ಮಂಗಳವಾರ, ಸೆಪ್ಟೆಂಬರ್ 28, 2021
20 °C

ವೇಣುಗೋಪಾಲಸ್ವಾಮಿ ಜಾತ್ರೆ: ಕಂಬಾರೋಹಣ ವೀಕ್ಷಣೆಗೆ ಜನಸ್ತೋಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಇತಿಹಾಸ ಪ್ರಸಿದ್ಧ ವೇಣುಗೋಪಾಲಸ್ವಾಮಿ ಜಾತ್ರೆಯ (ಹಾಲೋಕಳಿ) ಅಂಗವಾಗಿ ಮಂಗಳವಾರ ಸಂಜೆ ನಡೆದ ದೇವರ ಕಂಬಾರೋಹಣ ವೀಕ್ಷಣೆಗೆ ಸಾವಿರಾರು ಜನ ಸೇರಿದ್ದು, ಮಾಸ್ಕ್‌ ಧಾರಣೆ ಮತ್ತು ವ್ಯಕ್ತಿಗತ ಅಂತರ ಇಲ್ಲದಿರುವುದು ಕಂಡುಬಂತು.

ಕೋವಿಡ್‌ನಿಂದಾಗಿ ಹಾಲೋಕಳಿ ಜಾತ್ರೆಯನ್ನು ಎರಡು ವರ್ಷಗಳಿಂದ ಸರಳವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ದಶಕಗಳಿಂದಲೂ ದೇವಸ್ಥಾನದ ಆವರಣದಲ್ಲಿ ಐದು ಕಂಬಗಳನ್ನು ನೆಡಲಾಗುತ್ತಿತ್ತು. ಈ ವರ್ಷ ಕೇವಲ ಒಂದು ಕಂಬ ಹಾಕಿ, ಕಂಬಾರೋಹಣ ನಡೆಸಲಾಯಿತು. ದೇವಸ್ಥಾನದ 52 ಮೆಟ್ಟಿಲುಗಳ ಮೇಲೆ ನವರಂಗ ಹಾಗೂ ಆವರಣ ನಿಂತು ಸಾವಿರಾರು ಭಕ್ತರು ವೀಕ್ಷಿಸಿದರು.

ಸೋಮವಾರ ವೇಣುಗೋಪಾಲ ಸ್ವಾಮಿಗೆ ವಿಶೇಷ ಅಲಂಕಾರ, ಮಹಾ ಪೂಜೆ, ತೊಟ್ಟಿಲು ಸೇವೆ ನಡೆದವು. ಭಕ್ತರು ಉಪವಾಸ ಕೈಗೊಂಡು, ಸಂಜೆ ದೇವರ ದರ್ಶನ ಮಾಡಿದರು.

ಜಾತ್ರೆಯ ಮುಖ್ಯ ಅಕರ್ಷಣೆಯಾದ ದೇವರ ಕಂಬಾರೋಹಣವು ಮಂಗಳ ವಾರ ಸಂಭ್ರಮದಿಂದ ನಡೆಯಿತು. ಮೈದಾನದಲ್ಲಿ ಸುಮಾರು 60 ಅಡಿ ಉದ್ದ ಒಂದು ಕಂಬ ಹಾಕಲಾಯಿತು. ಕಂಬಕ್ಕೆ ಅರದಾಳ, ಬೆಣ್ಣೆಬಾಳದಂತಹ ಜಾರುವ ಪದಾರ್ಥ ಲೇಪಿಸಲಾಯಿತು. ತುದಿಯಲ್ಲಿ ವ್ಯಕ್ತಿಯೊಬ್ಬರು ಕುಳಿತುಕೊಳ್ಳಲು ಮಂಟಪವಿತ್ತು.

ಮಂಟಪದ ಕೆಳಗೆ ಹಣ್ಣಿನ ಹೋಳುಗಳನ್ನು ತೂಗಿ ಬಿಡಲಾಗಿತ್ತು. ದೇವಸ್ಥಾನದ ಮೇಲುಗಡೆಯಿಂದ ಸಂಸ್ಥಾನದ ವತನದಾರರು ನಾಣ್ಯ ಚಿಮ್ಮುವ ಮೂಲಕ ಆರೋಹಣಕ್ಕೆ ಚಾಲನೆ ನೀಡಿದರು. ಗೊತ್ತುಪಡಿಸಿದ ಜನರು ಮಾತ್ರ ಕಂಬ ಹತ್ತಿದರು. ಪಿಚಗಾರಿಯಲ್ಲಿ ನೀರು ತುಂಬಿ ಕೆಲವರು ಆರೋಹಿಗಳ ಮೇಲೆ ಎರಚಿದರು. ಮೇಲೆ ಕುಳಿತ ವ್ಯಕ್ತಿ ಸಹ ಮೇಲಿನಿಂದ ನೀರು ಹಾಕಿದ. ಈ ದೃಶ್ಯ ನೋಡಲು ಸಾವಿರಾರು ಜನರು ನೆರದಿದ್ದರು.

8–10 ಸದಸ್ಯರ ತಂಡದ ಆರೋಹಿಗಳು ಕಂಬ ಹತ್ತುವ ಸಾಹಸ ಮಾಡುತ್ತಿದ್ದರೇ ಕೆಳಗಿದ್ದವರು ಅವರ ಮೇಲೆ ನೀರು ಎರಚುತ್ತಿದ್ದರು. ಅದರ ರಭಸಕ್ಕೆ ಜಾರಿ ಕೆಳಗೆ ಬಿದ್ದು, ಮತ್ತೆ–ಮತ್ತೆ ಹತ್ತಲು ಪ್ರಯತ್ನಿಸುತ್ತಿದ್ದರು. ಒಂದು ಗಂಟೆಗೂ ಅಧಿಕ ಕಾಲ ನಡೆದ ರೋಚಕ ಕಂಬಾರೋಹಣವು ನೋಡುಗರನ್ನು ರಂಜಿಸಿತ್ತು.

ಕೊನೆಗೂ ಒಬ್ಬರ ಸಹಾಯದಿಂದ ಒಬ್ಬರು ಮೇಲೆ ಹತ್ತಿ ಕಂಬದ ತುದಿಗೆ ಕಟ್ಟಿದ್ದ ಹಣ್ಣಿನ ಹೋಳುಗಳನ್ನು ಹರಿಯಲು ಯಶ್ವಸಿಯಾದರು.
ನೆರೆದಿದ್ದ ಭಕ್ತರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

‘ಕೋವಿಡ್ ಕಾರಣದಿಂದ ಜಾತ್ರೆಯನ್ನು ಸರಳವಾಗಿ ಆಚರಿಸ ಲಾಗುವುದು’ ಎಂದು ಸಂಸ್ಥಾ ನಿಕ ರಾಜಾ ಕೃಷ್ಣಪ್ಪನಾಯಕ ತಿಳಿ ಸಿದ್ದರು. ಈ ಬಗ್ಗೆ ತಾಲ್ಲೂಕು ಆಡ ಳಿತ ಸಾಕಷ್ಟು ಮುಂಜಾಗ್ರತೆ ಕ್ರಮಗ ಳನ್ನು ತೆಗೆದುಕೊಂಡಿತ್ತು. ಆದರೆ ಕಂಬಾರೋಹಣ ನಡೆ ಯುವ ವೇಳೆ ಸಾವಿರಾರು ಭಕ್ತರು ಜಮಾ ಞವಣೆಗೊಂಡರು. ಕೋವಿಡ್ ಮಾರ್ಗ ಸೂಚಿ ಮರೆಯಾ ಗಿತ್ತು. ಪೊಲೀಸರು ಕೂಡ ಅಸಹಾಯಕರಾಗಿದ್ದರು.

ಶತಮಾನಗಳ ಆಚರಣೆ: ಮೂರು ಶತಮಾನಗಳಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ಹಿಂದಿನ ಕಾಲದಲ್ಲಿ ಗೋಸಂಪತ್ತು ಹೆಚ್ಚಾಗಿದ್ದರಿಂದ ಜನ ಹಾಲೋಕಳಿ ಆಡುತ್ತಿದ್ದರು. ಕಂಬಾರೋಹಿಗಳಿಗೂ ಹಾಲನ್ನೇ ಎರಚುತ್ತಿದ್ದರು. ಹೀಗಾಗಿ ಈ ಜಾತ್ರೆಗೆ ‘ಹಾಲೋಕಳಿ’ ಎಂಬ ಹೆಸರು ಬಂತು. ಕ್ರಮೇಣ ಹಾಲಿನ ಬದಲಿಗೆ ನೀರು ಬಳಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು