ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಕರ ಕೊರತೆ; ಶಿಕ್ಷಣ ಸಚಿವರಿಂದ ಸಿಗುವುದೇ ಸ್ಪಂದನೆ?

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಬೇಕಿದೆ ಆದ್ಯತೆ
Published : 25 ಸೆಪ್ಟೆಂಬರ್ 2024, 7:05 IST
Last Updated : 25 ಸೆಪ್ಟೆಂಬರ್ 2024, 7:05 IST
ಫಾಲೋ ಮಾಡಿ
Comments

ಯಾದಗಿರಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಅವರು ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಲಿದ್ದು, ಇಲ್ಲಿರುವ ಸಮಸ್ಯೆಗಳಿಗೆ ಸ್ಪಂದನೆ ನೀಡುವರೆ ಕಾದು ನೋಡಬೇಕಾಗಿದೆ.

ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸೇರಿದಂತೆ ಶೈಕ್ಷಣಿಕ ಮಟ್ಟದಲ್ಲಿ ಕಳಪೆ ಸಾಧನೆ ತೋರುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಚಿವರು ವಿಭಾಗಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ.

ಜಿಲ್ಲೆಯಲ್ಲಿ ಕಳೆದ 5 ವರ್ಷಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಳಪೆ ಇರುವ ಕಾರಣ ಹಲವಾರು ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. ಅಲ್ಲದೇ ಕಳೆದ ವರ್ಷ ಹಲವಾರು ಶಿಕ್ಷಕರು ವರ್ಗಾವಣೆಯಾಗಿದ್ದು, ಅವರ ಸ್ಥಳಕ್ಕೆ ಶಿಕ್ಷಕರು ನಿಯೋಜನೆಗೊಂಡಿಲ್ಲ.

ಅತಿಥಿ ಶಿಕ್ಷಕರ ಮೇಲೆ ಅವಲಂಬನೆ: ಜಿಲ್ಲೆಯಲ್ಲಿ ಕಾಯಂ ಶಿಕ್ಷಕರಿಗಿಂತ ಅತಿಥಿ ಶಿಕ್ಷಕರ ಮೇಲೆ ಅವಲಂಬನೆ ಜಾಸ್ತಿಯಾಗಿದೆ. ಹೀಗಾಗಿ ಗುಣಮಟ್ಟದ ಫಲಿತಾಂಶ ಬರುತ್ತಿಲ್ಲ ಎಂದು ಶಿಕ್ಷಕರೇ ಹೇಳುವ ಮಾತಾಗಿದೆ.

14 ಗ್ರಾಪಂ ಸದಸ್ಯರು: ಅರಕೇರಾ (ಕೆ) ಗ್ರಾಮವು ಪಂಚಾಯಿತಿ ಸ್ಥಾನಮಾನ ಹೊಂದಿದ್ದು, 14 ಸದಸ್ಯರನ್ನು ಹೊಂದಿದೆ. ಅರಕೇರಾ (ಕೆ) 8 ಸದಸ್ಯರು, ಮೈಲಾಪುರ‌ 4, ಪಂಚಶೀಲ ನಗರ ತಾಂಡಾ 1, ಬಸವನ ತಾಂಡಾ 1 ಸದಸ್ಯರನ್ನು ಹೊಂದಿದೆ. ಗ್ರಾಮದಲ್ಲಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಕಸ್ತೂರ ಬಾ ವಸತಿ ಶಾಲೆ ಇವೆ.

ಜೆಜೆಎಂ ಕಾಮಗಾರಿ ಕಳಪೆ: ಗ್ರಾಮದಲ್ಲಿ ಜಲಜೀವನ ಮಿಷನ್‌ ಯೋಜನೆಯಡಿ ಕಾಮಗಾರಿ ಕೈಗೊಂಡಿದ್ದು, ಪೂರ್ಣಗೊಂಡಿಲ್ಲ. ಇದರಿಂದ ಗ್ರಾಮಸ್ಥರಿಗೆ ಈ ಯೋಜನೆಯಡಿ ನೀರು ಸಿಕ್ಕಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಅರ್ಧ ಕಾಮಗಾರಿ ಆಗಿದ್ದು, ರಸ್ತೆಯನ್ನು ಅಗೆಯಲಾಗಿದೆ. ಹೀಗಾಗಿ ಜನರ ಓಟಾಟ ಮತ್ತು ಸಂಚಾರಕ್ಕೆ ಸಮಸ್ಯೆಯಾಗಿದೆ. ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರಾದ ಅಂಜನೇಯ ನಾಯಕ ಒತ್ತಾಯಿಸಿದ್ದಾರೆ.

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ವಾರದ ಆರು ದಿನಗಳ ಕಾಲ ಮೊಟ್ಟೆ ವಿತರಿಸುವ ಸಾತ್ವಿಕ ಕಾರ್ಯಕ್ಕೆ ಶಿಕ್ಷಣ ಇಲಾಖೆ ಸಚಿವರು ತೀರ್ಮಾನಿಸಿದ್ದು ಅಭಿನಂದನಾರ್ಹ.
–ರಾಘವೇಂದ್ರ ಅಳ್ಳಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ

‘ಬಿಇಒ ಕಚೇರಿಗಳು ಆಗಲಿ‘

ಜಿಲ್ಲೆಯಾಗಿ 14 ವರ್ಷಗಳು ಕಳೆದರೂ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಹಳೆ ತಾಲ್ಲೂಕಿನ ಮೂರು ಕಡೆ ಮಾತ್ರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಉಳಿದ ಮೂರು ಹೊಸ ತಾಲ್ಲೂಕುಗಳು ಹಳೆ ತಾಲ್ಲೂಕುಗಳಿಗೆ ಎಡತಾಕುವುದು ತಪ್ಪಿಲ್ಲ. ಹೀಗಾಗಿ ಶೈಕ್ಷಣಿಕ ಪ್ರಗತಿ ದೃಷ್ಟಿಯಿಂದ ನೂತನ ತಾಲ್ಲೂಕುಗಳಲ್ಲಿ ಬಿಇಒ ಕಚೇರಿ ಆರಂಭ ಮಾಡಬೇಕು ಎಂದು ಶಿಕ್ಷಣ ಪ್ರೇಮಿಗಳ ಒತ್ತಾಯವಾಗಿದೆ.

‘ಹೊಸ ತಾಲ್ಲೂಕುಗಳಾದ ಹುಣಸಗಿ ಗುರುಮಠಕಲ್‌ ವಡಗೇರಾ ತಾಲ್ಲೂಕುಗಳಾಗಿ ಏಳೆಂಟು ವರ್ಷಗಳಾಗಿವೆ. ಆದರೆ ಬಿಇಒ ಕಚೇರಿ ಮಾತ್ರ ಹಳೆ ತಾಲ್ಲೂಕಿನಲ್ಲಿದೆ. ಇದರಿಂದ ಶಿಕ್ಷಕರು ತಮ್ಮ ಕೆಲಸ ಕಾರ್ಯಗಳಿಗೆ ನೂರಾರು ಕಿ.ಮೀ ದೂರದ ಹಳೆ ತಾಲ್ಲೂಕು ಕೇಂದ್ರಕ್ಕೆ ತೆರಳಬೇಕಿದೆ. ಹೀಗಾಗಿ ನೂತನ ತಾಲ್ಲೂಕುಗಳಲ್ಲಿ ಕಚೇರಿಗಳನ್ನು ಆರಂಭಿಸುವ ತುರ್ತು ಇದೆ’ ಎನ್ನುತ್ತಾರೆ ಶಿಕ್ಷಣ ಪ್ರೇಮಿ ಬಸವರಾಜ ಪಾಟೀಲ.

ಶಾಲೆಗಳಿಗೆ ಬೇಕು ಸೌಲಭ್ಯ

ಗ್ರಾಮದಲ್ಲಿರುವ ಪ್ರಾಥಮಿಕ ಮತ್ತು ಪ‍್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತಕ್ಕಂತೆ ವರ್ಗ ಕೋಣೆಗಳ ಕೊರತೆ ಇದೆ. ಬೆಂಚು ವ್ಯವಸ್ಥೆ ಇಲ್ಲ ಕಾರಣ ಮಕ್ಕಳೂ ನೆಲದ ಮೇಲೆ ಕುಳಿತು ಪಾಠ ಕೇಳುತ್ತಾರೆ. ಪ್ರಾಥಮಿಕ ಶಾಲೆಯಲ್ಲಿ ನೀರಿನ ಕೊರತೆ ಇದೆ. ಮಧ್ಯಾಹ್ನ ಊಟದ ನಂತರ ಕುಡಿಯಲು ನೀರಿಗಾಗಿ ಗ್ರಾಮ ಪಂಚಾಯಿತಿ ಗೇಟ್ ಮತ್ತು ಗೆಳೆಯ ಗೆಳತಿಯರ ಮನೆಗೆ ಭೇಟಿ ನೀಡುತ್ತಾರೆ. ಆಟದ ಮೈದಾನವಿಲ್ಲದೇ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಶಿಕ್ಷಕರೂ ಶೌಚಾಲಯ ಬಳಸದೆ ಅಲ್ಪ ವಿರಾಮ ಸಮಯದಲ್ಲಿ ಬೈಕ್‌ಗಳನ್ನು ಹತ್ತಿ ಊರ ಹೊರಗೆ ತೆರಳುತ್ತಾರೆ. ಈ ವರ್ಷದ ಆರಂಭದಲ್ಲಿ ಮಕ್ಕಳು ಶಿಕ್ಷಕರು ಬಯಲು ಶೌಚಾಲಯಕ್ಕೆ ತೆರಳುವ ಕುರಿತು 'ಪ್ರಜಾವಾಣಿ' ಸುದ್ದಿ ಮಾಡಿತ್ತು.

ಶಿಕ್ಷಣ ಸಚಿವ ಇಂದು ಭೇಟಿ

ಯಾದಗಿರಿ: ರಾಜ್ಯದ ಎಲ್ಲ ಸರ್ಕಾರಿ ಪೂರ್ವ ಪ್ರಾಥಮಿಕ ಪ್ರಾಥಮಿಕ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನಗಳ ಪೂರಕ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ  ಎಸ್.ಮಧು ಬಂಗಾರಪ್ಪ ವಿದ್ಯುಕ್ತವಾಗಿ ಚಾಲನೆ ನೀಡುವರು.

ಸೆಪ್ಟೆಂಬರ್ 25 ರಂದು ಬೆಳಿಗ್ಗೆ 11.30 ಗಂಟೆಗೆ ಯಾದಗಿರಿ ತಾಲ್ಲೂಕಿನ ಅರಕೇರಾ ಕೆ ಗ್ರಾಮದಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಭಾಗಿತ್ವದಲ್ಲಿ 2024-25ನೇ ಸಾಲಿನಲ್ಲಿ  ಅಂದು ಮಧ್ಯಾಹ್ನ 2.30 ಗಂಟೆಗೆ ಯಾದಗಿರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಲಬುರಗಿ ವಿಭಾಗ ಮಟ್ಟದ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸಂಜೆ 6.30 ಗಂಟೆಗೆ ಕಲಬುರಗಿಗೆ ಪ್ರಯಾಣ ಬೆಳೆಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT