ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಕೆರೆಗಳ ಹೂಳೆತ್ತುವ ಕಾಮಗಾರಿ– ಹಲವೆಡೆ ಯಶಸ್ವಿ

ಜಿಲ್ಲೆಯಲ್ಲಿ ನಿರ್ವಹಣೆ ಇಲ್ಲದೇ ಸೊರಗಿದ ಸಣ್ಣ ನೀರಾವರಿ, ಜಿಲ್ಲಾ ಪಂಚಾಯಿತಿ ಕೆರೆಗಳು, ತಂತಿ ಬೇಲಿ ಅಳವಡಿಸಲು ಆಗ್ರಹ
Last Updated 19 ಜೂನ್ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ 2019ರಿಂದ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಕೆಲವು ಕಡೆ ಯಶಸ್ವಿಯಾಗಿದ್ದರೆ, ಉಳಿದ ಕಡೆ ಸಾರ್ವಜನಿಕರ ಅಸಹಕಾರದಿಂದ ಹಿನ್ನಡೆ ಉಂಟಾಗಿದೆ.

ಜಿಲ್ಲೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆಯಾಗಿದ್ದು, 2019ರಲ್ಲಿ ನೀತಿ ಅಯೋಗದ ಮೂಲಕ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 352 ಕೆರೆಗಳಿವೆ. ಇವುಗಳಲ್ಲಿ ಬಹುತೇಕ ಕಡೆ ನಾಮಫಲಕ ಹಾಕಿಲ್ಲ. ಗಡಿ ಗುರುತಿಸಿಲ್ಲ. ಇದರಿಂದ ಎಲ್ಲೆಡೆಯೂ ಒತ್ತುವರಿಯಾಗಿದೆ. ಕೆರೆ ಹೂಳೆತ್ತಲು ಆಸಕ್ತಿ ತೋರಿಸಿದ ಗ್ರಾಮಗಳ ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಜಿಲ್ಲಾ ಪಂಚಾಯಿತಿಯಲ್ಲಿ ಸಣ್ಣ ಕೆರೆಗಳಿವೆ. ಸಣ್ಣ ನೀರಾವರಿ ಇಲಾಖೆಯಲ್ಲಿ 100ರಿಂದ 300 ಎಕರೆ ತನಕ ವಿಶಾಲ ವ್ಯಾಪ್ತಿ ಹೊಂದಿವೆ.

ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ 71 ಕೆರೆಗಳು ಕುಡಿಯುವ ನೀರು ಬಳಕೆಗೆ ಯೋಗ್ಯವಿಲ್ಲ. ನೀರಾವರಿಗೆ ಮಾತ್ರ ಬಳಸಬಹುದಾಗಿವೆ. ಸಣ್ಣ ನೀರಾವರಿ ಇಲಾಖೆಯಲ್ಲಿ 100ರಿಂದ 300 ಎಕರೆ ತನಕ ವಿಶಾಲ ವ್ಯಾಪ್ತಿ ಹೊಂದಿವೆ.

ವಾಸ್ತವಾಗಿ ಆಯಾ ಗ್ರಾಮದ ಕೆರೆ ಅಭಿವೃದ್ಧಿ ಪಡಿಸುವುದು ಎಂದರೆ ಜೇನುಗೂಡಿಗೆ ಕೈ ಹಾಕಿದಂತೆ. ಗ್ರಾಮದ ಕೆಲ ಪ್ರಭಾವಿ ವ್ಯಕ್ತಿಗಳು ಕೆರೆಯನ್ನು ಒತ್ತುವರಿ ಮಾಡಿಕೊಂಡು ಮನೆ, ಬಿತ್ತನೆ ಹಾಗೂ ಇನ್ನಿತರ ಕಾರ್ಯಗಳಿಗೆ ಉಪಯೋಗಿಸಿಕೊಂಡು ಬರುತ್ತಿದ್ದಾರೆ. ಕೆರೆ ಅಭಿವೃದ್ಧಿಗೆ ಮುಂದಾದರೆ ರಾಜಕೀಯ ಪ್ರಭಾವ ಬಳಸಿಕೊಂಡು ಕೆಲಸಕ್ಕೆ ತಡೆ ಒಡ್ಡುತ್ತಾರೆ.

ನಿರ್ವಹಣೆ ಇಲ್ಲದೆ ಸೊರಗಿರುವ ಕೆರೆಗಳು

ಜಿಲ್ಲೆಯಲ್ಲಿ ಕೆಲವು ಗ್ರಾಮಗಳಲ್ಲಿ ಮಾತ್ರ ಕೆರೆ ಹೂಳೆತ್ತುವ ಕಾಮಗಾರಿ ಮಾಡಲಾಗಿದೆ. ಉಳಿದ ಕೆರೆಗಳು ನಿರ್ವಹಣೆ ಇಲ್ಲದೇ ಸೊರಗಿವೆ. ಕೆಲವು ಖಾಸಗಿ ವ್ಯಕ್ತಿಗಳ ಒಡೆತನದಲ್ಲಿನ ಕೆರೆಗಳು ಭತ್ತದ ಗದ್ದೆಗಳಾಗಿ ಬದಲಾಗಿವೆ. ಬೇಸಿಗೆ ದಿನಗಳಲ್ಲಿ ನೀರು ಇಲ್ಲದಾಗ ಕೆರೆ ಜಾಗದಲ್ಲಿ ಬೇಸಾಯ ಮಾಡುತ್ತಾರೆ. ಇನ್ನು ಕೆಲವು ಹೂಳು, ಪಾಚಿ, ಜಾಲಿಗಿಡಗಳಿಂದ ವಿಸ್ತಾರ ವ್ಯಾಪ್ತಿ ಕಳೆದುಕೊಂಡಿವೆ. ಸಂಬಂಧಿಸಿದ ಅಧಿಕಾರಿಗಳು ಕೆರೆ ಗಡಿ ಗುರುತಿಸಿ ಫೆನ್ಸಿಂಗ್‌ (ತಂತಿ ಬೇಲಿ) ಹಾಕಬೇಕಾಗಿತ್ತು. ಆದರೆ, ಆದಾಗಿಲ್ಲ. ಇದರಿಂದ ಕೆರೆಗಳು ತಮ್ಮ ಅಸ್ತಿತ್ವ ಕಳೆದುಕೊಂಡಿವೆ.

ಧರ್ಮಸ್ಥಳ, ಬಿಜೆಎಸ್‌ನಿಂದ ಕಾಮಗಾರಿ

ಜಿಲ್ಲೆಯಲ್ಲಿ ಭಾರತೀಯ ಜೈನ್‌ ಸಂಘಟನಾ (ಬಿಜೆಎಸ್‌), ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಯೋಜನೆಯಡಿ ಕೆಲವು ಗ್ರಾಮಗಳ ಕೆರೆಗಳ ಹೂಳೆತ್ತುವ ಕಾಮಗಾರಿ ಮಾಡಲಾಗಿದೆ. ಈ ವರ್ಷ ಹಳಿಗೇರಾ, ಕೊಯಿಲೂರ, ವಡವಟ್ಟ ಗ್ರಾಮದಲ್ಲಿ ಹೂಳೆತ್ತಲಾಗಿದೆ. ಆಶನಾಳ ಗ್ರಾಮದಲ್ಲಿ ಕೆರೆ ಹೂಳೆತ್ತುವ ಯೋಜನೆ ರೂಪಿಸಿದ್ದರೂ ಕಾರ್ಯಗತಗೊಂಡಿಲ್ಲ.

ಹಳಗೇರಾದಲ್ಲಿ ಎರಡು ಕೆರೆಗಳಿದ್ದು, ಸಣ್ಣಕೆರೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಯೋಜನೆಯಡಿ ಹೂಳೆತ್ತಲಾಗಿದೆ. ದೊಡ್ಡಕೆರೆಯನ್ನು ಬಿಜೆಎಸ್‌ ವತಿಯಿಂದ ಹೂಳೆತ್ತಲಾಗಿದೆ.

‘ಜಿಲ್ಲೆಯಲ್ಲಿ 23 ಕೆರೆ, ಒಂದು ನಾಲಾ ಹೂಳೆತ್ತುವ ಕಾಮಗಾರಿ ಮಾಡಲಾಗಿದೆ. 22,500 ಗಂಟೆಗಳ ಕಾಲ ಯಂತ್ರಗಳು ಕಾರ್ಯನಿರ್ವಹಿಸಿವೆ. 5,270 ರೈತರು ಇದರ ಉಪಯೋಗ ಪಡೆದುಕೊಂಡಿದ್ದಾರೆ. 17 ಲಕ್ಷ ಕ್ಯುಬಿಕ್‌ ಮೀಟರ್‌ ಹೂಳೆತ್ತಲಾಗಿದೆ. ನೀರೇ ಎಲ್ಲದಕ್ಕೂ ಆಧಾರ. ನೀರಿದ್ದರೆ ಆರೋಗ್ಯ, ಶಿಕ್ಷಣ, ಕೃಷಿಗೆ ಅನುಕೂಲವಾಗಲಿದೆ. ಕೇಂದ್ರ ಸರ್ಕಾರ ನೀತಿ ಅಯೋಗದ ಸಹಯೋಗದಲ್ಲಿ ಶಿಲ್ಪಾ ಮೆಡಿಕೇರ್‌ ಲಿಮಿಡೆಟ್‌, ಶ್ರೀಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಬಿಜೆಎಸ್‌ ವತಿಯಿಂದ ಕೆರೆ ಹೂಳೆತ್ತಲಾಗಿದೆ’ ಎಂದು ಭಾರತೀಯ ಜೈನ್‌ ಸಂಘಟನಾ (ಬಿಜೆಎಸ್‌) ಜಿಲ್ಲಾ ಸಮನ್ವಯಾಧಿಕಾರಿ ರಾಜೇಶ ಜೈನ್‌ ಹೇಳುತ್ತಾರೆ.

‘ಜನರ ಸಹಕಾರ ಇದ್ದರೆ ಜಿಲ್ಲೆಯ ಕೆರೆಗಳ ಹೂಳೆತ್ತಬಹುದು. ಕೆಲವು ಕಡೆ ಆಸಕ್ತಿ ತೋರಿಸುವುದಿಲ್ಲ. ಸರ್ಕಾರವೂ ನಮಗೆ ಬೇಸಿಗೆ ಆರಂಭದಲ್ಲಿಯೇ ಕಾಮಗಾರಿಗೆ ಅವಕಾಶ ನೀಡಿದರೆ ಮಳೆಗಾಲದ ವೇಳೆಗೆಲ್ಲ ಹೂಳೆತ್ತಿದ ಮಣ್ಣು ರೈತರು ತೆಗೆದುಕೊಂಡು ಹೋದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.

***

ಮುಂದೆ ಸಾಗದ ನಮ್ಮೂರು ನಮ್ಮ ಕೆರೆ...!

ಶಹಾಪುರ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ನಗರದ ಮಾವಿನ ಕೆರೆ ಹಾಗೂ ನಾಗರ ಕೆರೆ ಹೂಳೆತ್ತುವುದು ಮತ್ತು ಅಭಿವೃದ್ಧಿಪಡಿಸಲು ₹ 5 ಕೋಟಿ ಅನುದಾನ ಬಿಡುಗಡೆಯಾಗಿದೆ. ‘ಕೆಬಿಜೆಎನ್‌ಎಲ್ ನಿಗಮದ ಅಡಿಯಲ್ಲಿ ಹೊಸಕೇರಾ, ನಡಿಹಾಳ, ಉಕ್ಕಿನಾಳ ಸೇರಿದಂತೆ ಹಲವು ಕೆರೆಗಳನ್ನು ಅಭಿವೃದ್ಧಿಗೊಳಿಸಿ ನೀರು ಸಂಗ್ರಹಿಸಿದ್ದರಿಂದ ಬೇಸಿಗೆ ಕಾಲದಲ್ಲಿ ಯಾವುದೇ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿಲ್ಲ’ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.

ಅದರಂತೆ ಶ್ರೀಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ‘ನಮ್ಮೂರು ನಮ್ಮ ಕೆರೆ’ ಅಭಿವೃದ್ಧಿಗೆ ತಾಲ್ಲೂಕಿನ ವನದುರ್ಗ ಗ್ರಾಮದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಶೇ 10ರಷ್ಟು ಕೆಲಸ ನಿರ್ವಹಿಸಲಾಗಿದೆ. ಆದರೆ, ಗ್ರಾಮಸ್ಥರ ಸಹಕಾರದ ಕೊರತೆ ಹಾಗೂ ನೀರು ಸಂಗ್ರಹದಿಂದ ಕೆಲಸ ಪೂರ್ಣಗೊಂಡಿಲ್ಲ. ಆದರೆ, ವಡಗೇರಾ ತಾಲ್ಲೂಕಿನ ಹುಂಡೆಕಲ್ ಗ್ರಾಮದ ಕೆರೆ ಅಭಿವೃದ್ಧಿಪಡಿಸಿ ಯೋಜನೆ ಯಶಸ್ವಿಯಾಗಿದೆ ಎಂದು ತಾಲ್ಲೂಕು ಸಂಚಾಲಕ ಪ್ರದೀಪ ಆರ್.ಹೆಗಡೆ ತಿಳಿಸಿದರು.

ಅಲ್ಲದೆ ನಗರದ ನಗರಕೆರೆ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಿ ಹಲವು ವರ್ಷವಾಗಿದೆ. ನಗರಸಭೆ ಹಾಗೂ ಸ್ಥಳೀಯರ ಸಹಕಾರದಿಂದ ಕೆಲಸ ನಡೆದಿಲ್ಲ. ಈಗ ತಾಲ್ಲೂಕಿನ ಹೊತಪೇಟ ಗ್ರಾಮದ ಕೆರೆಯನ್ನು ಅಭಿವೃದ್ಧಿಗೆ ಕೈಗೆತ್ತಿಕೊಳ್ಳಲಾಗಿದೆ ಎನ್ನುತ್ತಾರೆ ಅವರು.

‘ತಾಲ್ಲೂಕಿನ ಗೋಗಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ಮನೆ, ಕಲ್ಯಾಣ ಮಂಟಪ ನಿರ್ಮಿಸುವ ಕೆಲಸ ಸಾಗಿದೆ. ಒತ್ತುವರಿ ತೆರವಿಗೆ ಮುಂದಾದರೆ ನಮ್ಮನ್ನು ವರ್ಗಾವಣೆ ಮಾಡುತ್ತಾರೆ’ ಎಂದು ಕಂದಾಯ ಇಲಾಖೆಯ ಅಧಿಕಾರಿ ಒಬ್ಬರು ತಿಳಿಸಿದರು.

‘ಶ್ರೀಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಿಸುತ್ತಿರುವ ನಮ್ಮೂರು ನಮ್ಮ ಕೆರೆಯು ಮುಂದೆ ಸಾಗುತ್ತಿಲ್ಲ. ಸ್ಥಳೀಯರ ಸಹಕಾರ ಅಗತ್ಯವಾಗಿದೆ. ಕೆರೆ ಒತ್ತುವರಿ ತೆರವಿಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ಯತ್ನಿಸಿ ಕೆರೆ ಸಂರಕ್ಷಣೆಗೆ ಕೈಜೋಡಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಮನವಿ ಮಾಡಿದ್ದಾರೆ.
****
ಹೂಳೆತ್ತಿರುವ ಕೆರೆಗಳ ವಿವರ

2019ರಲ್ಲಿ ಜಿಲ್ಲೆಯ 23 ಕೆರೆಗಳನ್ನು ಹೂಳೆತ್ತಲು ಯೋಜನೆ ರೂಪಿಸಲಾಯಿತು. ಯಾದಗಿರಿ ತಾಲ್ಲೂಕಿನ ಬದ್ದೆಪಲ್ಲಿ ಕೆರೆ, ರಾಂಪುರ ಕೆರೆ, ಜೀನಕೇರಾ ಕೆರೆ, ಚಾಮನಳ್ಳಿ ಕೆರೆ, ಮೈಲಾಪುರ ಕೆರೆ, ರಾಮಸಮುದ್ರ ಕೆರೆ, ಯಾದಗಿರಿ ದೊಡ್ಡಕೆರೆ, ಯಾದಗಿರಿ ನಾಲಾ, ಯಡ್ಡಳ್ಳಿ ಕೆರೆ, ಯರಗೋಳ ಕೆರೆ, ಶಹಾಪುರ ತಾಲ್ಲೂಕಿನ ಇಬ್ರಾಹಿಂಪುರ ಕೆರೆ, ಹೊಸಕೇರಾ ಕೆರೆ, ಮುಡಬೂಳ ಕೆರೆ, ನಡಿಹಾಳ ಕೆರೆ, ಸುರಪುರ ತಾಲ್ಲೂಕಿನ ಬೈರಮಟ್ಟಿ ಕೆರೆ, ಬೊಮ್ಮನಳ್ಳಿ ಕೆರೆ, ಹುಣಸಗಿ ತಾಲ್ಲೂಕಿನ ಬಳಶೆಟ್ಟಿಹಾಳ ಕೆರೆ, ರಾಯನಪಾಳ್ಯ ಕೆರೆ, ಗುರುಮಠಕಲ್‌ ತಾಲ್ಲೂಕಿನ ಜೈಗ್ರಾಮ್ ಕೆರೆ, ಕರಣಗಿ ಕೆರೆ, ವಕ್ಸಂಬರ್‌ ಕೆರೆ, ಕಂದಕೂರ ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
***
ಜಿಲ್ಲೆಯ ಕೆರೆಗಳ ವಿವರ

ಸಣ್ಣ ನೀರಾವರಿ ಇಲಾಖೆಯ ಕೆರೆಗಳು
ಯಾದಗಿರಿ;31
ಗುರುಮಠಕಲ್‌;25
ಶಹಾಪುರ;6
ವಡಗೇರಾ;3
ಸುರಪುರ;4
ಹುಣಸಗಿ;2
ಒಟ್ಟು;71

ತಾಲ್ಲೂಕು;ಪಂಚಾಯತ್‌ ರಾಜ್‌ ಎಂಜಿನಿಯರ್;ಸಣ್ಣ ನಿರಾವರಿ ಇಲಾಖೆ;ಒಟ್ಟು
ಯಾದಗಿರಿ;190;56;246
ಶಹಾಪುರ;60;09;69
ಸುರಪುರ;31;06;37
ಒಟ್ಟು;281;71;352

***

ಕೆರೆಗಳ ಹೂಳೆತ್ತುವುದರಿಂದ ನೀರು ಸಂಗ್ರಹವಾಗಿ ಜನ–ಜಾನುವಾರಿಗೆ ಅನುಕೂಲವಾಗಲಿದೆ. ಮಳೆಗಾಲವಾಗಿದ್ದರಿಂದ ಬಂದ್‌ ಮಾಡಲಾಗಿದ್ದು, ಮತ್ತೆ ಡಿಸೆಂಬರ್‌ನಿಂದ ಆರಂಭಿಸಲಾಗುವುದು

–ಬಿ.ಎಸ್.ರಾಥೋಡ್, ನೀತಿ ಅಯೋಗ ನೋಡಲ್‌ ಅಧಿಕಾರಿ‌

***

ಕೆರೆಗಳನ್ನು ಹೂಳೆತ್ತಿದ್ದರಿಂದ ಅಕ್ಕಪಕ್ಕದ ಜಮೀನುಗಳಿಗೆ ಫಲಫತ್ತಾದ ಮಣ್ಣು ಸಿಕ್ಕಿದೆ. ಇಳುವರಿಯೂ ಚೆನ್ನಾಗಿ ಬಂದಿದೆ. ಅಲ್ಲದೆ ಬತ್ತಿದ ಕೊಳವೆಬಾವಿಗಳು ರಿಚಾರ್ಚ್‌ ಆಗಿವೆ. ಸರ್ಕಾರದವರು ನಮಗೆ ಮತ್ತಷ್ಟು ಸಹಕಾರ ನೀಡಿದರೆ ಮತ್ತಷ್ಟು ಕೆರೆಗಳಲ್ಲಿ ಹೂಳೆತ್ತಲಾಗುವುದು

–ರಾಜೇಶ ಜೈನ್‌, ಬಿಜೆಎಸ್‌ ಜಿಲ್ಲಾ ಸಮನ್ವಯಾಧಿಕಾರಿ

****

ಕೆರೆ ಹೂಳೆತ್ತರಿಂದ ಭತ್ತದ ಫಸಲು ಪಡೆಯುವಂತೆ ಆಯಿತು. ಹೂಳು ತುಂಬಿದ್ದರಿಂದ ಕೆರೆ ಭರ್ತಿಯಾಗಿದ್ದರೂ ನೀರು ಸಮರ್ಪಕವಾಗಿ ಸಿಗುತ್ತಿರಲಿಲ್ಲ. ತೂಬಿನ ಬಳಿ ಹೂಳೆತ್ತಿದರೆ ಮತ್ತಷ್ಟು ಅನುಕೂಲವಾಗಲಿದೆ

–ದೇವೀಂದ್ರಪ್ಪ ಗೌಡಗೇರಾ, ಹಳಿಗೇರಾ ಗ್ರಾ.ಪಂ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT