನ ಅಸ್ಮಿತೆ ಎಂದು ಬಿಂಬಿಸುವ ಅವರಿಗೆ ಅಧ್ಯಾತ್ಮದ ನಂಟು ಬೇರೆ.

ಬಹು ವಿಧದ ಸಾಹಿತ್ಯವನ್ನು ಕರತಲಾಮಲಕ ಮಾಡಿಕೊಂಡಿರುವ ನಬಿಲಾಲ ಇದುವರೆಗೆ 300ಕ್ಕೂ ಹೆಚ್ಚು ನವ್ಯ, 500ಕ್ಕೂ ಹೆಚ್ಚು ಚುಟುಕು, 200ಕ್ಕೂ ಹೆಚ್ಚು ಗಝಲ್ ರಚಿಸಿದ್ದಾರೆ.

ವಚನ ಸಾಹಿತ್ಯದ ಆಳಕ್ಕೆ ಇಳಿದು ತಮ್ಮದೇ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಅವರ ಬತ್ತಳಿಕೆಯಿಂದ ಬಂದ ಐದು ಸಾವಿರಕ್ಕೂ ಹೆಚ್ಚು ವಚನಗಳು ಈ ಬಗೆಯ ಸಾಹಿತ್ಯ ದಾಹಕ್ಕೆ ನಿದರ್ಶನ. ಎಲ್ಲ ವಚನಗಳು ಮನಸ್ಸಿಗೆ ಮುದ ನೀಡುತ್ತವೆ.

ವಚನಗಳು ತಾತ್ವಿಕ, ಧಾರ್ಮಿಕ, ಸಾಮಾಜಿಕ, ಸೂಫಿ, ವೈಜ್ಞಾನಿಕ, ತತ್ವ, ಮೂಢನಂಬಿಕೆ, ವಾಸ್ತವ, ಭವಿಷ್ಯ, ಚಿಂತನೆ, ಅಧ್ಯಾತ್ಮ ಮತ್ತಿತರ ರೂಪಗಳಲ್ಲಿ ಅರಳಿವೆ. ಕೆಲ ಕಾಲ ರೈತ ಸಂಘಟನೆಯಲ್ಲಿ ತೊಡಗಿಸಿ ಕೊಂಡಿದ್ದರಿಂದ ರೈತನ ಬಗ್ಗೆ ಕಳಕಳಿಯೂ ವಚನಗಳಲ್ಲಿ ಮೂಡಿದೆ.

1961ರಲ್ಲಿ ಜನಿಸಿರುವ ಈ ಸಾಹಿತಿ, ಮೂರು ವರ್ಷ ಉರ್ದುವಿನಲ್ಲಿ ಓದಿದ್ದು ಅದರ ಪ್ರಭಾವ ವಚನಗಳಲ್ಲಿ ಕಂಡು ಬರುತ್ತದೆ. ಸುರಪುರ ತಾಲ್ಲೂಕಿನ ಪೇಠಮ್ಮಾಪುರ ಜನ್ಮದೂರು. ಅಲ್ಲೆಯೇ ಪ್ರಾಥಮಿಕ ಶಿಕ್ಷಣ. ಎಸ್ಸೆಸ್ಸೆಲ್ಸಿ ಸುರಪುರದಲ್ಲಿ.

1977ರಲ್ಲಿ ಖ್ಯಾತ ಸಾಹಿತಿ ಗುರುಬಸವಯ್ಯ ಅಮ್ಮಾಪುರ ಅವರನ್ನು ಗುರುವಾಗಿ ಸ್ವೀಕರಿಸಿ ಅವರ ಮಾರ್ಗದರ್ಶನದಲ್ಲಿ ಪಳಗಿದ ನಬಿಲಾಲ ನಂತರ ಹಿಂತಿರುಗಿ ನೋಡಲಿಲ್ಲ. ಗಝಲ್‍ನಲ್ಲಿ ಶಾಂತರಸ, ಅಧ್ಯಾತ್ಮದಲ್ಲಿ ಎ. ಕೃಷ್ಣ, ನವ್ಯದಲ್ಲಿ ಲಿಂಗಣ್ಣ ಸತ್ಯಂಪೇಟೆ ಗುರುಗಳು.

1982ರಲ್ಲಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ ಸೇವೆಗೆ ಸೇರಿದರೂ ಸಾಹಿತ್ಯದ ಹಸಿವು ಮುಂದುವರೆದೇ ಇತ್ತು. 2020ರಲ್ಲಿ ನಿವೃತ್ತಿಯಾಗುವವರೆಗೂ ಮನಸ್ಸು ಸೆಳೆದಿದ್ದು ಬರಹಕ್ಕೆ. 1977ರಿಂದ ಎಲ್ಲ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾಜರಿ. ಅನೇಕ ಕಡೆ ಕವಿಗೋಷ್ಠಿಯಲ್ಲಿ ಭಾಗಿ.

‘ಸುರುಗುಣಕಿ’, ‘ಮುಪ್ಪುರಿ’ ಮತ್ತು ‘ಅಲೆಮಾರಿ ದರವೇಶಿಯ ಹದಗೊಂಡ ಅನುಭಾವ’ ಕೃತಿಗಳು ಪ್ರಕಟಗೊಂಡಿವೆ. ಇನ್ನೂ 50 ಕೃತಿಗಳು ಮುದ್ರಣವಾಗುವಷ್ಟು ಸಾಹಿತ್ಯ ರಚನೆ ಅವರಲ್ಲಿ ಹದಗೊಂಡಿದೆ.

ನಗರದಿಂದ ದೂರದ ಹೊಸಬಾವಿ ಹತ್ತಿರ ಹೂಗಾರ ಫಕೀರಪ್ಪ ಬಡಾವಣೆಯಲ್ಲಿ ಮನೆಕಟ್ಟಿಕೊಂಡು ವಾಸವಾಗಿರುವ ನಬಿಲಾಲ ಅವರದ್ದು ಚಿಕ್ಕ ಕುಟುಂಬ. ಪತ್ನಿ ಶರೀಫಾಬೇಗಂ ಪತಿಗೆ ಅನುರೂಪೆ. ಇಬ್ಬರು ಪುತ್ರರು, ಒಬ್ಬ ಪುತ್ರಿ ಉನ್ನತ ವ್ಯಾಸಂಗ ಮುಗಿಸಿ ವೃತ್ತಿಯಲ್ಲಿದ್ದಾರೆ.

ಪ್ರಶಸ್ತಿಯ ಬೆನ್ನು ಹತ್ತಿ ಹೋಗದ ನಬಿಲಾಲ ತಾವಾಯಿತು, ತಮ್ಮ ವಚನವಾಯಿತು ಎಂದು ಇದ್ದು ಬಿಟ್ಟಿದ್ದಾರೆ. ಹೀಗಾಗಿ ಹೆಚ್ಚಿನ ಪ್ರಶಸ್ತಿಗಳೇನೂ ಬಂದಿಲ್ಲ. ನಿವೃತ್ತಿಯ ನಂತರ ದಿನಾಲೂ ಕನಿಷ್ಠ ಮೂರು ವಚನವನ್ನಾದರೂ ಬರೆಯುತ್ತಾರೆ. ದಿನಾಲೂ ಒಂದು ಗಂಟೆ ಧ್ಯಾನ ಮಾಡುವ ಅವರು ಸಹಜವಾಗಿ ಶಾಂತ ವ್ಯಕ್ತಿತ್ವ ಹೊಂದಿದ್ದಾರೆ. ಆಗಾಗ ಗಣೇಶ ಬೀಡಿ ದಮ್ ಹೊಡೆದು ನಂತರ ಬರೆಯಲು ಕೂರುತ್ತಾರೆ.

ಎರಡು ಅಂಕಿತನಾಮ
ಸಹಜವಾಗಿ ಕವಿಗಳು ಒಂದು ಅಂಕಿತ ನಾಮ ಹೊಂದಿರುತ್ತಾರೆ. ಆದರೆ ನಬಿಲಾಲ ಅವರು ಎರಡು ಅಂಕಿತ ನಾಮಗಳನ್ನು ಬಳಸುತ್ತಾರೆ. ಒಂದು ಅವರ ಗುರು ‘ಗುರುಬಸವ’ ಹೆಸರಿನಲ್ಲಿ ಮತ್ತೊಂದು ಅವರು ಪ್ರಭಾವಕ್ಕೆ ಒಳಗಾದ ಖ್ಯಾತ ಸೂಫಿ ಸಂತ ‘ಷಾಮದಾರಿಯಾ’ ಹೆಸರಲ್ಲಿ.

ತಾತಾ, ತಂದೆ (ಟೇಲರ್ ಕೆಲಸ ಮಾಡುತ್ತಿದ್ದರೂ) ಆಗಾಗ ಫಕೀರ ವೃತ್ತಿ ಮಾಡುತ್ತಿದ್ದರು. ನಬಿಲಾಲರೂ ಹಲವು ವರ್ಷ ಫಕೀರ ವೃತ್ತಿ ನಡೆಸಿದ್ದಾರೆ. ಸೂಫಿಯನ್ನು ಆಳವಾಗಿ ಅಭ್ಯಸಿಸಿದ್ದಾರೆ. ಭೇಟಿಯಾದ ವ್ಯಕ್ತಿಯ ಅಂಗೈಯನ್ನು ತಮ್ಮ ಅಂಗೈಯಲ್ಲಿ ಬಂಧಿಸಿ ಕಣ್ಣುಮುಚ್ಚಿ ಸೂಫಿ ಮಂತ್ರ ಪಠಿಸಿ ಒಳ್ಳೆಯದಾಗಲಿ ಎನ್ನುವುದು ಅವರ ವೈಶಿಷ್ಟ್ಯ.

ನಬಿಲಾಲರ ವಚನ
‘ಹುತ್ತಗಟ್ಟಿದ ಪುರುಷಾರ್ಥ ಚಿತ್ತಕೆ
ಅಂಗಬೇಧ ರಹಿತ ಸ್ವಯಂಭೂ ಚಿತ್ತಾರ
ನಿರಾಕಾರ, ನಿರ್ಗುಣ, ಮೂಲಸತ್, ಚಿನ್ಮಯ, ಚಿತ್ಕಳೆ
ಸರ್ವೋತ್ತಮ, ಸಚ್ಚಿದಾನಂದ ಸೋಹಂ, ಸಾರೂಪ್ಯ
ಅಸದಳ ಎಂದ ಎನ್ನ ಗುರುಬಸವ ಷಾಮದಾರಿಯಾ||’

*

ವಚನಗಳಲ್ಲಿ ನಬಿಲಾಲರ ಸಾಧನೆ ಅನನ್ಯವಾಗಿದ್ದು, ಎಲೆಮರೆ ಕಾಯಿಯಂತೆ ಸಾಹಿತ್ಯದಲ್ಲಿ ತೊಡಗಿರುವ ಅವರಿಗೆ ದೊಡ್ಡ ಪ್ರಶಸ್ತಿಗಳು ಬರಬೇಕು.
-ಎ. ಕಮಲಾಕರ, ಸಾಹಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.