ಭಾನುವಾರ, ಸೆಪ್ಟೆಂಬರ್ 19, 2021
24 °C
ಭೌತಿಕ ತರಗತಿಗಳಿಗೆ ಹೆಚ್ಚಿನ ಒಲವು; ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳ ಕಲರವ

ಯಾದಗಿರಿ–ಪದವಿ ಕಾಲೇಜು ಆರಂಭ; ಹಾಜರಾತಿ ಕಡಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಲ್ಲಿ ಪದವಿ ತರಗತಿಗಳು ಸೋಮವಾರದಿಂದ ಆರಂಭವಾಗಿದ್ದು, ವಿದ್ಯಾರ್ಥಿಗಳ ಹಾಜರಾತಿ ಬಹುತೇಕ ಕಡಿಮೆ ಇತ್ತು.

ಕಾಲೇಜುಗಳ ಆರಂಭಕ್ಕೆ ಉನ್ನತ ಶಿಕ್ಷಣ ಇಲಾಖೆ ನಿರ್ದೇಶನದ ಮೇರೆಗೆ ಪದವಿ ಕಾಲೇಜುಗಳು ಆರಂಭವಾಗಿವೆ.

ನಗರದ ಪದವಿ, ಸ್ನಾತಕೋತ್ತರ ಕಾಲೇಜುಗಳಲ್ಲಿ ಭಾನುವಾರವೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕಾಲೇಜು ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಲಾಗಿತ್ತು.

ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಬರಲು, ಕೋವಿಡ್‌ ಲಸಿಕೆ ಪಡೆದಿರುವ ಬಗ್ಗೆ, ಪೋಷಕರ ಒಪ್ಪಿಗೆ ಪತ್ರ ತರಲು ಸೂಚಿಸಲಾಗಿತ್ತು.

ಆಫ್‌ಲೈನ್‌ ತರಗತಿಗೆ ಹೆಚ್ಚಿನ ಒತ್ತು: ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಿಂತ ಆಫ್‌ಲೈನ್‌ ತರಗತಿಗಳಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ನೆಟ್‌ವರ್ಕ್‌, ಮುಖಾಮುಖಿ ಭೇಟಿ ಇಲ್ಲದೇ ಪಾಠಗಳು ಸರಿಯಾಗಿ ಅರ್ಥವಾಗದ ಕಾರಣ ಭೌತಿಕ ತರಗತಿಗಳು ಇಷ್ಟ ಎಂದು ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ.

ಮುಂದಿನ ವಾರ ಪರೀಕ್ಷೆ: ಸೋಮವಾರದಿಂದ ತರಗತಿಗಳು ಆರಂಭವಾದರೂ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು. ಮುಂದಿನ ಸೋಮವಾರದಿಂದ ಪರೀಕ್ಷೆಗಳು ನಿಗದಿಯಾಗಿದ್ದು, ಇದರಿಂದಲೂ ಹೆಚ್ಚಿನ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಆಸಕ್ತಿ ತೋರಿಸಿಲ್ಲ ಎನ್ನುವುದು ಪ್ರಾಧ್ಯಾಪಕರ ಅಭಿಮತವಾಗಿದೆ.

‘ಜಿಲ್ಲೆಯಲ್ಲಿ ಆಗಸ್ಟ್‌ 2ರಿಂದ ಪರೀಕ್ಷೆಗಳು ಆರಂಭವಾಗಲಿವೆ. ಹೀಗಾಗಿ ಬಹುತೇಕ ವಿದ್ಯಾರ್ಥಿಗಳು ಪುನಾವರ್ತಿತ ಓದುವುರಲ್ಲಿ ಹೆಚ್ಚಿನ ಗಮನಹರಿಸಿದ್ದಾರೆ. ಹೀಗಾಗಿ ದೂರದ ಹಳ್ಳಿಗಳಿಂದ ವಿದ್ಯಾರ್ಥಿಗಳು ಬಂದಿಲ್ಲ. ನಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿದ್ದಾರೆ. ಎರಡ್ಮೂರು ದಿನದಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಬರುವ ಸಾಧ್ಯತೆ ಇದೆ’ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸುತ್ತಾರೆ.

ಕೋವಿಡ್‌ ಲಸಿಕೆ ಕಡ್ಡಾಯ: ಭೌತಿಕ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಲಸಿಕೆ ಪಡೆಯದಿದ್ದರೆ ಕಾಲೇಜಿನ ಬಳಿಯೇ ಚುಚ್ಚುಮದ್ದು ನೀಡುವ ಕೆಲಸವನ್ನು ಮಾಡಲಾಗುತ್ತಿದೆ.

‘ಎರಡನೇ ಡೋಸ್‌ ಪಡೆಯಲು ಅರ್ಹರಿರುವ 41 ವಿದ್ಯಾರ್ಥಿಗಳಿಗೆ ಸೋಮವಾರ ಲಸಿಕೆ ನೀಡಲಾಗಿದೆ. ಅಲ್ಲದೇ ಕಾಲೇಜಿನ ಅಧ್ಯಾ‍ಪಕರು ಎಲ್ಲರೂ ಚುಚ್ಚುಮದ್ದು ಪಡೆದಿದ್ದಾರೆ’ ಎನ್ನುತ್ತಾರೆ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ‌ ದೊಡಮನಿ.

***

ಕಾಲೇಜಿಗೆ ವಿದ್ಯಾರ್ಥಿಗಳನ್ನು ಆಹ್ವಾನಿಸಲು ತಳಿರು ತೋರಣ ಕಟ್ಟಿ ಸ್ವಾಗತಿಸಲಾಯಿತು. ತರಗತಿ ಕೋಣೆ ಸೇರಿದಂತೆ ಎಲ್ಲೆಡೆ ಸ್ವಚ್ಛತೆ ಮಾಡಲಾಗಿತ್ತು.
-ಡಾ.ಸುಭಾಶ್ಚಂದ್ರ ಕೌಲಗಿ, ಪ್ರಾಂಶುಪಾಲ, ಪದವಿ ಮಹಾವಿದ್ಯಾಲಯ

***

ಕಾಲೇಜಿನ ಶೇ 90ರಷ್ಟು ವಿದ್ಯಾರ್ಥಿನಿಯರು ಕೋವಿಡ್‌ ಲಸಿಕೆ ಪಡೆದಿದ್ದಾರೆ. ಸೋಮವಾರ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಾಜರಾಗಿದ್ದರು.
-ಶ್ರೀನಿವಾಸ‌ ದೊಡಮನಿ, ಪ್ರಾಂಶುಪಾಲ, ಮಹಿಳಾ ಪದವಿ ಕಾಲೇಜು

***

ಆನ್‌ಲೈನ್‌ ಮತ್ತು ಆಫ್‌ಲೈನ್‌ ತರಗತಿಗೆ ತುಂಬಾ ವ್ಯಾತ್ಯಾಸ ಇದೆ. ಆಫ್‌ಲೈನ್‌ ತರಗತಿಯಲ್ಲಿ ಸಂದೇಹ ಇದ್ದರೆ ಮುಖಾಮುಖಿಯಾಗಿ ಪರಿಹರಿಸಿಕೊಳ್ಳಬಹುದು.
-ಶರಣಮ್ಮ, ವಿದ್ಯಾರ್ಥಿನಿ

***

ಆಫ್‌ಲೈನ್‌ ತರಗತಿಗಳು ನಡೆಯುತ್ತಿರುವುದರಿಂದ ಖುಷಿಯಾಗಿದೆ. ನೆಟ್‌ವರ್ಕ್‌ ಇನ್ನಿತರ ಸಮಸ್ಯೆಗಳಿಂದ ಪಾಠ ಅರ್ಥವಾಗುವುದಿಲ್ಲ.
-ಅಶ್ವಿನಿ, ವಿದ್ಯಾರ್ಥಿನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.