ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಸಂಸ್ಕರಣೆಯಲ್ಲಿ ತೈವಾನ್ ಯಶೋಗಾಥೆ

Last Updated 6 ಜುಲೈ 2019, 10:06 IST
ಅಕ್ಷರ ಗಾತ್ರ

ತೈವಾನ್ ದೇಶವನ್ನು ಹಿಂದೊಮ್ಮೆ ‘ತ್ಯಾಜ್ಯಗಳ ದ್ವೀಪ’ ಎಂದೇ ಕರೆಯಲಾಗುತ್ತಿತ್ತು. ಆದರೆ, ಇಂದು ತೈವಾನ್‌ ದೇಶವು ತ್ಯಾಜ್ಯ ಮರುಬಳಕೆಯಲ್ಲಿ ವಿಶ್ವದಲ್ಲೇ ದೊಡ್ಡ ಯಶಸ್ಸನ್ನು ದಾಖಲಿಸಿದ ಹಿರಿಮೆ ಹೊಂದಿದೆ. 2.3 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಈ ದ್ವೀಪವು, ಮನೆಗಳು ಹಾಗೂ ವಾಣಿಜ್ಯ ಘಟಕಗಳಿಂದ ಸಂಗ್ರಹಿಸಿದ ಶೇಕಡ 55ರಷ್ಟು ತ್ಯಾಜ್ಯವನ್ನು ಪುನರ್ಬಳಕೆ ಮಾಡುತ್ತದೆ. ಕೈಗಾರಿಕಾ ಘಟಕಗಳಿಂದ ಸಂಗ್ರಹ ಆಗುವ ಶೇಕಡ 77ರಷ್ಟು ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತದೆ.

ಇಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡುವ 1,600ಕ್ಕೂ ಹೆಚ್ಚಿನ ಕಂಪನಿಗಳು ಪ್ರತಿ ವರ್ಷ ₹ 13 ಸಾವಿರ ಕೋಟಿ ಸಂಪಾದಿಸುತ್ತವೆ.

1990ರ ಸುಮಾರಿನಲ್ಲಿ ಇಲ್ಲಿನ ಜನ ಬೆಟ್ಟದಂತೆ ಬೀಳುತ್ತಿದ್ದ ತ್ಯಾಜ್ಯವನ್ನು ಕಂಡು ಪ್ರತಿಭಟನೆ ನಡೆಸಿದ್ದರು. ಆಗ ಸರ್ಕಾರವು ತ್ಯಾಜ್ಯ ನಿರ್ವಹಣಾ ಯೋಜನೆಯೊಂದನ್ನು ಆರಂಭಿಸಿತು. ಇದರ ಅಡಿ, ಕಂಪನಿಗಳು ತಮ್ಮಲ್ಲಿ ಸೃಷ್ಟಿಯಾಗುತ್ತಿದ್ದ ತ್ಯಾಜ್ಯವನ್ನು ತಾವೇ ನಿರ್ವಹಿಸಬೇಕಿತ್ತು ಅಥವಾ ಸರ್ಕಾರಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಡೆಸಲು ಶುಲ್ಕ ಪಾವತಿ ಮಾಡಬೇಕಿತ್ತು. ಜನ ತ್ಯಾಜ್ಯವನ್ನು ನೀಲಿ ಬಣ್ಣದ ಚೀಲದಲ್ಲಿ ಹಾಕುತ್ತಿದ್ದರು. ಗಾಜು, ಕಾಗದದಂತಹ ಪುನರ್ಬಳಕೆ ಮಾಡಬಹುದಾದ ತ್ಯಾಜ್ಯವನ್ನು ಇನ್ನೊಂದು ಚೀಲದಲ್ಲಿ ಹಾಕುತ್ತಿದ್ದರು.

ತ್ಯಾಜ್ಯ ಸಂಗ್ರಹಣಾ ಟ್ರಕ್‌ಗಳು ಶಾಸ್ತ್ರೀಯ ಸಂಗೀತವನ್ನು ನುಡಿಸುತ್ತ ಬರುತ್ತಿದ್ದವು. ಹಳದಿ ಬಣ್ಣದ ಟ್ರಕ್‌ ಮಾಮೂಲಿ ತ್ಯಾಜ್ಯವನ್ನು ತೆಗೆದುಕೊಂಡು ಹೋಗುತ್ತದೆ. ಬಿಳಿ ಬಣ್ಣದ ಟ್ರಕ್‌ ಪುನರ್ಬಳಕೆಯ ತ್ಯಾಜ್ಯಗಳನ್ನು ಒಯ್ಯುತ್ತದೆ. ತ್ಯಾಜ್ಯ ಸಂಸ್ಕರಣಾ ಕಂಪನಿಗಳು ಅವುಗಳನ್ನು ಬಳಸಿ, ಉಪಯುಕ್ತ ವಸ್ತುಗಳನ್ನು ತಯಾರಿಸುತ್ತವೆ.

ಲಂಬ ಉದ್ಯಾನ
ಪ್ಲಾಸ್ಟಿಕ್‌ ಮತ್ತು ವಾಯು ಮಾಲಿನ್ಯದ ಹಾವಳಿ ಎದುರಿಸಲು ಲೂಧಿಯಾನಾ ರೈಲು ನಿಲ್ದಾಣದ ಅಧಿಕಾರಿಗಳು ಲಂಬ ಉದ್ಯಾನಗಳ ಮೊರೆ ಹೋಗಿದ್ದಾರೆ.

ಇಲ್ಲಿ ಅವರು ಎಸೆದ ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸಿ, ಅವುಗಳಲ್ಲಿ ಗಿಡ ಬೆಳೆಸಿದ್ದಾರೆ. ಹನಿ ನೀರಾವರಿ ಪದ್ಧತಿಯ ಅಡಿ ಈ ಸಸ್ಯಗಳಿಗೆ ನೀರುಣಿಸಲಾಗುತ್ತದೆ.

ಡಾಲ್ಫಿನ್ನುಗಳ ನಿದ್ರೆ
ಡಾಲ್ಫಿನ್‌ಗಳು ನಿದ್ರಿಸುವಾಗ ಒಂದು ಕಣ್ಣನ್ನು ಮಾತ್ರ ಮುಚ್ಚಿಕೊಂಡಿರುತ್ತವೆ! ಡಾಲ್ಫಿನ್‌ಗಳ ಮಿದುಳಿನ ಎಡಭಾಗ ನಿದ್ರೆ ಮಾಡುವಾಗ, ಬಲಗಣ್ಣು ಮುಚ್ಚಿರುತ್ತದೆ. ಮಿದುಳಿನ ಬಲಭಾಗ ನಿದ್ರೆ ಮಾಡುವಾಗ ಎಡಗಣ್ಣು ಮುಚ್ಚಿರುತ್ತದೆ.

ಶಾಲಗ್ರಾಮ
ಇದು ವಿಷ್ಣುವಿನ ಕಲ್ಲಿನ ಲಾಂಛನ. ಇದು ವಿಷ್ಣುವಿನ ಮೂರ್ತಿಯನ್ನು ಕೆತ್ತಲು ಬಳಸುವ ಒಂದು ಅಮೋನೈಟ್ ಕೂಡ ಹೌದು. ಪುರಾಣಗಳಲ್ಲಿ ಹೇಳಿರುವಂತೆ ಒಟ್ಟು 19 ಬಗೆಯ ಶಾಲಗ್ರಾಮಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT