ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಅಕ್ರಮ ಗಣಿಗಾರಿಕೆಗೆ ತಡೆ ಯಾವಾಗ?

ಕಲ್ಲು, ಮರಳು ಗಣಿಗಾರಿಕೆಯಿಂದ ಅಂತರ್ಜಲಕ್ಕೂ ಕುತ್ತು, ಸುತ್ತಮುತ್ತಲಿನ ಜಮೀನುಗಳಲ್ಲಿರುವ ಬೆಳೆ ಹಾಳು
Last Updated 15 ಮಾರ್ಚ್ 2021, 4:02 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಪರವಾನಗಿ ತೆಗೆದುಕೊಂಡ ಕಲ್ಲು ಗಣಿಕಾರಿಕೆ ಯಲ್ಲಿಯೂ ಮಿತಿಗಿಂತ ಹೆಚ್ಚು ನಿಸರ್ಗದ ಸಂಪತ್ತು ಕೊಳ್ಳೆಯಾಗುತ್ತಿದೆ. ಕಲ್ಲು ಗಣಿಗಾರಿಕೆ,ಗುಲಾಬಿ ಗ್ರಾನೈಟ್, ಸಾಧಾ ರಣ ಮರಳು ತೆಗೆಯುವ ಗಣಿಗಳಿದ್ದು, ಇದರಲ್ಲಿ ಕೆಲ ರಾಜಕೀಯ ವ್ಯಕ್ತಿಗಳ ಸಂಬಂಧಿಕರ ಹೆಸರಿನಲ್ಲಿ ನಡೆಯುತ್ತಿವೆ.

ಗಣಿ, ಕಂದಾಯ, ಪೊಲೀಸ್ ಇಲಾಖೆಯ ಅಧಿಕಾರಿಗಳು ಗಣಿಗಾರಿಕೆ ಸಂಬಂಧಿಸಿದಂತೆ ಪರವಾನಗಿ ನೀಡುತ್ತಿವೆ. ಆದರೆ, ಪರವಾನಗಿ ತೆಗೆದುಕೊಂಡವರು ತಮ್ಮ ವ್ಯಾಪ್ತಿ ಮೀರಿ ಅಕ್ರಮವಾಗಿ ನಡೆಸುತ್ತಿದ್ದರೂ ಅವರ ವಿರುದ್ಧ ಈ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಇತ್ತೀಚೆಗೆ ಸುಮಾರು 750 ಕೆ.ಜಿ ಸ್ಫೋಟಕ ವಸ್ತುಗಳ ಪತ್ತೆಯಾಗಿರುದು.

ಕೆಂಭಾವಿ ವಲಯದ ಆಲ್ಹಾಳ ಸೀಮಾಂತರದಲ್ಲಿ ಪ್ರಭಾವಿ ಶಾಸಕರೊಬ್ಬರ ಸಂಬಂಧಿಕರಿಗೆ ಸೇರಿದ್ದ ಕಲ್ಲು ಗಣಿಗಾರಿಕೆಯಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಯಾವುದೇ ಸುರಕ್ಷತೆ ಇಲ್ಲದೆ ಸಂಗ್ರಹಿಸಲಾಗಿತ್ತು. ಜಿಲ್ಲೆಯ ಪೊಲೀಸ್‌, ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕಲಬುರ್ಗಿ–ಯಾದಗಿರಿಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, ಈ ಘಟನೆಯಿಂದ ಜಿಲ್ಲೆಯಲ್ಲಿ ಅಸುರಕ್ಷಿತ ವಾಗಿ ಕಲ್ಲು ಸ್ಫೋಟಿಸುವುದು ನಡೆಯು ತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಪೊಲೀಸ್‌ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿಯಂತೆ ತರಬೇತಿ ಪಡೆದ ಸ್ಫೋಟಕ ತಜ್ಞರು ಮಾತ್ರ ಇದನ್ನು ಕಾರ್ಯಾಚರಣೆ ಮಾಡಬೇಕು. ಆದರೆ, ಜಿಲ್ಲೆಯಲ್ಲಿ ಯಾವ ತರಬೇತಿಯೂ ಇಲ್ಲದೆ ಮಾಡುತ್ತಿರುವುದು ಕಂಡು ಬರುತ್ತಿದೆ. ಪೊಲೀಸರು ಪ್ರಕರಣ ದಾಖಸಿಕೊಂಡು ಸುಮ್ಮನಿದ್ದರೆ ಸುತ್ತಮುತ್ತಲಿನ ಜನತೆ ಜೀವ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಅಮೋನಿಯಮ್ ನೈಟ್ರೇಟ್ ಮಿಕ್ಚರ್, ನಾನ್ ಎಲೆಕ್ಟ್ರಾ ಡೆಟೋ ನೆಟರ್, ಕಾರ್ಡೆಕ್ಸ್ ಬಳಕೆಗೆ ಸೂಕ್ತ ತರಬೇತಿ ಬೇಕು. ಇಂತಿಷ್ಟೆ ಮ್ಯಾಗಜೀನ್‌ ಸಂಗ್ರಹಿಸುವ ಅವಕಾಶವಿದ್ದರೂ ತರಬೇತಿ ಪಡೆದವರು ಮಾತ್ರ ಸ್ಫೋಟಿಸಬೇಕು. ಆದರೆ, ಜಿಲ್ಲೆಯಲ್ಲಿ ಇದಕ್ಕೆ ಕೊರತೆ ಇದೆ.

ಯಾದಗಿರಿ ಸಮೀಪದ ವರ್ಕನಹಳ್ಳಿ ರಸ್ತೆಯ ಗೃಹ ಮಂಡಳಿ ನಿಲಯಗಳ ಸಮೀಪ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಹಲವಾರು ಮನೆಗಳು ಬಿರುಕು ಬಿಟ್ಟಿವೆ. ಸ್ಫೋಟದ ತೀವ್ರತೆಗೆ ವೃದ್ಧರು, ಮಕ್ಕಳು ಬೆಚ್ಚಿಬೀಳುತ್ತಾರೆ.

ಬೆಳೆ ನಾಶ: ಮಸ್ಕನಳ್ಳಿ ಗುಡ್ಡದಲ್ಲಿ ಕಲ್ಲು ಗಣಿಗಾರಿಕೆ ನಡೆಯುವ ಸುತ್ತಮುತ್ತಲಿನಲ್ಲಿ ಜೋಳದ ಬೆಳೆ ಹಾಳಾಗುವುದು ಕಂಡು ಬಂದಿದೆ. ಸ್ಫೋಟದ ತೀವ್ರದ ದೊಡ್ಡ ಕಲ್ಲುಗಳು ಜಮೀನುಗಳಲ್ಲಿ ಬಿದ್ದಿವೆ. ಕಲ್ಲು ಪುಡಿಯ ದೂಳು ಬೆಳೆಗಳ ಮೇಲೆ ಆವರಿಸಿರುವುದು ಕಂಡು ಬಂದಿತು.

ಗಣಿಗಾರಿಕೆಯಿಂದ ಕೃಷಿ ಭೂಮಿ ಯಲ್ಲಿ ಹರಡಿರುವ ದೂಳು ಮಣ್ಣಿನ ಫಲವತ್ತತ್ತೆ ದುರ್ಬಲಗೊಳಿಸುತ್ತದೆ. ಕಲ್ಲು ಗಣಿಗಾರಿಕೆಯಿಂದ ವಾತಾವರಣದಲ್ಲಿ ಅಸಮತೋಲನ ಸೃಷ್ಟಿಯಾಗುತ್ತದೆ. ಕಲ್ಲು ಗಣಿಗಾರಿಕೆ ಮಾಡುವವರಿಗೆಲ್ಲ ಇದೆಲ್ಲ ಕಾಣುವುದಿಲ್ಲ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೂಳು ತುಂಬಿಕೊಂಡು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿಕೊಂಡು ವ್ಯವಸಾಯ ಮಾಡುತ್ತಿರುವ ರೈತರಿಗೆ ನಷ್ಟವಾಗುತ್ತಿದೆ ಎಂಬುದರ ಬಗ್ಗೆ ತಿಳಿದರೂ ವ್ಯವಸಾಯ ಭೂಮಿಯನ್ನು ಗಣಿಗಾರಿಕೆಗೆಂದು ಬಳಸಲಾತ್ತಿದೆ. ಪರವಾನಗಿ 2 ಎಕರೆ ತೆಗೆದುಕೊಂಡರೆ 4 ಎಕರೆಯಲ್ಲಿ ನಡೆಯುತ್ತದೆ. ಆದರೆ, ಗಣಿಗಾರಿಕೆ ಇಲಾಖೆ ಅಧಿಕಾರಿಗಳು ಮಾತ್ರ ಜಿಲ್ಲೆಯ ಎಲ್ಲ ಕಡೆಯೂ ಸಕ್ರಮವಾಗಿ ನಡೆಯುತ್ತಿದೆ ಎನ್ನುತ್ತಾರೆ.

ಎಲ್ಲೆಲ್ಲಿ ಕಲ್ಲು ಗಣಿಗಾರಿಕೆಗಳಿವೆ?: ಜಿಲ್ಲೆಯ ಯಾದಗಿರಿ, ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚು ಗಣಿಗಾರಿಕೆಗಳಿವೆ. ಯಾದಗಿರಿ ತಾಲ್ಲೂಕಿನ ಹಳಿಗೇರಾದಲ್ಲಿ 7 ಕಡೆ, ವರ್ಕನಳ್ಳಿಯಲ್ಲಿ 3 ಕಡೆ, ಬಳಿಚಕ್ರ, ಯರಗೋಳ ತಲಾ ಒಂದು ಕಡೆ, ಶಹಾಪುರ ತಾಲ್ಲೂಕಿನ ದೋರನಹಳ್ಳಿಯಲ್ಲಿ 5 ಕಡೆ, ದಿಗ್ಗಿಯಲ್ಲಿ 2 ಕಡೆ, ಗೌಡೂರು 2, ಹೊಸಕೇರಾ, ಗಂಗನಾಳ ತಲಾ ಒಂದು ಕಡೆ, ಸುರಪುರ ತಾಲ್ಲೂಕಿನ ವಾಗಣಾಗೇರಾ, ಅಲ್ಹಾಳ, ಬೇವಿನಾಳ, ಮುಸ್ಟಳ್ಳಿ ಗ್ರಾಮದ ಸರ್ವೆ ನಂಬರ್‌ಗಳಲ್ಲಿ ಕಲ್ಲು, ಗ್ರಾನೈಟ್‌, ಮರಳು ಗಣಿಗಾರಿಕೆ ನಡೆಯತ್ತಿದೆ.

ವಿವಿಧ ಸರ್ವೆ ಸಂಖ್ಯೆಯ ಜಮೀನುಗಳಲ್ಲಿ 1 ಎಕರೆಯಿಂದ 26 ಎಕರೆ ಪ್ರದೇಶದವರೆಗೆಗಣಿಗಾರಿಕೆ ನಡೆಯುತ್ತಿದೆ. ಮುಸ್ಟಳ್ಳಿಯಲ್ಲಿ ಮಾತ್ರ 26 ಎಕರೆ ಪ್ರದೇಶದಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಇದು ಸರ್ಕಾರದ ಅಂಕಿ ಅಂಶವಾದರೆ ಎಗ್ಗಿಲ್ಲದೆ ಯಾವುದೇ ಪರವಾನಗಿ ಇಲ್ಲದೆ ಹಳ್ಳ, ಕೊಳ್ಳಗಳಲ್ಲಿ ಮರಳು ದಂಧೆ ಜೋರಾಗಿ ನಡೆಯುತ್ತಿದೆ. ಇಂಥಹವುಗಳನ್ನು ಪತ್ತೆ ಹಚ್ಚಿ ನಿಸರ್ಗ ಸಂಪತ್ತು ಕಾಯ್ದಕೊಳ್ಳಬೇಕಿದೆ ಎನ್ನು ವುದು ಜಿಲ್ಲೆಯ ಜನರ ಆಗ್ರಹವಾಗಿದೆ.

ಶಹಾಪುರ: ತನಿಖೆಗೆ ಮುಂದಾಗದ ಅಧಿಕಾರಿಗಳು
ಶಹಾಪುರ:
ತಾಲ್ಲೂಕಿನ ಗಂಗನಾಳ, ದಿಗ್ಗಿ, ದೋರನಹಳ್ಳಿ, ಗೋಗಿ ಗ್ರಾಮದ ಬಳಿ ಕಲ್ಲು ಹಾಗೂ ಗ್ರಾನೈಟ್ ಗಣಿಗಾರಿಕೆ ಸದ್ದು ಗದ್ದಲವಿಲ್ಲದೆ ಹಲವಾರು ವರ್ಷಗಳಿಂದ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ ಎಂಬ ಆರೋಪವಿದೆ.

ಈಚೆಗೆ ರಾಜ್ಯದಲ್ಲಿ ನಡೆದ ಅಕ್ರಮ ಗಣಗಾರಿಕೆಯಿಂದ ಸರ್ಕಾರ ಎಚ್ಚೆತ್ತುಕೊಂಡಾಗ ಅಧಿಕಾರಿಗಳು ಕಾಟಾಚಾರಕ್ಕೆ ಭೇಟಿ ನೀಡಿ ಸ್ಥಗಿತಗೊಳಿಸಿದ್ದಾರೆ. ಆದರೆ, ವಾಸ್ತವವಾಗಿ ನಿರೀಕ್ಷೆಗೂ ಮೀರಿ ಅಕ್ರಮವಾಗಿ ಕಲ್ಲು ಕ್ವಾರಿ, ದೋರನಹಳ್ಳಿ ಮಹಾಂತೇಶ್ವರ ಬೆಟ್ಟದ ಪ್ರದೇಶದ ನಾಲ್ಕು ಕಡೆ ಗಣಿಗಾರಿಕೆ ನಡೆಸಿ ನಿಸರ್ಗದ ಸಂಪತ್ತು ಕೊಳ್ಳೆ ಹೊಡೆದಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ರಕ್ಷಣೆ ಮಾಡಬೇಕಾದ ಅಧಿಕಾರಿಗಳು ನಿಷ್ಕಾಳಜಿ ತೋರಿಸುತ್ತಿದ್ದಾರೆ. ‘ಬೆಂಗಳೂರಿನಿಂದ ಅಧಿಕಾರಿಗಳು ಬಂದು ಬೇರೆ ಬೇರೆ ಕಡೆ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದರೆ, ಸ್ಥಳೀಯ ಅಧಿಕಾರಿಗಳು ಮಾತ್ರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿಲ್ಲ. ಮೊದಲು ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಜಿಲ್ಲೆಯ ಜನತೆಗೆ ಎದುರಾಗಿದೆ’ ಎಂದು ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಆರೋಪಿಸಿದ್ದಾರೆ.

ಕಲ್ಲು ಗಣಿಗಾರಿಕೆ; ಆತಂಕದಲ್ಲಿ ಜನತೆ
ಕೆಂಭಾವಿ:
ಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ಪ್ರದೇಶದ ಸುತ್ತಮುತ್ತಲಿನಲ್ಲಿರುವ ಗ್ರಾಮಗಳ ಜನರು ದಿನ ಆತಂಕದಲ್ಲಿ ಜೀವನ ನಡೆಸುವಂತಾಗಿದೆ.

ಪಟ್ಟಣ ಸಮೀಪದ ಗಣಿಗಾರಿಕೆಯೊಂದರಲ್ಲಿ ಈಚೆಗೆ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಕಲ್ಲು ಗಣಿಗಾರಿಕೆಯ ಪ್ರದೇಶದ ಸುತ್ತಮುತ್ತಲಿನ ಜನರಿಗೆ ಕಲ್ಲು ಗಣಿಯ ದೂಳು ನಿತ್ಯ ಉಸಿರಾಟದ ಮೂಲಕ ದೇಹ ಸೇರಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಾಣಿಸಬಹುದು.

ಗಣಿಗಾರಿಕೆಯಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ಇದ್ದರೂ ಇದಕ್ಕೆ ನಮಗೆ ಯಾವುದೇ ರೀತಿ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂಬುದು ಜನರ ಆರೋಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT