ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಬಿಸಿಯೂಟ ತಯಾರಿಸುವ ಮೇಲುಸ್ತುವಾರಿ ಎಸ್‌ಡಿಎಂಸಿಗೆ ವಹಿಸಿದ್ದಕ್ಕೆ ಖಂಡನೆ

Last Updated 3 ಫೆಬ್ರುವರಿ 2023, 6:32 IST
ಅಕ್ಷರ ಗಾತ್ರ

ಯಾದಗಿರಿ: ಬಿಸಿಯೂಟ ತಯಾರಿಕೆಯ ಜಾವಾಬ್ದಾರಿಯನ್ನು ಎಸ್‌ಡಿಎಂಸಿಗೆ ವಹಿಸಿಕೊಡುವ ಸರ್ಕಾರದ ನಿರ್ಣಯವನ್ನು ವಿರೋಧಿಸಿ ಮತ್ತು ಈ ನಿರ್ಣಯ ಹಿಂಪಡೆಯಲು ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಿಕರ ಫೆಡರೇಶನ್ (ಎಐಟಿಯುಸಿ) ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಯಿತು.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಿಸಿಯೂಟ ವ್ಯವಸ್ಥೆಯನ್ನು ನೋಡಿಕೊಳ್ಳುವ ಸಂಪೂರ್ಣ ಜವಬ್ದಾರಿಯನ್ನು ಶಾಲಾಭಿವೃದ್ಧಿ ಹಾಗೂ ಮೇಲ್ವಿಚಾರಣ ಸಮಿತಿಗೆ ಹಾಗೂ ಮುಖ್ಯ ಗುರುಗಳಿಗೆ ವಹಿಸಿಕೊಡಲು ನಿರ್ಣಯಿಸಿರುವುದನ್ನು ಇದೇ ಜನವರಿ 4ರಂದು ರಂದು ಆದೇಶ ಹೊರಡಿಸಿದೆ. ಇದಕ್ಕೆ ನಮ್ಮ ಯುನಿಯನ್‌ ಸಂಪೂರ್ಣ ವಿರೋಧಿಸುತ್ತದೆ ಎಂದು ಯುನಿಯನ್‌ ಜಿಲ್ಲಾಧ್ಯಕ್ಷೆ ಕಲ್ಪನಾ ಗುರುಸುಣಿಗಿ ನೇತೃತ್ವದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಬಿಸಿಯೂಟ ತಯಾರಕರು ತಿಳಿಸಿದರು.

ಬಿಸಿಯೂಟ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಖ್ಯ ಅಡುಗೆಯವರು ಹಾಗೂ ಪದನಿಮಿತ್ತ ಕಾರ್ಯದರ್ಶಿಗಳಾದ ಶಾಲಾ ಮುಖ್ಯೋಪಾಧ್ಯಾಯರ ಬ್ಯಾಂಕ್ ಜಂಟಿ ಖಾತೆಯಲ್ಲಿ ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ನಿರ್ವಹಿಸಲಾಗುತ್ತಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಈಗ ಇದ್ದಕ್ಕಿದ್ದಂತೆ ಒಂದು ಹೊಸ ಆದೇಶ ಹೊರಡಿಸಿದ್ದು, ಸರ್ಕಾರದ ಹೊಸ ಆದೇಶದಂತೆ ಮುಖ್ಯ ಅಡುಗೆಯವರ ಬದಲಾಗಿ ಶಾಲಾಭಿವೃದ್ಧಿ ವ್ಯವಸ್ಥಾಪಕ ಸಮಿತಿ (ಎಸ್‌ಡಿಎಂಸಿ) ಯ ಅಧ್ಯಕ್ಷರು ಹಾಗೂ ಶಾಲಾ ಮುಖ್ಯೋಪಾಧ್ಯಾಯರ ಬ್ಯಾಂಕ್ ಜಂಟಿ ಖಾತೆಯಲ್ಲಿ ಉಪಾಹಾರ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ನಿರ್ವಹಿಸಬೇಕೆಂದು ಪ್ರಸ್ತುತ 2023-2024 ಸಾಲಿನಿಂದ ಅನ್ವಯವಾಗುವಂತೆ ಮಾನ್ಯ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ಆದೇಶ ಹೊರಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ವಿಷಯಗಳನ್ನು ಮಹಿಳೆಯರ ಕೆಲಸದ ಭದ್ರತೆಯ ದೃಷ್ಟಿಯಿಂದ ಸರ್ಕಾರ ಗಂಭೀರವಾಗಿ ಯೋಚಿಸಬೇಕಿತ್ತು. ಬಿಸಿಯೂಟ ನೌಕರರಿಗೆ ಕೆಲಸದ ಭದ್ರತೆ ಇಲ್ಲ ದಿರುವುದನ್ನು ಮನಗಂಡು ಕೆಲಸದಿಂದ ತೆಗೆಯುವ ಬೆದರಿಕೆಯೊಡ್ಡುವುದು ಇಲ್ಲವೆ ತೆಗೆದು ಹಾಕುವ ದುಸ್ಸಾಹಸಕ್ಕೆ ಎಸ್‌ಡಿಎಂಸಿ ಮುಂದಾಗಿದೆ. ಆದರೆ, ಆಗ ಬಡ ಮಹಿಳೆಯರು ಆತ್ಮಹತ್ಯೆಗೆ ಶರಣಾಗಬೇಕಾಗುತ್ತದೆ. ಇದು ತುಂಬಾ ಗಂಭೀರವಾದ ವಿಷಯವಾಗಿದ್ದರಿಂದ ಸರ್ಕಾರ ಈ ಕೂಡಲೇ ಜಾರಿಗೆ ಬರುವಂತೆ ಹೊಸ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಬಿಸಿಯೂಟ ನೌಕರರನ್ನು 60 ವರ್ಷಗಳ ನಂತರ ಯಾವುದೇ ಪಿಂಚಣಿ ಇಲ್ಲದೇ ಸೇವೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ. ಇದರಿಂದ ಸೇವೆಯಲ್ಲಿ ಇದ್ದಾಗಲೂ ಕೈತುಂಬ ವೇತನವಿಲ್ಲ. ನಿವೃತ್ತಿ ಬಳಿಕವೂ ಬರಿಗೈಲಿ ಮರಳುವ ಸ್ಥಿತಿಯಲ್ಲಿ ಕಾರ್ಯಕರ್ತೆಯರು ಇದ್ದಾರೆ. ನಿವೃತ್ತ ನೌಕರರಿಗೆ ₹2 ಲಕ್ಷ ಇಡುಗಂಟು ನೀಡಬೇಕೆಂದು ಆಗ್ರಹಿಸಿದರು.

ನಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೂಲಕ ಶಿಕ್ಷಣ ಸಚಿವ ನಾಗೇಶ ಅವರಿಗೆ ಬರೆದ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ದೇವೀಂದ್ರಪ್ಪ ಪತ್ತಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀದೇವಿ ಕೂಡಲಗಿ, ಖಜಾಂಚಿ ಬಸಮ್ಮ ತಡಿಬಿಡಿ, ದೊಡ್ಡಮ್ಮ ಬಳಿಚಕ್ರ, ಸುರಪುರ ತಾಲ್ಲೂಕಿನ ಯಲ್ಲಮ್ಮ ಸೈದಾಪುರ, ಯಮುನಾ ಕಕ್ಕೇರಾ, ಹುಣಸಗಿ ತಾಲ್ಲೂಕು ಅಧ್ಯಕ್ಷೆ ಸುಧಾ ಯಕ್ತಾಪುರ, ಪ್ರಧಾನ ಕಾರ್ಯದರ್ಶಿ ನೀಲಮ್ಮ ವಜ್ಜಲ್ ಶಹಾಪುರ ತಾಲ್ಲೂಕು ಅಧ್ಯಕ್ಷ ಗಂಗಮ್ಮ, ಗೌರವಾಧ್ಯಕ್ಷ ನಿಂಗಮ್ಮ, ಶಿವಲೀಲಾ ಕಂದಕೂರ, ಸುಮಿತ್ರಾ ಬೂದೂರು ಸೇರಿದಂತೆ ಬಿಸಿಯೂಟ ತಯಾರಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT