ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣ ಪಂಚಾಯಿತಿಗಾಗಿ ವಡಗೇರಾ ಬಂದ್‌

ಮುಂದಿನ ಅಧಿವೇಶನದಲ್ಲಿ ಪಟ್ಟಣ ಪಂಚಾಯಿತಿ ಅನುಮೋದನೆಗೆ ವಿವಿಧ ಸಂಘಟನೆಗಳ ಒತ್ತಾಯ
Last Updated 10 ಸೆಪ್ಟೆಂಬರ್ 2020, 16:19 IST
ಅಕ್ಷರ ಗಾತ್ರ

ವಡಗೇರಾ: ವಡಗೇರಾವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಬೇಕು ಮತ್ತು ತಾಲ್ಲೂಕು ಕೇಂದ್ರದಲ್ಲಿ ಎಲ್ಲಾ ಇಲಾಖೆಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿ ಪಟ್ಟಣ ಪಂಚಾಯಿತಿ ಹೋರಾಟ ಸಮಿತಿ, ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ರೈತ ಸಂಘಟನೆಗಳು ಗುರುವಾರ ‘ವಡಗೇರಾ ಬಂದ್‌’ ನಡೆಸಿದವು.

ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ಬಂದ್ ಮಾಡಲಾಗಿತ್ತು.

ಪ್ರತಿಭಟನೆಯಲ್ಲಿ ಹಿರಿಯ ಮುಖಂಡ ಹಣಮೇಗೌಡ ಬಿರನಕಲ್‌ ಮಾತನಾಡಿ, ‘ಕೇವಲ ತಾಲ್ಲೂಕು ಘೋಷಣೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ. ವಡಗೇರಾವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿ ಎಲ್ಲಾ ಇಲಾಖೆಗಳನ್ನು ಆರಂಭಿಸಬೇಕು. ಈ ಭಾಗದ ಅಭಿವೃದ್ಧಿ ಕುರಿತು ಶಾಸಕರು ಗಮನ ಹರಿಸಬೇಕು. ರಸ್ತೆಗಳನ್ನು ಸುಧಾರಣೆ ಮಾಡಬೇಕು. ಶಾಲೆ-ಕಾಲೇಜು ಆರಂಭಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಪಟ್ಟಣದ ಹಿರಿಯ ಮುಖಂಡ ಬಾಷುಮಿಯಾ ನಾಯ್ಕೋಡಿ, ಯುವ ಮುಖಂಡ ಬಸ್ಸುಗೌಡ ಬಿಳ್ಹಾರ ಮಾತನಾಡಿ, ‘ತಾಲ್ಲೂಕು ಕೇಂದ್ರದಲ್ಲಿ ಸುವ್ಯವಸ್ಥಿತ ಆಡಳಿತ ನಡೆಸಲು ಕಟ್ಟಡದ ಅವಶ್ಯಕತೆ ಇದೆ. ಸರ್ಕಾರದಿಂದ ಜಾಗ ಮಂಜೂರಾತಿ ಆಗಿದೆ. ಕಟ್ಟಡ ನಿರ್ಮಾಣ ಮಾಡಲು ವಿಳಂಬ ಏಕೆ’ ಎಂದು ಪ್ರಶ್ನಿಸಿದರು.

ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ‘ತಾಲ್ಲೂಕು ಕೇಂದ್ರದಲ್ಲಿ ಸರಿಯಾಗಿ ರೈತರಿಗೆ ಸೇವೆ ಸಿಗುತ್ತಿಲ್ಲ. ರೈತರು ತಮ್ಮ ಹಳೆಯ ದಾಖಲಾತಿಗಾಗಿ ಹಳೆಯ ತಾಲ್ಲೂಕು ಕೇಂದ್ರಕ್ಕೆ ಅಲೆಯಬೇಕಾಗಿದೆ’ ಎಂದು ದೂರಿದರು.

‘ಹೊಸದಾಗಿ ರಚನೆಗೊಂಡ ಬಹುತೇಕ ತಾಲ್ಲೂಕು ಕೇಂದ್ರಗಳಲ್ಲಿ ಎಲ್ಲಾ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಇಲ್ಲಿ ವಡಗೇರಾಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಇದಕ್ಕೆಲ್ಲ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಕಾರಣ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮನವಿ ಪತ್ರ ಸ್ವೀಕರಿಸಿದ ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಮಾತನಾಡಿ, ‘ಸರ್ಕಾರಕ್ಕೆ ಈಗಾಗಲೇ ಪಟ್ಟಣ ಪಂಚಾಯಿತಿ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಮನವಿಯೊಂದಿಗೆ ಸಹ ವಿವರಗಳನ್ನು ಮತ್ತೊಮ್ಮೆ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಡಿಡಿಯು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಭೀಮಣ್ಣ ಮೇಟಿ, ಯುವ ಮುಖಂಡ ಮಾಣಿಕರಡ್ಡಿ ಕುರಕುಂದಾ, ನಿಂಗಣ್ಣ ಜಡಿ, ಮಲ್ಲಿಕಾರ್ಜುನ ಜಲ್ಲಪ್ಪನೋರ್, ಭಾಸ್ಕರ ಅಲ್ಲಿಪುರ, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾ ಅಧ್ಯಕ್ಷ ಕಾಶಿನಾಥ ನಾಟೇಕಾರ್, ಸಂತೋಷ ನಿರ್ಮಲಕರ್, ಗೋಪಾಲ ನಾಯಕ, ರೈತ ಸಂಘಟನೆಯ ಮಹಿಳಾ ಅಧ್ಯಕ್ಷೆ ಚಂದ್ರಕಲಾ ಬಾಗೂರು, ಭೀರೇಶ ಚಿರತೆನೋರ್, ಶರಣರಡ್ಡಿ ಹತ್ತಿಗೂಡುರು, ಶರಣು ಇಟಗಿ, ಬಸವರಾಜ ಸೊನ್ನದ್, ಬಸವರಾಜ ನಿಲಹಳ್ಳಿ, ಫಕೀರ್ ಅಹ್ಮದ್, ಸಂಗುಗೌಡ ಮಾಲಿಪಾಟೀಲ, ಗುರುನಾಥ ನಾಟೆಕಾರ್, ಅಬ್ದುಲ್ ಚಿಗಾನೂರು, ಮಲ್ಲಣ್ಣ ನಿಲಹಳ್ಳಿ, ಶಿವರಾಜ ಬಾಗೂರು, ಬಸಣ್ಣಗೌಡ ಜಡಿ, ಭೀಮಣ್ಣ ಬೂದಿನಾಳ, ದೇವು ಜಡಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT