ಬೆಂಗಳೂರು: ಕೇಂದ್ರ ಸರ್ಕಾರದ ಸಚಿವಾಲಯ, ಸಿಎಪಿಎಫ್ ಕೇಂದ್ರ ಕಚೇರಿ ಹಾಗೂ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಭಾಷಾಂತರಕಾರ ಎಂಬ ಒಟ್ಟು 312 ಹುದ್ದೆಗಳಿಗೆ ಎಸ್‌ಎಸ್‌ಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.
ಜೂನಿಯರ್ ಟ್ರಾನ್ಸಲೇಟರ್ಸ್ (ಸಚಿವಾಲಯದಲ್ಲಿ), ಜೂನಿಯರ್ ಟ್ರಾನ್ಸಲೇಟರ್ಸ್ (ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಕಚೇರಿಯಲ್ಲಿ) ಜೂನಿಯರ್ ಹಿಂದಿ ಟ್ರಾನ್ಸಲೇಟರ್, ಸೀನಿಯರ್ ಹಿಂದಿ ಟ್ರಾನ್ಸಲೇಟರ್ (ಕೇಂದ್ರದ ವಿವಿಧ ಇಲಾಖೆಗಳಲ್ಲಿ) ಎಂಬ ಹುದ್ದೆಗಳಿವೆ. ಅರ್ಹ ಪುರುಷ, ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು.
ಹಿಂದಿ ಅಥವಾ ಇಂಗ್ಲಿಷ್ ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು ಜೊತೆಗೆ ಹಿಂದಿ ಅಥವಾ ಇಂಗ್ಲಿಷ್ ವಿಷಯವನ್ನು ಪದವಿ ಅಥವಾ ಸ್ನಾತಕೋತ್ತರ ಮಟ್ಟದಲ್ಲಿ ಒಂದು ಐಚ್ಚಿಕ ವಿಷಯವನ್ನಾಗಿ ಕಲಿತಿರಬೇಕು. ಇದರ ಜೊತೆಗೆ ಭಾಷಾಂತರ ಕ್ಷೇತ್ರದಲ್ಲಿ ಡಿಪ್ಲೋಮಾ ಅಥವಾ ಸರ್ಕಾರದ ಯಾವುದಾದರೂ ಇಲಾಖೆಯಲ್ಲಿ ಎರಡು ವರ್ಷ ಭಾಷಾಂತರಕಾರರಾಗಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಅಂತಹವರು ಅರ್ಜಿ ಸಲ್ಲಿಸಲು ಅರ್ಹ.
ಕನಿಷ್ಠ 18 ವರ್ಷ ವಯಸ್ಸು ಪೂರೈಸಿರಬೇಕು ಗರಿಷ್ಠ 30. ಮೀಸಲು ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಅರ್ಜಿ ಶುಲ್ಕ ₹100 ಇದ್ದು, ಎಸ್‌ಸಿ/ಎಸ್‌ಟಿ, ಮಾಜಿ ಸೈನಿಕರಿಗೆ ಶುಲ್ಕದಿಂದ ವಿನಾಯಿತಿ ಇದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಆಗಸ್ಟ್ 25 ಕಡೆಯ ದಿನ.
ಈ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಹಾಗೂ ವಿವರಣಾತ್ಮಕ ಪರೀಕ್ಷೆ ಇರಲಿದೆ. ಇದರಲ್ಲಿ ಎರಡು ಪತ್ರಿಕೆಗಳು ಇದ್ದು ತಲಾ 200 ಅಂಕಗಳಿರುತ್ತವೆ. ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಸಲು ssc.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.