ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮತ್ತೆ ಕೃಷ್ಣಾ, ಭೀಮೆಯಲ್ಲಿ ಪ್ರವಾಹ ಭೀತಿ

ಸತತ ಮೂರು ವರ್ಷಗಳಿಂದ ಕೃಷ್ಣಾ ನದಿ ಆರ್ಭಟ, ನದಿಯಂಚಿನ ರೈತರಿಗೆ ಢವಢವ
Last Updated 24 ಜುಲೈ 2021, 8:36 IST
ಅಕ್ಷರ ಗಾತ್ರ

ಯಾದಗಿರಿ: ಕೃಷ್ಣಾ ಮತ್ತು ಭೀಮಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ 3 ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಉಂಟಾಗಿದೆ.

2.50 ಲಕ್ಷಕ್ಕೂ ಹೆಚ್ಚು ನೀರು ಕೃಷ್ಣಾ ನದಿಗೆ ಬಂದರೆ ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಸೇತುವೆ ಮುಳುಗಡೆಯಾಗಲಿದೆ. ಸೇತುವೆ ರಸ್ತೆ ಸಂಪರ್ಕವು ಕಡಿತಗೊಳ್ಳುವ ಸಾಧ್ಯತೆ ಇದೆ. ಸೇತುವೆ ಬಳಿ ನಿಗಾವಹಿಸಲು ಪೊಲೀಸ್‌ ಸಿಬ್ಬಂದಿ ನಿಯೋಜಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸೇತುವೆಯ ಮೂಲಕ ಸಾರ್ವಜನಿಕರ ಮತ್ತು ವಾಹನಗಳ ಸಾಗಣೆ ನಿರ್ಬಂಧಿಸಲಾಗಿದೆ.

ಸತತ ಮೂರು ವರ್ಷ ಪ್ರವಾಹ:

ಜಿಲ್ಲೆಯಲ್ಲಿ ಕೃಷ್ಣಾ ನದಿ ಪ್ರವಾಹ ಬೆಂಬಿಡದೇ ಕಾಡುತ್ತಿದೆ. 2019, 2020, 2021ರಲ್ಲಿ ಕೃಷ್ಣಾ ನದಿ ಭೋರ್ಗೆರೆಯುತ್ತಿದೆ. ಕಳೆದ ಎರಡು ವರ್ಷಗಳಿಂದಲೂ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನೀರು ಹರಿದು ಬೆಳೆಗಳು ನಾಶವಾಗಿದ್ದವು. ಈಗಲೂ ಅದೇ ಪರಿಸ್ಥಿತಿ ಮುಂದುವರಿದಿದ್ದು, ರೈತರು ಚಿಂತಾಕ್ರಾಂತರಾಗಿದ್ದಾರೆ.

ಈಡೇರದ ಭರವಸೆ:

ಎರಡು ವರ್ಷಗಳ ಹಿಂದೆ ಪ್ರವಾಹ ಉಂಟಾದಾಗ ಜಿಲ್ಲಾ ಉಸ್ತುವಾರಿ ಸಚಿವರು, ಆಗಿನ ವಿರೋಧ ಪಕ್ಷದ ಮುಖಂಡರು ಕೊಳ್ಳೂರುಗೆ ಭೇಟಿ ನೀಡಿ ಬ್ರೀಜ್‌ ಕಂ ಬ್ಯಾರೇಜ್‌ ನಿರ್ಮಿಸುವ ಮಾತು ಕೊಟ್ಟಿದ್ದರು. ಆದರೆ, ಅದು ಭರವಸೆಯಾಗಿಯೇ ಉಳಿದಿದೆ. ಇದರಿಂದ ನದಿ ಪಾತ್ರದ ಜನರ ಗೋಳು ಮಾತ್ರ ತಪ್ಪಿಲ್ಲ.

ಹೆಚ್ಚುತ್ತಿರುವ ನೀರಿನ ಹೊರ ಹರಿವು:

‌ಜಿಲ್ಲೆಯ ಕೃಷ್ಣಾ ಮತ್ತು ಭೀಮಾ ನದಿಯಲ್ಲಿ ಹೊರ ಹರಿವು ಪ್ರಮಾಣ ದಿನದಿಂದ ಹೆಚ್ಚಳವಾಗುತ್ತಿದೆ. ಕೃಷ್ಣಾ ಮತ್ತು ಭೀಮಾ ನದಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡುವ ಸಾಧ್ಯತೆಯಿದೆ.

ಪ್ರಸ್ತುತ ಕೃಷ್ಣಾ ನದಿಯಿಂದ 3 ಲಕ್ಷ ಕ್ಯುಸೆಕ್‌ ಹಾಗೂ ಭೀಮಾ ನದಿಯಿಂದ 13,500 ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿದೆ.

ನದಿ ಮೇಲ್ಭಾಗದಲ್ಲಿ ಮಳೆ ಹೆಚ್ಚಾದರೆ ಮತ್ತಷ್ಟು ನೀರು ನದಿಗೆ ಹರಿ ಬಿಡುವ ಸಾಧ್ಯತೆ ಇದೆ. ಇದರಿಂದ ಎರಡು ನದಿ ದಂಡೆಯಲ್ಲಿರುವ 40ಕ್ಕೂ ಹೆಚ್ಚು ಗ್ರಾಮಗಳಿಗೆ ಸಮಸ್ಯೆ ಆಗಲಿದೆ.

ಕಳೆದ ಬಾರಿ ಉಂಟಾದ ಪ್ರವಾಹದಿಂದ ಇನ್ನೂ ಚೇತರಿಸಿಕೊಳ್ಳಲು ರೈತರಿಗೆ ಆಗಿಲ್ಲ. ಮತ್ತೆ ಪ್ರವಾಹ ಬಂದರೆ ಮತ್ತಷ್ಟು ತೊಂದರೆಗೆ ಸಿಲುಕಿಕೊಳ್ಳಬೇಕಾಗುತ್ತದೆ.

ತುರ್ತು ಸಂದರ್ಭದಲ್ಲಿ ನದಿ ಪಾತ್ರ ಮತ್ತು ಹಳ್ಳಗಳ ಕಡೆಗೆ ಜಾನುವಾರುಗಳು ಹಾಗೂ ಮೀನುಗಾರರು ನದಿ ತೀರಕ್ಕೆ ಹೋಗದಂತೆ ಎಚ್ಚರ ವಹಿಸಬೇಕು. ಮುಂಜಾಗ್ರತಾ ಕ್ರಮವಾಗಿ ಗ್ರಾಮ ಪಂಚಾಯಿತಿ ಮೂಲಕ ಎಲ್ಲಾ ಹಳ್ಳಿಗಳಿಗೆ ಡಂಗೂರ ಸಾರಿಸಲಾಗಿದೆ.

‘ನದಿ ತೀರದಲ್ಲಿ ಬರುವ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಗತ್ಯ ಬಿದ್ದಲ್ಲಿ ಜನ ಮತ್ತು ಜಾನುವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ನಿರ್ದೇಶನ ನೀಡಲಾಗಿದೆ. ಯಾವುದೇ ತುರ್ತು ಸಂದರ್ಭಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತದ ಸಹಾಯವಾಣಿ 08473-253800 ಸಂಖ್ಯೆಗೆ ಕರೆ ಮಾಡಲು’ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

***

‘ಜಿಲ್ಲಾ ಸಚಿವರು ಗಮನ ಹರಿಸಲಿ’

ಜಿಲ್ಲೆಯಲ್ಲಿ ಪ‍್ರತಿ ವರ್ಷ ಪ್ರವಾಹ ಉಂಟಾದರೆ ನದಿಯಂಚಿನ ಗ್ರಾಮಸ್ಥರು ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಹೀಗಾಗಿ ಇವರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಜಿಲ್ಲೆಯ ಜನರು ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್‌ ಅವರಲ್ಲಿ ಮನವಿ ಸಲ್ಲಿಸಿದ್ದಾರೆ.

ಹಿಂದಿನ ಸಚಿವರು ಕೇವಲ ಭರವಸೆ ನೀಡಿದ್ದರು. ಮತ್ತೆ ಭರವಸೆ ನೀಡುವ ಕೆಲಸ ಆಗದೇ ಕಾರ್ಯಗತ ಮಾಡುವಂತೆ ಆಗ್ರಹಿಸಿದ್ದಾರೆ.

ಕೃಷ್ಣಾ, ಭೀಮಾ ನದಿ ಪ್ರವಾಹದಿಂದ ಕಳೆದ ಬಾರಿ ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಗಿದೆ. ಇನ್ನೂ ಕೆಲವರಿಗೆ ಪರಿಹಾರ ಧನ ಬಂದಿಲ್ಲ. ಇದನ್ನು ಕೊಡಿಸುವ ಕೆಲಸ ಮಾಡಲಿ ಎಂದು ಒತ್ತಾಯಿಸಿದ್ದಾರೆ.
***
ಮುಂಜಾಗ್ರತಾ ಕ್ರಮಕ್ಕೆ ಸೂಚನೆ

ಕೃಷ್ಣಾ ಹಾಗೂ ಭೀಮಾ ನದಿ ತೀರದಲ್ಲಿ ಬರುವ ಗ್ರಾಮಗಳಲ್ಲಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್‌. ಸೂಚಿಸಿದ್ದಾರೆ.

ಈ ಸಂಬಂಧ ಶುಕ್ರವಾರ ಸಂಜೆ ಎಲ್ಲಾ ತಹಶೀಲ್ದಾರರೊಂದಿಗೆ ಆನ್‌ಲೈನ್ ಮೂಲಕ ಸಭೆ ನಡೆಸಿ, ನದಿ ಪಾತ್ರದ ಗ್ರಾಮಗಳಲ್ಲಿ ಎಲ್ಲ ಪರಿಸ್ಥಿತಿಗಳಿಗೆ ಸರ್ವ ಸನ್ನದ್ಧವಾಗಿರುವಂತೆ ತಿಳಿಸಿದ್ದಾರೆ.

ಗ್ರಾಮಗಳ ನಾಗರಿಕರಿಗೆ ಸೂಕ್ತ ತಿಳಿವಳಿಕೆ ನೀಡಲು ಹಾಗೂ ಅಗತ್ಯ ಬಿದ್ದರೆ ಸ್ಥಳಾಂತರಿಸಲು ಕ್ರಮ‌ಕೈಗೊಳ್ಳಲು ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಸಂಬಂಧಿಸಿದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT