ಭಾನುವಾರ, ಮಾರ್ಚ್ 7, 2021
29 °C
ಶಹಾಪುರ ತಾಲ್ಲೂಕಿನಲ್ಲಿ 475 ಹೆಕ್ಟೇರ್‌ನಲ್ಲಿ ಬೆಳೆದ ಬ್ಯಾಡಗಿ ತಳಿ ಮೆಣಸಿನಕಾಯಿ

ಯಾದಗಿರಿ: ಒಣ ಮೆಣಸಿನಕಾಯಿಗೆ ಮಾರುಕಟ್ಟೆ, ಶೈತ್ಯಗಾರವೂ ಇಲ್ಲ

ಬಿ.ಜಿ. ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಬೆಳೆಯುವ ಬ್ಯಾಡಗಿ ತಳಿ ಮೆಣಸಿನಕಾಯಿಗೆ ಸೂಕ್ತ ಮಾರುಕಟ್ಟೆ, ಶೈತ್ಯಗಾರವೂ ಇಲ್ಲದಿದ್ದರಿಂದ ಸಿಕ್ಕ ದರಕ್ಕೆ ಮಾರಾಟ ಮಾಡುವ ಪರಿಸ್ಥಿತಿ ಇದೆ.

ಜಿಲ್ಲೆಯಲ್ಲಿ ಒಟ್ಟಾರೆ 676 ಹೆಕ್ಟೇರ್‌ ಪ್ರದೇಶದಲ್ಲಿ ಮೆಣನಕಾಯಿ ಬೆಳೆ ಇದ್ದು, ಇದರಲ್ಲಿ ಶಹಾಪುರ ತಾಲ್ಲೂಕಿನಲ್ಲಿ ಮಾತ್ರ ಹೆಚ್ಚು ಬ್ಯಾಡಗಿ ಮೆಣಸಿನಕಾಯಿ ಬೆಳೆಯಲಾಗಿದೆ.

ದೂರದ ಮಾರುಕಟ್ಟೆಗಳೆ ಆಶ್ರಯ: ಶಹಾಪುರ ತಾಲ್ಲೂಕಿನಲ್ಲಿ ಮೆಣಸಿನಕಾಯಿ ಬೆಳೆದರೂ ಸೂಕ್ತ ಮಾರುಕಟ್ಟೆಯೇ ಇಲ್ಲದಂತಾಗಿದೆ. ಕಲಬುರ್ಗಿ, ಬ್ಯಾಡಗಿ, ಗುಂಟೂರು ಮಾರುಕಟ್ಟೆಯನ್ನೇ ಆಶ್ರಯಿಸಬೇಕಾಗಿದೆ.

‘ಒಂದು ಲಾರಿಯಲ್ಲಿ 350ರಿಂದ 400 ಚೀಲ ಕೊಂಡ್ಯೊಯ್ಯಬಹುದು. ಒಂದು ಕ್ವಿಂಟಲ್‌ಗೆ ಒಂದು ಸಾವಿರ ಖರ್ಚು ಬರುತ್ತದೆ. ಬ್ಯಾಡಗಿಗೆ ತೆರಳಲು ಒಂದು ಲಾರಿ ಬಾಡಿಗೆ ಸೇರಿ ₹25ರಿಂದ ₹27ರ ಸಾವಿರ. ಇದು ನಮಗೆ ಭಾರವಾಗಿದೆ. ಸೂಕ್ತ ಮಾರುಕಟ್ಟೆ ನಮ್ಮ ಭಾಗದಲ್ಲೇ ಇದ್ದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಬೆಳೆಗಾರರು.

ಶಹಾಪುರದ ಬೆಳೆಗೆ ಬೆಲೆ ಇಲ್ಲ: ಹಾವೇರಿ ಜಿಲ್ಲೆಯ ಬ್ಯಾಡಗಿ ಮಾರುಕಟ್ಟೆಯಲ್ಲಿ ಶಹಾಪುರದ ಬ್ಯಾಡಗಿ ಮೆಣಸಿನಕಾಯಿಗೆ ಬೆಲೆ ಇಲ್ಲ ಇಲ್ಲದಂತಾಗಿದೆ. ವಾಹನದ ಬಾಡಿಗೆ ತೆತ್ತು ತೆಗೆದುಕೊಂಡು ಹೋದರೂ ಬೆಲೆ ಇಲ್ಲದಂತಾಗಿದೆ ಎಂದು ಬೆಳೆಗಾರರು ತಿಳಿಸುತ್ತಾರೆ.

‘ಶಹಾಪುರ ತಾಲ್ಲೂಕಿನ ಮದ್ರಕಿ, ಮೂಡಬೂಳ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶದಲ್ಲಿ ಬ್ಯಾಡಗಿ ತಳಿಯ ಒಣಮೆಣಸಿನಕಾಯಿಯ ದರ  ಬ್ಯಾಡಗಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹28ರಿಂದ 30 ಸಾವಿರ ಮಾತ್ರ ಇದೆ. ಇದರಿಂದ ಇದೇ ಭಾಗದಲ್ಲಿ ಮಾರುಕಟ್ಟೆ ಇದ್ದರೆ ನಮಗೆ ಅನುಕೂಲವಾಗುತ್ತದೆ’ ಎಂದು ಮದ್ರಕಿ ಗ್ರಾಮದ ಯುವ ರೈತ ಮಲ್ಲಿಕಾರ್ಜುನ ಜಿ ಅವಂಟಿ ಹೇಳುತ್ತಾರೆ.

‘ಕಲಬುರ್ಗಿಯಲ್ಲಿ ಬೆಳೆಗಾರರನ್ನು ನಿರ್ಲಕ್ಷ್ಯ ಮನೋಭಾವದಿಂದ ನೋಡಲಾಗುತ್ತಿದೆ. ಬೆಳೆಗೆ ಸೂಕ್ತ ಬೆಲೆ ಸಿಗುವುದಿಲ್ಲ. ಇಲ್ಲಿ ಖಾಸಗಿಯವರು ಮಾರುಕಟ್ಟೆ ನಡೆಸುವುದರಿಂದ ಬೆಲೆ ಹೆಚ್ಚು ಸಿಗುವುದಿಲ್ಲ’ ಎಂದು ತಿಳಿಸುತ್ತಾರೆ.

ವಿಮೆ ಬೆಲೆ ಭದ್ರತೆ ಇಲ್ಲ: ಜಿಲ್ಲೆಯಲ್ಲಿ ಬೆಳೆಯುವ ಮೆಣಸಿನಕಾಯಿಗೆ ಮುಂಗಾರು ಅವಧಿಯಲ್ಲಿ ಮಾತ್ರ ಬೆಳೆ ವಿಮೆ ಮಾಡಿಸಲು ಅವಕಾಶವಿದೆ. ಹಿಂಗಾರಿನಲ್ಲಿ ಬೆಳೆ ವಿಮೆ ವ್ಯಾಪ್ತಿಗೆ ಒಳಪಡುವುದಿಲ್ಲ. ಋತುಮಾನಕ್ಕೆ ತಕ್ಕ ಬೆಳೆಯಾಗಿದ್ದರಿಂದ ಇದು ಬರುವುದಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

‘ಈ ಭಾಗದ ರೈತರಿಗೆ ಬ್ಯಾಡಗಿ ತಳಿ ಬೆಳೆಯುವ ಬಗ್ಗೆ ಸೂಕ್ತ ತರಬೇತಿ ಇಲ್ಲ. ಇದರಿಂದ ಹೆಚ್ಚಿನ ರೈತರು ಇದರಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಸಂಬಂಧಿಸಿದವರು ಸೂಕ್ತ ಮಾರ್ಗದರ್ಶನ ನೀಡಿದರೆ ಬೆಳೆಗಾರರು ಹೆಚ್ಚಾಗಬಹುದು’ ಎಂದು ಮಲ್ಲಿಕಾರ್ಜುನ ಹೇಳುತ್ತಾರೆ. yad

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು