ವಡಗೇರಾ: ಹೋಬಳಿ ಕೇಂದ್ರವಾಗಿದ್ದ ವಡಗೇರಾ ಗ್ರಾಮವನ್ನು ನೂತನ ತಾಲ್ಲೂಕು ಕೇಂದ್ರವಾಗಿ ಸರ್ಕಾರ ಘೋಷಣೆ ಮಾಡಿ ಏಳು ವರ್ಷ ಕಳೆಯುತ್ತಾ ಬಂದರೂ ಈವರೆಗೂ ತಾಲ್ಲೂಕು ಕೇಂದ್ರದಲ್ಲಿ ತಾಲ್ಲೂಕು ಮಟ್ಟದ ಕಚೇರಿಗಳು ಕಾರ್ಯಾರಂಭ ಮಾಡಿಲ್ಲ. ಇದರಿಂದಾಗಿ ಈ ಭಾಗದ ಸಾರ್ವಜನಿಕರು ಹಾಗೂ ರೈತರು ದೂರದ ಶಹಾಪೂರ ತಾಲ್ಲೂಕುವನ್ನೇ ಅವಲಂಬಿಸಿದ್ದಾರೆ.
ರಾಜ್ಯ ಸರ್ಕಾರ 2018ರಲ್ಲಿ ವಡಗೇರಾವನ್ನು ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಿದ್ದು, ಈ ತಾಲ್ಲೂಕಿನ ವ್ಯಾಪ್ತಿಯಲ್ಲಿ 64 ಹಳ್ಳಿ ಬರುತ್ತವೆ.
ತಾಲ್ಲೂಕು ಕಚೇರಿಗಳು ಇಲ್ಲ: ನೂತನ ತಾಲ್ಲೂಕಿನಲ್ಲಿ ಸುಮಾರು 22 ತಾಲ್ಲೂಕು ಕಚೇರಿಗಳು ಆರಂಭವಾಗಬೇಕು ಆದರೆ ತಹಶೀಲ್ ಕಚೇರಿ, ತಾ.ಪಂ.ಕಚೇರಿ, ಕೃಷಿ ಇಲಾಖೆ ಕಚೇರಿ ಹೊರತು ಪಡಿಸಿ ಉಳಿದ ತಾಲ್ಲೂಕು ಕಚೇರಿಗಳು ಆರಂಭವಾಗಿಲ್ಲ.
ಕಾಲೇಜುಗಳೆ ಇಲ್ಲ: ನೂತನ ತಾಲ್ಲೂಕು ಕೇಂದ್ರದಲ್ಲಿ ಪದವಿಪೂರ್ವ, ಪದವಿ ಹಾಗೂ ಇತರ ತಾಂತ್ರಿಕ ಕಾಲೇಜುಗಳು ಆರಂಭಗೊಂಡಿಲ್ಲ. ಹೀಗಾಗಿ ಈ ಭಾಗದ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಈ ಭಾಗದಲ್ಲಿ ಕಾಲೇಜುಗಳನ್ನು ಆರಂಭಿಸದೆ ಇರುವುದರಿಂದ ಬಡ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದಿಂದ ವಂಚಿತರಾಗುತಿದ್ದಾರೆ.
ಕೊನೆ ಅಂಚಿನ ಗ್ರಾಮಗಳಿಗೆ ಕಾಲುವೆಗಳಿಂದ ನೀರಿಲ್ಲ: ಇನ್ನೂ ಈ ಭಾಗದ ರೈತರ ಪರಿಸ್ಥಿತಿಯಂತೂ ಕೇಳುವಂತಿಲ್ಲ. ಈ ಭಾಗದಲ್ಲಿ ಇರುವ ಕಾಲುವೆಗಳು ಹೆಸರಿಗೆ ಮಾತ್ರ ಇದ್ದಂತಿವೆ. ಕೊನೆ ಅಂಚಿನ ಗ್ರಾಮಗಳ ರೈತರ ಜಮೀನುಗಳಿಗೆ ಕಾಲುವೆ ನೀರು ಹರಿಯದೆ ಇರುವುದರಿಂದ ಹೊಲಗಳಲ್ಲಿ ಬೆಳೆದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.
ಈ ಹಿಂದೆ ಕಂದಾಯ ಸಚಿವರಾಗಿದ್ದ ಆರ್.ವಿ.ದೇಶಪಾಂಡೆಯವರು ನೂತನ ತಾಲ್ಲೂಕುಗಳ ಅಭಿವೃದ್ಧಿಗಾಗಿ ₹ 10 ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸದನದಲ್ಲಿ ಹೇಳಿದ್ದರು. ಆದರೆ ಆ ಹೇಳಿಕೆ ಸದನಕ್ಕೆ ಮಾತ್ರ ಸೀಮಿತವಾಗಿದೆ ಎಂದು ಈ ಭಾಗದ ಸಾರ್ವಜನಿಕರು ವ್ಯಂಗವಾಡುತ್ತಿದ್ದಾರೆ.
ತುರ್ತಾಗಿ ಆಗಬೇಕಾದ ಕಚೇರಿಗಳು: ಉಪ ನೋಂದಣಿ ಕಚೇರಿ, ಬಿಇಒ ಕಚೇರಿ, ಅಗ್ನಿಶಾಮಕ ಠಾಣೆ,ಲೋಕೋಪಯೋಗಿ ಇಲಾಖೆ, ಗ್ರಾಮೀಣ ಅಭಿವೃದ್ಧಿ ಮತ್ತು ಒಳಚರಂಡಿ ಇಲಾಖೆ ನೂತನ ತಾಲ್ಲೂಕಿಗೆ ಬೇಕಾದ ಕಚೇರಿಗಳು. ಸರ್ಕಾರ ನೂತನ ತಾಲ್ಲೂಕಿನ ಅಭಿವೃದ್ಧಿಗೆ ತಾಲ್ಲೂಕು ಕಚೇರಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ರೈತರು, ಸಾರ್ವಜನಿಕರು,ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
Quote - ವಡಗೇರಾ ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸ್ಥಳವನ್ನು ಗುರುತಿಸಲಾಗಿದೆ. ಅದಕ್ಕಾಗಿ 10 ಕೋಟಿ ಅನುದಾನ ಬಂದಿದೆ. ಮುಂಬರುವ ದಿನಗಳಲ್ಲಿ ಮಿನಿ ವಿಧಾನಸೌದದ ಭೂಮಿ ಪೂಜೆ ಮಾಡಲಾಗುವುದು. ಶ್ರೀನಿವಾಸ ಚಾಪೆಲ್ ತಹಶೀಲ್ದಾರ್ ವಡಗೇರಾ
Quote - ನೂತನ ತಾಲ್ಲೂಕಿನಲ್ಲಿ ತಾಲ್ಲೂಕು ಕಚೇರಿಗಳು ಇಲ್ಲ. ಇದರಿಂದ ನೂತನ ತಾಲ್ಲೂಕಿನ ಅಭಿವೃದ್ಧಿ ಕುಂಠಿತವಾಗಿದೆ .ಕೂಡಲೇ ಕಚೇರಿಗಳನ್ನು ಆರಂಭಿಸಲು ಮುಖ್ಯ ಮಂತ್ರಿಗಳು ಕ್ರಮ ಕೈಗೊಳ್ಳಬೇಕು. ಸಿದ್ದಣ್ಣಗೌಡಕಾಡಂನೋರ ಮಾಜಿ ಅಧ್ಯಕ್ಷ ಹಾಲು ಒಕ್ಕೂಟ
Quote - ವಡಗೇರಾದಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಕಚೇರಿಗಳು ಶೀಘ್ರವೇ ಪ್ರಾರಂಭ ಮಾಡಬೇಕು.ಇಲ್ಲವಾದಲ್ಲಿ ಮುಂದಿನ ವರ್ಷದ ಸೆಪ್ಟೆಂಬರ್ 17ರ ಧ್ವಜಾರೋಹಣ ಸಮಯದಲ್ಲಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಿಗೆ ಮುತ್ತಿಗೆಹಾಕಿ ಕಪ್ಪು ಬಟ್ಟಿ ಪ್ರದರ್ಶಿಸಲಾಗುವುದು ರಂಗಯ್ಯ ಮುಸ್ತಾಜೀರ ಜಿಲ್ಲಾಧ್ಯಕ್ಷ ನಮ್ಮ ಕರ್ನಾಟಕ ಸೇನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.