ಮಂಗಳವಾರ, ಜುಲೈ 27, 2021
21 °C
1.51 ಲಕ್ಷ ಸರ್ಕಾರಿ, 10 ಸಾವಿರ ಅನುದಾನ ಸಹಿತ, 54 ಸಾವಿರ ಮಕ್ಕಳು ಅನುದಾನ ರಹಿತ ಶಾಲೆಗಳಲ್ಲಿ ಪ್ರವೇಶಾತಿ

ಯಾದಗಿರಿ: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೊರೊನಾ ಕಾಲದಲ್ಲಿ ಹೆಚ್ಚಿನ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪಡೆದಿದ್ದಾರೆ. ಕಳೆದ ವರ್ಷದಿಂದ ದಾಖಲಾತಿ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ.

ಶಾಲೆಗಳು ಆರಂಭವಾಗದಿದ್ದರೂ ಪೋಷಕರು ಮಾತ್ರ ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ಪಾವತಿಸಲಾಗದೆ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸಿದ್ದಾರೆ.

ಖಾಸಗಿ ಶಾಲೆಗಳಲ್ಲಿ ಆನ್‌ಲೈನ್‌ ಕ್ಲಾಸ್‌ ಮತ್ತಿತರ ಸಲುವಾಗಿ ಶುಲ್ಕ ಪಾವತಿಸಬೇಕಾಗಿದೆ. ಆದರೆ, ಸರ್ಕಾರಿ ಶಾಲೆಯಲ್ಲಿ ಶುಲ್ಕದ ಗೊಡವೇ ಇಲ್ಲದೆ ಇರುವುದರಿಂದ ಈ ಕಡೆ ಒಲವು ಜಾಸ್ತಿಯಾಗಿದೆ.

ಶುಲ್ಕದ ಭಯ ಇಲ್ಲ: ಅನೇಕರಿಗೆ ಕೋವಿಡ್‌ನಿಂದ ಆರ್ಥಿಕ ನಷ್ಟ ಉಂಟಾಗಿದೆ. ಹೀಗಾಗಿ ತಮ್ಮ ಮಕ್ಕಳನ್ನು ಹತ್ತಿರದ ಸರ್ಕಾರಿ ಶಾಲೆಗಳಿಗೆ ದಾಖಲಿಸಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಯಲ್ಲಿ ಶುಲ್ಕದ ಭಯ ಇಲ್ಲದಿದ್ದರಿಂದ ಇದು ಅನುಕೂಲವಾಗಿದೆ.

ವರ್ಗಾವಾರು ದಾಖಲಾದ ವಿವರ: ಜಿಲ್ಲೆಯಲ್ಲಿ ಹಳೆಯ ಮೂರು ತಾಲ್ಲೂಕು ಶಹಾಪುರ, ಸುರಪುರ, ಯಾದಗಿರಿಯನ್ನು ಒಳಗೊಂಡಂತೆ ಜುಲೈ 15ರ ವರೆಗೆ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಮಕ್ಕಳು ದಾಖಲಾಗಿದ್ದಾರೆ.

ಶಹಾಪುರ ತಾಲ್ಲೂಕಿನಲ್ಲಿ 1ನೇ ತರಗತಿಗೆ 3,907, 2ನೇ ತರಗತಿಗೆ 5,456, 3ನೇ ತರಗತಿಗೆ 5,420, 4ನೇ ತರಗತಿಗೆ 5,957, 5ನೇ ತರಗತಿಗೆ 5,953, 6ನೇ ತರಗತಿಗೆ 4,356, 7ನೇ ತರಗತಿಗೆ 5,810, 8ನೇ ತರಗತಿಗೆ 4,041, 9ನೇ ತರಗತಿಗೆ 2,550, 10ನೇ ತರಗತಿಗೆ 4,350 ಮಕ್ಕಳು ದಾಖಲಾಗಿದ್ದಾರೆ.

ಸುರಪುರ ತಾಲ್ಲೂಕಿನಲ್ಲಿ 1ನೇ ತರಗತಿಗೆ 5,245, 2ನೇ ತರಗತಿಗೆ 7,143, 3ನೇ ತರಗತಿಗೆ 7,023, 4ನೇ ತರಗತಿಗೆ 7,677, 5ನೇ ತರಗತಿಗೆ 7,517, 6ನೇ ತರಗತಿಗೆ 5,332, 7ನೇ ತರಗತಿಗೆ 6,921, 8ನೇ ತರಗತಿಗೆ 2,648, 9ನೇ ತರಗತಿಗೆ 4,222, 10ನೇ ತರಗತಿಗೆ 4,260 ಮಕ್ಕಳು ದಾಖಲಾತಿ ಪಡಿದಿದ್ದಾರೆ.

ಯಾದಗಿರಿ ತಾಲ್ಲೂಕಿನಲ್ಲಿ 1ನೇ ತರಗತಿಗೆ 3,840, 2ನೇ ತರಗತಿಗೆ 4,808, 3ನೇ ತರಗತಿಗೆ 5,219, 4ನೇ ತರಗತಿಗೆ 5,605, 5ನೇ ತರಗತಿಗೆ 5,653, 6ನೇ ತರಗತಿಗೆ 4,666, 7ನೇ ತರಗತಿಗೆ 5,476, 8ನೇ ತರಗತಿಗೆ 3,131, 9ನೇ ತರಗತಿಗೆ 3,177, 10ನೇ ತರಗತಿಗೆ 3,969 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಅನುದಾನ ಸಹಿತ ಶಾಲೆಗಳ ವಿವರ: ಶಹಾಪುರ ತಾಲ್ಲೂಕಿನಲ್ಲಿ 2,531, ಸುರಪುರ ತಾಲ್ಲೂಕಿನಲ್ಲಿ 4,012, ಯಾದಗಿರಿ ತಾಲ್ಲೂಕಿನಲ್ಲಿ 4,322 ವಿದ್ಯಾರ್ಥಿಗಳು ಸೇರಿದಂತೆ 10,865 ಮಕ್ಕಳು ಸರ್ಕಾರಿ ಅನುದಾನ ಸಹಿತ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ.

ಅನುದಾನ ರಹಿತ ಶಾಲೆಗಳು: ಶಹಾಪುರ ತಾಲ್ಲೂಕಿನಲ್ಲಿ 17,554, ಸುರಪುರ ತಾಲ್ಲೂಕಿನಲ್ಲಿ 18,306, ಯಾದಗಿರಿ ತಾಲ್ಲೂಕಿನಲ್ಲಿ 19,045 ವಿದ್ಯಾರ್ಥಿಗಳು ಸೇರಿದಂತೆ 54, 905 ಮಕ್ಕಳು ಸರ್ಕಾರಿ ಅನುದಾನ ರಹಿತ ಶಾಲೆಗಳಲ್ಲಿ ದಾಖಲಾತಿ ಪಡೆದಿದ್ದಾರೆ.

ವಸತಿ ಶಾಲೆಗಳ ವಿವರ: ಜಿಲ್ಲೆಯ ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ, ವಸತಿ ಶಾಲೆ, ಆಶ್ರಮ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಶಹಾಪುರ ತಾಲ್ಲೂಕಿನಲ್ಲಿ 1,641, ಸುರಪುರ ತಾಲ್ಲೂಕಿನಲ್ಲಿ 1,415, ಯಾದಗಿರಿ ತಾಲ್ಲೂಕಿನಲ್ಲಿ 1,826 ವಿದ್ಯಾರ್ಥಿಗಳು ಸೇರಿದಂತೆ 4,882 ಮಕ್ಕಳು ವಸತಿ ಶಾಲೆಗಳಲ್ಲಿ ದಾಖಲಾಗಿದ್ದಾರೆ.

***

ಅಂಕಿ ಅಂಶ
ಸರ್ಕಾರಿ ಶಾಲೆಗೆ ದಾಖಲಾದ ಮಕ್ಕಳ ಸಂಖ್ಯೆ
ಶಹಾಪುರ; 47,800
ಸುರಪುರ;57,988
ಯಾದಗಿರಿ;45,535
ಒಟ್ಟು;1,51,323

ಆಧಾರ: ಶಿಕ್ಷಣ ಇಲಾಖೆ

***

ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶೇ 65ರಿಂದ 70ರಷ್ಟು ಮಕ್ಕಳು ದಾಖಲಾಗಿದ್ದಾರೆ. ನಗರ ಪ್ರದೇಶಗಳಲ್ಲೂ ಸರ್ಕಾರಿ ಶಾಲೆ ಪ್ರವೇಶಾತಿಗೆ ಹೆಚ್ಚಿನ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ

- ಶಾಂತಗೌಡ ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ

***

ನಮ್ಮ ಶಾಲೆಯ ಸುತ್ತಮುತ್ತಲಿನ ನಗರ, ತಾಂಡಾಗಳಿಂದ ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗಿದ್ದಾರೆ. ಈಗಾಗಲೇ 76 ಮಕ್ಕಳು ದಾಖಲಾತಿ ಪಡೆದಿದ್ದಾರೆ

- ಶಾಂತಮ್ಮ ನರಿಬೋಳಿ, ಮುಖ್ಯಶಿಕ್ಷಕಿ, ಸ್ಟೇಷನ್ ಬಜಾರ್ ಶಾಲೆ ಯಾದಗಿರಿ

***

ಕೋವಿಡ್‌ ಕಾರಣದಿಂದ ಆರ್ಥಿಕ ಸಮಸ್ಯೆ ಇರುವ ಕಾರಣ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿದ್ದೇವೆ. ಇಲ್ಲಿ ಯಾವುದೇ ಶುಲ್ಕದ ಭಯವಿಲ್ಲ. ಬಿಸಿಯೂಟ ಧಾನ್ಯವೂ ಸಿಗುತ್ತಿದೆ

- ಬಸವರಾಜ ಪಾಟೀಲ, ಪೋಷಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು