ಮಂಗಳವಾರ, ಜನವರಿ 26, 2021
22 °C
ಪಾರ್ಕಿಂಗ್‌, ಏಕಮುಖ ಸಂಚಾರ ಸೂಚನಾ ಫಲಕಗಳಿಲ್ಲ, ಆಗಿಲ್ಲ ರಸ್ತೆ ಆಗಲೀಕರಣ

ಯಾದಗಿರಿ–ರಸ್ತೆ ಇಕ್ಕಟ್ಟು; ಸಂಚಾರ ಬಿಕ್ಕಟ್ಟು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪ್ರಮುಖ ವೃತ್ತ, ರಸ್ತೆಗಳು ಇಕ್ಕಟ್ಟಾಗಿದ್ದರಿಂದ ಸಂಚಾರಕ್ಕೆ ಬಿಕ್ಕಟ್ಟು ಎದುರಿಸುವಂತಾಗಿದೆ. ಸಂಚಾರ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಸೂಚನಾ ಫಲಕಗಳನ್ನೂ ಅಳವಡಿಸಿಲ್ಲ. 

ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಸಂಚಾರ ನಿಯಮಕ್ಕೆ ಸಂಬಂಧಿಸಿದಂತೆ ಸೂಚನಾ ಫಲಕಗಳು ಅಳವಡಿಸಿಲ್ಲ. ಇದರಿಂದ ಬೈಕ್‌, ಆಟೊ, ಕಾರು, ಟೆಂಪೊ, ಕ್ರೂಸರ್‌ ವಾಹನಗಳನ್ನು ಎಲ್ಲೆಂದರಲ್ಲೇ ನಿಲುಗಡೆ ಮಾಡಲಾಗುತ್ತದೆ.. 

ಜಿಲ್ಲೆಯಾಗಿ 10 ವರ್ಷಗಳಾದರೂ ಸಂಚಾರ ನಿಯಮಗಳ ಸೂಚನಾ ಫಲಕಗಳು ಅಳವಡಿಸದೆ ಸಂಬಂಧಿಸಿದ ಇಲಾಖೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರ ಆರೋ‍ಪಿಸುತ್ತಾರೆ.

‘ನಗರದಲ್ಲಿ ಎಲ್ಲಿಯೂ ಟ್ರಾಫಿಕ್‌ ಸಂಚಾರ ನಿಯಮ ಪಾಲನೆ ಮತ್ತು ವಾಹನಗಳ ನಿಲುಗಡೆಗೆ ಸಂಬಂಧಿಸಿದ ಫಲಕಗಳಿಲ್ಲ.  ಬೆಳಿಗ್ಗೆ ಮತ್ತು ಸಂಜೆ ವೇಳೆ ಗಾಂಧಿ ವೃತ್ತ, ಸುಭಾಷ ವೃತ್ತ, ತಹಶೀಲ್ದಾರ್‌ ಕಚೇರಿ ಬಳಿ ವಾಹನ ದಟ್ಟಣೆ ಇರುತ್ತದೆ. ಸಂಬಂಧಪಟ್ಟವರು ಗಮನ ಹರಿಸಬೇಕು’ ಎಂದು ಮಹಮ್ಮದ್‌ ಖಾಜಾ ಹುಸೇನ್‌ ಹೇಳುತ್ತಾರೆ.

ಪ್ರಮುಖ ವೃತ್ತಗಳಲ್ಲಿ ವಾಹನ ದಟ್ಟನೆ:

ನಗರದ ಸುಭಾಷ ವೃತ್ತ, ಗಾಂಧಿ ವೃತ್ತ, ಹತ್ತಿಕುಣಿ ಕ್ರಾಸ್‌, ಗಂಜ್‌ ವೃತ್ತ, ಶಾಸ್ತ್ರಿ ವೃತ್ತ, ತಹಶೀಲ್ದಾರ್‌ ಕಚೇರಿ, ಚಿತ್ತಾಪುರ ರಸ್ತೆ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ವಾಹನ ದಟ್ಟಣೆ ಉಂಟಾಗುತ್ತದೆ.

ಸುಭಾಷ ವೃತ್ತದ ಸಮೀಪ ಎರಡು ಬದಿಗಳಲ್ಲಿ ಬೈಕ್‌, ಆಟೊ, ಟಂಟಂ ನಿಲ್ಲಿಸುವುದರಿಂದ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಕೆಲವೊಮ್ಮೆ 5–10 ನಿಮಿಷಗಳ ಕಾಲ ನಿಂತುಕೊಳ್ಳಬೇಕಾಗುತ್ತದೆ. ಭಾರಿ ವಾಹನಗಳಳು ಬೆಳಿಗ್ಗೆ ಸಂಚಾರಕ್ಕೆ ಅನುಮತಿ ಇಲ್ಲದಿದ್ದರೂ ರಾಜರೋಷವಾಗಿ ಓಡಾಟ ನಡೆಸುತ್ತಿವೆ. ಇದರಿಂದ ಬೈಕ್‌ ಸವಾರರು ಅವುಗಳಿಗೆ ಜಾಗ ಬಿಟ್ಟು ಮುಂದೆ ಹೋಗದಂತೆ ಆಗಿದೆ. ಗಾಂಧಿ ವೃತ್ತದಲ್ಲಿಯೂ ಆಟೊ, ಬೈಕ್‌ಗಳನ್ನು  ನಿಲ್ಲಿಸಿರುವುದರಿಂದ ಸಂಚಾರಕ್ಕೆ ಕುತ್ತು ಬಂದಿದೆ. 

ಹತ್ತಿಕುಣಿ ಕ್ರಾಸ್‌ನಲ್ಲಿ ಭಾರಿ ವಾಹನವೊಂದು ಸಂಚರಿಸಿದರೆ ಅದರ ಮುಂದೆಗಡೆ ಬರುವ ವಾಹನಗಳಿಗೆ ಜಾಗವಿಲ್ಲದೆ ರಸ್ತೆ ಇಕ್ಕಟ್ಟಾಗಿದೆ. ರಸ್ತೆ ಅಗಲಿಕರಣ ಮಾಡದೆ ಬಿಟ್ಟಿರುವುದರಿಂದ ವಾಹನ ಸವಾರರು ಪ್ರತಿ ನಿತ್ಯವೂ ಪರದಾಡುತ್ತಿದ್ದಾರೆ. ನಗರದ ಸುಭಾಷ ವೃತ್ತ, ಶಾಸ್ತ್ರಿ ವೃತ್ತದಲ್ಲಿ ಮಾತ್ರ ಸಿಗ್ನಲ್‌ ದೀಪಗಳಿವೆ. 

ಸುರಪುರ: ಮುಕ್ತಿ ಕಾಣದ ವಾಹನ ದಟ್ಟಣೆ

ಸುರಪುರ: ನಗರ ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದೆ. ವ್ಯಾಪಾರ, ವಹಿವಾಟು ಹೆಚ್ಚುತ್ತಿದೆ. ಜನಸಂಖ್ಯೆಯೂ ಬೆಳೆಯುತ್ತಿದೆ.

‌ಒಂದೊಂದು ಕುಟುಂಬದಲ್ಲಿ ಎರಡು ಮೂರು ಬೈಕ್ ಇವೆ. ಕಾರುಗಳ ಸಂಖ್ಯೆಗೇನೂ ಕಡಿಮೆ ಇಲ್ಲ. ವಾಣಿಜ್ಯ ನಗರ ಆಗಿರುವುದರಿಂದ ಬರುವ ವಾಹನಗಳ ಸಂಖ್ಯೆಯೂ ಅಧಿಕವಾಗಿದೆ.

ಆರ್‌ಟಿಒ ಇಲಾಖೆಯ ಮಾಹಿತಿ ಪ್ರಕಾರ ನಗರದಲ್ಲಿ 25 ಸಾವಿರಕ್ಕೂ ಹೆಚ್ಚು ಬೈಕ್‌, 2 ಸಾವಿರಕ್ಕೂ ಹೆಚ್ಚು ಕಾರುಗಳು ನೋಂದಣಿಯಾಗಿವೆ. ಅರಮನೆ ರಸ್ತೆ ಮತ್ತು ಹನುಮಾನ ಚಿತ್ರಮಂದಿರ ರಸ್ತೆ ಈ ಎರಡು ನಗರದ ಮುಖ್ಯ ರಸ್ತೆಗಳು. 12 ವರ್ಷಗಳ ಹಿಂದೆ ಅರಮನೆ ರಸ್ತೆ, 8 ವರ್ಷಗಳ ಹಿಂದೆ ಹನುಮಾನ ಚಿತ್ರಮಂದಿರ ರಸ್ತೆ ವಿಸ್ತರಿಸಲಾಗಿದೆ. ಆದರೂ ವಾಹನ ಸಂಚಾರಕ್ಕೆ ಸಮರ್ಪಕವಾಗಿಲ್ಲ.

ಹೊರವಲಯದ ನಾಲ್ವಡಿ ರಾಜಾ ವೆಂಕಟಪ್ಪನಾಯಕ ವೃತ್ತ, ಕುಂಬಾರಪೇಟೆ, ತಹಶೀಲ್ದಾರ್ ಕಚೇರಿ ರಸ್ತೆ, ಕೆಂಭಾವಿ ರಸ್ತೆ ಈ ರಸ್ತೆಗಳೂ ಜನನಿಬಿಡವಾಗಿವೆ.

ಪಾದಚಾರಿ ಮಾರ್ಗ ಇಲ್ಲ. ಒಂದು ದಿನ ಒಂದೊಂದು ಬದಿಗೆ ವಾಹನಗಳನ್ನು ನಿಲ್ಲಿಸಬೇಕೆಂಬ ಪೊಲೀಸರ ನಿಯಮ ಪಾಲನೆಯಾಗುತ್ತಿಲ್ಲ. ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ನಿತ್ಯವೂ ಟ್ರಾಫಿಕ್ ಜಾಂ ಉಂಟಾಗುತ್ತದೆ. ಅದರಲ್ಲಿಯೂ ಗಾಂಧಿವೃತ್ತದಲ್ಲಿ ಉಂಟಾಗುವ ಜಾಂ ಸರಿಪಡಿಸಲು ಪೊಲೀಸರಿಗೆ ಸಾಕುಬೇಕಾಗುತ್ತದೆ. ಹೀಗಾಗಿ ಟ್ರಾಫಿಕ್ ಜಾಂ ನಾಗರಿಕರಿಗೆ ನಿತ್ಯದ ನರಕವಾಗಿ ಕಾಡುತ್ತಿದೆ.

ಟ್ರಾಫಿಕ್ ಸಮಸ್ಯೆ: ಹೆಚ್ಚಿದ ಬಿಡಾಡಿ ದನಗಳು

ಹುಣಸಗಿ: ಪಟ್ಟಣದಲ್ಲಿ ದ್ವಿಚಕ್ರ ವಾಹನ ಸೇರಿದಂತೆ ಇತರ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ.

ನಿತ್ಯವೂ ಬಸವೇಶ್ವರ ವೃತ್ತದಿಂದ ಮಹಾಂತಸ್ವಾಮಿ ವೃತ್ತದ ವರೆಗೂ ವಾಹನ ಸಂಚಾರ ಅಧಿಕವಾಗಿದ್ದು, ಒಂದೇ ಮುಖ್ಯ ರಸ್ತೆ ಇದೆ. ಅಲ್ಲದೇ ಬಿಡಾಡಿ ದನಗಳ ಹಾವಳಿ ಅಧಿಕವಾಗಿದ್ದು, ರಸ್ತೆಯ ಮಧ್ಯದಲ್ಲಿಯೇ ಈ ದನಗಳು ಮಲಗುವುದು, ನಿಲ್ಲುವುದು ಮಾಡುತ್ತಿದ್ದರಿಂದಾಗಿ ಹಲವಾರು ಬಾರಿ ರಸ್ತೆ ಜಾಂ ಆದ ಹಾಗೂ ದ್ವಿಚಕ್ರವಾಹನ ಅಪಘಾತವಾದ ಉದಾಹರಣೆಗಳು ಇವೆ.

ಯಾವುದೇ ಅಧಿಕಾರಿಗಳು ಈ ಸಮಸ್ಯೆ ನಿವಾರಣೆ ಆಸಕ್ತಿ ವಹಿಸುತ್ತಿಲ್ಲ ಎನ್ನುವ ಮಾತುಗಳು ನಗರದಲ್ಲಿ ಕೇಳಿ ಬರುತ್ತಿವೆ. ಭಾನುವಾರದ ಸಂತೆ ದಿನ ಕುರಿ, ಕೋಳಿ ಸಂತೆ ಮುಖ್ಯರಸ್ತೆಯ ಮೇಲೆಯೆ ನಡೆಯುತ್ತದೆ. ಇದರಿಂದಾಗಿ ಅರ್ಧ ಕಿ.ಮೀ ಕ್ರಮಿಸಲು ಅರ್ಧ ಗಂಟೆಯಷ್ಟು ಸಮಯ ಬೇಕಾಗುವಷ್ಟು ಜನಸಂದಣಿ ಮತ್ತು ವಾಹನ ಸಂಚಾರವಿರುತ್ತದೆ.

‘ಬಸ್ ನಿಲ್ದಾಣದ ಬಳಿ ತಳ್ಳು ಗಾಡಿಗಳು ಹಾಗೂ ಗೂಡಂಗಡಿಗಳು, ಹಣ್ಣಿನ ಅಂಗಡಿಗಳು ರಸ್ತೆಯನ್ನು ಆಕ್ರಮಿಸಿದ್ದರಿಂದಾಗಿ ಒಂದೇ ಭಾಗದಲ್ಲಿ ಎರಡು ವಾಹನಗಳು ಓಡಾಡುವಷ್ಟು ಸ್ಥಳವಿದ್ದರೂ ಒಂದು ವಾಹನ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ’ ಎಂದು ಬಸವರಾಜ ಮೇಲಿನಮನಿ ಹೇಳುತ್ತಾರೆ.

‘ಈಗಾಗಲೇ ಮುಖ್ಯ ರಸ್ತೆಯಲ್ಲಿದ್ದ ಎಲ್ಲ ಬಿಡಾಡಿ ದನಗಳನ್ನು ಒಂದು ಬಾರಿ ಕೊಂಡವಾಡಿಗೆ ಹಾಕಿ ದನಗಳ ಮಾಲೀಕರಿಗೆ ದಂಡ ಹಾಕಿ ನೋಟಿಸ್‌ ನೀಡಲಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅರುಣಕುಮಾರ ಹೇಳುತ್ತಾರೆ. ಇನ್ನು ಭತ್ತದ ರಾಶಿ ಸಂದರ್ಭದಲ್ಲಿ ಲಾರಿಗಳ ಓಡಾಟ ಹೆಚ್ಚಾಗುತ್ತಿದ್ದು, ಲಾರಿಗಳು ನಿಲ್ಲಲು ಸ್ಥಳಾವಕಾಶ ಇಲ್ಲದಂತಾಗಿದೆ. ಕೊಡೇಕಲ್ಲ ಗ್ರಾಮದ ಬಸವೇಶ್ವರ ವೃತ್ತದ ಬಳಿ ಆಗಾಗ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.

ಶಹಾಪುರ: ಟ್ರಾಫಿಕ್ ಸಿಗ್ನಲ್ ಮರೀಚಿಕೆ

ಶಹಾಪುರ: ನಗರದ ಬಸವೇಶ್ವರ ವೃತ್ತದಲ್ಲಿ 5 ವರ್ಷದ ಹಿಂದೆ ಅಳವಡಿಸಿದ್ದ ಟ್ರಾಫಿಕ್ ಸಿಗ್ನಲ್ ಲೈಟ್‌ಗಳು ಕಣ್ಣು ಮುಚ್ಚಿವೆ. ಇಂದಿಗೂ ದುರಸ್ತಿ ಕಾರ್ಯಕ್ಕೆ ಪೊಲೀಸರು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಲಿದೆ.

ನಗರಸಭೆಯ ಅನುದಾನದಲ್ಲಿ ₹5ಲಕ್ಷ ಹಣವನ್ನು ಟ್ರಾಫಿಕ್ ಸಿಗ್ನಲ್ ಅಳವಡಿಸಲು ಪೊಲೀಸ್‌ ಇಲಾಖೆಗೆ ನೀಡಲಾಗಿತ್ತು. ಕೇವಲ ಒಂದು ತಿಂಗಳು ಮಾತ್ರ ಆರಂಭವಾಗಿ ನಂತರ ಶಾಶ್ವತವಾಗಿ ಕಣ್ಣು ಮುಚ್ಚಿವೆ. ನಗರದ ಜನರು ಸಾಕಷ್ಟು ಬಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಕಳಪೆಮಟ್ಟದ ಸಾಮಗ್ರಿ ಪೂರೈಕೆಯಿಂದ ಸಾರ್ವಜನಿಕರ ಹಣ ವೆಚ್ಚವಾಗಿದೆ. ಯಾರ ವಿರುದ್ಧ ದೂರು ನೀಡಬೇಕು ಎಂಬುವುದು ಸಾರ್ವಜನಿಕರ ಪ್ರಶ್ನೆ.

ನಗರದ ಹಳೆ ಬಸ್ ನಿಲ್ದಾಣದ ಸುತ್ತಮುತ್ತಲು ಆಸ್ಪತ್ರೆ, ಲಾಡ್ಜ್, ರೆಸ್ಟೋರೆಂಟ್ ಆವರಿಸಿಕೊಂಡಿವೆ. ಪಾರ್ಕಿಂಗ್ ಜಾಗದಲ್ಲಿ ಮಳಿಗೆ ತಲೆ ಎತ್ತಿವೆ. ಇದರಿಂದ ಗ್ರಾಹಕರು ರಸ್ತೆಯ ಮೇಲೆ ವಾಹನ ನಿಲುಗಡೆ ಮಾಡುವುದು ಸಾಮಾನ್ಯವಾಗಿದೆ. ಇದು ಪೊಲೀಸರಿಗೂ ಮತ್ತು ವಾಹನ ಸವಾರರಿಗೂ ತಲೆ ನೋವಾಗಿ ಪರಿಣಮಿಸಿದೆ.

ನಗರದಲ್ಲಿ ಪ್ರತ್ಯೇಕವಾದ ಸಂಚಾರಿ ಠಾಣೆ ಆರಂಭಿಸುವಂತೆ ಹಲವು ವರ್ಷದಿಂದ ಜನತೆಯ ಬೇಡಿಕೆಯು ಇದೆ. ಅಲ್ಲದೆ ಭಾರಿ ವಾಹನ ಮತ್ತು ಮರಳು ತುಂಬಿದ ಟಿಪ್ಪರ್‌ ಹಾವಳಿಯು ಹೆಚ್ಚಾಗಿದೆ. ರಾಜ್ಯ ಹೆದ್ದಾರಿಯಾಗಿದ್ದರಿಂದ ವಾಹನ ದಟ್ಟಣೆಯು ಅಧಿಕವಾಗಿದೆ. ಸಂಚಾರ ನಿಯಂತ್ರಣ ಇಲ್ಲವಾಗಿದೆ. ನಗರದ ಒಳ ರಸ್ತೆಯು ಸಮರ್ಪಕವಾಗಿ ಇಲ್ಲದ ಕಾರಣ ನೇರವಾಗಿ ಹೆದ್ದಾರಿಯ ಮೇಲೆ ಸಂಚರಿಸುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿದೆ’ ಎನ್ನುತ್ತಾರೆ ಪೊಲೀಸರು.

* ಯಾದಗಿರಿಯ ಹತ್ತಿಕುಣಿ ಕ್ರಾಸ್‌ ರಸ್ತೆ ಇಕ್ಕಟ್ಟಾಗಿದ್ದು, ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ನಗರಸಭೆ ಸಂಚಾರ ನಿಯಮಗಳ ಸೂಚನಾ ಫಲಕ ಅಳವಡಿಸುವ ಅವಶ್ಯವಿದೆ.
- ಪ್ರದೀಪ್‌ ಬಿಸೆ,  ಸಂಚಾರಿ ಠಾಣೆ ಪಿಎಸ್‌ಐ, ಯಾದಗಿರಿ

* ರಸ್ತೆಗಳನ್ನು ಇನ್ನಷ್ಟು ವಿಸ್ತರಿಸಬೇಕು. ಏಕಮುಖ ಸಂಚಾರ ವ್ಯವಸ್ಥೆ ಮಾಡಬೇಕು. ಭಾರಿ ತೂಕದ ವಾಹನಗಳನ್ನು ನಗರ ಪ್ರವೇಶಕ್ಕೆ ನಿಷೇಧಿಸಬೇಕು.
- ವೆಂಕಟೇಶ ಗದ್ವಾಲ್, ವರ್ತಕ ಸುರಪುರ

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು