ಭಾನುವಾರ, ಮಾರ್ಚ್ 26, 2023
24 °C
ಗ್ರೂಪ್-ಸಿ ತಾಂತ್ರಿಕೇತರ ಹುದ್ದೆ ಸ್ಪರ್ಧಾತ್ಮಕ ಪರೀಕ್ಷೆ

ಗ್ರೂಪ್-ಸಿ ಹುದ್ದೆ ಸ್ಪರ್ಧಾತ್ಮಕ ಪರೀಕ್ಷೆ: ಕರ್ನಾಟಕದ ಸಾಮಾಜಿಕ ಇತಿಹಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕ ಲೋಕ ಸೇವಾ ಆಯೋಗವು ಗ್ರೂಪ್ ‘ಸಿ’ ವೃಂದದ ತಾಂತ್ರಿಕೇತರ ಹುದ್ದೆಗಳ ನೇಮಕಕ್ಕಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆಯ ‘ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸ’ ವಿಭಾಗದಲ್ಲಿರುವ ಸಾಮಾಜಿಕ ಇತಿಹಾಸ ವಿಷಯದ ಕುರಿತ ಬಹು ಆಯ್ಕೆ ಪ್ರಶ್ನೆಗಳು.

***

ಭಾಗ– 1
ಕರ್ನಾಟಕ ಲೋಕ ಸೇವಾ ಆಯೋಗವು ಗ್ರೂಪ್ ‘ಸಿ’ ವೃಂದದ ತಾಂತ್ರಿಕೇತರ ಹುದ್ದೆಗಳ ನೇಮಕಕ್ಕಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆಯ ‘ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸ’ ವಿಭಾಗದಲ್ಲಿರುವ ಸಾಮಾಜಿಕ ಇತಿಹಾಸ ವಿಷಯದ ಕುರಿತ ಬಹು ಆಯ್ಕೆ ಪ್ರಶ್ನೆಗಳು.

1. ಗರುಡ ಎಂಬ ವ್ಯವಸ್ಥೆಯು ಹೊಯ್ಸಳ ಕಾಲದ ಸಮಾಜದಲ್ಲಿ ಪ್ರಚಲಿತದಲ್ಲಿತ್ತು. ಹಾಗೆಂದರೆ ಏನು?

ಎ. ಸ್ವಾಮಿ ನಿಷ್ಠಾ ವ್ಯವಸ್ಥೆ

ಬಿ. ರಕ್ಷಣಾ ವ್ಯವಸ್ಥೆ

ಸಿ. ನೃತ್ಯಪದ್ಧತಿ

ಡಿ. ಮೇಲಿನ ಯಾವುದೂ ಅಲ್ಲ

ಉತ್ತರ: ಎ

2. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಇಟಲಿಯ ಬರಹಗಾರ ಪಿತ್ರೋ ಡೆಲ್ಲಾವೇಲ್ ಮತ್ತು ಇಂಗ್ಲಿಷ್ ಬರಹಗಾರ ಫೀಟರ್ ಮುಂಡೆ ಅವರು ಕೆಳದಿ ಸಾಮ್ರಾಜ್ಯದ ಬಗ್ಗೆ ಮತ್ತು ಆ ಕಾಲದ ಸಾಮಾಜಿಕ ಜೀವನದ ಬಗ್ಗೆ ಬರೆದಿದ್ದಾರೆ.

2) ಹೈದಾರಾಲಿ ಮತ್ತು ಟಿಪ್ಪು ಕಾಲದ ಸಾಮಾಜಿಕ ಜನ ಜೀವನದ ಬಗ್ಗೆ ನಿಷಾನ್-ಇ- ಹೈದರಿ ಅಮೂಲ್ಯ ಮಾಹಿತಿಯನ್ನು ನೀಡುತ್ತದೆ.

3) ಫರ್ನೋ ನ್ಯೂನಿಜ್ ಅವರ ಪುಸ್ತಕದಲ್ಲಿ 23 ಅಧ್ಯಾಯಗಳಿವೆ. ಅದರ ಪೈಕಿ 4 ಅಧ್ಯಾಯಗಳು ವಿಜಯನಗರದ ಸಂಗಮ ವಂಶದ ಆಡಳಿತದ ಬಗ್ಗೆ ವಿವರಿಸಿದರೆ, 5 ಅಧ್ಯಾಯಗಳು ಆ ಕಾಲದ ಕರ್ನಾಟಕದ ಸಾಮಾಜಿಕ ಜನ ಜೀವನ ಕುರಿತು ವಿವರಿಸುತ್ತದೆ.

4) ಪೋರ್ಚುಗೀಸ್ ಪ್ರವಾಸಿ ಫ್ರಯರ್ ಲೂಯಿ 1509ರ ಹೊತ್ತಿಗೆ ವಿಜಯನಗರಕ್ಕೆ ಭೇಟಿಕೊಟ್ಟಿದ್ದ. ಕೃಷ್ಣದೇವರಾಯರ ಪಟ್ಟಾಭಿಷೇಕದ ಸಮಯದಲ್ಲಿ ಕರ್ನಾಟಕದ ಜನ ಜೀವನದ ಬಗ್ಗೆ ವಿವರವಾಗಿ ತನ್ನ ಬರಹದಲ್ಲಿ ಬರೆದಿದ್ದಾನೆ.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ) ಹೇಳಿಕೆ 1, 2 ಮತ್ತು 4ರ ಮಾತ್ರ ಸರಿಯಾಗಿದೆ

ಬಿ) ಹೇಳಿಕೆ 1, ಮತ್ತು 4 ಮಾತ್ರ ಸರಿಯಾಗಿದೆ

ಸಿ) ಹೇಳಿಕೆ 1 ರಿಂದ 4ರ ತನಕ ಎಲ್ಲವೂ ಸರಿಯಾಗಿದೆ

ಡಿ) ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ: ಸಿ

3. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಕದಂಬರ ಸಾಮ್ರಾಜ್ಯದಲ್ಲಿ ಕನ್ನಡ ನಾಡಿನ ಸಾಮಾಜಿಕ ವ್ಯವಸ್ಥೆಯು ಚಾತುರ್‌ವರ್ಣ ವ್ಯವಸ್ಥೆಯ ಆಧಾರದ ಮೇಲೆ ನಿಂತಿತ್ತು. ಕದಂಬ ವಂಶದ ಮಹಾರಾಜ ಮಯೂರ ವರ್ಮನು ರೋಹಿಲ್‌ಖಂಡದ ಅಹಿಛತ್ರದಿಂದ ಬ್ರಾಹ್ಮಣರನ್ನು ಬರಮಾಡಿಕೊಂಡು ಅವರನ್ನು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಬರುವ ತುಳುನಾಡಿನಲ್ಲಿ ನೆಲೆಸುವಂತೆ ಮಾಡಿದ. ಅವರಿಂದ ಅನೇಕ ಬ್ರಾಹ್ಮಣ ಪಂಗಡಗಳು ಹುಟ್ಟಿಕೊಂಡವು.

2. ಕದಂಬರ ಕಾಲದಲ್ಲಿ ಹಿಂದೂ ಸಮಾಜದಲ್ಲಿದ್ದ ಜೈನ, ಬೌದ್ಧ, ಶೈವ ಪಂಥಗಳು ತಮ್ಮದೇ ಆದ ಸ್ಥಾನವನ್ನು ಪಡೆದಿದ್ದವು.

3. ಕದಂಬರ ಕಾಲದ ಶಿಕ್ಷಣ ವ್ಯವಸ್ಥೆಯಲ್ಲಿ ಬಳ್ಳಿಗಾವೆಯ ಅಗ್ರಹಾರವನ್ನು ಉಲ್ಲೇಖಿಸಬಹುದು. ಇದಲ್ಲದೇ, ಕಪ್ಪತ್ತೂರು ಬಾಂಡವಪುರದ ಮಠಗಳು ಕೂಡಾ ಉತ್ತಮ ಶಿಕ್ಷಣ ಕೇಂದ್ರಗಳಾಗಿ ಸಮಾಜವನ್ನು ಮುನ್ನಡೆಸುತ್ತಿದ್ದವು. ಇಲ್ಲಿಗೆ ಭಾರತದ ವಿವಿಧ ಕಡೆಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಅವರಿಗೆಲ್ಲಾ ಈ ಕಾಲದ ಸಮಾಜವು ಊಟವನ್ನು ಉಚಿತವಾಗಿ ನೀಡುತ್ತಿತ್ತು. ಭಿಕ್ಷಾನ್ನದ ವ್ಯವಸ್ಥೆಯಾಗುತಿತ್ತು.

4. ಗಂಗರ ಕಾಲದಲ್ಲಿ ಜೈನ ಮಠಗಳು ಹಾಗೂ ದೇವಾಲಯಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಕೇಂದ್ರಗಳಾದರೆ ಖಾಸಗಿ ವ್ಯಕ್ತಿಗಳ ಪ್ರಯತ್ನದಿಂದ ತಾಂತ್ರಿಕ ವಿದ್ಯಾಭಾಸ ಮುನ್ನಡೆಯುತ್ತಿತ್ತು. ಆ ಕಾಲದ ವ್ಯವಸ್ಥಿತ ದಕ್ಷ ಕೈಗಾರಿಕಾ ವರ್ಗಗಳಾದ ಅಕ್ಕಸಾಲಿಗ, ಕಮ್ಮಾರ, ಮರ ಕೆಲಸದವರು, ಶಿಲ್ಪ ಕೆತ್ತುವವರು ಮೊದಲಾದ ವರ್ಗದ ಸಜ್ಜನರು ತಾಂತ್ರಿಕ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತಿದ್ದರು.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ. ಹೇಳಿಕೆ 1 ರಿಂದ 4ರತನಕ ಎಲ್ಲವೂ ಸರಿಯಾಗಿದೆ

ಬಿ. ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಸಿ. ಹೇಳಿಕೆ 1, 2 ಮತ್ತು 4 ಮಾತ್ರ ಸರಿಯಾಗಿದೆ

ಡಿ. ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ: ಎ

4 ಚೀನಾ ಯಾತ್ರಿಕ ಹ್ಯೂ ಎನ್ ತ್ಸಾಂಗ್ ನಾಲ್ಕು ವರ್ಣಗಳಲ್ಲದೇ ಉದ್ಯೋಗಾಧಾರಿತ ಜಾತಿ– ಪಂಗಡಗಳ ಬಗ್ಗೆ ತನ್ನ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ. ಹಾಗಾದರೆ ಕರ್ನಾಟಕದ ಯಾವ ಕಾಲದ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಆತ ಹೇಳಿದ್ದಾನೆ?

ಎ) ಗಂಗ

ಬಿ) ರಾಷ್ಟ್ರಕೂಟ

ಸಿ) ಬಾದಾಮಿ ಚಾಲುಕ್ಯ

ಡಿ) ವಿಜಯನಗರ

ಉತ್ತರ: ಸಿ

5. ಬಾದಾಮಿ ಚಾಲುಕ್ಯರ ಕಾಲದಲ್ಲಿ ಮೂರನೇ ವರ್ಗವಾದ ವ್ಯಾಪಾರಿಗಳು ತಮ್ಮ ಕಾರ್ಯದಲ್ಲಿ ನಿಪುಣರಾಗಿದ್ದರು. ಇವರನ್ನು ........ ಎಂಬ ಪದವು ಸೂಚಿಸುತ್ತಿತ್ತು ಎಂಬುದನ್ನು ಶಾಸನವೊಂದು ಉಲ್ಲೇಖಿಸಿರುವುದನ್ನು ನೋಡುತ್ತೇವೆ.

ಎ. ವ್ಯಾಪಾರಿ ಅಥವಾ ಶೆಟ್ಟಿ

ಬಿ. ವರದ ಅಥವಾ ಹರದ

ಸಿ. ಚಕ್ರಿ ಅಥವಾ ಸಕ್ರಿ

ಡಿ. ಕಾರ್ಯವಂತ ಅಥವಾ ಕರ್ಮಠ

ಉತ್ತರ: ಬಿ

6. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಗಂಗರ ಕಾಲದಲ್ಲಿ ರಾಜಮನೆತನದ ಸ್ತ್ರೀಯರು ಕೂಡಾ ಆಡಳಿತ ನಡೆಸುತ್ತಿದ್ದ ಉದಾಹರಣೆ ಇದೆ. ಉದಾ: ಗಂಗ ರಾಜ್ಯವನ್ನು ಆಡಳಿತದ ಅನುಕೂಲಕ್ಕಾಗಿ ಅನೇಕ ಭಾಗಗಳಾಗಿ ಅಥವಾ ನಾಡುಗಳಾಗಿ ಮಾಡಲಾಗಿತ್ತು. ಅಂತಹುದೇ ಆದ ಅಗಳಿನಾಡು ಎಂಬಲ್ಲಿ ರಾಜನಾದ ಶ್ರೀಪುರುಷನ ಸೊಸೆ ಕಂಚಿನಬ್ಬೆ ಆಡಳಿತ ನಡೆಸಿದ್ದಳು

2. ಬಾದಾಮಿ ಚಾಲುಕ್ಯರ ಕಾಲದ ಸಮಾಜದಲ್ಲಿ ಮಹಿಳೆಯರಿಗೆ 5 ವಿಶೇಷ ಗೌರವ ಇತ್ತು. ಉಚ್ಚ ವರ್ಗದ ಮಹಿಳೆಯಂತೂ ಯಾವುದೇ ನಿರ್ಬಂಧಕ್ಕೆ ಒಳಗಾಗಿರಲಿಲ್ಲ. ವಿಧವೆಯರಾದ ದುರ್ಲಭದೇವಿ, ವಿನಯವತಿ, ವಿಜಯಾಂಕಾ ಮೊದಲಾದವರು ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ವಿನಯಾದಿತ್ಯನು ವೇಶ್ಯೆಯಾದ ವಿನಾಪೋಟಿಗೆ ಬಲು ಗೌರವ ನೀಡುತ್ತಿದ್ದ ವಿಷಯವನ್ನು ಶಾಸನವೊಂದು ಉಲ್ಲೇಖಿಸುತ್ತದೆ.

3. ಬಾದಾಮಿ ಚಾಲುಕ್ಯರ ಕಾಲದ ಸಮಾಜದಲ್ಲಿದ್ದ ವೇಶ್ಯೆಯರದ್ದು ಸಂಗೀತ– ನೃತ್ಯವಲ್ಲದೇ ದಾನ– ಧರ್ಮದಲ್ಲಿಯೂ ಎತ್ತಿದ ಕೈಯಾಗಿತ್ತು. ವಿನಾಪೋಟಿ ಎಂಬ ಗಣಿಕಾ ಸ್ತ್ರೀಯು ಮಹಾಕೂಟದಲ್ಲಿ ಹಿರಣ್ಯ ಗರ್ಭ ದಾನ ಮಾಡಿದ್ದಳು. ದೇವರಿಗೆ ಮಾಣಿಕ್ಯಗಳಿಂದ ಕೂಡಿದ ಪೀಠ ಮತ್ತು ಬೆಳ್ಳಿಯ ಛತ್ರಿಯನ್ನು ದಾನವಾಗಿ ನೀಡಿದ್ದಳು.

4. ರಾಷ್ಟ್ರಕೂಟರ ಕಾಲದಲ್ಲಿ ಕೆಳವರ್ಗದವರ ಅಂದರೆ ಅಸ್ಪೃಶ್ಯರಲ್ಲದ ಶೂದ್ರರ ಸ್ಥಾನಮಾನಗಳು ಹೆಚ್ಚಿದ್ದವು. ನಾಯನಾರರು ಮತ್ತು ಆಳ್ವಾರರ ಭಕ್ತಿ ಪ್ರಚಾರಗಳಿಂದ ಮೇಲು– ಕೀಳೆಂಬ ಭಾವನೆ ಕಡಿಮೆಯಾಗಿತ್ತು. ಆದರೂ ಶೂದ್ರರಿಗೆ ವೇದಾಧ್ಯಯನದ ಹಕ್ಕು ಇರಲಿಲ್ಲ.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ) ಹೇಳಿಕೆ 1 ರಿಂದ 4ರತನಕ ಎಲ್ಲವೂ ಸರಿಯಾಗಿದೆ

ಬಿ) ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಸಿ) ಹೇಳಿಕೆ 1 ರಿಂದ 3ರ ತನಕ ಮಾತ್ರ ಸರಿಯಾಗಿದೆ

ಡಿ) ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ: ಎ

7. ಬಾದಾಮಿ ಚಾಲುಕ್ಯರ ಕಾಲದಲ್ಲಿ 2ನೇ ವಿನಯಾದಿತ್ಯನ ಪತ್ನಿ ಲೋಕಮಹಾದೇವಿ ಎಲ್ಲಿ ದೇವಾಲಯವನ್ನು ಕಟ್ಟಿಸಿದ್ದಳು?

ಎ) ಪಟ್ಟದಕಲ್ಲು

ಬಿ) ಹಂಪಿ

ಸಿ) ಗೋಕರ್ಣ

ಡಿ) ಸನ್ನತಿ

ಉತ್ತರ: ಎ

8. ಯಾವ ವಿದೇಶಿ ಬರಹಗಾರ ರಾಷ್ಟ್ರಕೂಟರ ಕಾಲದ ಅಂತ್ಯಜ ಅಥವಾ ಅಸ್ಪೃಶ್ಯ ಶೂದ್ರ ಕುರಿತಾಗಿ ಈ ರೀತಿ ಹೇಳಿದ್ದಾನೆ?

‘ಊರಿನಲ್ಲಿರುವ ಉತ್ತಮ ಜಾತಿಯವರು ಮಾಡಿದ ಕೊಳೆಯನ್ನು ತೆಗೆದು ಹಾಕಿ ಚೊಕ್ಕಟವಾಗಿಡುವುದು ಇವರ ಕೆಲಸವಾಗಿತ್ತು. ಆದರೆ ಊರವರಿಂದ ದೂರವಾಗಿ ಬದುಕುವ, ಉತ್ತಮರ ಸ್ಪರ್ಶಕ್ಕೂ ಅಯೋಗ್ಯರಾಗಿ ಬದುಕುವ ಹಣೆಬರಹ ಇವರದ್ದಾಗಿತ್ತು, ಉತ್ತಮ ಜಾತಿಯವರು ಊರಿನಲ್ಲಿ ಬರುವಾಗ ತಲೆ ಎತ್ತಿ ನಿಲ್ಲುವುದು ಕೂಡಾ ಅಪರಾಧವಾಗಿತ್ತು’

ಎ) ಇಬ್ನ ಬಟೂಟ

ಬಿ) ಅಲ್ ಬರೋನಿ

ಸಿ) ಫರ್ನೋ ನ್ಯೂನಿಜ್ 

ಡಿ) ಅಬ್ದುಲ್ ರಜಾಕ್

ಉತ್ತರ: ಬಿ (ವಿವರಣೆ: ಈ ವರ್ಗದ ಸಾಮಾಜಿಕ ಪಂಗಡಗಳಲ್ಲಿ ಚಪ್ಪಲಿ ಮಾಡುವವರು, ಬಿದರಿನ ಕೆಲಸಗಾರು, ಬೆಸ್ತರು, ಅಗಸರು, ಕಸ ಗುಡಿಸುವವರು ಮೊದಲಾದವರು ಬರುತ್ತಿದ್ದರು)

9. ಕರ್ನಾಟಕದಲ್ಲಿ ಮೊಟ್ಟಮೊದಲು ಸ್ತ್ರೀಯರು ತಮ್ಮ ಪತಿಯ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕನ್ನು ಯಾರ ಕಾಲದಲ್ಲಿ ಪಡೆದುಕೊಂಡರು?

ಎ) ರಾಷ್ಟ್ರಕೂಟ

ಬಿ) ಬಾದಾಮಿ ಚಾಲುಕ್ಯ

ಸಿ) ಕದಂಬ

ಡಿ) ಕೆಳದಿ ಅರಸರು

ಉತ್ತರ: ಎ

10. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಮೇಲ್ವರ್ಗದ ಪುರುಷರು ಕೆಳವರ್ಗದ ಸ್ತ್ರೀಯರನ್ನು ವಿವಾಹವಾಗಲು ಅವಕಾಶ ಕರ್ನಾಟಕದಲ್ಲಿತ್ತು. ಆದರೆ ರಾಷ್ಟ್ರಕೂಟರ ಕಾಲಕ್ಕೆ ಈ ರೀತಿಯ ವಿಲೋಮ ಪದ್ಧತಿಯ ವಿವಾಹಗಳು ನಿಷೇಧಿಸಲ್ಪಟ್ಟವು. ಆಯಾ ಜಾತಿಯವರು ಆಯಾ ಜಾತಿಯವರನ್ನೇ ಮದುವೆಯಾಗುವ ಕಡ್ಡಾಯ ಪದ್ಧತಿ ಜಾರಿಗೆ ಬಂತು.

2) ರಾಷ್ಟ್ರಕೂಟರ ಕಾಲಕ್ಕೆ ಅಂತರ್ ಜಾತಿ ಊಟಕ್ಕೂ ನಿಷೇಧ ಬಿತ್ತು. ಅಷ್ಟೇ ಅಲ್ಲ ಕೆಲವು ಗ್ರಾಮೀಣ ಪ್ರದೇಶದಲ್ಲಿ ಒಂದೊಂದು ಜಾತಿಯವರಿಗೆ ವಾಸ ಮಾಡಲು ಪ್ರತ್ಯೇಕ ಸ್ಥಳವು ಮೀಸಲಾದ ಉದಾಹರಣೆಗಳನ್ನು ಈ ಕಾಲ ಘಟ್ಟದಲ್ಲಿ ನೋಡುತ್ತೇವೆ.

3) ಕಲಚೂರಿ ವಂಶದ ಬಿಜ್ಜಳ ಆಡಳಿತ ಮಾಡುವಾಗ ಸಮಾಜದಲ್ಲಿ ಶೈವ ಧರ್ಮ ಪುನರುಜ್ಜೀವನಕ್ಕೆ ಬಂತು. ಬಸವಣ್ಣವರು ಈ ಭಕ್ತಿಮಾರ್ಗವನ್ನು ಪ್ರತಿಪಾದಿಸಿದರು. ಜಾತಿ ಪದ್ಧತಿಯನ್ನು ಉಗ್ರವಾಗಿ ವಿರೋಧಿಸಿದರು. ಮೇಲು ಜಾತಿ, ಕೆಳ ಜಾತಿ, ಹೊಲೆಯ, ಮಾದಿಗ ಎಂದು ಪ್ರಚಲಿತದಲ್ಲಿದ್ದ ಸಮಾಜದ ವರ್ಗೀಕರಣವನ್ನು ಅವರು ಒಪ್ಪಲಿಲ್ಲ.

4) ವಿಜಯನಗರದ ಸಾಮಾಜಿಕ ಇತಿಹಾಸ ತುಂಬಾ ವಿಶೇಷವಾಗಿತ್ತು. ಮುಸಲ್ಮಾನರ ಅನವರತ ದಾಳಿಯಿಂದ ಹಿಂದೂ ಸಮಾಜವನ್ನು ಪುನರ್ ವ್ಯವಸ್ಥೆ ಮಾಡುವುದು ಅನಿವಾರ್ಯವಾಗಿತ್ತು. ಈ ಕಾರಣಕ್ಕಾಗಿಯೇ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗಿತ್ತು,

ಎ) 1, 2 ಮತ್ತು 4 ಮಾತ್ರ ಸರಿಯಾಗಿದೆ

ಬಿ) ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಸಿ) ಹೇಳಿಕೆ 1 ರಿಂದ 4ರ ತನಕ ಎಲ್ಲವೂ ಸರಿಯಾಗಿದೆ

ಡಿ) ಮೇಲಿನ ಎಲ್ಲಾ ಹೇಳಿಕೆಗಳು ತಪ್ಪಾಗಿವೆ

ಉತ್ತರ: ಸಿ

11. ವೇಶ್ಯೆಯರ ವೃತ್ತಿಯ ಮೇಲೆ ತೆರಿಗೆ ಹಾಕುವ ಪದ್ಧತಿ ನಮ್ಮ ಕರ್ನಾಟಕದಲ್ಲಿ ಯಾರ ಕಾಲದಲ್ಲಿ ಜಾರಿಗೆ ತರಲಾಗಿತ್ತು?

ಎ) ವಿಜಯನಗರ

ಬಿ) ಹೊಯ್ಸಳ

ಸಿ) ಕದಂಬ

ಡಿ) ಬಾದಾಮಿ ಚಾಲುಕ್ಯ

ಉತ್ತರ: ಎ

12. ವಿಜಯ ನಗರದ ಕಾಲದಲ್ಲಿನ ಸತಿಪದ್ಧತಿ ಬಗ್ಗೆ ವಿದೇಶಿ ಲೇಖಕರಾದ ಬಾರ್ಬೋಸಾ, ನ್ಯೂನಿಜ್, ಸೀಸರ್ ಫೆಡ್ರಿಕ್, ಪಿತ್ರೋಡೆಲಾ ವೇಲ್ ಮೊದಲಾದವರು ವಿವರವಾಗಿ ಬರೆದಿದ್ದಾರೆ. ಪತಿ ಸತ್ತ 2-3 ತಿಂಗಳ ನಂತರ ವಿಧವೆಯರು ಸತಿ ಆಗುತ್ತಿದ್ದರು. ಆದರೆ ಅದೂ ಕಡ್ಡಾಯವಾಗಿರಲಿಲ್ಲ.  .…………… ಸ್ತ್ರೀಯನ್ನು ಸಜೀವವಾಗಿ ಹೂಳುವ ಮೂಲಕ ಸತಿಪದ್ಧತಿ ಆಚರಿಸುತ್ತಿದ್ದರು. ಕರ್ನಾಟಕದಲ್ಲಿ ಸಿಗುವ ಸತಿಕಲ್ಲು/ ಮಾಸ್ತಿಕಲ್ಲುಗಳೇ ಇದಕ್ಕೆ ಉದಾಹರಣೆಗಳಾಗಿವೆ.

ಎ) ಲಿಂಗಾಯತರು

ಬಿ) ಜೈನರು

ಸಿ) ಬೌದ್ಧರು

ಡಿ) ವೈಷ್ಣವರು

ಉತ್ತರ: ಎ

13. ಯಾವ ವರ್ಷ ಮೊದಲಬಾರಿಗೆ ಕರ್ನಾಟಕಕ್ಕೆ ಬ್ರಹ್ಮ ಸಮಾಜದ ಪಾದಾರ್ಪಣೆಯಾಯಿತು?

ಎ)1890 ಬಿ)1840 ಸಿ)1866 ಡಿ)1910

ಉತ್ತರ: ಸಿ (ವಿವರಣೆ:1866ರಲ್ಲಿ ಬೆಂಗಳೂರಿನಲ್ಲಿ ಬ್ರಹ್ಮ ಸಮಾಜದ ಶಾಖೆ ಆರಂಭವಾಯಿತು.)

ಮಾಹಿತಿ : Spardha Bharati UPSC ಯೂಟ್ಯೂಬ್‌ ಚಾನೆಲ್‌

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು