ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರಿಗೆ ಮರೀಚಿಕೆಯಾದ ಸೌಲಭ್ಯ: ಸೋಮಶೇಖರ

ಕಾರ್ಮಿಕರ ದಿನಾಚರಣೆ
Last Updated 2 ಮೇ 2021, 7:20 IST
ಅಕ್ಷರ ಗಾತ್ರ

ಯಾದಗಿರಿ: ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜಿಲ್ಲಾ ಸಮಿತಿ ವತಿಯಿಂದಗೂಗಲ್ ಮೀಟ್ ಮುಖಾಂತರ ಆನ್‌ಲೈನ್‌ನಲ್ಲಿ ಕಾರ್ಮಿಕರ ದಿನಾಚರಣೆ ಅಂಗವಾಗಿ ಉಪನ್ಯಾಸ ಆಯೋಜಿಸಲಾಗಿತ್ತು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್ ಯಾದಗಿರಿ ಮಾತನಾಡಿ, ಹಲವು ಶತಮಾನಗಳ ಶೋಷಣೆ, ದಬ್ಬಾಳಿಕೆ ವಿರುದ್ಧ ಮತ್ತು 8 ಗಂಟೆಗಳ ದುಡಿಮೆಯ ಅವಧಿ ಸೇರಿದಂತೆ ಕಾರ್ಮಿಕರ ಪರವಾಗಿ ಹಕ್ಕೋತ್ತಾಯಗಳನ್ನು 134 ವರ್ಷಗಳ ಹಿಂದೆ ಅಮೇರಿಕದ ಚಿಕಾಗೋ ಕಾರ್ಮಿಕರು ಧ್ವನಿಯೆತ್ತಿದ ಸ್ಮರಣಾರ್ಥ ಮೇ 1ರಂದು ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ದುಡಿಮೆಯ ಅವಧಿಯನ್ನು 8 ಗಂಟೆಗೆ ಸೀಮಿತಗೊಳಿಸಿದ, ದುಡಿಯುವ ಪರಿಸ್ಥಿತಿಯನ್ನು ಅನುಕೂಲಕರವಾಗಿಸಿ ದುಡಿಯುವ ವರ್ಗಕ್ಕೆ ಶಾಸನದತ್ತ ಸೌಲಭ್ಯಗಳನ್ನು ಹಾಗೂ ಸೌಲಭ್ಯಗಳನ್ನು ತಂದುಕೊಡುವಲ್ಲಿ ಮೇ ದಿನ ಸ್ಫೂರ್ತಿಯಾಗಿದೆ. ಹಲವು ಕಾರ್ಮಿಕರ ತ್ಯಾಗ, ಬಲಿದಾನ ಸಂಕೇತವಾದ ಈ ದಿನ ಜಗತ್ತಿನ ದುಡಿಯುವ ವರ್ಗಕ್ಕೆ ಸ್ಫೂರ್ತಿಯ ದಿನವಾಗಿದೆ ಎಂದರು.

ಈ ದಿನಕ್ಕೆ ಪ್ರೇರಣಾಶಕ್ತಿ ಕಾರ್ಮಿಕ ವರ್ಗದ ಮೊದಲ ಗುರು ಕಾರ್ಲ್ ಮಾರ್ಕ್ಸ್‌. ಕಾರ್ಮಿಕರು ಸಂಕೋಲೆಗಳ ಹೊರತು ಕಳೆದುಕೊಳ್ಳುವುದೇ ಏನೂ ಇಲ್ಲ. ಗೆಲ್ಲುವುದಕ್ಕೆ ಇಡೀ ಜಗತ್ತೆ ಇದೆ ಎಂದು ತಮ್ಮ ಕೊನೆಯ ಉಸಿರುಇರುವರೆಗೂ ವಿಶ್ವದಾದ್ಯಂತ ತಮ್ಮ ವೈಜ್ಞಾನಿಕ ವಿಚಾರಧಾರೆಗಳ ಮೂಲಕ ಕಾರ್ಮಿಕರನ್ನು ಸಂಘಟಿಸುತ್ತಾ ಅಂತಿಮವಾಗಿ ದುಡಿಯುವ ಶ್ರಮಜೀವಿಗಳ ಸಮಾಜದ ಉಗಮಕ್ಕೆ ವೈಜ್ಞಾನಿಕ ಸಿದ್ಧಾಂತಗಳ ಮೂಲಕ ಭದ್ರ ತಳಹದಿ ಹಾಕಿದರು ಎಂದರು.

ಜಗತ್ತಿನಲ್ಲಿಯೇ ಮೊಟ್ಟಮೊದಲ ಬಾರಿಗೆ ರಷ್ಯಾದಲ್ಲಿ ಲೆನಿನ್ ನೇತೃತ್ವದಲ್ಲಿ ಸಮಾಜವಾದಿ ಕ್ರಾಂತಿಯ ಮೂಲಕ ದುಡಿಯುವ ಜನಗಳ ಪರವಾದ ಸಮಾಜವಾದಿ ವ್ಯವಸ್ಥೆ ಸ್ಥಾಪನೆಯಾಯಿತು ಎಂದು ತಿಳಿಸಿದರು.

ಭಾರತದಲ್ಲಿಯೂ ಭಗತ್ ಸಿಂಗ್, ನೇತಾಜಿ ಸೇರಿದಂತೆ ಅನೇಕ ಕ್ರಾಂತಿಕಾರಿಗಳು ಬ್ರಿಟಿಷರನ್ನು ತೊಲಗಿಸಿ ನಂತರ ಸಾಮಾಜಿಕ ಕ್ರಾಂತಿ ನೆರವೇರಿಸುವ ಮೂಲಕ ರೈತ-ಕಾರ್ಮಿಕರ, ದುಡಿಯುವ ಜನತೆಯ ಪರವಾದ ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸುವ ಕನಸನ್ನು ಹೊಂದಿದ್ದರು. ಆದರೆ, ಈ ಅಪಾಯದಿಂದ ಬಂಡವಾಳಶಾಹಿ ವರ್ಗ ಬ್ರಿಟಿಷರಿಂದ ಕೇವಲ ರಾಜಕೀಯ ಹಸ್ತಾಂತರ ಪಡೆದು ಶೋಷಣೆ ಮುಂದುವರೆಸಿದೆ ಎಂದು ಟೀಕಿಸಿದರು.

ಇಂದಿಗೂ ಕಾರ್ಮಿಕ ವರ್ಗಕ್ಕೆ ಸವಲತ್ತುಗಳು ಮರೀಚಿಕೆಯಾಗಿಯೇ ಉಳಿದಿವೆ. ಉದ್ಯೋಗದ ಭದ್ರತೆ ಇಲ್ಲ. ದುಡಿಯುವ ಕೈಗಳಿಗೆ ಉದ್ಯೋಗ ಇಲ್ಲ. ಗುತ್ತಿಗೆ ಹೊರಗುತ್ತಿದೆ ಎಂಬ ಹೆಸರಿನಲ್ಲಿ ಕಾರ್ಮಿಕರ ಮೇಲೆ ತೀವ್ರತರವಾದ ಶೋಷಣೆ ಮಾಡಲಾಗುತ್ತಿದೆ. ಇತ್ತಿಚೆಗೆ ಕಾರ್ಮಿಕರ ಪರವಾಗಿದ್ದ ಕಾನೂನುಗಳನ್ನು ಬಂಡವಾಳಶಾಹಿಗಳ ಅನುಕೂಲಕ್ಕೆ ತಕ್ಕಂತೆ ತದ್ದುಪಡಿ ಮಾಡಲಾಗಿದೆ. ಆದ್ದರಿಂದ ಕಾರ್ಮಿಕರು ಸಂಘಟಿತರಾಗಿ ಹೋರಾಟದ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳುವುದರ ಮೂಲಕ ಅಂತಿಮವಾಗಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಗೆ ಅಣಿ ಯಾಗಬೇಕು ಎಂದು ಕರೆ ನೀಡಿದರು.

ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷೆ ಡಿ.ಉಮಾದೇವಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್‌. ಮಾತನಾಡಿದರು.

ಜಿಲ್ಲೆಯ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಹಾಸ್ತೆಲ್ ಮತ್ತು ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT